ಶನಿವಾರ, ಮೇ 21, 2022
27 °C

ಮನೆ ಬಾಡಿಗೆಯೂ, ಜಾತಿ ಪತ್ತೆಯ ಹುನ್ನಾರವೂ...

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

‘ನೀವು ತಿನ್ನುಣ್ಣುವವರಾ?’
ಆ ಗೃಹಿಣಿ ಕೇಳಿದ ಪ್ರಶ್ನೆ ಒಂದು ಕ್ಷಣ ಆತನಿಗೆ ಅರ್ಥವಾಗಲಿಲ್ಲ. ‘ಹೌದು ಮೇಡಂ, ನಾವು ಬೆಳಿಗ್ಗೆ ತಿಂಡಿ ತಿಂತೀವಿ, ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡ್ತೀವಿ’ ಎಂದು ಆ ಸರ್ಕಾರಿ ನೌಕರ ಮುಗ್ಧತೆಯಿಂದ ಉತ್ತರಿಸಿದ.

‘ಏನ್ರೀ ಇದು, ಎಲ್ರೂ ತಿಂತಾರೆ, ಊಟ ಮಾಡ್ತಾರೆ. ನಾನು ಕೇಳಿದ ಪ್ರಶ್ನೆಯ ಅರ್ಥ ನೀವು ವೆಜ್ಜಾ ಅಥವಾ ನಾನ್‌ವೆಜ್ಜಾ ಅಂತಾ?’ ಎಂದು ಸಿಡುಕಿದಳು ಆ ತಾಯಿ.

ಆಗ ಅರ್ಥೈಸಿಕೊಂಡ ಆತ ಉಗುಳು ನುಂಗುತ್ತಾ, ‘ಹೌದು ಮೇಡಂ, ನಾವು ನಾನ್‌ವೆಜ್ಜು. ಮನೇಲಿ ಮಟನ್-ಚಿಕನ್, ಫಿಷ್ ತಿಂತೀವಿ’ ಅಂದ ಮೆಲ್ಲಗೆ.. ‘ನೋಡ್ರೀ ನಾವು ತಿಂದು-ಉಣ್ಣೋರಿಗೆ ಮನೆ ಬಾಡಿಗೆ ಕೊಡಲ್ಲ. ನಾವು ಏನಿದ್ರೂ ಓನ್ಲಿ ವೆಜಿಟೇರಿಯನ್ಸ್‌ಗೆ ಮನೆ ಬಾಡಿಗೆ ಕೊಡೋದು. ಲಿಂಗಾಯತರು, ಬ್ರಾಹ್ಮಣರು, ಐನೋರು ಇದ್ರೆ ಬನ್ನಿ..’ ಎಂದು ಮತ್ತೆ ಸಿಡುಕಿದಳು ಆ ತಾಯಿ.

ಕಳೆದ ನಾಲ್ಕು ತಿಂಗಳಿನಿಂದ ದಾವಣಗೆರೆಯಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ಆತನಿಗೆ, ‘ಜಾತಿ’ ಎಂಬ ಶಬ್ದ ಕೇಳಿದಾಗ, ಆ ಕ್ಷಣವೇ  ಭೂಮಿ ಬಾಯಿ ಬಿಡಬಾರದೇ ಅನ್ನಿಸುತ್ತದೆ. ‘ಛೇ, ಹುಟ್ಟುವಾಗ್ಲೇ ಇಂಥ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡು ಹುಟ್ಟುವಂತಿದ್ರೆ ಎಷ್ಟು ಚೆಂದಾಗಿರ್ತಾ ಇತ್ತು...’ ಎಂದು ದಿನಕ್ಕೆ ಹಲವು ಬಾರಿಯಾದರೂ ಆತ ಅಂದುಕೊಳ್ಳದೇ ಇರುವುದಿಲ್ಲ..

-ಇದು ರಾಜ್ಯದ ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಮನೆಬಾಡಿಗೆ ಹುಡುಕುವ ಕೆಳಜಾತಿ ಜನರ ಬವಣೆಯ ಸಣ್ಣ ತುಣುಕು ಅಷ್ಟೇ.

‘ಹೆಸರಿಗೆ ದಾವಣಗೆರೆ ವಿದ್ಯಾನಗರಿ ಆಗಿದ್ದರೂ ಅಂತರಾಳದಲ್ಲಿ ಇದು ಅಪ್ಪಟ ‘ಜಾತಿನಗರಿ’. ಇದೇ ಸ್ಥಿತಿ ರಾಜ್ಯದ ಬಹುತೇಕ ಊರುಗಳದ್ದೂ ಆಗಿದ್ದರೆ ಅಚ್ಚರಿಯೇನಲ್ಲ. ಗಂಡ-ಹೆಂಡತಿ ಇಬ್ಬರೂ ವಿದ್ಯಾವಂತರಾಗಿದ್ದು, ಸರ್ಕಾರಿ ನೌಕರಿಯಲ್ಲಿದ್ದು, ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸುವವರಾಗಿದ್ದರೂ ಕೂಡಾ ಅವರು ‘ಮಾಂಸಾಹಾರ’ ಸೇವಿಸುವ ಜಾತಿಗೆ ಸೇರಿದವರೆಂಬ ಕಾರಣವೇ ಮನೆಬಾಡಿಗೆ ನೀಡದಿರಲು ಮನೆಮಾಲೀಕರಿಗೆ ದೊಡ್ಡ ಕಾರಣವಾಗಿ ಬಿಡುತ್ತದೆ.

ಆದರೆ, ಅದೇ ಮೇಲ್ಜಾತಿಯವರು ಎರಡು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ‘ದುಗ್ಗಮ್ಮನ ಜಾತ್ರೆ’ಯಲ್ಲಿ ತಿಂದು- ಉಣ್ಣುವವರೂ ನಾಚುವಂತೆ ಮಾಂಸದ ಮೂಳೆ ಚೂರುಗಳನ್ನು ಕಡಿಯುತ್ತಾರೆ! ಅಲ್ಲದೆ, ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಮಕ್ಕಳು, ಮಕ್ಕಳ ಕಣ್ಣುತಪ್ಪಿಸಿ ಅಪ್ಪ-ಅಮ್ಮಂದಿರು ಎಗ್ಗಿಲ್ಲದೇ ತಮಗೆ ಪರಿಚಯವಿರುವ ನಾನ್‌ವೆಜ್ ಸ್ನೇಹಿತರ ಮನೆಯಲ್ಲೋ, ಇಲ್ಲವೇ ನಾನ್‌ವೆಜ್‌ನ ರುಚಿಗೆ ಹೆಸರಾಗಿರುವ ಖ್ಯಾತ ಹೋಟೆಲುಗಳಲ್ಲೋ ವಾರಕ್ಕೆರಡು ಬಾರಿಯಾದರೂ ಬಾಯಿ ಚಪ್ಪರಿಸಿಕೊಂಡು ‘ಚಿಕನ್-ಮಟನ್’ ತಿನ್ನುವಾಗ ಅಪ್ಪಿತಪ್ಪಿಯೂ ಅವರಿಗೆ ‘ಜಾತಿಪ್ರಜ್ಞೆ’ ಕಾಡದು.
ಪರ ಊರುಗಳಿಂದ ವರ್ಗವಾಗಿ ಬರುವ ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಹಿಂದುಳಿದವರು, ಪರಿಶಿಷ್ಟರು ಆಗಿದ್ದರೆ ಮನೆಬಾಡಿಗೆ ಪಡೆಯುವುದು ಹುಲ್ಲಿನ ಬಣವೆಯಲ್ಲಿ ಸೂಜಿ ಹುಡುಕುವಷ್ಟೇ ದೊಡ್ಡ ಸಾಹಸ! ಈ ಮಾತು ತುಸು ಉತ್ಪ್ರೇಕ್ಷೆ ಅನ್ನಿಸಬಹುದು. ಆದರೆ, ಸತ್ಯ. ಅತ್ತ ಅಣ್ಣ ಬಸವಣ್ಣ, ‘ಇವನಾರವ, ಇವನಾರವ ಎಂದೆನಿಸದಿರಯ್ಯ, ಇವ  ನಮ್ಮವ, ಇವ ನಮ್ಮವ ಎಂದೆನಿಸಯ್ಯ, ನಿಮ್ಮ ಮನೆಯ ಮಗನೆಂದೆನಿಸಯ್ಯ ಕೂಡಲ ಸಂಗಮದೇವ’ ಎಂದು ಹೇಳಿದ್ದರೆ.  ಇತ್ತ, ಅದೇ ಬಸವಾದಿ ಪ್ರಮಥರು, ಶರಣರ ಆದರ್ಶವನ್ನು ಪರಿಪಾಲಿಸುವವರು ಕೆಳಜಾತಿಯವರನ್ನು ಮನಸ್ಸಿನೊಳಗಿರಲಿ, ಕನಿಷ್ಠ ಮನೆ ಬಾಡಿಗೆ ಕೊಡುವ ವಿಚಾರದಲ್ಲೂ ಕೂಡಾ ಅಸ್ಪೃಶ್ಯರಂತೆ ಕಾಣುತ್ತಾರೆ. ಈ ‘ಸ್ವಜಾತಿ ಪ್ರೇಮ’ವನ್ನು ಪ್ರತಿವರ್ಷ ನಡೆಯುವ ಜಾತ್ಯತೀತ ಸಂಸ್ಕೃತಿ ಹೆಸರಿನ ಉತ್ಸವ, ಹುಣ್ಣಿಮೆಯಂತಹ ಕಾರ್ಯಕ್ರಮಗಳಿಂದಲೂ ಬದಲಾಯಿಸಲು ಅಸಾಧ್ಯವೇನೋ?

ಸರ್ಕಾರದ ಮನೆಬಾಡಿಗೆ ಕಾನೂನುಗಳು ಕುರುಡಾಗಿ ಕುಂತಿರುವುದು ಕೆಳಜಾತಿಯ ಜನರ ಪಾಲಿಗೆ ಬಲುದೊಡ್ಡ ಶಾಪವಾಗಿವೆ. ನಿತ್ಯವೂ ಪತ್ರಿಕೆಗಳಲ್ಲಿ ‘ಮನೆ ಬಾಡಿಗೆಗೆ ಇದೆ. ಆದರೆ, ಸಸ್ಯಾಹಾರಿಗಳಿಗೆ ಮಾತ್ರ’ ಎಂಬ ಢಣಾಢಂಗುರ, ಜಾತಿ ನಿಂದನೆಯನ್ನೇ ಅರ್ಥೈಸಬಲ್ಲ ಜಾಹೀರಾತುಗಳು ‘ಮಾಂಸಾಹಾರ’ ಸೇವಿಸುವವರ ಪಾಲಿಗೆ ತಮ್ಮ ಜಾತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮಾನಸಿಕ ಯಾತನೆಗೆ ಕಾರಣವಾಗುತ್ತಿವೆ.

ಆದರೆ, ಇವೆಲ್ಲದರ ನಡುವೆಯೂ ಮೇಲ್ಜಾತಿಯಲ್ಲಿ ಹುಟ್ಟಿದರೂ ‘ಜಾತ್ಯತೀತ’ ಮನಸ್ಸಿನ ಕೆಲ ಮನೆ-ಮಾಲೀಕರು ಇದ್ದಾರೆಂಬುದೇ ಸಣ್ಣ ಸಮಾಧಾನ. ಮೇಲ್ಜಾತಿಯಷ್ಟೇ ಅಲ್ಲ. ಇತ್ತೀಚೆಗೆ ಹಿಂದುಳಿದ ವರ್ಗಕ್ಕೆ ಸೇರಿದ ಮನೆ ಮಾಲೀಕರು ಕೂಡಾ ‘ಮಾಂಸಾಹಾರ’ ಸೇವಿಸುವವರಿಗೆ ಮನೆಬಾಡಿಗೆ ನೀಡಲು ಹಿಂದೇಟು ಹಾಕುತ್ತಿರುವುದು, ಸ್ವಂತ ಸೂರಿಲ್ಲದ ಕೆಳಜಾತಿ ವರ್ಗಕ್ಕೆ ಶಾಪವಾಗಿ ಪರಿಣಮಿಸಿದೆ. ಈ ಪರಿವರ್ತನೆಯ ಹಿಂದೆ ಮೇಲ್ಜಾತಿಯ ಅನುಕರಣೆಯೇ ಪ್ರಭಾವ ಬೀರಿರುತ್ತದೆ. ಆ ಮೂಲಕ ಮೇಲ್ಜಾತಿಯವರನ್ನು ಅನುಸರಿಸಿದರೆ ತಾವೂ ಅವರಂತೆಯೇ ಆಗಿಬಿಡಬಹುದೆಂಬ ಭ್ರಮೆಯಲ್ಲಿ ಕೆಳಜಾತಿಯವರು ತಮ್ಮ ಸಂಸ್ಕೃತಿ, ಪರಂಪರೆಗೆ ತಿಲಾಂಜಲಿ ನೀಡುತ್ತಿರುವುದು ಈಗ ಗೌಪ್ಯವಾಗೇನೂ ಉಳಿದಿಲ್ಲ.

ಜಾತಿಪ್ರಜ್ಞೆಯ ‘ಅಹಂ’ ಇಲ್ಲಿಗೇ ನಿಲ್ಲುವುದಿಲ್ಲ. ಮನೆಬಾಡಿಗೆಯಿಂದ ಹಿಡಿದು, ಅವಕಾಶ, ಕಾರ್ಯಕ್ರಮ, ಪ್ರಮೋಷನ್, ಸಂಬಂಧ, ಸ್ನೇಹ, ಇತ್ಯಾದಿಗಳಲ್ಲೂ ‘ಇವ ನಮ್ಮವನಾಗಿರಬೇಕು’ ಎಂಬುದೇ ಬಹುತೇಕ ಮೇಲ್ಜಾತಿ ಮನಸ್ಸುಗಳ ಲೆಕ್ಕಾಚಾರ. ಆತ ಭ್ರಷ್ಟನಿರಲಿ ಅಥವಾ ಪ್ರಾಮಾಣಿಕನಿರಲಿ ‘ನಮ್ಮವನಾಗಿದ್ದರೆ’ ಸಾಕು ಬಿಡಿ ಎಂಬುದು ಆ ಮನಸ್ಸುಗಳ ಒಳಮರ್ಮ. ಇವೆಲ್ಲದರ ನಡುವೆ ‘ಸೆಕ್ಯುಲರ್’ ಮನಸ್ಸುಗಳಿದ್ದರೂ ಅವುಗಳ ಸಂಖ್ಯೆ ತೀರಾ ಕಮ್ಮಿ. ಹಾಗಾಗಿ, ಸಾವಿಗಿಂತಲೂ ‘ಬದುಕೇ’ ದುಬಾರಿಯಾಗಿರುವ ಹಿಂದುಳಿದವರ ನೋವನ್ನು ಹಿಡಿದಿಡಲು ಅಕ್ಷರವೂ ಸೋಲುತ್ತದೆ. ಅವಮಾನದ ಮುಂದೆ ಸ್ವಾಭಿಮಾನವೂ ತಲೆ ತಗ್ಗಿಸುತ್ತದೆ.

ಆಹಾರ ಪದ್ಧತಿ ನೆಪದಲ್ಲಿ ಜಾತಿಗಳನ್ನು ಪತ್ತೆ ಹಚ್ಚುವ ಹುನ್ನಾರ ದೊಡ್ಡದೊಡ್ಡ ನಗರಗಳಲ್ಲೇ ದೈತ್ಯಾಕಾರದಲ್ಲಿದೆ. ಇನ್ನು ಹಳ್ಳಿಗಳ ಮಾತಂತೂ ಕೇಳುವುದೇ ಬೇಡ. ಅಲ್ಲಿ ಒಂದೊಂದು ಜಾತಿಗೂ ಒಂದೊಂದು ಕೇರಿ, ಬೀದಿ. ದೊಡ್ಡವರು ವಾಸಿಸುವ ಸ್ಥಳದಲ್ಲಿ ವಾಸಿಸುವುದಿರಲಿ, ಸಂಚರಿಸುವುದೂ ದುಸ್ತರ ಎಂಬ ಪರಿಸ್ಥಿತಿ ಇಂದಿಗೂ ಕೆಲ ಹಳ್ಳಿಗಳಲ್ಲಿದೆ.  ಈ ಮೂಲಕ ಕೆಳ ಜಾತಿಯವರು ಅನುಭವಿಸುವ ಸಂಕಟ, ನೋವು, ಅವಮಾನ ತಪ್ಪಿಸಲು ಮತ್ತೊಬ್ಬ ಬಸವಣ್ಣ, ಅಂಬೇಡ್ಕರ್ ಹುಟ್ಟಿ ಬಂದರೂ ಅವರನ್ನೂ ಸ್ವಜಾತಿ ಪ್ರೇಮದಲ್ಲಿ ‘ಜಾತೀಕರಣ’ದ ಮನಸ್ಸುಗಳು ದಿಕ್ಕುತಪ್ಪಿಸದೇ ಇರಲಾರವೇನೋ!?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.