ಮನೆ ಮನೆಯಲ್ಲೂ ಬೆತ್ಲೆಹೆಮ್... ಗೋದಲಿ...

7

ಮನೆ ಮನೆಯಲ್ಲೂ ಬೆತ್ಲೆಹೆಮ್... ಗೋದಲಿ...

Published:
Updated:

ರಾಯಚೂರು: `ಬನ್ನಿ ಬಾಲ ಯೇಸು ಆರಾಧಿಸೋಣ...' ಇದು ಕ್ರಿಸ್‌ಮಸ್ ಹಬ್ಬದ ಮುನ್ನಾ ದಿನವಾದ ಸೋಮವಾರ ನಗರದ ಕ್ರೈಸ್ತ ಬಾಂಧವರು ಕ್ರಿಸ್ ಮಸ್ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತ ಹೇಳುತ್ತಿದ್ದ ಮಾತುಗಳು.ಕ್ರಿಸ್‌ಮಸ್ ಸಂಭ್ರಮದ ಹಬ್ಬದ ಆಚರಣೆ ಸಿದ್ಧತೆಗಳು ಒಂದು ವಾರದ ಹಿಂದೆಯೇ ಆರಂಭಗೊಂಡಿದ್ದು, ಹಬ್ಬದ ಮುನ್ನಾ ದಿನವಾದ ಸೋಮವಾರ ಕೊನೆ ಹಂತದ ಸಿದ್ಧತೆಗಳು ಚರ್ಚ್, ಕ್ರೈಸ್ತ ಬಾಂಧವರ ಮನೆಗಳಲ್ಲಿ ನಡೆಯುತ್ತಿದ್ದುದು ಕಂಡು ಬಂದಿತು.ನಗರದ ರೈಲ್ವೆ ಸ್ಟೇಶನ್ ರಸ್ತೆಯ ಸೇಂಟ್ ಫ್ರ್ಯಾನ್ಸಿಸ್ ಕ್ಸೇವಿಯರ್ ಚರ್ಚ್ ಆವರಣದಲ್ಲಿ `ಬೆತ್ಲೆಹೆಮ್‌ನ ಗೊದಲಿಯಲ್ಲಿ (ಕೊಟ್ಟಿಗೆ)`ಯೇಸುಕ್ರಿಸ್ತ ಜನಿಸಿದ  ಮಾದರಿ' ರೂಪಿಸುವಲ್ಲಿ ಚರ್ಚ್‌ನ ಫಾದರ್ ವೈ.ಎಸ್ ಮೈಕೆಲ್, ಕ್ರೈಸ್ತ ಬಾಂಧವರು, ಚರ್ಚ್‌ನ ಸಿಬ್ಬಂದಿ, ಯುವಕರು ತೊಡಗಿದ್ದರು. ಯೇಸು ಕ್ರಿಸ್ತ ಜನಿಸಿದ ಬೆತ್ಲೆಹೆಮ್ ಹಳ್ಳಿ, ಆ ಹಳ್ಳಿಯ ಗೋದಲಿಯೊಂದರಲ್ಲಿ ಯೇಸುಕ್ರಿಸ್ತ ಜನಿಸಿದ್ದು. ಆ ಊರಿನ ಸುತ್ತಮುತ್ತಲಿನ ಊರುಗಳು, ಡೇಡ್ ಸೀ, ನದಿ ಸೇರಿದಂತೆ ಒಟ್ಟು ಪರಿಸರವನ್ನು ಮಾದರಿಯಲ್ಲಿ ಕಟ್ಟಿಕೊಡುವ ಪ್ರಯತ್ನದಲ್ಲಿ ಮಗ್ನರಾಗಿದ್ದರು.ಅಲಂಕಾರಿಕ ವಸ್ತು ಹಾಕಿ ಸುಂದರ ದೀಪಾಲಂಕಾರವನ್ನು ಈ ಮಾದರಿಗೆ ಮಾಡಲಾಗಿತ್ತು. ಅಲ್ಲದೇ ಬನ್ನಿ ಬಾಲ ಯೇಸು ಆರಾಧಿಸೋಣ ಎಂಬ ಸಂದೇಶವು ಈ ಮಾದರಿ ವೀಕ್ಷಣೆಗೆ ಆಹ್ವಾನಿಸುವಂತಿತ್ತು.ಕ್ರಿಸ್‌ಮಸ್ ಸಂದೇಶ: ಕ್ರಿಸ್‌ಮಸ್ ಇದು ಯೇಸು ಕ್ರಿಸ್ತ ಜನಿಸಿದ ದಿನ. ಆ ದೇವರು ನಮಗಾಗಿ ತನ್ನ ಮಗು(ಯೇಸುಕ್ರಿಸ್ತ) ಕಳುಹಿಸಿದ ದಿನ. ಶಾಂತಿ, ಪರಸ್ಪರ ಪ್ರೀತಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡು, ಸಮಾಧಾನದಿಂದ ಮುನ್ನಡೆದು ಸೌಹಾರ್ದ ಬದುಕು ರೂಪಿಸಿಕೊಳ್ಳಿ ಎಂಬ ಸಂದೇಶ ಸಾರುವ ದಿನ ಎಂದು ಫಾದರ್ ವೈ.ಎಸ್ ಮೈಕೆಲ್ ಕ್ರಿಸ್‌ಮಸ್ ಹಬ್ಬದ ಸಂದೇಶ ವಿವರಿಸಿದರು.ಮನೆಯಲ್ಲಿ ಆಚರಣೆ

ಕ್ರಿಸ್‌ಮಸ್ ಹಬ್ಬ ಎಂದರೆ ಪ್ರತಿ ಮನೆಯಲ್ಲಿ `ಗೋದಲಿ' ರೂಪಿಸುತ್ತಿವೆ. ಅಲಂಕಾರಿಕ ವಸ್ತುಗಳಿಂದ ಅಲಂಕಾರ, ಕ್ರಿಸ್‌ಮಸ್ ಟ್ರೀ, ಬೆಲ್, ಸ್ಟೀಕರ್, ಸ್ಟಾರ್ ಎಲ್ಲವೂ ಹಾಕುತ್ತೇವೆ. ಪ್ರಾರ್ಥನಾಲಯದಲ್ಲಿ ಪ್ರಾರ್ಥನೆ ಮಾಡಿ ಹಬ್ಬದ ಶುಭಾಶಯ ಹೇಳಿಕೊಳ್ಳುತ್ತೇವೆ. ಕ್ರಿಸ್‌ಮಸ್ ಅಂದರೆ `ಕೇಕ್'. ಬಗೆ ಬಗೆಯ ಕೇಕ್ ತಂದು ಹಂಚುತ್ತೇವೆ. ಹಬ್ಬದ ವಿಶೇಷ ಊಟ ಇದ್ದೇ ಇರುತ್ತದೆ. ಮಕ್ಕಳು ಪರಸ್ಪರ ಊಡುಗೊರೆ(ಗಿಫ್ಟ್) ಹಂಚಿಕೊಳ್ಳುತ್ತಾರೆ. ಇದೊಂದು ವಿಶೇಷ.ಇನ್ನು ಬಂಧು ಬಾಂಧವರು, ಸ್ನೇಹಿತರು, ಆಪ್ತರನ್ನು ಆಹ್ವಾನಿಸಿ ಊಟದೊಂದಿಗೆ ಹಬ್ಬದ ಖುಷಿ ಹಂಚಿಕೊಂಡು ಸಂಭ್ರಮಿಸುತ್ತೇವೆ ಎಂದು ಕ್ರೈಸ್ತ ಬಾಂಧವ ಫ್ರಾನ್ಸಿಸ್ ಕ್ಸೇವಿಯರ್, ಅವರ ಪತ್ನಿ ಶೀಲಾ ಥೆರೆಸ್ಸಾ ಹಾಗೂ ಪುತ್ರಿ ಲಿಂಡಾ ಮರಿಯಾ ಸಲೊಮಿ ಅವರು ಕ್ರಿಸ್‌ಮಸ್ ಹಬ್ಬದ ಆಚರಣೆ ವಿಶೇಷತೆಗಳನ್ನು ಪ್ರಜಾವಾಣಿಯೊಂದಿಗೆ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry