ಮಂಗಳವಾರ, ಮೇ 11, 2021
28 °C

ಮನೆ ಕೆಡವದಿರಲು ಜನತೆ ಆಗ್ರಹ: ಭೂಸ್ವಾಧೀನಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ನಗರದ ರೈಲು ಗೇಟ್ ಬಳಿ ಹಲವು ವರ್ಷಗಳಿಂದ ವಾಸವಾಗಿದ್ದು ಈಗ ಸ್ಥಳಾಂತರದ ಸಮಸ್ಯೆ ಎದುರಿಸುತ್ತಿರುವ 22 ಮನೆಯವರು ಸೋಮವಾರ ಪ್ರತಿಭಟನೆ ನಡೆಸಿ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆಯ ಅಗಲೀಕರಣಕ್ಕಾಗಿ ಇಲ್ಲಿಯ ನಿವಾಸಿಗಳನ್ನು ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿರುವುದಲ್ಲದೆ ಎಸ್.ಎಂ. ಕೃಷ್ಣಾ ನಗರದಲ್ಲಿ ನಿವೇಶನದ ಹಕ್ಕುಪತ್ರವನ್ನೂ ನೀಡಿದ್ದಾರೆ. ಆದರೆ ಉದ್ದೇಶಿತ ಬಡಾವಣೆಯ ವಿಚಾರಣೆ ನ್ಯಾಯಾಲಯದಲ್ಲಿದ್ದು ಈಗ ಅಲ್ಲಿಗೆ ಹೋಗುವಂತೆಯೂ ಇಲ್ಲದೆ ನಿವಾಸಿಗಳು ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೊಳೆಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಏಕಾಯೇಕಿ ಕೊಳೆಗೇರಿ ನಿವಾಸಿಗಳನ್ನು ಎದ್ದು ಹೋಗಿ ಅಂದರೆ ಅವರೆಲ್ಲಿಗೆ ಹೋಗಬೇಕು ? ಸ್ಥಳಾಂತರ  ಮಾಡುವಾಗ ಹಲವು ಭರವಸೆಗಳನ್ನು ನೀಡುತ್ತಾರೆ. ಕೊನೆಯಲ್ಲಿ ಜನರು ಅವ್ಯವಸ್ಥೆಯಲ್ಲೇ ಜೀವನ ನಡೆಸಬೇಕಾಗುತ್ತದೆ. ಹಿಂದೆ ಬೀರನಹಳ್ಳಿ ಕೆರೆಯ ಪ್ರದೇಶದಲ್ಲಿ ವಾಸವಾಗಿದ್ದ ಜನರನ್ನು ಇದೇ ರೀತಿ ಒಕ್ಕಲೆಬ್ಬಿಸಲಾಗಿತ್ತು. ಅವರೆಲ್ಲರೂ ಪರ್ಯಾಯ ವ್ಯವಸ್ಥೆ ಇಲ್ಲದೆ ಇನ್ನೂ ಅದೇ ಜಾಗದಲ್ಲಿ ಗುಡಿಸಲುಗಳನ್ನು ಹಾಕಿ ವಾಸಮಾಡುವಂತಾಗಿದೆ. ಹಲವು ಬಾರಿ ಮನವಿ, ಪ್ರತಿಭಟನೆ ನಡೆಸಿದ್ದರೂ ಅವರ ಸಮಸ್ಯೆ ಈವರೆಗೆ ಬಗೆಹರಿದಿಲ್ಲ. ಈಗ ಇನ್ನೊಂದು ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದ್ದು ಇದು ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.`ಇಲ್ಲಿ ನೆಲೆಸಿರುವ 22 ಮನೆಯವರು ಸುಮಾರು ಐವತ್ತು ವರ್ಷಗಳಿಂದ ಇಲ್ಲಿ ಬದುಕುತ್ತಿದ್ದಾರೆ. ಅಭಿವೃದ್ಧಿಗಾಗಿ ಜಾಗವನ್ನು ಬಿಟ್ಟುಕೊಡಲು ಒಪ್ಪಿದ್ದರೂ, ಈವರೆಗೆ ಅವರಿಗೆ ಪರಿಹಾರ ನೀಡಿಲ್ಲ. ಭಾನುವಾರ ಸಂಜೆ ಏಕಾಯೇಕಿ ಬಂದು ಮನೆಗಳನ್ನು ಕೆಡವುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಖಾಸಗಿ ಸಂಸ್ಥೆಯವರು ತಡೆಯಾಜ್ಞೆ ತಂದ ಕಾರಣ ಮನೆಗಳು ಉಳಿದಿವೆ. ಈಗಲಾದರೂ ಇವರಿಗೆ ಕೊಟ್ಟಿರುವ ಹಕ್ಕುಪತ್ರಗಳನ್ನು ನೋಂದಾಯಿಸಿ ಎಸ್.ಎಂ. ಕೃಷ್ಣಾ ನಗರದಲ್ಲಿ ಮನೆಗಳನ್ನು ಕಟ್ಟಲು ಅವಕಾಶ ಮಾಡಿಕೊಡಬೇಕು~ ಎಂದು ಆಗ್ರಹಿಸಿದರು.ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.ಭೂಸ್ವಾಧೀನಕ್ಕೆ ವಿರೋಧ

ಯಗಚಿ ನಾಲೆಗೆ ಭೂಮಿಯನ್ನು ಸ್ವಾಧೀನಪಡಿಸುವುದನ್ನು ವಿರೋಧಿಸಿ ವಿವಿಧ ಗ್ರಾಮಗಳ ರೈತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಹಾಸನ ತಾಲ್ಲೂಕಿನ ಕೆಂಚನಹಳ್ಳಿ, ಗಾಣಿಗರ ಹೊಸಹಳ್ಳಿ, ಕೊಂತಗೋಡನಹಳ್ಳಿ, ಸಾತೇನಹಳ್ಳಿ, ಶೆಟ್ಟಿಹಳ್ಳಿ, ಕೌಶಿಕ, ಚಿಕ್ಕಬಸವನಹಳ್ಳಿ ಮತ್ತಿತರ ಪ್ರದೇಶದಲ್ಲಿ ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ಭೂಸ್ವಾಧೀನ ಮಾಡಿಕೊಂಡಿದ್ದರು. ಅಲ್ಲಿ ಹಲವು ಎಕರೆ ಭೂಮಿ ಹೊಂದಿದ್ದ ರೈತರಲ್ಲಿ ಈಗ ಹತ್ತಿಪ್ಪತ್ತು ಗುಂಟೆ ಜಾಗ ಮಾತ್ರ ಉಳಿದಿದೆ. ಈಗ ಈ ಭೂಮಿಯನ್ನು ಯಗಚಿ ನಾಲೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದರಿಂದ ಇಲ್ಲಿನ ರೈತರು ಬೀದಿಗೆ ಬೀಳುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಲಾ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಹೊಳೆನರಸೀಪುರ ರಸ್ತಯಲ್ಲಿರುವ ಅಲ್ಲಾನ ಕಾಫಿ ಸಂಸ್ಥೆಯ ಸಮೀಪದಿಂದಲೇ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ರೈತರು ತಮ್ಮ ಬೇಡಿಕೆಗಳನ್ನು ಒಳಗೊಂಡಿರುವ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.