ಸೋಮವಾರ, ಮೇ 17, 2021
25 °C

ಮನೆ ಬಿಟ್ಟುಕೊಡಲಿರುವ ನಿವೃತ್ತ ಎಂಜಿನಿಯರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಮಟಾ: ಹೆದ್ದಾರಿ ವಿಸ್ತರಣೆ ಯೋಜನೆಯ ಬಗ್ಗೆ ಕರಾವಳಿ ಭಾಗದುದ್ದಕ್ಕೂ ಸಾಕಷ್ಟು ಪ್ರತಿಭಟನೆ ನಡೆಯುತ್ತಿರುವಾಗ ಹೆದ್ದಾರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿರುವ ಕೆ. ಸುಬ್ರಹ್ಮಣ್ಯ ಭಟ್ಟ ಅವರು ಅಗಲೀಕರಣ ಯೋಜನೆಗೆ ತಮ್ಮ ಮನೆ, ಜಾಗ ಬಿಟ್ಟುಕೊಡಲು ಸಿದ್ಧರಾಗಿದ್ದಾರೆ.

ಮೂಲತಃ ಕೇರಳ ರಾಜ್ಯದ ಕಾಸರಗೋಡಿನವರಾಗಿರುವ ಭಟ್ಟ, ಹಾಲಿ ಹಂದಿಗೋಣದಲ್ಲಿ ನೆಲೆಸಿದ್ದಾರೆ.`ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾದ ನಾನು 1985ರಲ್ಲಿ ಹಂದಿಗೋಣದಲ್ಲಿ ಜಾಗ ಖರೀದಿಸಿ ಮನೆ ಕಟ್ಟಿಸಿದೆ. ಹೆದ್ದಾರಿ ವಿಸ್ತರಣೆ ಯೋಜನೆ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಮೊನ್ನೆ  ಇಲಾಖೆ ಸಿಬ್ಬಂದಿ ಸರ್ವೆ ಕಾರ್ಯ ನಡೆಸುವಾಗ ನಮ್ಮ ಮನೆಯ ಗೋಡೆಗೆ ಗುರುತು ಹಾಕಿ ಹೋಗಿದ್ದಾರೆ. ಸ್ವಾಧೀನಪಡಿಸಿಕೊಂಡ ನಂತರ ಉಳಿಯವ ನನ್ನ ಸ್ವಂತ ಜಾಗವನ್ನೂ ನಾನು ಹೆದ್ದಾರಿ ಇಲಾಖೆಯವರಿಗೆ ತೆಗೆದುಕೊಳ್ಳಲು ಹೇಳಿದ್ದೇನೆ. ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ. ಅದಕ್ಕೆಲ್ಲ  ಎಷ್ಟು ಪರಿಹಾರ ಕೊಡುತ್ತಾರೋ ಗೊತ್ತಿಲ್ಲ. ಮುಂದೆ ಎಲ್ಲಿ ಹೋಗಿ ನೆಲೆಸಬೇಕು ಎನ್ನು ಬಗ್ಗೂ ನಮ್ಮ ಕುಟುಂಬ ಇನ್ನೂ ನಿರ್ಧರಿಸಿಲ್ಲ. ಲೋಕೋಪಯೋಗಿ  ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಕೆಲ ಮಾಡಿ ನಿವೃತ್ತಿ ಹೊಂದಿರುವ ನಾನು ಹಾಗೂ ನನ್ನ ಕುಟುಂಬದವರು ಹೆದ್ದಾರಿ ಅಗಲೀಕರಣ ಯೋಜನೆಯನ್ನು ಸ್ವಾಗತಿಸುತ್ತೇವೆ' ಎಂದು ಸುಬ್ರಹ್ಮಣ್ಯ ಭಟ್ಟ ಹೇಳಿದರು.

`ಹಿಂದೆ  ಪುಣೆ-ಬೆಂಗಳೂರು ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆಯಾಗುವ ಮೊದಲು ಅಲ್ಲಿ ನಿತ್ಯ ಅಪಘಾತದಿಂದ ಉಂಟಾದ  ಸಾವು-ನೋವಿನ ಸುದ್ದಿಯನ್ನೇ ಕೇಳುತ್ತಿದ್ದೇವು. ಈಗ ಅಂಥ ಸಮಸ್ಯೆ ಅಷ್ಟಾಗಿ ಇಲ್ಲ. ಇಲ್ಲಿ ಹೆದ್ದಾರಿ ವಿಸ್ತರಣೆಯಾದರೆ ಸಂಚಾರ ತೊಂದರೆ ಖಂಡಿತಾ ನೀಗಿ ಲಕ್ಷಾಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಹಾಲಿ 7 ಮೀಟರ್ ಅಗಲ ಇರುವ ಹೆದ್ದಾರಿ ಮಧ್ಯದಿಂದ ಎರಡೂ ಬದಿಗೆ ತಲಾ 15 ಮೀಟರ್‌ಗಳಷ್ಟು ಹೆದ್ದಾರಿ ಇಲಾಖೆಯ ಜಾಗವೇ ಇದೆ.  ಉಳಿದ 10 ರಿಂದ 15 ಮೀಟರ್ ಜಾಗವನ್ನು ಮಾತ್ರ  ಹೆದ್ದಾರಿ ಇಲಾಖೆ ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಅಳತೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೊಂಚ ಹೆಚ್ಚು - ಕಡಿಮೆ ಇರಬಹುದು. ಕೆಲವರ ಬೇಡಿಕೆಯಂತೆ ಬೈಪಾಸ್ ಯೋಜನೆ ಜಾರಿಗೆ ಬಂದರೆ ಹೆದ್ದಾರಿ ವಿಸ್ತರಣೆಗೆ ಬೇಕಾಗುವ ಸಂಪೂರ್ಣ ಜಾಗವನ್ನು ಸ್ವಾಧೀನಪಡಿಸಿಕೊಳ್ಳುವ ಮೂಲವೇ ಪಡೆದುಕೊಳ್ಳಬೇಕಾಗುತ್ತದೆ. ಆಗ ಗದ್ದೆ, ಹೊಂಡ, ತಗ್ಗುಗಳ್ಲ್ಲಲಿ ಹೆಚ್ಚೆಚ್ಚು ಮಣ್ಣು ತುಂಬಬೇಕಾಗಿರುವುದರಿಂದ ನಿಜವಾಗಿ ಪರಿಸರ ಹಾಳಾಗುತ್ತದೆ. ಜನರಿಗೆ ತೊಂದರೆಯಾಗದಂತೆ ಅಗಲೀಕರಣ ಯೋಜನೆ ಜಾರಿಗೆ ತಂದರೆ ಸುಗಮ ಸಂಚಾರಕ್ಕೆ ಜನರು ಸಹಕರಿಸಿದಂತಾಗುತ್ತದೆ ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.