ಮನೆಯ ಅಂದ ಹೆಚ್ಚಿಸುವ ಬಿದಿರು...

7

ಮನೆಯ ಅಂದ ಹೆಚ್ಚಿಸುವ ಬಿದಿರು...

Published:
Updated:

ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಹಿಡಿ ಜಾಗ ಕೊಂಡುಕೊಳ್ಳಲೂ ಪರದಾಡಬೇಕಾದ ಇಂದಿನ ಪರಿಸ್ಥಿತಿಯಲ್ಲಿ ಹೇಗೋ ಹಾಗೊ ಜಾಗ ಖರೀದಿಸಿ ಮನೆ ಕಟ್ಟುವಷ್ಟರಲ್ಲಿ ಹೈರಾಣಾಗುವುದು ಖಚಿತ. ಆದರೆ, ನೂರೆಂಟು ವಿಘ್ನಗಳ ನಡುವೆ ಮನೆ ಕಟ್ಟಿಯೂ ಅದು ಸುಂದರವಾಗಿಲ್ಲ, ಮನಕ್ಕೆ ಒಪ್ಪುವಂತಿಲ್ಲ ಎಂದರೆ ಏನು ಪ್ರಯೋಜನ? ಮನೆ ಕಟ್ಟುವುದು ಮಾತ್ರವಲ್ಲ, ಅದನ್ನು ಅಚ್ಚುಕಟ್ಟಾಗಿ ಇಡುವುದು ಅಷ್ಟೇ ಮುಖ್ಯ.ಮನೆಯನ್ನು ಸ್ವಚ್ಛ ಸುಂದರವಾಗಿ ಇಡುವುದೂ ಒಂದು ಕಲೆ.  ಅಷ್ಟೇ ಅಲ್ಲ, ಮನೆ ನಮ್ಮ ಅಭಿರುಚಿಯ ಸಂಕೇತ ಕೂಡ ಹೌದು. ಇದೇ ಕಾರಣಕ್ಕೆ ಮನೆಯ ಅಲಂಕಾರಕ್ಕೆ ಹೆಚ್ಚು ಒತ್ತು ನೀಡುವ ಅಭ್ಯಾಸ ಈಗೀಗ ಹೆಚ್ಚುತ್ತಿದೆ. ಒಳಾಂಗಣ ವಿನ್ಯಾಸಕ್ಕೆ ಇತ್ತೀಚೆಗೆ ಬೇಡಿಕೆ ಹೆಚ್ಚಿರುವುದಕ್ಕೂ ಇದು ಮುಖ್ಯ ಕಾರಣ ಎನ್ನಬಹುದು.ಆದರೆ, ಒಳಾಂಗಣ ವಿನ್ಯಾಸ ಎಲ್ಲ ರೀತಿಯ ಮನೆಗಳಿಗೂ ಅವಶ್ಯಕವಿದೆ ಎನ್ನಲಾಗುವುದಿಲ್ಲ. ಆದ್ದರಿಂದ  ಕೆಲವು ಸರಳ ವಿನ್ಯಾಸ ತಂತ್ರಗಳನ್ನು ತಮ್ಮ ಮನೆಯ ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡರೆ ಮನೆ ಹೆಚ್ಚು ಸುಂದರವಾಗಿ ಗೋಚರಿಸುವಂತೆ  ಮಾಡುವುದು ಸಾಧ್ಯ. ಹೆಚ್ಚು ದುಬಾರಿಯೂ ಅಲ್ಲದ, ಎಲ್ಲ ರೀತಿಯ ಮನೆಗಳಿಗೂ ಸೂಕ್ತವಾಗುವ ಮಾರ್ಗವನ್ನು ನೀವು ಹುಡುಕುತ್ತಿದ್ದರೆ ಬಿದಿರು ಇದಕ್ಕೆ ಉತ್ತರ ನೀಡುತ್ತದೆ.ಹಿಂದಿನ ಕಾಲದಲ್ಲಿ ಬಿದಿರಿನ ಬಳಕೆ ಹೆಚ್ಚಿತ್ತು. ಬಲು ಸುಲಭವಾಗಿ ಸಿಗುತ್ತಿದ್ದ ಬಿದಿರು ಗ್ರಾಮಗಳಲ್ಲಿ ದಿನನಿತ್ಯದ ಬಳಕೆ ವಸ್ತುಗಳಾಗಿ ಬೆಸೆದುಕೊಂಡಿತ್ತು. ಬಿದಿರಿನ ಚಾಪೆ, ಬುಟ್ಟಿಗಳೊಂದಿಗೆ ಕೆಲಸ ಸಾಗುತ್ತಿತ್ತು. ಬಿದಿರಿನ ಸಾಮಗ್ರಿಗಳಿಲ್ಲದ ಮನೆಗಳು  ಕಾಣಸಿಗುತ್ತಿರಲಿಲ್ಲ. ಕೇವಲ ಗ್ರಾಮಗಳಲ್ಲಷ್ಟೇ ಅಲ್ಲ, ನಗರಗಳಲ್ಲೂ ಬಿದಿರಿನ ವಸ್ತುಗಳ ಬಳಕೆ ಇತ್ತು.