ಭಾನುವಾರ, ಏಪ್ರಿಲ್ 11, 2021
27 °C

ಮನೆ ಮಂಜೂರಾತಿಗೆ ಪ್ರಯತ್ನ: ಶಿವನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲಹಳ್ಳಿ: ಪಟ್ಟಣಕ್ಕೆ ಈಗಾಗಲೇ ನೀಡಿರುವ 1,100 ಮನೆಗಳು ಎಲ್ಲಾ ಫಲಾನುಭವಿಗಳಿಗೆ ಮುಟ್ಟಿಲ್ಲ ಎಂಬ ದೂರುಗಳು ಕೇಳಿಬಂದಿದ್ದು ಮುಂದಿನ ದಿನಗಳಲ್ಲಿ ವಿವಿಧ ಯೋಜನೆಯಡಿ ಇನ್ನೂ ಒಂದು ಸಾವಿರ ಮನೆಗಳನ್ನು ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.ಸೋಮವಾರ ಪಟ್ಟಣದ ರೈತ ಸೇವಾ ಸಹಕಾರ ಸಂಘದ ಆವರಣದಲ್ಲಿ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಹಮ್ಮಿಕೊಂಡ ಆಶ್ರಯ ಯೋಜನೆಯ ಫಲಾನುಭವಿಗಳ ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪಟ್ಟಣದಲ್ಲಿ ಗಿರಿಜನ ಕಲ್ಯಾಣ ಉಪ ಯೋಜನೆಯಡಿಯಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳು ಪೂರ್ಣಗೊಳ್ಳಲು ಇನ್ನೂ 4 ಕೋಟಿ ರೂಪಾಯಿ ಅವಶ್ಯಕತೆ ಇರುವುದು ಕಂಡುಬಂದಿದೆ. ಅದನ್ನು ಕೂಡ ಶೀಘ್ರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಪಟ್ಟಣದಲ್ಲಿ ಐಟಿಐ ಕಾಲೇಜು ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆದಿವೆ ಎಂದರು.ತಮ್ಮ ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ. ಅಭಿವೃದ್ಧಿ ವಿಷಯದಲ್ಲಿ ವಿರೋಧ ಪಕ್ಷಗಳು ಹಾಕುವ ಯಾವುದೇ ಸವಾಲಿಗೂ ತಾವು ಸದಾ ಸಿದ್ಧರಿರುವುದಾಗಿ ತಿಳಿಸಿದ ಅವರು ಕಾಂಗ್ರೇಸ್ ಪಕ್ಷದ ಮುಖಂಡರಿಗೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ತಮ್ಮ ವಿರುದ್ಧ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.35 ಸಾವಿರಕ್ಕಿಂತಲೂ ಅಧಿಕ ಮನೆಗಳು ಮಂಜೂರಾದ ಬಗ್ಗೆ ಪ್ರಾರಂಭದಲ್ಲಿ ವಿರೋಧ ಪಕ್ಷದ ಮುಖಂಡರು ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಅಪಪ್ರಚಾರ ನಡೆಸಿದ್ದರು.ಆದರೆ ಈಗ ಅದೇ ಮುಖಂಡರು ಫಲಾನುಭವಿಗಳಿಗೆ ಚೆಕ್ ನೀಡುವಂತೆ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಜಿ.ಬಸವರಾಜ ನಾಯಕ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿಎಸ್ ಪಾಟೀಲ್, ಜಿಪಂ ಸದಸ್ಯ ಪ್ರಕಾಶ್ ಪಾಟೀಲ್, ತಾಪಂ ಅಧ್ಯಕ್ಷ ಪ್ರಭಯ್ಯ ಸ್ವಾಮಿ, ಮುಖಂಡರಾದ ವೀರಣ್ಣ ಪಾಣಿ,ಗುರುರಾಜರಾವ್ ದೇಸಾಯಿ, ಅಮರೇಶ ಪಾಟೀಲ್, ಗೋವಿಂದಪ್ಪ ಆಲಗೇರಿ ಉಪಸ್ಥಿತರಿದ್ದರು. ಈರಣ್ಣ ಬಳೆ, ಚಂದ್ರಶೇಖರ್ ನಾಡಗೌಡ ಕಾರ್ಯಕ್ರಮ ನಿರ್ವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.