ಬುಧವಾರ, ಅಕ್ಟೋಬರ್ 23, 2019
24 °C

ಮನೆ-ಮನ ಹೂಬನ

Published:
Updated:

ಬಾಗಿ ಬಳುಕುವ ಬಳ್ಳಿಗಳು, ಹೂಬಿಡುವ ಪುಟ್ಟ ಸಸ್ಯಗಳು, ಸುಗಂಧ ಬೀರುವ ಪುಷ್ಪಗಳು, ಜುಳುಜುಳು ಹರಿಯುವ ನೀರು, 70 ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ಬೃಹತ್ ಮರಗಳು, ಹಣ್ಣಿನ ಗಿಡಗಳು, ಅರಳಿ ನಿಂತ ಕೆಂಪು, ಬಿಳಿ, ಪಚ್ಚೆ ಬಣ್ಣದ ಗುಲಾಬಿಗಳು, ಸೌಂಗಧಿಕಾದ ಲಾಲಿತ್ಯ, ಔಷಧೀಯ ಅಂಶವುಳ್ಳ ಲತೆಗಳು...ಇದಾವುದೋ ದಟ್ಟ ಕಾನನದ ವರ್ಣನೆಯಲ್ಲ. ಬಸವನಗುಡಿ ಪೊಲೀಸ್‌ಸ್ಟೇಷನ್ ರಸ್ತೆಯಲ್ಲಿ ಮುಂದೆ ಸಾಗಿದರೆ ಸಿಗುವ ಗಾರ್ಡನ್‌ಪ್ರಿಯೆ ವಸುಮತಿ ರಘುನಾಥ್ ಅವರ ಮನೆ ಮುಂದಿನ ಉದ್ಯಾನ. ಸತತ 18 ಬಾರಿ ಅಲಂಕಾರಿಕ ಕೈದೋಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಅವರು ಮೈಸೂರು ಹಾರ್ಟಿಕಲ್ಚರಲ್ ಸೊಸೈಟಿ (ಎಂಎಚ್‌ಎಸ್) ನೀಡುವ ನಗರದ `ಬೆಸ್ಟ್ ಗಾರ್ಡನ್~ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಇದೇ ಸಾಧನೆಯನ್ನು ಮುಂದುವರೆಸಿ 25 ಪ್ರಶಸ್ತಿಗಳು ದೊರೆತ ಬಳಿಕ ಲಿಮ್ಕಾ ದಾಖಲೆ ಮಾಡುವ ಗುರಿಯೂ ಅವರಿಗಿದೆ.ಮನೆಮುಂದಿರುವ 1400 ಚ.ಮೀ ಜಾಗದಲ್ಲಿ 200ಕ್ಕೂ ಅಧಿಕ ಅಲಂಕಾರಿಕ ಸಸ್ಯಗಳಿವೆ. 50 ವಿಧದ ಗುಲಾಬಿ ಗಿಡಗಳಿವೆ. ಔಷಧೀಯ ಗುಣಗಳುಳ್ಳ ಸಸ್ಯಗಳಿವೆ. 20 ಪ್ರಕಾರದ ದಾಸವಾಳ, 6-7 ವಿಧದ ಮಲ್ಲಿಗೆಯ ಬಳ್ಳಿಗಳಿವೆ. 100ಕ್ಕೂ ಹೆಚ್ಚಿನ ಕಳ್ಳಿ ಗಿಡಗಳಿವೆ. 8 ವಿಧದ ಕಣಿಗಿಲೆಗಳಿವೆ.ಈ ಬಗ್ಗೆ ಆಸಕ್ತಿ ಹೇಗೆ ಮೂಡಿತು ಎಂದು ಪ್ರಶ್ನಿಸಿದರೆ, `ಅದು ಹಿರಿಯರಿಂದ ಬಳುವಳಿ. ನಾನು ಹುಟ್ಟಿ ಬೆಳೆದದ್ದು ತಮಿಳುನಾಡಿನ ಸೇಲಂನಲ್ಲಿ. ಅಲ್ಲಿ ಅಜ್ಜಿ ಎಲ್ಲಾ ಬಗೆಯ ತರಕಾರಿಗಳನ್ನು ಮನೆಯಲ್ಲೇ ಬೆಳೆಯುತ್ತಿದ್ದಳು. ಇದ್ದ ಎರಡು ಎಕರೆ ಜಾಗದಲ್ಲಿ ಅದೆಷ್ಟೋ ಬಗೆಯ ಹೂಗಿಡ ಬಳ್ಳಿಗಳನ್ನು ಸಾಕಿಕೊಂಡಿದ್ದರು. ಅದನ್ನು ನೋಡಿಕೊಂಡೇ ಬೆಳೆದ ಪರಿಣಾಮ ನನ್ನ ಆಸಕ್ತಿಯೂ ಹೆಚ್ಚಿತು. ಈ ಮಹಾನಗರಕ್ಕೆ ಕಾಲಿಟ್ಟ ಬಳಿಕ ಮನೆಯಂಗಳದಲ್ಲೇ ಹತ್ತಾರು ಬಗೆಯ ಸಸ್ಯಗಳನ್ನು ಬೆಳೆದೆ~ ಎನ್ನುತ್ತಾರೆ.ಇತ್ತೀಚಿನ ಮನೆಗಳನ್ನು ಕಟ್ಟುವಾಗ ನೆಲಕ್ಕಿಂತ ಎರಡು ಅಡಿ ಹೆಚ್ಚೇ ಕಾಂಕ್ರೀಟಿನ ತಳಪಾಯ ಹಾಕುವುದರಿಂದ ಗುಂಡಿ ತೋಡಿ ಗಿಡ ನೆಡುವುದು ಸಾಹಸದ ಮಾತೇ. ನೆಲ ಅಗೆದು ಅಲ್ಲಿನ ಸಿಮೆಂಟು ಕಲ್ಲಿನ ತುಂಡುಗಳನ್ನು ತೆಗೆದು ಹಣಕೊಟ್ಟು ತಂದ ಕೆಂಪುಮಣ್ಣನ್ನು ಅಲ್ಲಿ ಹರಡಿದ ಬಳಿಕವಷ್ಟೇ ಗಿಡ ನೆಡಲು ಸಾಧ್ಯ.ಅಲಂಕಾರಿಕ ಸಸ್ಯಗಳಲ್ಲೂ ಹಲವು ವಿಧಗಳಿವೆ. ಶೇಡ್ ಪ್ಲಾಂಟ್ಸ್ (ಬಿಸಿಲಿನ ಅಗತ್ಯವಿಲ್ಲ), ಸೆಮಿ ಶೇಡ್ (ಸ್ವಲ್ಪ ಬಿಸಿಲು ಸಾಕು) ಹಾಗೂ ಸನ್ ಲವಿಂಗ್ ಪ್ಲಾಂಟ್ಸ್ (ಬಿಸಿಲಿನಲ್ಲಿ ಮಾತ್ರ ಬದುಕುವ)ಗಳನ್ನು ಗುರುತಿಸಿ ಅದರ ಬೆಳವಣಿಗೆಗೆ ಪೂರಕವಾಗುವಂತೆ ನೀರು ಗೊಬ್ಬರ ಒದಗಿಸುವುದು ಅಷ್ಟೇ ಮುಖ್ಯ.ಗಿಡಗಳನ್ನು ನೆಟ್ಟರಷ್ಟೇ ಉತ್ತಮ ಉದ್ಯಾನ ನಿರ್ಮಿಸಿದಂತಾಗುವುದಿಲ್ಲ. ಕ್ರಿಮಿ-ಕೀಟ ಬಾಧಿಸದಂತೆ, ಅದರ ಬೆಳವಣಿಗೆಯನ್ನು ಗಮನಿಸುತ್ತಿರುವುದೂ ಅಷ್ಟೇ ಮುಖ್ಯ. ಬಿಎಸ್‌ಸಿನಲ್ಲಿ ಬಾಟನಿ ಓದಿದ್ದು, ಲಾಲ್‌ಬಾಗ್‌ನಲ್ಲಿ ಗಾರ್ಡನ್ ನಿರ್ವಹಣೆ ಕುರಿತಾದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದು ಬಹಳಷ್ಟನ್ನು ಹೇಳಿಕೊಟ್ಟಿದೆ ಎನ್ನಲು ಅವರು ಮರೆಯುವುದಿಲ್ಲ.ರಸ್ತೆ ಬದಿ ಸದಾ ಗುಂಯ್‌ಗುಡುವ ವಾಹನ-ಹಾರ್ನ್‌ಗಳ ಸದ್ದು ಈ ಮನೆಗೆ ತಾಕುವುದಿಲ್ಲ. ಬಿಸಿಲ ಬೇಗೆಯೂ ಈ ಮನೆಗೆ ತಟ್ಟುವುದು ವಿರಳ. ಮುಂಜಾನೆ ವಾಕಿಂಗ್ ಹೋಗುವ `ಕಳ್ಳರ~ ದೃಷ್ಟಿಗೆ ಅರಳಿ ನಿಂತ ಹೂವನ್ನು ಕಾಣಿಸದಂತೆ ಬಚ್ಚಿಡುವುದೇ ಸಾಹಸ. ಇನ್ನೂ ಕೆಲವು ಸಾಹಸಿಗರು ಉದ್ದನೆಯ ಕೋಲು ಕೈಯಲ್ಲಿ ಹಿಡಿದು ಕಂಪೌಡ್ ಒಳಗಿನ ಮೊಗ್ಗು-ಹೂ- ಕಾಯನ್ನೂ ಬಿಡದೆ ಕೀಳುವುದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂಬ ಅಳಲು ವಸುಮತಿ ಅವರದು.  ಸಂಪರ್ಕಕ್ಕೆ: 9343829591.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)