ಶುಕ್ರವಾರ, ಅಕ್ಟೋಬರ್ 18, 2019
27 °C

ಮನೆಯ ಅಂದ ಹೆಚ್ಚಿಸುವುದು...

Published:
Updated:

ಮನೆ ಎಂದರೆ ವಿರಾಮದ ಜಾಗ ಎನ್ನುವುದು ಈಗ ದೂರದ ಮಾತು. ಈಗ ಮನೆ ಎಂದರೆ ಅದು ಬದುಕಿನ ಕನಸಿನ ತಾಣ. ಇಂಥ ಕನಸಿನ ತಾಣವನ್ನು ಅಂದಗೊಳಿಸುವುದು ಹೇಗೆ? ಅದಕ್ಕೇ  ಮನೆ ಸುಂದರಗೊಳಿಸುವ ಮುನ್ನ ಹಲವು ವಿಷಯಗಳನ್ನು ಮನದಲ್ಲಿಟ್ಟುಕೊಳ್ಳಬೇಕು.ಕಟ್ಟಿದ ಮನೆಯಾಗಲಿ, ಕಟ್ಟಲು ಹೊರಟ ಮನೆಯಾಗಲಿ, ಗೃಹಾಲಂಕಾರವಂತೂ ಬೇಕೇ ಬೇಕು. ಅದಕ್ಕೂ ಸರಿಯಾದ ಪ್ಲಾನ್ ಬೇಕು. ಗೃಹಾಲಂಕಾರಕ್ಕೆ ಲಕ್ಷಗಟ್ಟಲೆ ಖರ್ಚು ಮಾಡುವವರೂ ಇಲ್ಲದಿಲ್ಲ. ಪ್ರತಿಯೊಂದು ಮನೆಗೆ ಹೋಲುವ ಗೃಹಾಲಾಂಕಾರವನ್ನು ತಿಳಿಸಕೊಡುವ ಪರಿಣತರೂ ನಗರಗಳಲ್ಲಿ ಈಗ ಸಾಮಾನ್ಯ.ಪ್ರತಿಯೊಂದು ಋತುವಿಗೆ ಅನುಸಾರವಾಗಿ ನೀವು ಮನೆಯ ಅಂದವನ್ನು ಬದಲಾಯಿಸಬಹುದು. ಪೀಠೋಪಕರಣಗಳನ್ನು ಬದಲಾಯಿಸುವ ಮೂಲಕ ಮನೆಯ ನೋಟವನ್ನೇ ಬದಲಾಯಿಸಬಹುದು.ಗೃಹಾಲಂಕಾರ ಎಂದರೆ ಮನೆಗೆ ಹಚ್ಚುವ ಬಣ್ಣದಿಂದ ಹಿಡಿದು, ಪೀಠೋಪಕರಣ, ಬೆಡ್‌ಶೀಟ್‌ಗಳು, ವಾಸ್‌ಗಳು ಎಲ್ಲವೂ ಅಡಕವಾಗಿರುತ್ತವೆ. ಒಂದೊಂದಕ್ಕೂ ಒಂದೊಂದು ಸೌಂದರ್ಯವಿದೆ. ಅವುಗಳನ್ನು ನಿರ್ದಿಷ್ಟ ಜಾಗದಲ್ಲಿಟ್ಟಾಗ ಮನೆ ಸುಂದರವಾಗಿ ಕಾಣುತ್ತದೆ.ಮೊತ್ತ ಮೊದಲನೆಯದಾಗಿ ಮನೆ ಕಟ್ಟುವ ಮುನ್ನ ಕೈಯಲ್ಲಿರುವ ಬಜೆಟ್ ಲೆಕ್ಕಾಚಾರ ಹಾಕಿಕೊಳ್ಳುವುದು ಒಳಿತು. ಏಕೆಂದರೆ ಮನೆ ಕಟ್ಟಿ ಮುಕ್ತಾಯಗೊಳ್ಳುವ ವೇಳೆ ಬಜೆಟ್ ಎಲ್ಲೋ ದೂರ ಸಾಗಿರುತ್ತದೆ. ಹಾಗಾಗಿ ಖರ್ಚು ಮಾಡುವ ಮುನ್ನ ಚೆನ್ನಾಗಿ ಯೋಚನೆ ಮಾಡಿ ಅದರಂತೆ ಖರ್ಚು ಮಾಡಿದರೆ ಎಲ್ಲವೂ ಚೆನ್ನಾಗಿ ಸಾಗುತ್ತದೆ.  ಮನೆಗೆ ಮುಖ್ಯವಾಗಿ ಬೇಕಾಗಿರುವುದು ಗಾಳಿ ಮತ್ತು ಬೆಳಕು. ಎಷ್ಟೇ ಅಂದದ ಲ್ಯಾಂಪ್‌ಗಳನ್ನು ಇಟ್ಟರೂ ಗಾಳಿ ಮತ್ತು ಬೆಳಕು ನೈಸರ್ಗಿಕವಾಗಿ ದೊರಕುತ್ತಿದ್ದಲ್ಲಿ ಮನೆಗೆ ಇನ್ಯಾವ ಕೃತಕ ಉಪಕರಣಗಳೂ ಬೇಡ.ಬಣ್ಣ: ಮೊತ್ತಮೊದಲನೆಯದಾಗಿ ಮನೆಗೊಂದು ಅಂದದ ಬಣ್ಣ ಬೇಕು. ಬಣ್ಣದ ಆಯ್ಕೆ ಮಾತ್ರ ಕ್ಲಿಷ್ಟಕರ ಸಂಗತಿ. ಬಣ್ಣ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಬಣ್ಣ ಆಯ್ಕೆಗೆ ಮುನ್ನ ಯಾವ ಕೋಣೆಗೆ ಗಾಢ ಬಣ್ಣ, ಯಾವ ಗೋಡೆಗೆ ತಿಳಿ ಬಣ್ಣ ಬೇಕು ಎನ್ನುವುದನ್ನು ನೋಡಿಕೊಳ್ಳಬೇಕು.ಪ್ರತಿ  ಕೋಣೆಯ ಚಟುವಟಿಕೆಯನ್ನು ನೋಡಿಕೊಂಡುಬಣ್ಣಗಳ ಆಯ್ಕೆ ಮಾಡಬೇಕು. ಒಂದೊಂದು ಬಣ್ಣಕ್ಕೂ ಒಂದೊಂದು ಗುಣವಿದೆ. ಬಣ್ಣಕ್ಕೆ ಬದಲಾಗಿ ವಾಲ್‌ಪೇಪರ್ ಕೂಡ ಬಳಸಬಹುದು.  ಪೇಂಟ್ ಅಂಗಡಿಗಳಿಗೆ ತೆರಳಿದರೆ ಬಣ್ಣಗಳ ಹಲವು ಶೇಡ್‌ಗಳಿರುವ ಪಟ್ಟಿಯೇ ನಿಮ್ಮ ಮುಂದೆ ದೊರೆಯುತ್ತದೆ. ಅದರಲ್ಲಿ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.ಲಿವಿಂಗ್ ರೂಂ: ಲಿವಿಂಗ್ ರೂಂ ಮನೆಯಲ್ಲಿ ಹೆಚ್ಚು ಫೋಕಸ್ ಆಗಿರುವ ಕೋಣೆ. ಎಲ್ಲರೂ ಹೆಚ್ಚಾಗಿ ಸಮಯ ಕಳೆಯುವುದು ಅದೇ ಕೋಣೆಯಲ್ಲಿ. ಅದಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಅಗತ್ಯ. ಲಿವಿಂಗ್ ರೂಂ ನಮ್ಮ ಅಭಿರುಚಿಯನ್ನು ಪ್ರತಿಬಿಂಬಿಸುವಂತಿರಬೇಕು.ಪೀಠೋಪಕರಣ: ಮನೆ ಅಂದಗೊಳಿಸಲು ಪ್ರತಿ  ಬಾರಿಯೂ ಹೊಸ ಹೊಸ ಪೀಠೋಪಕರಣಗಳನ್ನು ಖರೀದಿಸಬೇಕೆಂದೇನೂ ಇಲ್ಲ. ಅದೇ ಪೀಠೋಪಕರಣ, ಇಟ್ಟಲ್ಲೇ ಇಟ್ಟು ಬೋರ್ ಹೊಡೆದಿದ್ದರೆ ಅದಕ್ಕೂ ಉಪಾಯವಿದೆ.ಇರುವ ಪೀಠೋಪಕರಣಗಳ ಸ್ಥಾನವನ್ನೇ ಬದಲಿಸಿ, ಕರ್ಟನ್‌ಗಳನ್ನು ಬದಲಿಸಿ, ಗೋಡೆಯ ಮೇಲೆ ತಗುಲಿಸಿರುವ ಪೇಂಟಿಂಗ್‌ಗಳನ್ನು ಬದಲಾಯಿಸಿ ಅಷ್ಟೇ ಸಾಕು, ಮನೆಯ ಲುಕ್ ಬದಲಾಗುತ್ತದೆ. ಅದೂ ಬೇಡ ಎಂದಾದಲ್ಲಿ ಹೊಸ ಪೀಠೋಪಕರಣಗಳಲ್ಲಿನ ಬೆಡ್‌ಗಳ ಕವರ್‌ಗಳನ್ನು ಬದಲಾಯಿಸಿ. ಬಟ್ಟೆ ಅಂಗಡಿಗೆ ಹೋಗಿ ಬಟ್ಟೆ ಖರೀದಿಸಿ ನಿಮಗೆ ಬೇಕಾದ ವಿನ್ಯಾಸದಲ್ಲಿ ಕವರ್‌ಗಳನ್ನು ಹೊಲಿಸಿಕೊಳ್ಳಿ.ಕರ್ಟನ್‌ಗಳು:  ಕರ್ಟನ್‌ಗಳು ಇಲ್ಲದ  ಮನೆಯೇ ಇಲ್ಲ ಎನ್ನಬಹುದು. ಇತ್ತೀಚಿನ ದಿನಗಳಲ್ಲಂತೂ ಕರ್ಟನ್‌ಗಳಿಗೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ. ಕರ್ಟನ್ ಕೋಣೆಯ ಬಹುಮುಖ್ಯ ಅಂಗ. ಅಂತೆಯೇ ಮಕ್ಕಳ ಕೋಣೆಯ ಕರ್ಟನ್‌ಗೂ ಹಿರಿಯರ ಕೋಣೆಯ ಕರ್ಟನ್‌ಗೂ ಬಹಳ ವ್ಯತ್ಯಾಸ ಇದೆ.ಕರ್ಟನ್‌ಗಳು ಕೋಣೆಗೆ ಹೊಸ  ಸೌಂದರ್ಯ ಕಲ್ಪಿಸುತ್ತವೆ.  ಆದರೆ, ಇವುಗಳು ಗೋಡೆಯ ಬಣ್ಣಕ್ಕೆ ಹೊಂದಿಕೆಯಾಗುವಂತಿರಬೇಕು.ನೆರಿಗೆಗಳಿರುವ ಕರ್ಟನ್‌ಗಳಿಗೆ ಪ್ರತ್ಯೇಕ ಮೆಟೀರಿಯಲ್ ಅಗತ್ಯ. ಎರಡು ಕಡೆಗಳಿಂದ ಕಾಣುವಂತಹ ಕರ್ಟನ್‌ಗಳು ಬೇಕಿದ್ದಲ್ಲಿ ಅದಕ್ಕೆ ಪ್ರತ್ಯೇಕವಾದ ಮೆಟೀರಿಯಲ್‌ಗಳನ್ನು ಬಳಸಬೇಕು.ಮನೆಯಲ್ಲಿನ ನಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವಲ್ಲಿ  ಕರ್ಟನ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಷ್ಟೇ ಅಲ್ಲದೆ ಬಾಗಿಲು ಅಥವಾ ಕಿಟಕಿಯಲ್ಲಿ ಏನಾದರೂ ಡಿಫೆಕ್ಟ್‌ಗಳಿದ್ದರೆ ಅವುಗಳನ್ನು ಕರ್ಟನ್‌ಗಳ ಸಹಾಯದಿಂದ ಮರೆಮಾಚಬಹುದು.ಕರ್ಟನ್‌ಗಳು ಆಕರ್ಷಕವಾಗಿ ಕಾಣಿಸಿಕೊಳ್ಳಬೇಕೆಂದಿದ್ದಲ್ಲಿ ಅವುಗಳಿಗೆ ಟ್ಯಾಸಲ್‌ಗಳನ್ನು ಅಂಟಿಸಿ. ಸಿಲ್ಕ್, ವೆಲ್ವೆಟ್, ಕಾಟನ್ ಹಿಗೆ ವಿವಿಧ ಮೆಟೀರಿಯಲ್‌ಗಳಲ್ಲಿ ಕರ್ಟನ್‌ಗಳು ಲಭ್ಯ.ಹೋಮ್ ಡೆಕೋರ್ ಆರ್ಟಿಕಲ್ಸ್ ಗೃಹಾಲಂಕಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕನ್ನಡಿ, ಲ್ಯಾಂಪ್‌ಗಳು, ವಾಸ್‌ಗಳು, ಪೇಂಟಿಂಗ್‌ಗಳು ಇವುಗಳಲ್ಲಿ ಬಹು ಮುಖ್ಯವಾದವು. ಹೋಮ್ ಡೆಕೋರ್ ವಸ್ತುಗಳು ಒಂದಕ್ಕೊಂದು ಸಂಬಂಧ ಹೊಂದಿರುವ ಕಾರಣ ಅವುಗಳ ಆಯ್ಕೆಯಲ್ಲಿ ಜಾಗರೂಕತೆ ಪಾಲಿಸಬೇಕಾದ್ದು ಅಗತ್ಯ.ಕನ್ನಡಿ ಕೇವಲ ಮುಖವನ್ನು ನೋಡಿಕೊಳ್ಳಲು ಮಾತ್ರವಲ್ಲ. ಅವುಗಳಿಂದ ಇತರ ಹಲವು ಪ್ರಯೋಜನಗಳೂ ಇವೆ. ಬೆಳಕು ಕಡಿಮ ಇರುವ ಜಾಗದಲ್ಲಿ ಕಿಟಕಿಯ ಬಳಿಯಲ್ಲೇ ಒಂದು ಕನ್ನಡಿಯನ್ನು ಅಳವಡಿಸಿ. ಕೋಣೆಯೊಳಗೆ ಬೀಳುವ ಬೆಳಕು  ಕನ್ನಡಿಯ ಮೇಲೆ ಬಿದ್ದು ಪ್ರತಿಫಲನಗೊಂಡು ಕೋಣೆಯೊಳಗೆ ಬೆಳಕು ಹರಿಯುವಂತೆ ಮಾಡುತ್ತದೆ.    

Post Comments (+)