ಆದರೆ,  ಪ್ಲಾಸ್ಟಿಕ್ ಹಾವಳಿಯಿಂದಾಗಿ ಬಿದಿರಿನ ಬಳಕೆ ಸ್ವಲ್ಪ ಹಿಂದೇಟು ಹಾಕಿತು. ಅದೇ ಬಿದಿರು ಈಗ  ಆಧುನಿಕ ರೂಪದೊಂದಿಗೆ ಹೊರ ಬಂದಿದೆ. ಬಿದಿರಿನ ಕಲೆ ಇದೀಗ ಹೊಸ ಆಯಾಮ ಪಡೆದುಕೊಂಡಿದೆ. ಬಿದಿರಿನ ಕಲೆಯನ್ನು ಅರಿತ ಕಲಾಕಾರರು ಬಿದಿರಿಗೆ ಹಲವಾರು ಬಗೆಯ ಕುಸುರಿ ಕಲೆ ನೀಡಿ ಹೊಸದೊಂದು ಬದಲಾವಣೆ ತಂದಿದ್ದಾರೆ. ವಿವಿಧ ಬಗೆಯ ಬಿದಿರಿನ ಪರಿಕರಗಳು ಹಲವರ  ಮನೆಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ರೂಪ ತಳೆದಿವೆ.ಬಿದಿರಿಗೆ ಆಧುನಿಕ ಸ್ಪರ್ಶ ನೀಡಿ ಆಕರ್ಷಕ, ವಿಭಿನ್ನ ಶೈಲಿಯ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡಲಾಗುತ್ತಿದೆ. ಚಾಪೆ, ಬುಟ್ಟಿಯಿಂದಾಚೆಗೆ ಬಿದಿರನ್ನು ಮನೆಯ ವಿನ್ಯಾಸಕ್ಕೆ ಬಳಸಿಕೊಳ್ಳಲಾಗುತ್ತಿದೆ.ಇನ್ನಿತರ ಅಲಂಕಾರ ಸಾಮಗ್ರಿಗಳಿಗೆ ಹೋಲಿಸಿದರೆ ಬಿದಿರು ನಿಜಕ್ಕೂ ಅಗ್ಗ. ಚೆಲುವಿನಲ್ಲೂ ಕಡಿಮೆಯಿಲ್ಲದ ಈ ಬಿದಿರು ಪರಿಸರಕ್ಕೆ ಆಪ್ತ ಕೂಡ. ತಮ್ಮ ಮನೆಯನ್ನು ವಿಭಿನ್ನವಾಗಿ ಅಲಂಕರಿಸ ಬಯಸುವವರಿಗಂತೂ ಬಿದಿರಿನಲ್ಲಿ ಹೇಳಿ ಮಾಡಿಸಿದಂತಹ ವಸ್ತುಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಿದಿರಿನಿಂದ ತಯಾರಿಸಿದ ಪೀಠೋಪಕರಣಗಳು ಕೆಲವು ವರ್ಷಗಳ ಹಿಂದಿಗೆ ಹೋಲಿಸಿದರೆ ಹೆಚ್ಚು ಮಾರಾಟವಾಗುತ್ತಿವೆ. ವಿನೂತನ ವಿನ್ಯಾಸ, ಸರಳ ಮತ್ತು ಸುಂದರವಾಗಿ ಕಾಣುವ ಬಿದಿರಿನ ವಸ್ತುಗಳನ್ನು ಜನ ಇಷ್ಟಪಡುತ್ತಿರುವುದೇ ಇದಕ್ಕೆ ಕಾರಣ. ವಿಭಿನ್ನ ರೀತಿಯ ಅಲಂಕಾರವನ್ನು ಒದಗಿಸುವ ಬಿದಿರಿನ ಬಳಕೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಬಿದಿರಿನ ಪೀಠೋಪಕರಣಗಳ ವ್ಯಾಪಾರಿ ಹರೀಶ್. ಬಿದಿರಿನ ಹೂ ಕುಂಡಗಳು, ಬಿದಿರಿನ ಪರದೆ, ಪಾಟ್‌ಗಳು, ಟ್ರೇ, ಬಿದಿರಿನ ಬೊಂಬೆ, ಲ್ಯಾಂಪ್, ಬಿದಿರಿನ ಹೂವು, ಗೊಂಬೆ, ಬ್ಯಾಗ್, ಚಿತ್ರಪಟ, ಫ್ರೇಮ್‌ಗಳು, ಕೊಳಲು, ಗ್ಲಾಸ್, ಬಿದಿರಿನ ಚಿಕ್ಕ ಚಿಕ್ಕ ಬುಟ್ಟಿ, ಮ್ಯಾಟ್, ಇನ್ನೂ ಹಲವು ಕರಕುಶಲ ವಸ್ತುಗಳಾಗಿ ಬಿದಿರು ಕಾಣಿಸಿಕೊಂಡಿದೆ. ನೋಡಲು  ಆಕರ್ಷಕವೆನಿಸುವ ಈ ಬಿದಿರಿನ ವಸ್ತುಗಳನ್ನು ಮನೆಗೆ ಪೂರಕವಾಗಿ ಬಳಸಿದರೆ ಅಲಂಕಾರ ಇಮ್ಮಡಿಯೆನಿಸುತ್ತದೆ.ದುಬಾರಿಯಲ್ಲದೆ ಸರಳ ಸುಂದರವಾಗಿ ಮನೆಯನ್ನು ಅಲಂಕಾರಗೊಳಿಸುವ ಉತ್ತಮ ಮಾರ್ಗ ಬಿದಿರು ಎಂದರೆ ತಪ್ಪಿಲ್ಲ. ಆದರೆ, ಬಿದಿರಿಗೆ ಹುಳ ಹತ್ತುವ ಸಾಧ್ಯತೆಯೂ ಇರುವುದರಿಂದ ಬಿದಿರನ್ನು ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುವುದು ಮುಖ್ಯ. ಬಿದಿರನ್ನು ಸಂರಕ್ಷಿಸುವ ಕೆಲವು ಸರಳ ಸಲಹೆಗಳನ್ನು ತಿಳಿದುಕೊಂಡರೆ ಬಿದಿರು ಹೆಚ್ಚು ಕಾಲ ಉಳಿಯುವಂತೆ ಕಾಪಾಡಿಕೊಳ್ಳಬಹುದು.ಬಿದಿರಿನ ವಸ್ತುಗಳು ಹೆಚ್ಚು ಬಾಳಿಕೆ ಬರಬೇಕೆಂದರೆ ಅವುಗಳನ್ನು ಮೃದುವಾದ ಬ್ರಷ್‌ನಿಂದ ಆಗಾಗ್ಗೆ ಒರೆಸುತ್ತಿರಬೇಕು. ಬಿದಿರಿನ ವಸ್ತುಗಳ ಮೇಲೆ ಗೀರುಗಳಾದರೆ ಅದರ ಸಹಜ ಅಂದ ಹಾಳಾಗುವುದರಿಂದ ಗೀರುಗಳಾಗದಂತೆ ಎಚ್ಚರವಹಿಸಬೇಕು.ಬಿದಿರಿನ ಕರಕುಶಲ ವಸ್ತುಗಳನ್ನು ಒರೆಸಲು ಹತ್ತಿ ಅಥವಾ ಹತ್ತಿ ಬಟ್ಟೆಯನ್ನು ಬಳಸಬೇಕು.  ಹೆಚ್ಚು ನೀರಿರುವ ಜಾಗದಲ್ಲಿ ಬಿದಿರಿನ ವಸ್ತುಗಳನ್ನು ಇಟ್ಟರೆ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ತುಂಬಾ ವರ್ಷಗಳ ಬಳಿಕ ಬಿದಿರಿನ ವಸ್ತುಗಳು ಬಣ್ಣ ಮಾಸಿದಂತೆ ಅಥವಾ ಹೊಳಪು ಕಳೆದುಕೊಂಡಂತೆ ಕಂಡರೆ  ಮಾರುಕಟ್ಟೆಯಲ್ಲಿ ಲಭ್ಯವಿರುವ  ನಾರಗಸೆ ಎಣ್ಣೆಯನ್ನು         (ಲಿನ್‌ಸೀಡ್ ಆಯಿಲ್) ಹತ್ತಿಗೆ ಸ್ವಲ್ಪ ಹಾಕಿ ಒರೆಸಿದರೆ ಸಹಜ ಹೊಳಪು ಮರಳುತ್ತದೆ. ಬೇಕೆಂದರೆ ಬಣ್ಣವನ್ನೂ ಹಚ್ಚಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry