ಮನೆ-ಮನೆ ಪ್ರಚಾರದ ಭರಾಟೆ

7

ಮನೆ-ಮನೆ ಪ್ರಚಾರದ ಭರಾಟೆ

Published:
Updated:
ಮನೆ-ಮನೆ ಪ್ರಚಾರದ ಭರಾಟೆಹಾಸನ: ರೇವಣ್ಣ ಅವರ ಹಿರಿಯ ಪುತ್ರ, ವೈದ್ಯ ಡಾ. ಸೂರಜ್ ರೇವಣ್ಣ ಕೈಗೆ ಗಾಯಮಾಡಿಕೊಂಡು ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರನ್ನು ಸಂತೈಸುತ್ತಿದ್ದರೆ, ಮನೆಯ ಆಚೆಗೆ ಎರಡನೇ ಪುತ್ರ ಪ್ರಜ್ವಲ್ ಅಂಗವಿಕಲರೊಬ್ಬರಿಗೆ ಸಾಂತ್ವನ ನೀಡುತ್ತಿದ್ದರು.ಹೊಳೆನರಸೀಪುರ ತಾಲ್ಲೂಕು ಬೀರನಹಳ್ಳಿಯ ಮನೆಯೊಂದರ ಮುಂದೆ ಸೋಮವಾರ ಕಾಣಿಸಿದ ದೃಶ್ಯವಿದು.

ಪ್ರಚಾರಕ್ಕೆ ಇನ್ನು ಎರಡು ವಾರಕ್ಕಿಂತ ಕಡಿಮೆ ಅವಧಿ ಉಳಿದಿರುವ ಹಿನ್ನೆಲೆಯಲ್ಲಿ ಕಣದಲ್ಲಿರುವ ಕಲಿಗಳೆಲ್ಲರೂ ತಂಡಗಳನ್ನು ರಚಿಸಿ ಮನೆಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ.ಪ್ಲೆಕ್ಸ್  ಬ್ಯಾನರ್‌ಗಳನ್ನು ಹಚ್ಚುವಂತಿಲ್ಲ. ಮೈಕ್ ಕಟ್ಟಿ ಪ್ರಚಾರ ಮಾಡಿದರೆ ದಿನಕ್ಕೆ ಇಂತಿಷ್ಟು ಎಂದು ಚುನಾವಣಾ ವೀಕ್ಷಕರು ಅಭ್ಯರ್ಥಿ ಹೆಸರಿಗೆ ವೆಚ್ಚ ಬರೆಯುತ್ತಾರೆ. ಇಂಥ ಕಟ್ಟುನಿಟ್ಟಿನ ಕ್ರಮದಿಂದಾಗಿ ಈಗ ಮನೆಮನೆಗೆ ಹೋಗಿ ಕೈಮುಗಿದು ಮತ ಯಾಚಿಸುವುದು ಎಲ್ಲರಿಗೂ ಅನಿವಾರ್ಯವಾಗಿದೆ.ಸಾಕಷ್ಟು ಕಾರ್ಯಕರ್ತರ ಪಡೆ ಹೊಂದಿರುವವರಿ ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರ ತಂಡಗಳನ್ನು ಕಳುಹಿಸಿ ಪ್ರಚಾರ ಮಾಡುತ್ತಿದ್ದರೆ, ಅನೇಕ ಅಭ್ಯರ್ಥಿಗಳು ಸಕುಟುಂಬ ಪರಿವಾರ ಸಮೇತರಾಗಿ ಪ್ರಚಾರಕ್ಕೆ ಇಳಿದಿದ್ದಾರೆ.ಜಿಲ್ಲೆಯ ಕುತೂಹಲ ಮೂಡಿಸಿರುವ ಕ್ಷೇತ್ರಗಳಲ್ಲೊಂದಾಗಿರುವ ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನುಪಮಾ ಪರವಾಗಿ ಅವರ ಪುತ್ರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರೆ,  ರೇವಣ್ಣ ಪರವಾಗಿ ಅವರ ಇಬ್ಬರು ಪುತ್ರರು ಕೆಲವು ಹೋಬಳಿಗಳಲ್ಲಿ, ಪತ್ನಿ ಭವಾನಿ ಶಾಂತಿಗ್ರಾಮ ಹೋಬಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ದುದ್ದ ಕೆಲವು ಪ್ರಮುಖ ಹೋಬಳಿಗಳಲ್ಲಿ ಸ್ವತಃ ರೇವಣ್ಣ ಪ್ರಚಾರ ನಡೆಸುತ್ತಿದ್ದಾರೆ.ಚುನಾವಣೆಗಿಂತಲೂ ಸಾಕಷ್ಟು ಮುಂಚಿತವಾಗಿ ಬೇಲೂರಿನಲ್ಲಿ ಆಗಾಗ ಕಾಣಿಸಿಕೊಂಡಿದ್ದ ಪ್ರಜ್ವಲ್ ಈ ಬಾರಿಯ ಚುನಾವಣೆಯಲ್ಲಿ ಪರೋಕ್ಷವಾಗಿ ಧುಮುಕಿದ್ದಾರೆ. ಅಣ್ಣ ತೇಜಸ್ ಜತೆಯಲ್ಲಿ ಮುಂಜಾನೆಯೇ ಮನೆಯಿಂದ ಹೊರಡುವ ಪ್ರಜ್ವಲ್, `ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರು ಮಾಡಿರುವ ಅಭಿವೃದ್ಧಿಯೇ ನಮಗೆ ಶ್ರೀರಕ್ಷೆಯಾಗುತ್ತದೆ ಎಂಬ ವಿಶ್ವಾಸವಿದೆ' ಎನ್ನುತ್ತಿದ್ದಾರೆ.ಮನೆಮನೆಗೆ ತೆರಳಿ ಕೈಮುಗಿದು ಮತಯಾಚಿಸುತ್ತಿದ್ದಾರೆ. ಯಾವುದೋ ಮರದ ಕೆಳಗೆ ಕುಳಿತು ಕಾರ್ಯಕರ್ತರ ಜತೆಗೆ ತಿಂಡಿ-ಊಟ ಸೇವಿಸಿ ಮುಂದುವರಿಯುತ್ತಾರೆ.ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗಿರುವುದರಿಂದ ರೇವಣ್ಣ ಅವರ ಮಕ್ಕಳೂ ಈ ಬಾರಿ ಪ್ರಚಾರಕ್ಕೆ ಧುಮುಕಿದ್ದಾರೆ ಎಂದು ಕಾರ್ಯಕರ್ತರು ನುಡಿಯುತ್ತಿದ್ದಾರೆ.ರಾಜಕೀಯಕ್ಕೆ ಧುಮುಕುವ ಆಸಕ್ತಿ ಇದೆಯೇ ಎಂದು ರೇವಣ್ಣ ಪುತ್ರರನ್ನು ಕೇಳಿದರೆ, `ನಾನು ಎಂಜಿನಿಯರಿಂಗ್ ಮುಗಿಸಿದ್ದೇನೆ, ಜನರು ಬಯಸಿದರೆ ರಾಜಕೀಯಕ್ಕೆ ಬರಲು ಸಿದ್ಧ' ಎಂದು ಪರೋಕ್ಷವಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ ಎನ್ನುತ್ತಾರೆ ಪ್ರಜ್ವಲ್.ಹಿರಿಯ ಪುತ್ರ ಸೂರಜ್, `ನಾನು ವೈದ್ಯನಾಗಿ ಬಡರಿಗೆ ಕೈಲಾದ ಸೇವೆ ಮಾಡುತ್ತಾನೆ, ರಾಜಕೀಯದಲ್ಲಿ ಆಸಕ್ತಿ ಇಲ್ಲ ಎನ್ನುತ್ತಾರೆ'.ಗಮನ ಸೆಳೆದ ಬೈಕ್ ರ‌್ಯಾಲಿ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಜಿಲ್ಲೆಯಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದರೆ ಇತರ ಪಕ್ಷಗಳು ತಮ್ಮ ಹಿರಿಯ ಮುಖಂಡರನ್ನು ಕರೆಸಿ ಮತಬೇಟೆಗೆ ಸಿದ್ಧತೆ ನಡೆಸಿವೆ. ಸೋಮವಾರ ನಗರಕ್ಕೆ ಭೇಟಿನೀಡಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಮಾಜಿ ಸಚಿವ ರಾಮಚಂದ್ರೇಗೌಡ ಬಿಜೆಪಿ ಅಭ್ಯರ್ಥಿ ಗುರು ಪ್ರಸಾದ್ ಪರ ಮತಯಾಚಿಸಿದರು.ನಗರಕ್ಕೆ ಬಂದ ಈ ಇಬ್ಬರು ನಾಯಕರನ್ನು ಬಿಜೆಪಿ ಕಾರ್ಯಕರ್ತರು ಡೇರಿ ವೃತ್ತದಿಂದ ಬೈಕ್ ರ‌್ಯಾಲಿ ಮೂಲಕ ನಗರದೊಳಕ್ಕೆ ಬರಮಾಡಿಕೊಂಡರು.ನಗರದ ಡೈರಿ ವೃತ್ತದಿಂದ ನೂರಾರು

ಎಂ.ಜಿ. ರಸ್ತೆ, ಬಸಟ್ಟಿಕೊಪ್ಪಲು, ಸಾಲಗಾಮೆ ರಸ್ತೆಯ ಮೂಲಕ ಹಾಸನಾಂಬ ದೇವಸ್ಥಾನದ ವರೆಗೂ ಬೈಕ್ ರ‌್ಯಾಲಿ ನಡೆಸಿದ ಸದಾನಂದಗೌಡ ಅವರು ಮುಂಬರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷಕ್ಕೆ ಮತ ನೀಡುವ ಮೂಲಕ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುವಂತೆ ಮನವಿ ಮಾಡಿದರು.ಮಾಜಿ ಸಚಿವ ರಾಮಚಂದ್ರೇಗೌಡರೂ ಬೈಕ್ ರ‌್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.

ಕಳೆದ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಯೋಜನೆಗಳನ್ನು ಗಮನಿಸಿ ಬಿ.ಜೆ.ಪಿಗೆ  ಮತ ನೀಡಬೇಕು ಎಂದು ಜನರಲ್ಲಿ ಕೇಳಿಕೊಂಡರು.

ನೂರಾರು ಬಿ.ಜೆ.ಪಿ. ಕಾರ್ಯಕರ್ತರು ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದರು.ಬಿ.ಜೆ.ಪಿ. ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರುಪ್ರಸಾದ್, ಮುಖಂಡರಾದ ನವಿಲೆ ಅಣ್ಣಪ್ಪ, ಕಮಲ್ ಕುಮಾರ್, ಮಂಜುನಾಥ್ ಮೋರೆ, ಲೋಹಿತ್‌ಗೌಡ ಕುಂದೂರು ಹಾಗೂ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry