ಮನೆಯ ಪಾಕದ ಸೊಗಡು

7

ಮನೆಯ ಪಾಕದ ಸೊಗಡು

Published:
Updated:

ಸಂಪ್ರದಾಯ ಮತ್ತು ಆಯುರ್ವೇದಿಕ್ ಚಿಕಿತ್ಸಾ ರೂಪದ ಆಹಾರ ಪದ್ಧತಿಯ  ಸಮ್ಮಿಲನವಾದ ಸಂಕ್ರಾಂತಿ ಹಬ್ಬದ ಮಾರುಕಟ್ಟೆ ಬಹಳ ದೊಡ್ಡದು. ಇಂತಹುದೊಂದು ಮಾರುಕಟ್ಟೆಯಲ್ಲಿ ಹಳೆಯ ವ್ಯಾಪಾರಿಗಳಿಗೆ ಅವರ ಸೇವಾ ಅನುಭವ ಮತ್ತು ಗ್ರಾಹಕರೊಂದಿಗಿನ ಸ್ನೇಹ ವಿಶ್ವಾಸವೇ ತಳಹದಿ.ಜಯನಗರ ಮೂರನೇ ಬ್ಲಾಕ್‌ನ ಹಳೆಯ ‘ದೋಸೆ ಕ್ಯಾಂಪ್’ನ ಪಕ್ಕದಲ್ಲೇ ಇರುವ ‘ಶೆಣೈ ಸ್ಟೋರ್ಸ್’ನಲ್ಲಿ ವರ್ಷದ ಎಲ್ಲಾ ದಿನ ನಡೆಯುವ ಬೇಕರಿ ಉತ್ಪನ್ನಗಳ ವ್ಯಾಪಾರದ ಗುಟ್ಟು ಇದುವೇ. ಅದಕ್ಕೀಗ 42ರ ಹರೆಯ. ಉಡುಪಿ ಮೂಲದ ವಿಠಲ ಶೆಣೈ ಅವರು ಈ ಅಂಗಡಿಯ ಮಾಲೀಕ.ಹೊರಗಿನಿಂದ ನೋಡಿದವರಿಗೆ, ಮೊದಲ ಸಲ ಹೋದವರಿಗೆ ಇತರ ಸಣ್ಣ ಅಂಗಡಿಯಂತೆ ಭಾಸವಾದರೂ ಅದರೊಳಗಿರುವ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗ ಇತ್ಯಾದಿ ಪ್ರದೇಶವಾರು ಹಿನ್ನೆಲೆಯ ತಿಂಡಿ ತಿನಿಸುಗಳು ನೂರಾರು!ಮಕರ ಸಂಕ್ರಮಣ, ಯುಗಾದಿ, ನಾಗರಪಂಚಮಿ, ಗೋಕುಲಾಷ್ಟಮಿ, ನವರಾತ್ರಿ, ದೀಪಾವಳಿ ಹೀಗೆ ಯಾವುದೇ ಪ್ರದೇಶಕ್ಕೆ ಸೀಮಿತವಾದ ಹಬ್ಬವಾಗಿದ್ದರೂ ಅದಕ್ಕೆ ಸಂಬಂಧಪಟ್ಟ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ಉತ್ತಮ ಆಯ್ಕೆ ಶೆಣೈ ಸ್ಟೋರ್.ಇದೀಗ ಮಕರ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಅಂಗಡಿ ತೆರೆಯುವುದು ಬೆಳಿಗ್ಗೆ 10.15ರ ನಂತರ. ಆದರೆ ಅಷ್ಟು ಹೊತ್ತಿಗೆ ಗ್ರಾಹಕರು ಅಂಗಡಿ ಮುಂದೆ ಕಾದು ನಿಂತಿರುತ್ತಾರೆ. ಈ ಬಾರಿ ಸಂಕ್ರಮಣಕ್ಕಾಗಿ ಎಳ್ಳು ಬೆಲ್ಲದ ವಿಶೇಷ ಗಿಫ್ಟ್‌ ಪ್ಯಾಕೆಟ್‌ ಸಿದ್ಧಪಡಿಸಿದ್ದಾರೆ ಶೆಣೈ ಮಾಮು. ’ಫೈವ್‌ ಇನ್‌ ಒನ್‌’ ಹೆಸರಿನ ಈ ಪ್ಯಾಕೆಟ್‌ನಲ್ಲಿ ತಲಾ 250 ಗ್ರಾಂನ ಮಿಕ್ಸೆಡ್ ಎಳ್ಳು ಮತ್ತು ಸಕ್ಕರೆ ಅಚ್ಚು, ತಲಾ 100 ಗ್ರಾಂ ಜೀರಾ ಸ್ವೀಟ್, ಕುಸುರಿ ಕಾಳು ಮತ್ತು ಎಳ್ಳುಂಡೆ ಇರುತ್ತದೆ. ಬೆಲೆ 100 ರೂಪಾಯಿ.ಇಲ್ಲಿ ಲಭ್ಯವಿರುವ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕುಸುರಿ ಕಾಳು, ರೋಸ್ಟೆಡ್ ಕಟ್ ಕಡಲೆಬೀಜ, ಒಣಕೊಬ್ಬರಿ ತುಂಡು, ಹುರಿಕಡಲೆ, ಬೆಲ್ಲದಚ್ಚು, ಹುರಿದ ನೈಲಾನ್‌ ಎಳ್ಳು ಮತ್ತು ಹುಚ್ಚೆಳ್ಳು ಉಂಡೆ ಮತ್ತು ಎಳ್ಳುಂಡೆ ಇವೆಲ್ಲವೂ ಮನೆಯಲ್ಲೇ ಮಾಡಿದವುಗಳು ಎನ್ನುವುದು ಪ್ರಮುಖ ಆಕರ್ಷಣೆ.‘ಮಕರ ಸಂಕ್ರಾಂತಿಯಲ್ಲಿ ಬಳಸುವ ಎಳ್ಳು, ಬೆಲ್ಲ, ಕೊಬ್ಬರಿ, ಎಳ್ಳುಂಡೆ ಹೀಗೆ ಪ್ರತಿಯೊಂದಕ್ಕೂ ಔಷಧೀಯ ಗುಣಗಳಿವೆ. ಅದಕ್ಕಾಗಿ ಮನೆಯಲ್ಲೇ ತಯಾರಿಸಿದ ಐಟಂಗಳನ್ನು ಮಾರುತ್ತೇವೆ’ ಎಂಬ ಗ್ರಾಹಕಸ್ನೇಹಿ ಚಿಂತನೆಯನ್ನು ವ್ಯಕ್ತಪಡಿಸುತ್ತಾರೆ ವಿಠಲ ಶೆಣೈ ಅವರು.ಹಣಕ್ಕಿಂತ ಗ್ರಾಹಕರಿಗೆ ಗುಣಮಟ್ಟಣ ತಿಂಡಿ ತಿನಿಸುಗಳನ್ನು ಪೂರೈಸುವುದೇ ಮುಖ್ಯ. ಮಾರುಕಟ್ಟೆಯಲ್ಲಿ ಬೆಲೆ ಇಳಿದಾಗ ನಾವು ಬೆಲೆ ಕಡಿಮೆ ಮಾಡುತ್ತೇವೆ. ಕಾರ ಬೂಂದಿಗೆ ಬೇರೆ ಕಡೆ 100 ರೂಪಾಯಿಗೂ ಹೆಚ್ಚು ಬೆಲೆ ಇದೆ. ನಾವು 70ಕ್ಕೆ ಮಾರುತ್ತೇವೆ. ಇಲ್ಲಿಂದ ಖರೀದಿಸಿ ಅಕ್ಕಪಕ್ಕದ ಅಂಗಡಿಯವರೂ ಮೂರು ಪಟ್ಟು ದರಕ್ಕೆ ಮಾರುತ್ತಾರೆ’ ಎಂದು ನಗುತ್ತಾರೆ ಅವರು.­ದುಡ್ಡು ಪಟಾಕಿಗೆ; ಖರೀದಿ ಎಳ್ಳು ಬೆಲ್ಲ!

ಬೆಳಕಿನ ಹಬ್ಬ ದೀಪಾವಳಿಗೆ ಸುಡುಮದ್ದು ಖರೀದಿಸಲೆಂದು ಚೀಟಿ ಹಾಕುವುದು ಹೊಸದೇನಲ್ಲ. ಈ ಶೆಣೈ ಮಾಮು ಶಿವಕಾಶಿ ಬ್ರಾಂಡ್‌ನ ಸುಡುಮದ್ದುಗಳಿಗೆ ಅಧಿಕೃತ ಏಜೆಂಟ್. ಈ ವರ್ಷ ಮಕರ ಸಂಕ್ರಮಣದವರೆಗೂ 200 ರೂಪಾಯಿ ಮುಂಗಡ ಹಣ ಪಾವತಿಸುವ ಗ್ರಾಹಕರು ತಲಾ ಅರ್ಧ ಕೆಜಿ ಮಿಕ್ಸೆಡ್ ಎಳ್ಳು ಮತ್ತು ಸಕ್ಕರೆ ಅಚ್ಚು ಒಯ್ಯಬಹುದು. ಮುಂದಿನ ದೀಪಾವಳಿಗೆ ಸುಡುಮದ್ದೂ ಸಹ!ಮನೆಯಲ್ಲೇ ತಯಾರಿಸಿದ ಹತ್ತಾರು ಬಗೆ ಚಟ್ನಿಗಳು, ಸಾಂಬಾರು ಪುಡಿ, ಉಪ್ಪಿನಕಾಯಿ, ಜೋಳದರೊಟ್ಟಿ, ಪತ್ರೊಡೆ, ಒತ್ತು ಶ್ಯಾವಿಗೆ, ಅಷ್ಟಮಿ ಉಂಡೆ, ಬಗೆ ಬಗೆ ಉಂಡೆಗಳು, ಮಕರ ಸಂಕ್ರಮಣಕ್ಕೆ ಬೇಕಾದ ತಿಂಡಿ ತಿನಿಸು, ಎಳ್ಳು ಬೆಲ್ಲದ ಪ್ಯಾಕೇಜ್‌ ಬೇಕಿದ್ದರೆ, ದೊಡ್ಡ ಪ್ರಮಾಣದಲ್ಲಿ ಆರ್ಡರ್‌ ಕೊಡಬೇಕಾದರೆ ನೀವೂ ಶೆಣೈ ಸ್ಟೋರ್ಸ್‌ಗೆ ಭೇಟಿ ಕೊಡಬಹುದು. ಸಂಪರ್ಕಕ್ಕೆ: 98440 90276, 97414 95111.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry