ಮಂಗಳವಾರ, ಜನವರಿ 21, 2020
28 °C

ಮನೆ ಖರೀದಿಗಿದು ಸಕಾಲ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಮನೆ ಖರೀದಿ ಕನಸು ಕಾಣುತ್ತಿದ್ದವರಿಗೆ ಸಂತಸದ ಸುದ್ದಿ. ಮುಂದಿನ ಆರು ತಿಂಗಳಲ್ಲಿ ಮಹಾ ನಗರಗಳಲ್ಲಿ ಹೊಸದಾಗಿ ನಿರ್ಮಿಸಿದ ಮನೆಗಳ(ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌) ಮೌಲ್ಯ ಕುಸಿಯಲಿದೆ ಎನ್ನುತ್ತದೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಪ್ರಾಪರ್ಟಿ ಪೋರ್ಟಲ್ ‘ಮ್ಯಾಜಿಕ್‌ಬ್ರಿಕ್ಸ್’ ಜಂಟಿ ಸಮೀಕ್ಷೆ.ಈ ಸಮೀಕ್ಷೆ ವೇಳೆ ಹೌಸಿಂಗ್ ಸೆಂಟಿಮೆಂಟ್ ಇಂಡೆಕ್ಸ್‌ನಲ್ಲಿ (ಎಚ್‌ಎಸ್‌ಐ) ಈ ಹಿಂದಿನ   ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಜೂನ್ -ಸೆಪ್ಟೆಂಬರ್ ಅವಧಿಯಲ್ಲಿ ಮನೆಗಳ ಬೆಲೆಯಲ್ಲಿ ಶೇ 20ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.ದೆಹಲಿ, ನೊಯಿಡಾ, ಗುಡಗಾಂವ್, ಮುಂಬೈ, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಬೆಂಗಳೂರಿನಲ್ಲಿ ಈ ಸಂಸ್ಥೆಗಳು ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ.ಮುಂಬರುವ ಆರು ತಿಂಗಳ ಅವಧಿ ಯಲ್ಲಿ ದೇಶದಾದ್ಯಂತ ರಿಯಲ್ ಎಸ್ಟೇಟ್ ದರ ಕುಸಿಯಲಿದೆ ಎನ್ನುವ ನಿರೀಕ್ಷೆಯು ಮನೆ ಖರೀದಿಗೆ ಸಿದ್ಧರಾಗಿರುವವರಲ್ಲಿದೆ. ಇದಕ್ಕೆ ಪೂರಕವೆಂಬಂತೆ ಹಿಂದಿನ ತ್ರೈಮಾಸಿಕದಲ್ಲಿದ್ದ ‘ಎಚ್‌ಎಸ್‌ಐ’ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 20ರಷ್ಟು ಅಂದರೆ 117ರಿಂದ 93ಕ್ಕೆ ಕುಸಿದಿದೆ ಎನ್ನುತ್ತದೆ ವರದಿ.8 ನಗರಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ‘ಎಸ್‌ಎಚ್‌ಐ’ ಸರಾಸರಿ ಫಲಿತಾಂಶ ಮುಂದಿನ ಆರು ತಿಂಗಳಲ್ಲಿ ಬೆಲೆ ಕುಸಿತವಾಗಲಿದೆ ಎಂಬ ಭವಿಷ್ಯವನ್ನೇ ನುಡಿಯುತ್ತಿದೆ. ಮನೆ ಕೊಳ್ಳಲು ಬಯಸುವವರಿಗಿದು ಆಶಾದಾಯಕ ಬೆಳವಣಿಗೆ.

ಶೇ 8.1ರಷ್ಟು ಕಡಿಮೆ ಎಚ್‌ಎಸ್‌ಐ ಅಂಕ ಪಡೆದಿರುವ ಮುಂಬೈ ಸೇರಿದಂತೆ ಎಂಟು ಪ್ರಮುಖ ನಗರಗಳಲ್ಲಿ ಬೆಲೆ ಇಳಿಮುಖ ವಿದ್ಯಮಾನ ಕಾಣಿಸಿಕೊಂಡಿರುವ ನಡುವೆಯೂ ಬೆಂಗಳೂರಿನ ಗ್ರಾಹಕರು ಮಾತ್ರ, ‘ಅಲ್ಪ ಪ್ರಮಾಣದಲ್ಲಿ ಬೆಲೆ ಏರಬಹುದೇನೋ’ ಎಂಬ ಆತಂಕದಲ್ಲಿದ್ದಾರೆ ಎನ್ನುತ್ತದೆ ಸಮೀಕ್ಷೆ.ಏತನ್ಮಧ್ಯೆ, ಹೈದರಾಬಾದ್‌ನಲ್ಲಿ ಕಾಣಿಸಿಕೊಂಡ ತೆಲಂಗಾಣ ವಿವಾದದ ಕಿಚ್ಚು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಹರಡಿದ್ದು, ಪರಿಣಾಮವಾಗಿ ಅಲ್ಲಿನ ಎಚ್‌ಎಸ್‌ಐ ದರ ಶೇ 83ರಿಂದ 30ಕ್ಕೆ ಕುಸಿದಿದೆ.ಈ ಎಂಟು ಪ್ರಮುಖ ನಗರಗಳಲ್ಲಿ ತೀವ್ರವಾಗಿ ಕಂಡುಬಂದ ಬೆಲೆ ಕುಸಿತ ಕ್ರಮ, ಸ್ಥಿರಾಸ್ತಿ ಬೆಲೆ ನಿರಂತರವಾಗಿ ಏರಬಹುದು ಎಂಬ ಗ್ರಾಹಕರ  ಲೆಕ್ಕಾಚಾರವನ್ನೇ ಬದಲಿಸಿಬಿಟ್ಟಿದೆ ಎನ್ನುತ್ತದೆ ವರದಿ.ಶೇ 10ಕ್ಕಿಂತ ಅಧಿಕವಾಗಿ ಬೆಲೆ ಕುಸಿತ ಕಾಣಬಹುದೆಂಬ ನಿರೀಕ್ಷೆಯಲ್ಲಿರುವ ಬಹುತೇಕ ಖರೀದಿದಾರರು ಪ್ರಸಕ್ತ ತ್ರೈಮಾಸಿಕದಲ್ಲಿ ಅದು ಶೇ 25 ರಷ್ಟಾಗಲಿದೆ ಎಂದು ಎದುರು ನೋಡುತ್ತಿದ್ದಾರೆ.ನಿರೀಕ್ಷೆಯಂತೆ, ಆಸ್ತಿ ಖರೀದಿಸಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಕಾಯಲು ಬಹಳಷ್ಟು ಖರೀದಿದಾರರು ಸಿದ್ಧರಿದ್ದಾರೆ. ಇದು ಬೆಲೆ ಕುಸಿತದ ನಿರೀಕ್ಷೆಯನ್ನು ಆರು ತಿಂಗಳಿಂದ 9 ತಿಂಗಳವರೆಗೂ ವಿಸ್ತರಿಸಬಹುದು. ಭಾರಿ ಸಂಖ್ಯೆಯಲ್ಲಿ ಮನೆಗಳನ್ನು ಮಾರಾಟ ಮಾಡಲಾಗದೆ ಉಳಿಸಿಕೊಂಡಿರುವ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಅಪಶಕುನದಂತಿದೆ ಎನ್ನುತ್ತದೆ ವರದಿ.ಮುಂಬೈನಲ್ಲೂ ಏರುಪೇರು

ಒಂದೆಡೆ ಮನೆಗಳಿಗೆ ಕುಸಿಯುತ್ತಿರುವ ಬೇಡಿಕೆ, ಇನ್ನೊಂದೆಡೆ ಮಾರಾಟ ವಾಗದೆ ಉಳಿಯುತ್ತಿರುವ ಫ್ಲ್ಯಾಟ್‌ಗಳು... ಇದು ಸದ್ಯ ಮುಂಬೈನಲ್ಲಿನ ವಸತಿ ನಿರ್ಮಾಣ ಮಾರುಕಟ್ಟೆಯ ಸ್ಥಿತಿ.ಈ ಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಸ್ವಲ್ಪವಾದರೂ ಚೇತರಿಕೆ ಕಾಣಬಹುದು. 2014ರ ಆರಂಭಿಕ ದಿನಗಳಲ್ಲಿ ಸಮತೋಲನಕ್ಕೆ ಬರಬಹುದು ಎನ್ನುತ್ತದೆ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ನೈಟ್ ಫ್ರಾಂಕ್. ಜನವರಿ, - ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ 1.3 ಲಕ್ಷ ಮನೆಗಳು ಮಾರಾಟವಾ­ಗದೇ ಉಳಿದಿರುವಂತೆಯೇ ಮತ್ತೆ ಹೊಸದಾಗಿ 2.9 ಲಕ್ಷ  ಮನೆಗಳ  ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎನ್ನುತ್ತದೆ ನೈಟ್ ಫ್ರಾಂಕ್ ವರದಿ.ದಿನಕಳೆದಂತೆ ರಿಯಲ್ ಎಸ್ಟೇಟ್ ವಲಯದಲ್ಲಿ ಸ್ಥಿರಾಸ್ತಿಗಳ ಬೆಲೆ ಇಳಿಮುಖವಾಗುತ್ತಿದೆ. ಇದು ಗ್ರಾಹಕರ ಮತ್ತು ನಿರ್ಮಾಣದಾರರ ನಡುವಿನ ವಹಿವಾಟು ದೀರ್ಘಕಾಲ ಸ್ಥಗಿತಗೊಳ್ಳುವಂತೆ ಮಾಡುತ್ತಿದೆ. ಹಾಗಿದ್ದೂ ಇದರಿಂದ ಅಂತಿಮವಾಗಿ ಗ್ರಾಹಕರಿಗೇ ಲಾಭ ತಂದುಕೊಡಲಿದೆ.ನಿರ್ಮಾಣ ಕಾರ್ಯ ಪೂರ್ಣಗೊಂಡ  ನಂತರವೂ ಮಾರಾಟವಾಗದೆ ಉಳಿಯುತ್ತಿರುವ ಮನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಸದ್ಯದ ವಸತಿ ನಿರ್ಮಾಣ ಮಾರುಕಟ್ಟೆಯಲ್ಲಿನ ಬೆಲೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ನೈಟ್‌ ಫ್ರಾಂಕ್‌ನ ಸಂಶೋಧನಾ ನಿರ್ದೇಶಕ ಸಮಂತಕ್ ದಾಸ್.ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಮಾರಾಟವಾಗದೆ ಉಳಿದಿರುವ ಶೇ 26ರಷ್ಟು ಗೃಹ ನಿರ್ಮಾಣ ಯೋಜನೆಗಳಿಗೆ ಹೋಲಿಸಿದರೆ ಮುಂಬೈನಲ್ಲಿ ಖರೀದಿದಾರರ ನಿರಾಸಕ್ತಿಯಿಂದ ಉಳಿದುಬಿಟ್ಟಿರುವ (ಶೇ 44ರಷ್ಟು) ಮನೆಗಳ ಸಂಖ್ಯೆ ದೊಡ್ಡದಿದೆ. ಇದರ ಮಧ್ಯೆಯೂ ಎರಡು ಪಟ್ಟು ಸಂಖ್ಯೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತದೆ ವರದಿ.ಬೇಡಿಕೆ ಕುಸಿತದ ಪರಿಣಾಮ ಶೇ 40ಕ್ಕೂ ಅಧಿಕ ವಸತಿ ಯೋಜನೆಗಳನ್ನು ಪೂರ್ತಿಗೊಳಿಸುವುದನ್ನು ಕೈಬಿಟ್ಟಿರುವ ನಿರ್ಮಾಣದಾರರು ಸದ್ಯ ಪೂರ್ಣ­ಗೊಂಡ ಮನೆಗಳನ್ನು ಮಾರಾಟ ಮಾಡುವುದರತ್ತ ದೃಷ್ಟಿ ನೆಟ್ಟಿದ್ದಾರೆ.‘ವಸತಿ ನಿರ್ಮಾಣ ಮಾರು­ಕಟ್ಟೆಯು ನೂತನ ಯೋಜನೆಯನ್ನು ಕಡಿತಗೊಳಿ ಸುವ ಜತೆಗೆ ಬೇಡಿಕೆ ಕುಸಿತದ  ಪ್ರವೃತ್ತಿ ಎದುರಿ­ಸುತ್ತಿದ್ದು, ಇತರೆ ನಗರಗಳಿಗಿಂತ ಮುಂಬೈ­ನಲ್ಲಿ ಮಾರಾಟ ವಾಗದೆ ಉಳಿದಿರುವ ವಸತಿ ಯೋಜನೆ ಗಳು ಹೂಡಿಕೆದಾರರ ಮೇಲೆ ಭಾರಿ ಒತ್ತ­ಡದ ಪರಿಣಾಮ ಬೀರಿವೆ. ಈ ಸ್ಥಿತಿಯು ಹೊಸ ವರ್ಷದ ಆರಂಭ ದೊಂದಿಗೆ ಸಮತೋಲನಕ್ಕೆ ಬರುವುದೆಂಬ ಭರವಸೆ ನಮ್ಮದು’ ಎನ್ನುತ್ತಾರೆ ದಾಸ್.ಈಗಿನ ಬೆಳವಣಿಗೆಗಳಿಂದಾಗಿ ಹಣಕಾಸು ಸಂಸ್ಥೆಗಳು ವಸತಿ ಯೋಜನೆಗಳಿಗೆ ಸಹಾಯ ನೀಡಲು ಹಿಂದೇಟು ಹಾಕುತ್ತಿವೆ. ಇದು ರಿಯಲ್‌ ಎಸ್ಟೇಟ್‌ ಹೂಡಿಕೆದಾ­ರರ ಮೇಲೆ ಮತ್ತಷ್ಟು ಹೆಚ್ಚಿನ ಒತ್ತಡ ಉಂಟು ಮಾಡುತ್ತಿದೆ. ಗೃಹ ನಿರ್ಮಾಣ ಕ್ಷೇತ್ರದ ಸದ್ಯದ ಪರಿಸ್ಥಿತಿ, ಮನೆ ಖರೀದಿದಾರರಿಗೆ ಅನುಕೂಲಕಾರಿ­ಯಾಗಿದೆ. ಖರೀದಿಗಿದು ಸರಿಯಾದ ಸಮಯ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ವಲಯದ ಸಲಹಾ ಸಂಸ್ಥೆಯೊಂದರ ನಿರ್ದೇಶಕ ಮುದಾಸ್ಸಿರ್ ಜೈದಿ.

ಪ್ರತಿಕ್ರಿಯಿಸಿ (+)