`ಮನೋವಿಕಾಸಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ'

7

`ಮನೋವಿಕಾಸಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕ'

Published:
Updated:

ಬೆಂಗಳೂರು: `ಮಕ್ಕಳ ಮನೋವಿಕಾಸಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪೂರಕವಾಗಿದ್ದು, ಪ್ರತಿಭಾ ಪ್ರದರ್ಶನಕ್ಕೂ ಸಹಾಯಕವಾಗಿವೆ' ಎಂದು ನಟಿ ರೂಪಿಕಾ ಅಭಿಪ್ರಾಯಪಟ್ಟರು.`ಪ್ರಜಾವಾಣಿ' ಪತ್ರಿಕಾ ಸಮೂಹದ ಉದ್ಯೋಗಿಗಳ ಕುಟುಂಬ ವರ್ಗದವರಿಗೆ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್ (ಟಿಪಿಎಂಎಲ್) ಲಲಿತಕಲಾ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಪಾಲ್ಗೊಂಡು ಮಾತನಾಡಿದ ಅವರು, `ಮಾಧ್ಯಮದ ಸಿಬ್ಬಂದಿ ಸದಾ ಒತ್ತಡದಲ್ಲಿಯೇ ಕೆಲಸ ಮಾಡುತ್ತಾರೆ. ಅಂಥವರ ಕುಟುಂಬಗಳ ಸದಸ್ಯರಿಗಾಗಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ತುತ್ಯಾರ್ಹ' ಎಂದರು.ಇನ್ನೊಬ್ಬ ಅತಿಥಿ, ಚಿತ್ರ ನಿರ್ದೇಶಕ ಎನ್.ಆರ್. ನಂಜುಂಡೇಗೌಡ, ಮಕ್ಕಳಿಗೆ ಪ್ರೋತ್ಸಾಹ ತುಂಬುವ ಮಾತುಗಳನ್ನು ಆಡಿದರು. `ಪ್ರತಿಭಾ ಪ್ರದರ್ಶನಕ್ಕೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮುಂದೆ ಬರಬೇಕು' ಎಂದು ಸಲಹೆ ನೀಡಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಟಿಪಿಎಂಎಲ್ ಲಲಿತಕಲಾ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೆಯ ಉತ್ಪಾದನಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್.ವಿ.ಶ್ರೀನಿವಾಸನ್, ಹಣಕಾಸು ವಿಭಾಗದ ವ್ಯವಸ್ಥಾಪಕ ಮಂಜುನಾಥ ರೆಡ್ಡಿ, ಬೆಂಗಳೂರು ವೃತ್ತ ಪತ್ರಿಕೆಗಳ ಒಕ್ಕೂಟದ (ಬಿಎನ್‌ಯು) ಅಧ್ಯಕ್ಷ ರಾಮಣ್ಣ ಮತ್ತು ಬಾಲಕೃಷ್ಣ ವೇದಿಕೆ ಮೇಲಿದ್ದರು.ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಕಾರ್ಯಕ್ರಮಗಳು ನಡೆದವು. ಮಿಮಿಕ್ರಿ ದಯಾನಂದ `ಹಾಸ್ಯ ರಸಾಯನ' ಉಣಬಡಿಸಿದರು. ಮಹಿಳೆಯರಿಗೆ ಮ್ಯೂಸಿಕಲ್ ಚೇರ್, ಬಾಟಲಿಯಲ್ಲಿ ನೀರು ತುಂಬುವುದು,  ಫ್ಯಾಷನ್ ಶೋ , ಮಕ್ಕಳಿಗೆ ಚಿತ್ರ ಬಿಡಿಸುವುದು, ವೇಷಭೂಷಣ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry