ಮನೆ ಬಾಗಿಲಿಗೆ ಬರಲಿದೆ ಕಸ ಸಾಗಿಸಲು ಟ್ರ್ಯಾಕ್ಟರ್

7

ಮನೆ ಬಾಗಿಲಿಗೆ ಬರಲಿದೆ ಕಸ ಸಾಗಿಸಲು ಟ್ರ್ಯಾಕ್ಟರ್

Published:
Updated:

ಹುಬ್ಬಳ್ಳಿ: ಕಸ ಹಾಗೂ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಮಾದರಿ ಯೋಜನೆಗಳನ್ನು ಹಾಕಿಕೊಂಡ ಪುಣೆ ನಗರಕ್ಕೆ ಭೇಟಿ ನೀಡಿ ಬಂದ ಅಧಿಕಾರಿಗಳು ಅವಳಿ ನಗರದಲ್ಲಿಯೂ ಮಹತ್ವದ ಯೋಜನೆಗಳನ್ನು ಹಾಕಿಕೊಳ್ಳಲು ಮುಂದಾಗಿದ್ದಾರೆ.ಕಸ ಸಂಗ್ರಹಕ್ಕೆ ಟ್ರ್ಯಾಕ್ಟರ್ ಬಳಸಿ ಜನರ ಬಳಿಗೆ ಹೋಗುವ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು ಕೆಲವೇ ತಿಂಗಳಲ್ಲಿ ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸಲು ಸಮರೋಪಾದಿಯಲ್ಲಿ ತಯಾರಿ ನಡೆದಿದೆ.ಬಡಾವಣೆಗಳಲ್ಲಿ ತೊಟ್ಟಿಗಳನ್ನು ಇರಿಸಿ ಅದಕ್ಕೆ ಕಸ ಸುರಿಯುವ ಪದ್ಧತಿಯನ್ನು ಈಗ ಅವಳಿ ನಗರದಲ್ಲಿ ಅನುಸರಿಸಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಮನೆ ಮನೆಯಿಂದ ಸಂಗ್ರಹಿಸಿ ಈ ತೊಟ್ಟಿಗಳಿಗೆ ಸುರಿಯಲಾಗುತ್ತಿದೆಯಾದರೂ ಕೆಲವು ಸಂದರ್ಭಗಳಲ್ಲಿ ಆರೇಳು ದಿನಗಳಾದರೂ ಆ ಕಸ  ತೊಟ್ಟಿಗಳಲ್ಲೇ ಉಳಿದಿರುತ್ತದೆ.

 

ಇದರಿಂದ ವಾಸನೆ ಆರಂಭವಾಗುತ್ತದೆ. ತೊಟ್ಟಿಯ ಸುತ್ತ ಹಂದಿ-ನಾಯಿಗಳು ಬಂದು ಸೇರುತ್ತವೆ. ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಲು ಹೊಸ ಯೋಜನೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಅಧಿಕಾರಿಗಳು. 24, 31 ಹಾಗೂ 43ನೇ ವಾರ್ಡಿನಲ್ಲಿ ಒಂದೂವರೆ ತಿಂಗಳ ಹಿಂದೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು 41, 42 ಹಾಗೂ 60ನೇ ವಾರ್ಡಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದರ ಅಂಗವಾಗಿ 41ನೇ ವಾರ್ಡಿನಲ್ಲಿ ಇದ್ದ ಏಳು ತೊಟ್ಟಿಗಳನ್ನು ಮೂರಕ್ಕೆ ಇಳಿಸಲಾಗಿದೆ. 42ನೇ ವಾರ್ಡಿನಲ್ಲಿ ಇದ್ದ 5 ತೊಟ್ಟಿಗಳಲ್ಲಿ ಒಂದನ್ನು ತೆಗೆಯಲಾಗಿದೆ. 60ನೇ ವಾರ್ಡಿನಲ್ಲಿ ಇದ್ದ ಆರು ತೊಟ್ಟಿಗಳ ಪೈಕಿ ಮೂರು ಬಾಕಿ ಉಳಿದಿವೆ.ಯೋಜನೆಯ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ವೈ.ಎಸ್.ಪಾಟೀಲ, `ಸ್ವಚ್ಛತೆಯ ದೃಷ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿರುವ ಈ ಯೋಜನೆಯನ್ನು ಇಡೀ ನಗರಕ್ಕೆ ಆದಷ್ಟು ಶೀಘ್ರ ವಿಸ್ತರಿಸಲಾಗುವುದು, ವಲಯವಾರು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ನಾಲ್ಕು, ಆರು ಹಾಗೂ ಹತ್ತನೇ ವಲಯದಲ್ಲಿ ಸಭೆಗಳನ್ನು ನಡೆಸಲಾಗಿದೆ. ಪ್ರತಿ ವಲಯದಲ್ಲಿ ಕನಿಷ್ಠ ಒಂದು ವಾರ್ಡಿನಲ್ಲಾದರೂ ಆದಷ್ಟು ಬೇಗ ಇದನ್ನು ಜಾರಿಗೆ ತರುವಂತೆ ಸೂಚಿಸಲಾಗಿದೆ~ ಎಂದು ಹೇಳಿದರು.`ಮಾರುಕಟ್ಟೆ ಪ್ರದೇಶಗಳಲ್ಲಿ ತೊಟ್ಟಿಗಳನ್ನು ಇರಿಸುವುದು ಅನಿವಾರ್ಯ. ಉಳಿದೆಡೆಗಳಲ್ಲಿ ಟ್ರ್ಯಾಕ್ಟರ್‌ನಲ್ಲಿ ಕಸ ಸಂಗ್ರಹಿಸಲಾಗುವುದು. ಇದರಿಂದ ಆಯಾ ದಿನವೇ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಪೊರಕೆ ಬಳಕೆ ಕಡಿಮೆಯಾಗುತ್ತದೆ ಹಾಗೂ ಕಂಡ ಕಂಡಲ್ಲಿ ಕಸ ಚೆಲ್ಲುವುದು ಇಲ್ಲವಾಗುತ್ತದೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry