ಗುರುವಾರ , ನವೆಂಬರ್ 14, 2019
18 °C

ಮನೆಯ ಸುರಕ್ಷತೆಗೆ `ಹೋಮ್ ಆಟೊಮೇಷನ್'

Published:
Updated:

ಗಂಡ-ಹೆಂಡತಿ ಇಬ್ಬರೂ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಿಗಳು. ಮುಂಜಾನೆಯಾಗುತ್ತಿದ್ದಂತೆ ಬ್ರೇಕ್‌ಫಾಸ್ಟ್ ಮುಗಿಸಿ, ಧಾವಂತದಲ್ಲಿ ಕಚೇರಿಗೆ ಹೋಗುತ್ತಾರೆ. ಆದರೆ ಅವರ ದೇಹಗಳು ಮಾತ್ರ ಅಲ್ಲಿರುತ್ತವೆ ಅಷ್ಟೆ, ಮನಸ್ಸು ಮನೆಯಲ್ಲಿರುತ್ತದೆ. ಕೋಣೆಗಳ ಲೈಟ್ಸ್, ಗೀಜರ್ ಆಫ್ ಮಾಡಿದೆವೋ ಇಲ್ಲವೊ? ಎಂಬ ಇತ್ಯಾದಿ ಸಣ್ಣಸಣ್ಣ ವಿಷಯಗಳ ಕುರಿತು ಕೆಲಸದ ವೇಳೆ ಮಾನಸಿಕವಾಗಿ ಗೊಂದಲಕ್ಕೆ ಒಳಗಾಗುವವರೂ ಬಹಳಷ್ಟು ಮಂದಿ ಇದ್ದಾರೆ. ಆದರೆ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂದು ಮಾರ್ಗವಿದೆ ಎಂದು ಹೇಳುತ್ತದೆ `ಸಿಲ್ವನ್ ಇನೊವೇಷನ್ ಲ್ಯಾಬ್ಸ್'.ಮನೆಯಲ್ಲಿ ಯಾರೂ ಇಲ್ಲದಿದ್ದರೂ ಬಾಗಿಲು ಮುಚ್ಚಿದೆಯೇ ಇಲ್ಲವೇ, ಯಾರ‌್ಯಾರು ಮನೆಗೆ ಬಂದರು, ಕರ್ಟನ್ ಹಾಕಿದೆಯೇ ಇಲ್ಲವೇ ಎಂಬುದನ್ನು ಕೂತಲ್ಲಿಯೇ ವಿಡಿಯೋ ಸಹಿತ ಮಾಹಿತಿ ಪಡೆದುಕೊಳ್ಳುವ `ಹೋಮ್ ಆಟೊಮೇಷನ್' ಕಲ್ಪನೆಯನ್ನು ಜೀವನ್‌ಭೀಮಾನಗರ ಮುಖ್ಯರಸ್ತೆಯಲ್ಲಿರುವ ಸಿಲ್ವನ್ ಇನ್ನೊವೇಷನ್ ಲ್ಯಾಬ್‌ನ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ.ಇಂಟರ್ನೆಟ್ ಹಾಗೂ ಸಿಲ್ವನ್ ಅಭಿವೃದ್ಧಿಪಡಿಸಿದ ಕಂಟ್ರೋಲರ್ ಮೂಲಕ ಸ್ಮಾರ್ಟ್ ಫೋನ್ ಅಥವಾ ಐಪಾಡ್‌ಗಳನ್ನು ಬಳಸಿಕೊಂಡು ಈ ಮೇಲಿನ ಎಲ್ಲಾ ವಿಷಯಗಳ ಕುರಿತು ಮಾಹಿತಿ ತಿಳಿದುಕೊಳ್ಳಬಹುದು. ನೀವು ಎಲ್ಲಿರುತ್ತೀರೋ ಅಲ್ಲಿಂದಲೇ ಆಪರೇಟ್ ಮಾಡಬಹುದು. ರಿಮೋಟ್ ಕಂಟ್ರೋಲರ್ ಬಳಸಿಕೊಂಡು ಕಾರಿನ ಬಾಗಿಲು ಲಾಕ್ ಮಾಡುವ, ಟೀವಿ ಅಥವಾ ಏಸಿ ಆಪರೇಟ್ ಮಾಡುವ ಕಲ್ಪನೆಯನ್ನಿಟ್ಟುಕೊಂಡು ಭಾರತದ ಜೀವನ ಶೈಲಿಗೆ ಹೊಂದುವಂತೆ ಸಿಲ್ವನ್ ಇನೊವೇಷನ್ ಲ್ಯಾಬ್ಸ್‌ನ 60 ಮಂದಿ ತಂತ್ರಜ್ಞರು ಈ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ.ಬಹುತೇಕ ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಬೆಂಗಳೂರಿನಲ್ಲಿ ಮನೆಯ ಸದಸ್ಯರೆಲ್ಲ ಕೆಲಸಕ್ಕೆ ಹೋದರೆ ಬಾಗಿಲಿಗೆ ಬೀಗವೇ ಗತಿ. ಆದರೆ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಬಾತ್‌ರೂಂನಲ್ಲಿರುವ ಗೀಜರ್ ಆಫ್ ಮಾಡದೆ, ಅಡುಗೆ ಮನೆಯ ಲೈಟ್ ಹಾಗೂ ಏಸಿಯನ್ನೂ ಆಫ್ ಮಾಡದೆ ಹೋಗಿರುತ್ತಾರೆ. ಅಂಥ ಸಂದರ್ಭದಲ್ಲಿ ವಿದ್ಯುತ್ ಖರ್ಚಾಗುವುದಲ್ಲದೆ ಮತ್ತಿತರ ಅವಘಡಗಳಾಗುವ ಸಂಭವ ಹೆಚ್ಚಿರುತ್ತದೆ. ಇಂಥ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಲ್ಯಾಬ್‌ನ ತಂತ್ರಜ್ಞರು `ಸ್ಮಾರ್ಟ್ ಹೋಮ್ ಆಟೊಮೇಷನ್' ಎಂಬ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ್ದಾರೆ.“ಈ ಕಲ್ಪನೆ ಹೊಸತೇನೂ ಅಲ್ಲ. ಈಗಾಗಲೇ ವಿದೇಶಗಳಲ್ಲಿ ಬಳಕೆಯಲ್ಲಿದೆ. ಆದರೆ ಭಾರತಕ್ಕೆ ಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ `ಎಂಟ್ರೆನ್ಸ್ ಮ್ಯಾನೇಜ್‌ಮೆಂಟ್', `ಸೆಕ್ಯುರಿಟಿ ಮ್ಯಾನೇಜ್‌ಮೆಂಟ್' ಹಾಗೂ `ಸೇಫ್ಟಿ ಮ್ಯಾನೇಜ್‌ಮೆಂಟ್' ಎಂದು ವಿಭಾಗಗಳನ್ನು ಮಾಡಲಾಗಿದೆ. ಮನೆಯ ಮುಖ್ಯ ಬಾಗಿಲು, ಕೊಠಡಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ.ಶಾಲೆಯಿಂದ ಬಂದ ಮಗು ಕೀಲಿ ಇಲ್ಲದೆ ಮನೆ ಹೊರಗೆ ಕಾಯುತ್ತಿದ್ದರೆ ಅಥವಾ ಕಾಲಿಂಗ್ ಬೆಲ್ ಒತ್ತಿದ ಕೂಡಲೇ ನಿಮ್ಮ ಫೋನ್‌ಗೆ ಮೆಸೇಜ್ ಬರುತ್ತದೆ (ಕ್ಲೌಡ್ ಕಂಪ್ಯೂಟಿಂಗ್‌ನಿಂದ ಸರ್ವರ್‌ಗೆ ಅಲ್ಲಿಂದ ಸ್ಮಾರ್ಟ್ ಫೋನ್‌ಗೆ ಮೆಸೇಜ್ ರವಾನೆಯಾಗುತ್ತದೆ). ಫೋನ್‌ಗೆ ಬಂದ ಮೆಸೇಜ್ ನೋಡಿದ ಪೋಷಕರು ಅಲ್ಲಿಂದಲೇ ಬಾಗಿಲನ್ನು ಅನ್‌ಲಾಕ್ ಮಾಡಿದರೆ ಸಾಕು ಅದು ತೆರೆದುಕೊಳ್ಳುತ್ತದೆ. ಮಗು ಮನೆಯೊಳಗೆ ಸುಲಭವಾಗಿ ಹೋಗಬಹುದು. ಇದು `ಎಂಟ್ರೆನ್ಸ್ ಮ್ಯಾನೇಜ್‌ಮೆಂಟ್'ನಲ್ಲಿ ಬರುವ ಒಂದು ಅಂಶ. ಈ ಸೌಲಭ್ಯವನ್ನು ಮೆನೆಯ ಎಷ್ಟು ಸದಸ್ಯರ ಫೋನ್‌ಗಳಿಗೆ ಬೇಕಾದರೂ ಅಳವಡಿಸಿಕೊಳ್ಳಬಹುದು” ಎಂದು ಹೇಳುತ್ತಾರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರಿ ಕೃಷ್ಣ.`ಸುರಕ್ಷತೆ ಮತ್ತು ಭದ್ರತೆ ನಿರ್ವಹಣೆ ವಿಭಾಗದಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ಕಿಟಕಿ ಗಾಜು ಒಡೆದರೆ ಅಥವಾ ಗ್ಯಾಸ್ ಲೀಕ್ ಆದರೆ (ಗ್ಯಾಸ್ ಲೀಕ್ ಡಿಟೆಕ್ಟರ್ ಅಳವಡಿಸಲಾಗಿರುತ್ತದೆ) ಅಥವಾ ಬಾಗಿಲಿಗೆ ಯಾವುದೇ ಹಾನಿಯಾದರೂ ಮಾಲೀಕರ ಸ್ಮಾರ್ಟ್ ಫೋನ್‌ಗೆ ಮೆಸೇಜ್ ಬರುತ್ತದೆ. ವಯಸ್ಸಾದವರು ಮನೆಯಲ್ಲಿದ್ದಾಗ ಅವರಿಗೆನಾದರೂ ಸಹಾಯ ಬೇಕಿದ್ದರೆ ಪ್ರತಿ ಕೊಠಡಿಗಳ ಗೋಡೆಗಳಲ್ಲಿ ಪ್ಯಾನಿಕ್ ಸ್ವಿಚ್‌ಗಳನ್ನು ಹಾಕಿಕೊಳ್ಳಬಹುದು.ಅದನ್ನು ಪ್ರೆಸ್ ಮಾಡುವ ಮೂಲಕ ಅವರು ಸಹಾಯ ಪಡೆದುಕೊಳ್ಳಬಹುದು. ಹಾಗೂ ಪರಿಸರ ಸ್ನೇಹಿ ಮಾದರಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಬಹುದು. ಅಂದರೆ ಲೈಟ್‌ಗಳ ಬೆಳಕಿನ ಪ್ರಮಾಣವನ್ನು ಸ್ಮಾರ್ಟ್ ಫೋನ್‌ನಲ್ಲಿಯೇ ಕಡಿಮೆ ಅಥವಾ ಹೆಚ್ಚು ಮಾಡಬಹುದು. ಇನ್ನೂ ಸುರಕ್ಷತೆ ದೃಷ್ಟಿಯಿಂದ ಹಣ, ಒಡವೆಗಳನ್ನು ಇಟ್ಟಿರುವ ಬೀರಿನ ಬಳಿ ಮೋಷನ್ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಅಲ್ಲಿ ಯಾರಾದರೂ ಬಂದರೆ ಸಾಕು ಫೋನ್‌ಗೆ ಅಲರ್ಟ್ ಮೆಸೇಜ್ ಹೋಗುತ್ತದೆ. ಹೀಗೆ ಮನೆಯ ಪ್ರತಿಯೊಂದು ಜಾಗದಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ಭದ್ರತೆ ಹಾಗೂ ಸುರಕ್ಷತೆ ಕಾಪಾಡಿಕೊಳ್ಳಬಹುದು' ಎಂದು ಮಾಹಿತಿ ನೀಡುತ್ತಾರೆ ಡಾ.ಗಿರಿ ಕೃಷ್ಣ.ಈ ಎಲ್ಲಾ ಅಪ್ಲಿಕೇಷನ್‌ಗಳನ್ನು ಸೆಂಟ್ರಲ್ ಹೋಮ್ ಆಟೊಮೇಷನ್ ಸರ್ವರ್ ನಿಯಂತ್ರಿಸುತ್ತಿರುತ್ತದೆ. ಈ ಸರ್ವರ್‌ನಲ್ಲಿ ಏನಾದರೂ ತೊಂದರೆಗಳಾದರೆ ಸಿಲ್ವನ್ ಇನ್ನೊವೇಷನ್ ಕಚೇರಿಯ ಲ್ಯಾಬ್‌ನ ಸರ್ವರ್‌ಗೆ ಮೆಸೇಜ್ ಹೋಗುತ್ತದೆ. ಅಲ್ಲಿಂದಲೇ ಲ್ಯಾಬ್‌ನ ತಂತ್ರಜ್ಞರು ಸಮಸ್ಯೆ ಬಗೆಹರಿಸುತ್ತಾರೆ. ಈಗಾಗಲೇ ವೈಟ್‌ಫೀಲ್ಡ್, ಸರ್ಜಾಪುರ, ಕನಕಪುರ ರಸ್ತೆಯಲ್ಲಿರುವ ಅಪಾರ್ಟ್‌ಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಆಟೊಮೇಷನ್ ಸಿಸ್ಟಮ್ ಅಳವಡಿಸಿಕೊಳ್ಳಬಹುದು. 50 ಸಾವಿರಕ್ಕಿಂತ ಮೇಲ್ಪಟ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಕೂತಲ್ಲೇ ಮನೆಯ ಬಗ್ಗೆ ಒಂದು ಕಣ್ಣಿಡಬಹುದು. ಮಾಹಿತಿಗೆ: 4126 3541, 99866 32121.

 

ಪ್ರತಿಕ್ರಿಯಿಸಿ (+)