ಮನೆ ಪರಿಸರದ ನೆರವು ಅಗತ್ಯ

6

ಮನೆ ಪರಿಸರದ ನೆರವು ಅಗತ್ಯ

Published:
Updated:

ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆಯ ಕೊರತೆ ಕಂಡು ಬರುತ್ತಿದ್ದು, ಪ್ರತಿಯೊಬ್ಬರು ಪಾರದರ್ಶಕತೆ ರೂಢಿಸಿಕೊಳ್ಳಲು ಮನೆಯ ಪರಿಸರ ಅನುವು ಮಾಡಿಕೊಡಬೇಕು’ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ತಿಳಿಸಿದರು. ಜಯನಗರದ ನ್ಯಾಷನಲ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗುರುವಾರ ಏರ್ಪಡಿಸಿದ್ದ ‘ಸಾರ್ವಜನಿಕ ಸಂಪರ್ಕ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ಪಾರದರ್ಶಕತೆ ಹೆಚ್ಚಿದಷ್ಟೂ ಸಾರ್ವಜನಿಕ ಕ್ಷೇತ್ರ ಸದೃಢವಾಗುತ್ತದೆ. ಪರಸ್ಪರ ವಿಶ್ವಾಸ ನಂಬಿಕೆಗಳು ಬೆಳೆಯುತ್ತವೆ. ಈ ಹಿನ್ನೆಲೆಯಲ್ಲಿ ಯುವ ಜನರು ಪ್ರಾಮಾಣಿಕತೆ ರೂಢಿಸಿಕೊಳ್ಳಲು ಶ್ರಮಿಸಬೇಕು’ ಎಂದರು. ಅಪರಾಧ ವಿಭಾಗದ ಪೊಲೀಸ್ ಜಂಟಿ ಆಯುಕ್ತ ಅಲೋಕ್ ಕುಮಾರ್ ಮಾತನಾಡಿ ‘ಪೊಲೀಸರು ಸಾರ್ವಜನಿಕರೊಂದಿಗೆ ಮುಖಾಮುಖಿಯಾಗುವ ಪ್ರಸಂಗಗಳು ಸ್ವಾರಸ್ಯಕರವಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ ಮಾನವೀಯತೆ, ಕರುಣೆ, ಶಿಸ್ತು, ತ್ಯಾಗದ ಮಹತ್ವ ಪರಿಚಯವಾಗುತ್ತದೆ’ ಎಂದರು.‘ಸಾರ್ವಜನಿಕ ಸಂಪರ್ಕದಂತಹ ಸೂಕ್ಷ್ಮ ಹಾಗೂ ಮಹತ್ವಪೂರ್ಣ ವಿಷಯದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಿರುವ ನ್ಯಾಷನಲ್ ಕಾಲೇಜಿನ ಶ್ರಮ ಶ್ಲಾಘನೀಯ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್.ಅಶೋಕ್ ಕುಮಾರ್ ತಿಳಿಸಿದರು. ಎನ್‌ಇಎಸ್ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಎಚ್.ರಾಮರಾವ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಂ.ಕೋದಂಡರಾಮ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಜಯಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry