ಗುರುವಾರ , ಮೇ 19, 2022
24 °C

ಮನೆ ಧ್ವಂಸ: ಅಸಲಿ-ನಕಲಿ ಮಾಲೀಕರ ವಾಗ್ವಾದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಮನೆಯೊಂದನ್ನು ಒಡೆದು ಹಾಕಿದ ಪ್ರಕರಣ ಬುಧವಾರ ನಡೆದಿದ್ದು. ಮನೆಯ ಮಾಲೀಕರು ಎಂದು ಹೇಳಿಕೊಳ್ಳುತ್ತಿರುವ ಶಶಿ ಮತ್ತು ಆಕೆಯ ಪತಿ ಶ್ರೀನಿವಾಸ್ ಪೊಲೀಸರಿಗೆ ದೂರು ನೀಡಿದ್ದಾರೆ.ಇಲ್ಲಿನ ಗಾಂಧಿನಗರದ ಆಶ್ರಯ ಮನೆಯೊಂದನ್ನು ಪ್ರಕಾಶ, ಸ್ವಾಮಿ, ಕುಮಾರ ಇತರರು ಬುಧವಾರ ಬೆಳಿಗ್ಗೆ ಏಕಾಏಕಿ ಬಂದು ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ನಮ್ಮ ಮನೆಯ ಸಾಮಾನು ಸರಂಜಾಮು ಹೊರಕ್ಕೆಸೆದು ಜೆಸಿಬಿ ಯಂತ್ರದಿಂದ ಮನೆ ಒಡೆದು ಹಾಕಿದ್ದಾರೆ ಎಂದು ದೂರಿದ್ದಾರೆ.ಇದು ಪುರಸಭೆಯವರು ರಾಮಮ್ಮ ಎಂಬುವವರಿಗೆ ನೀಡಿದ್ದ ಮನೆ. ಆಕೆಗೆ ಯಾರೂ ಗತಿ ಇರಲಿಲ್ಲ. ಆದ್ದರಿಂದ ಆಕೆಯನ್ನು ನಾವೇ ನೋಡಿಕೊಳ್ಳು ತ್ತಿದ್ದೆವು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ ನನಗೆ ಯಾರೂ ಗತಿ ಇಲ್ಲ ಎಂದು ಹೇಳಿ ಮನೆಯನ್ನು ನಮಗೆ ರಿಜಿಸ್ಟರ್ ಮಾಡಿಕೊಟ್ಟಿದ್ದರು. ಆಕೆ ಎರಡು ತಿಂಗಳ ಹಿಂದೆ ಮೃತ ಪಟ್ಟಿದ್ದು ನಾವು ಈ ಮನೆಯಲ್ಲಿ ವಾಸ ಇದ್ದೆವು ಎಂದು ಶಶಿ ಮತ್ತು ಆಕೆಯ ಪತಿ ಸಾರಿಗೆ ಸಂಸ್ಥೆಯ ನಿರ್ವಾಹಕ ಶ್ರೀನಿವಾಸ್ ತಮ್ಮಲ್ಲಿರುವ ಹಕ್ಕುಪತ್ರ ತೋರಿಸಿದರು.ಈ ಮನೆ ಒಡೆಯಲು ನ್ಯಾಯಾಲ ಯದ ಆದೇಶ ಇದೆ. ಈ ಮನೆಯಲ್ಲಿ ಯಾರೂ ವಾಸ ಇರಲಿಲ್ಲ. ಅಕ್ರಮವಾಗಿ ಬೀಗಹಾಕಿಕೊಂಡಿದ್ದರಿಂದ ನಾವು ನ್ಯಾಯಾಲಯದ ಆದೇಶದಂತೆ ಖಾಲಿ ಇದ್ದ ಮನೆ ಒಡೆಸಿದ್ದೇವೆ ಎಂದು ಮನೆಯ ಅಸಲಿ ಮಾಲಿಕ ನಾನು ಎಂದು ಹೇಳುತ್ತಿರುವ ಗಾಂಧಿನಗರದ ಪ್ರಕಾಶ್ ಈ ಮನೆಯ ದಾಖಲೆಗಳನ್ನು ತೋರಿಸಿದ್ದಾರೆ.ಈ ಬಗ್ಗೆ ವಿವರ ನೀಡಿದ ಪುರಸಭಾ ಸದಸ್ಯ ರಘುರಾಮ್, ಶಶಿ ಎನ್ನುವವರಿಗೆ 4594 ಹಾಗೂ ಆಕೆಯ ಪತಿ ಶ್ರೀನಿವಾಸ್ ಎನ್ನುವವರಿಗೆ 4595 ಮನೆ ನೀಡಲಾಗಿದೆ. ಅವರು ಅದೇ ಮನೆಯಲ್ಲಿ ವಾಸ ಇದ್ದಾರೆ. 4597 ರ ಮನೆಯನ್ನು ಬೇರೊಬ್ಬರಿಗೆ ನೀಡಿದ್ದು ಶಶಿ ಎನ್ನುವವರು ಈ ಮನೆಗೆ 4597/ಎ ಎಂದು ತಿದ್ದಿ ನನಗೇ ನೀಡ ಲಾಗಿದೆ ಎಂದು ಅಕ್ರಮವಾಗಿ 4598 ಮನೆಗೆ ಬೀಗ ಹಾಕಿಕೊಂಡಿದ್ದಾರೆ. ಪುರಸಭೆ ದಾಖಲೆಯಲ್ಲಿ 4597/ಎ ಎಂಬ ಮನೆ ಇಲ್ಲ ಎಂದು ಪುರಸಭೆ ನೀಡಿದ್ದ ದಾಖಲೆ ಹಾಜರುಪಡಿಸಿದರು.ಈ ಮನೆಯನ್ನು ಪ್ರಕಾಶ ಎನ್ನುವವರಿಗೆ ನೀಡಲಾಗಿದೆ. ಪ್ರಕಾಶ ಈ ಮನೆಯನ್ನು ರಾಮಮ್ಮ ಎನ್ನುವ ಅಜ್ಜಿಗೆ  ಬಿಟ್ಟುಕೊಟ್ಟಿದ್ದರು. ಆಕೆಯ ಮರಣ ನಂತರ ಶಶಿ ಮತ್ತು ಆಕೆಯ ಪತಿ ಶ್ರೀನಿವಾಸ್ ಎನ್ನುವವರು ಈ ಮನೆಗೆ ಅಕ್ರಮವಾಗಿ ಬೀಗ ಹಾಕಿಕೊಂಡಿದ್ದಾರೆ. ಇದು ಶಶಿ ಅವರಿಗೆ ನೀಡಲಾಗಿರುವ ಮನೆಯಲ್ಲ ಎಂದು ತಿಳಿಸಿದ್ದಾರೆ.`ಮನೆ ಯಾರದೇ ಆಗಿರಲಿ. ಅದನ್ನು ನ್ಯಾಯವಾಗಿ ನೀತಿ ನಿಯಮಗಳಿಗೆ ಅನುಸಾರವಾಗಿ ಒಡೆಯಬೇಕಿತ್ತು. ಯಾರೂ ಇಲ್ಲದ ಸಮಯದಲ್ಲಿ ಅಕ್ರಮ ವಾಗಿ ಮನೆ ಒಡೆದು ಹಾಕಿರುವುದು ಸರಿಯಲ್ಲ' ಎಂದು ಡಿಎಸ್‌ಎಸ್ ಮುಖಂಡರಾದ ಸೋಮಶೇಖರ್, ನಾಗೇಂದ್ರ, ಸದಾಶಿವ, ಚಿನ್ನಸ್ವಾಮಿ ಖಂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.