ಬುಧವಾರ, ಅಕ್ಟೋಬರ್ 23, 2019
25 °C

ಮನ್ನಣೆಯ ದಾಹ...

Published:
Updated:
ಮನ್ನಣೆಯ ದಾಹ...

ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ಅಧಿಕಾರ ನಿರ್ವಹಣೆ ಮಾಡುವಾಗ  ಅನೇಕ ವಿಚಾರಗಳ ಬಗ್ಗೆ ಚಿಂತಿಸಿ, ಅವುಗಳನ್ನೆಲ್ಲ ಕಂಪೆನಿಯ ಯಶಸ್ಸಿನ ಹಿನ್ನೆಲೆಯಲ್ಲಿ  ಪರಾಮರ್ಶಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತಾಗಬೇಕು.   ಮತ್ತೊಬ್ಬರಿಂದ ಕೆಲಸ ಮಾಡಿಸುವುದಕ್ಕೆ  ಮನ್ನಣೆಯ ವಿಚಾರವೂ ಅಡ್ಡಿಯಾಗುತ್ತದೆ. ಯಾರಿಗಾದರೂ `ಮನ್ನಣೆ ದಾಹ~ ಇದ್ದರೆ, ಆತನ ಆತ್ಮವೇ ಅದರ ಮೊದಲ ಬಲಿ ಆಗಿರುತ್ತದೆ. ಅದೇ ಅವನ ಕಡೆಗಾಲಕ್ಕೂ ನಾಂದಿ ಹಾಡುತ್ತದೆ. ನಮ್ಮವರೆಲ್ಲ ಬೆಳೆಯುತ್ತಿದ್ದಂತೆಯೇ ನಾನೂ ಕೂಡ ಬೆಳೆಯುತ್ತೇನೆ ಎಂಬುದಕ್ಕೆ ಕ್ರಿಕೆಟ್ ತಂಡದ ನಾಯಕ ದೋನಿ ಒಳ್ಳೆಯ ನಿದರ್ಶನ.


                                       =======

ಹಿಡಿದೆತ್ತಿ ಎಲ್ಲರನು ಬೆನ್ನುತಟ್ಟುತ ಬೆಳೆಸು /

ತೊಡಕಾಗದೆಂದೆಂದು ನಿನಗವರ ಬಡತಿ //

ಉಡುಗಿಸದೆ ನೀನವರ ಏಳಿಗೆಯನನವರತ /

ಒಡೆತನದಿ ಬೆಳಗುತಿರು  - ನವ್ಯಜಿವಿ


ಗಣಿತದ ಒಂದು ಲೆಕ್ಕ. ತಾವೆಲ್ಲರೂ ಸ್ಕೂಲಿನಲ್ಲಿ ಇದನ್ನು ಮಾಡಿಯೇ ಇರುತ್ತೀರಿ. ಒಂದು ಗೋಡೆ ಕಟ್ಟಲು ಒಬ್ಬನಿಗೆ ಎರಡು ದಿನ ಬೇಕಾದರೆ, ಅದೇ ಗೋಡೆ  ಕಟ್ಟಲು ನಾಲ್ಕು ಜನರಿಗೆ ಎಷ್ಟು ದಿನ ಬೇಕಾದೀತು? ಗಣಿತ ಬಲ್ಲವ ಲೆಕ್ಕಾಚಾರ ಮಾಡಿ ಅರ್ಧ ದಿನ ಸಾಕು ಎಂದು ನಿಖರವಾಗಿ ಉತ್ತರಿಸುತ್ತಾನಷ್ಟೆ.ಆದರೆ, ಸೂಕ್ಷ್ಮಬುದ್ಧಿಯ ಗುಂಡ, `ಅದಕ್ಕೆ ಒಂದು ಕ್ಷಣವೂ ಬೇಡ~ ಎನ್ನುತ್ತಾನೆ. ವಿವರಣೆ ಕೇಳಿದರೆ `ಆಗಲೇ ಒಬ್ಬ ಗೋಡೆ ಕಟ್ಟಿಯಾಗಿದೆಯಲ್ಲ. ಅದನ್ನು ಮತ್ತೆ ಕಟ್ಟುವುದಕ್ಕೆ ಜನ ಯಾಕೆ ಬೇಕು?~ ಎಂದು ಮರು ಪ್ರಶ್ನೆಯನ್ನೇ ಮಾಡುತ್ತಾನೆ. ಆಧುನಿಕ ಕಂಟ್ರಾಕ್ಟರ್‌ನನ್ನು ಕೇಳಿದರೆ ಆತ ನಾಲ್ಕು ಜನರಿಂದ ಈ ಕೆಲಸ ಅಸಾಧ್ಯವೆಂದೇ ಪ್ರತಿಪಾದಿಸುತ್ತಾನೆ.`ಎಲ್ಲಾದರೂ ಉಂಟಾ. ಗೋಡೆ ಕಟ್ಟೋಕೆ ಜನ ಮಾತ್ರ ಸಾಕೆ. ಅವರಿಗೆ ಟ್ರಕ್ಕು, ಕ್ರೇನು, ಕ್ರಷರ‌್ರು, ಟಿಪ್ಪರ‌್ರು ಎಲ್ಲ ಬೇಕಲ್ಲ. ಎಲ್ಲ ಸೇರಿ ಅದೆಷ್ಟು ದಿನವಾಗುತ್ತೆ ಅಂತ ಹೇಳಲಾರೆ. ಆದರೆ, ಖರ್ಚು ಮಾತ್ರ ್ಙ 4  ಕೋಟಿಯ ಹತ್ತಿರ~ ಎಂದು ನಸುನಗುತ್ತ ಟೇಬಲ್ಲಿನ ಕೆಳಕ್ಕೆ ಕೈ ಚೆಲ್ಲಿರುತ್ತಾನೆ. ನಸುನಗುತ್ತಲೇ ಆ ಕೈಯನ್ನು ಹಿಡಿದ ರಾಜಕಾರಣಿಯನ್ನು ಕೇಳಿ. ಅವನದು ಎಲ್ಲರಿಗಿಂತಲೂ ಅದ್ಭುತವಾದ ಉತ್ತರ. `ನೋಡಿ, ಹೀಗೆ ಅಂತ ಹೇಳೋಕ್ಕೆ ಬರಲ್ಲ. ಒಂದು ದಿನವಾಗಬಹುದು. ಒಂದು ವರ್ಷ ಆಗಬಹುದು. ಆಗದೇನೂ ಇರಬಹುದು. ನಮ್ಮ ಪ್ರಯತ್ನ ನಾವು ಮಾಡಬೇಕು ಅಷ್ಟೆ~.ಎಲ್ಲ ಬಿಟ್ಟ ವೇದಾಂತಿ, `ಹೊರಗಡೆ ಗೋಡೆ ಕಟ್ಟಿ ಏನು ಪ್ರಯೋಜನ ಸ್ವಾಮಿ? ಮನಸ್ಸಿನಲ್ಲಿರೋ ಗೋಡೆಗಳನ್ನು ಮೊದಲು ಬೀಳಿಸಬೇಕು. ಅದು ಮುಖ್ಯ~ ಎಂದು ದಿಗಂತವನ್ನು ದಿಟ್ಟಿಸುತ್ತಾನೆ.ಇತ್ತೀಚೆಗೆ ಹೆಚ್ಚಾಗುತ್ತಿರುವ ನವ ಸ್ವಾಮೀಜಿಗಳು - `ಅಯ್ಯೋ, ಗೋಡೆ ಕಟ್ಟೋ ಮಾತು ಅತ್ಲಾಗಿರಲಿ. ಅದಕ್ಕೆ ಮೊದಲು ಪೆರಂಬೂರಿನ ಚಂಡಿಕೆಯ ದೇವಾಲಯದಲ್ಲಿ ಸರಿಯಾಗಿ ಗುರುವಾರ ಮಧ್ಯಾಹ್ನ ಒಂದು ಗಂಟೆಗೆ ಒದ್ದೆಯಾದ ನೀಲಿ ಬಣ್ಣದ ಶರ್ಟು ಹಾಕ್ಕೊಂಡು, ಎಡಗೈನಲ್ಲಿ ಒಂದು ನಿಂಬೆ  ಹಣ್ಣು ಹಾಗೂ ಬಲಗೈನ ಮಧ್ಯ ಬೆರಳಿನ ತುದಿಯಲ್ಲಿ ಗುಲಗಂಜಿ ಗಾತ್ರದ ಕುಂಕುಮ ಹಿಡಿದು ನೂರಾ ಆರು ಸಲ ಸರಿಯಾಗಿ ನಾನು ಹೇಳಿಕೊಟ್ಟ ಮಂತ್ರ ಹೇಳಿ ನೋಡಿ, ನೀವು ಈ ಗೋಡೇನ ಕಟ್ಟದೇ ಇದ್ರು ಅದು ತನ್ನಷ್ಟಕ್ಕೆ ತಾನಾಗಿ ನಿಮ್ಮ ಮುಂದೆ ಒಂದ್ನಿಮಿಷದಲ್ಲಿ ಎದ್ದು ನಿಲ್ಲುತ್ತೆ!~ಸರಳವಾದ ಈ ಪ್ರಶ್ನೆಗೆ ಹೀಗೆಯೇ ಒಬ್ಬೊಬ್ಬರದು ಒಂದೊಂದು ಉತ್ತರ. ಇನ್ನೂ ಹಲವರ ಉತ್ತರಗಳನ್ನು ವ್ಯಂಗ್ಯದಲ್ಲಿ ತೋಯಿಸುವ ಆಸೆ ಇದ್ದರೂ, ಈ ಕುಹಕವನ್ನು ಇಲ್ಲಿಗೇ ನಿಲ್ಲಿಸಿ, ಈ ಗಣಿತದ ಪ್ರಶ್ನೆಗೆ ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ಏನು ಹೇಳಿಯಾರು ಅಥವಾ ಏನು ಹೇಳಬೇಕು ಎಂಬುದನ್ನು ನೋಡೋಣ.`ಒಬ್ಬರಿಗಿಂತಲೂ ಇಬ್ಬರು ಅಥವಾ ಇಬ್ಬರಿಗಿಂತಲೂ ನಾಲ್ಕು ಜನ ಸೇರಿ ಮಾಡುವ ಕೆಲಸ ಯಾವತ್ತಿಗೂ ಚೆನ್ನಾಗಿಯೇ ಇರುತ್ತದೆ. ಶೀಘ್ರವಾಗಿಯೂ ಮುಗಿಯುತ್ತದೆ. ಆದರೆ, ಈ ಕೆಲಸಕ್ಕೆ ನಾಲ್ಕು ಮಂದಿ ಬೇಕೆ. ಒಬ್ಬನೇ ಮಾಡುವುದಾದರೆ ಇನ್ನುಳಿದ ಮೂವರಿಂದ ಮತ್ತಿನ್ನೇನಾದರೂ ಮಾಡಿಸಬಹುದಲ್ಲ. ಅಂಥ ಇನ್ನೇನು ಕೆಲಸಗಳು ಬಾಕಿ ಇವೆ. ಸಮಯವಿದ್ದರೆ ಇವನ ಜೊತೆ ಇನ್ನೊಬ್ಬ ಸೇರಿ ಉಳಿದ ಇನ್ನಿಬ್ಬರು ಬೇಕಾದ ಸಹಾಯ ಮಾಡುತ್ತ ಮೇಲ್ವಿಚಾರಣೆಯನ್ನೂ ಮಾಡುವಂತಿದ್ದರೆ ಗೋಡೆ ಇನ್ನೂ ಉತ್ತಮವಾಗಿ ನಿರ್ಮಿಸಬಹುದಲ್ಲ!~.ಬೋರ್ಡ್ ರೂಮಿನ ಸುತ್ತಮುತ್ತಲಿನ ಮಂದಿ ಅಧಿಕಾರ ನಿರ್ವಹಣೆ ಮಾಡುವಾಗ (ಡೆಲಿಗೇಷನ್) ಹೀಗೆ ಅನೇಕ ವಿಚಾರಗಳ ಬಗ್ಗೆ ಚಿಂತಿಸಿ, ಅವುಗಳನ್ನೆಲ್ಲ ಕಂಪೆನಿಯ ಯಶಸ್ಸಿನ ಹಿನ್ನೆಲೆಯಲ್ಲಿ ಪರಾಮರ್ಶಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವಂತಾಗಬೇಕು. ಅವರ ಇಂತಹ ಸಮಂಜಸ ನಿರ್ಣಯಗಳಿಂದಲೇ ಗೋಡೆಯ ಕೆಲಸವೂ ತೃಪ್ತಿಕರವಾಗಿ ಪೂರ್ಣಗೊಂಡು ಆ ಕೆಲಸದಲ್ಲಿ  ತೊಡಗಿದವರಿಗೂ ಸಾರ್ಥಕತೆಯ ಭಾವ ಒಡಮೂಡುತ್ತದೆ. ಹೀಗೆ ಮಾಡದೆ, `ಇವರನ್ನೆಲ್ಲ ಸಂಭಾಳಿಸಿಕೊಂಡು ಗೋಡೆ ಕಟ್ಟುವ ತಾಪತ್ರಯಕ್ಕಿಂತ ನಾನೊಬ್ಬನೇ ಗೋಡೆ ಕಟ್ಟುವ ಕೆಲಸದಲ್ಲಿ ಮುಂದಾದರೆ ಈ ಕೆಲಸ ಅತಿಶೀಘ್ರದಲ್ಲಿ ಮುಗಿಯುತ್ತದೆ~ ಎಂದು ಚಿಂತಿಸುವುದಾದರೆ ಆತನ ಅಪಜಯ ಖಂಡಿತ.ಎಲ್ಲರಿಂದ ಕೆಲಸ ಮಾಡಿಸುವುದಕ್ಕಿಂತ ನಾನೊಬ್ಬನೇ ಕೆಲಸ ಮಾಡಿದರೆ ಆ ಕೆಲಸ ಸುಸೂತ್ರವಾಗಿ ಬೇಗ ಜರುಗುತ್ತದೆ ಎಂದವನು ನಂಬಿಬಿಟ್ಟರೆ, ಅಧಿಕಾರ ನಿರ್ವಹಿಸುವ ಕ್ರಿಯೆಯಲ್ಲಿ ಗೆದ್ದು ಅವನೆಂದೂ ಯಶಸ್ವಿ  ಮ್ಯಾನೇಜರ್ ಆಗುವುದೇ ಇಲ್ಲ. ಮತ್ತೊಬ್ಬರಿಂದ ಕೆಲಸ ಮಾಡಿಸುವುದಕ್ಕೆ ಮತ್ತೊಂದು ಅಡ್ಡಿಯಿದೆ. ಅದೇ ಮನ್ನಣೆಯ ವಿಚಾರದ್ದು. ಅನ್ನದ ಆತುರಕಿಂತ ಚಿನ್ನದ ಆತುರ ತೀಕ್ಷ್ಣವಂತೆ. ಚಿನ್ನ ಗಳಿಸಬೇಕೆಂಬ ಆಸೆಗಿಂತ ಹೆಣ್ಣು ಗಂಡು ನಡುವಿನ ಒಲವು ತೀಕ್ಷ್ಣವಂತೆ. ಇವೆಲ್ಲಕ್ಕೂ ತೀಕ್ಷ್ಣವಾದದ್ದು ಡಿ.ವಿ.ಜಿ. ಅವರು ಹೇಳುವ ಹಾಗೆ - `ಮನ್ನಣೆ ದಾಹ~. ಇದು ಇದ್ದರೆ, ಆತನ ಆತ್ಮವೇ ಅದರ ಬಲಿ! ಅದೇ ಅವನ ಕಡೆಗಾಲಕ್ಕೆ ನಾಂದಿ!ಮ್ಯಾನೇಜರ್ ಆದವನಿಗೆ ತನಗಿಂತಲೂ ತನ್ನ ವಿಭಾಗದವನೊಬ್ಬನಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ ಎಂದೆನಿಸಿಬಿಟ್ಟರೆ ಅಲ್ಲಿಗೆ ಅವನ ಅಧಿಕಾರ ನಿರ್ವಹಣೆ ಕೆಲಸ ಕೆಟ್ಟಿತೆಂದೇ ಅರ್ಥ. ಆ ನಂಬಿಕೆಗೆ ಈರ್ಷೆಯೂ ಸೇರಿಬಿಟ್ಟರೆ ಆತ ಕೆಲಸದ ವಿಂಗಡಣೆಯಲ್ಲೇ ಪಕ್ಷಪಾತ ಮಾಡಲು ಶುರುವಿಡುತ್ತಾನೆ. ಅನರ್ಹ ಮನ್ನಣೆ ನೀಡುತ್ತ ಅರ್ಹನನ್ನು ದೂರವಿಡುತ್ತಾನೆ. ಇದರಿಂದ ಕೆಲಸ ಕೆಟ್ಟು ಕಡೆಯಲ್ಲಿ ಅವನಿಗೇ ಕೆಟ್ಟ ಹೆಸರೇ ಹೊರತು ಅವನ ಈರ್ಷೆಗೆ ಕಾರಣರಾದವರಾರಿಗೂ ಕೆಡುಕಾಗುವುದಿಲ್ಲ. ಇದನ್ನು ಆತ ಮೊದಲಲ್ಲೇ ಅರಿತುಕೊಂಡರೆ ಕ್ಷೇಮ.ನಾನು ಹಿಂದೆ ಕೆಲಸದಲ್ಲಿದ್ದ ಕಂಪೆನಿಯೊಂದರಲ್ಲಿ ವಿಭಾಗವೊಂದರ ಮುಖ್ಯಸ್ಥರೊಬ್ಬರಿದ್ದರು. ಪ್ರತಿ ವರ್ಷದ ಮೊದಲಲ್ಲಿ ಪ್ರಮೋಷನ್ನಿಗಾಗಿ ಮಾತುಕತೆಗಳು ಶುರುವಾದಾಗ ಆತ ತನ್ನ ವಿಭಾಗದಲ್ಲಿ ಚೆನ್ನಾಗಿ ಕೆಲಸ ಮಾಡಿದವರ ಪರವಾಗಿ ಕಂಪೆನಿಯ ಮ್ಯಾನೇಜ್‌ಮೆಂಟಿನ ಜೊತೆ ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಸುಲಭದಲ್ಲಿ ಯಾರನ್ನೂ ಬಿಟ್ಟುಕೊಡುತ್ತಿರಲಿಲ್ಲವಾದ್ದರಿಂದ ಕಂಪೆನಿಯ ಎಲ್ಲರಿಗಿಂತ ಹೆಚ್ಚಿನ ಬಡ್ತಿ ಇವರ ತಂಡದವರಿಗೇ ದೊರೆಯುತ್ತಿತ್ತು.ಅವರನ್ನೊಮ್ಮೆ ಈ ಬಗ್ಗೆ ವಿಚಾರಿಸಲಾಗಿ ನನ್ನೊಡನೆ ಬಹಳ ಸ್ನೇಹದಿಂದಿರುತ್ತಿದ್ದ ಅವರು ತಿಳಿಸಿದ ಗುಟ್ಟೆಂದರೆ - `ನೋಡಯ್ಯ, ನನ್ನ ತಂಡದವರನ್ನು ಮೇಲೆತ್ತುವ ಹೊಣೆಗಾರಿಕೆ ನನ್ನದು. ಅದನ್ನು ಬೇರಾರು ಮಾಡುವುದಿಲ್ಲ. ನನ್ನ ಹುಡುಗನಿಗೆ ಬಡ್ತಿ ಸಿಕ್ಕಿ ಅವನಿಗೆ ಮನ್ನಣೆ ದೊರೆತರೆ ನನಗೇನೂ ನಷ್ಟವಿಲ್ಲ. ಬದಲಾಗಿ ಆತ ಅದೆಷ್ಟು ಬೇಗ ಮೇಲೇರುತ್ತಾನೋ ನಾನು ಅಷ್ಟೇ ಬೇಗ ಬೆಳೆಯುತ್ತೆನೆ.

 

ಅವನು ಮ್ಯಾನೇಜರ್ ಆದರೆ, ನನ್ ಕೇಳ್ದೇ ಇದ್ರೂ ಮ್ಯಾನೇಜ್‌ಮೆಂಟ್ ನನ್ನನ್ನು ಜನರಲ್ ಮ್ಯಾನೇಜರ್ ಮಾಡಲೇ ಬೇಕು ತಾನೆ?~ ಈ ವಾದ ಎಲ್ಲ ಕಾಲಕ್ಕೂ, ಎಲ್ಲ ಕಂಪೆನಿಗಳಲ್ಲೂ ಹಾಗೂ ಅಧಿಕಾರ ನಿರ್ವಹಣೆ ಸ್ಥರದ ಎಲ್ಲ ಸನ್ನಿವೇಶಗಳಲ್ಲೂ ಒಪ್ಪುವಂತಹುದು ಎಂದು ನಾನು ಹೇಳಲು ಇಚ್ಛಿಸುವುದಿಲ್ಲ. ಆದರೆ, ಇಲ್ಲೊಂದು ಸೂಕ್ಷ್ಮವಾದ ಸತ್ಯವಿದೆ.

ತನ್ನ ಬೆಳವಣಿಗೆಯನ್ನು ಮೊದಲು ಖಾತ್ರಿ ಮಾಡಿಕೊಂಡು ನಂತರ ತಂಡದವರ ಬೆಳವಣಿಗೆಯ ಬಗ್ಗೆ ದೃಷ್ಟಿ ಹರಿಸುವುದು ಸ್ವಾಭಾವಿಕವಾದ ವಿಧಾನ. ಆದರೆ, ತನ್ನ ವಿಭಾಗದವರ ಬೆಳವಣಿಗೆಯಲ್ಲೇ ತೊಡಗಿಕೊಂಡರೆ ಸ್ವಾಭಾವಿಕವಾಗಿ ತನ್ನ ಬೆಳಣಿಗೆಯೂ ಕಟ್ಟಿಟ್ಟ ಬುತ್ತಿ ಎಂಬುದೇ ಬೋರ್ಡ್ ರೂಮಿನ ಸುತ್ತಲೂ ಮತ್ತೊಂದು ಪರ್ಯಾಯ ವಿಧಾನ.

 

ಈ ಎರಡನೆಯ ಮಾರ್ಗವೇ `ಅಧಿಕಾರ ನಿರ್ವಹಣೆ~ಯ ಎಂಬ ಆಟದಲ್ಲಿ ಗೆಲ್ಲಲು ಇರುವ ಸುಲಭೋಪಾಯ. ಇದನ್ನು ಪೂರ್ಣ ಅರ್ಥೈಸಿಕೊಳ್ಳಲು ಈಗ ಕ್ರಿಕೆಟ್ ಕಣಕ್ಕೆ ಇಳಿಯೋಣ. ದೋನಿ ವಿಶ್ವ ಕ್ರಿಕೆಟ್ ಕಂಡ ಅದ್ವಿತೀಯ ನಾಯಕ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಪ್ರಾಯಶಃ ಚೆನ್ನಾಗಿ ಆಡುವವರೆಲ್ಲ ಅವನು ನಾಯಕನಾದಾಗ ಟೀಮಿನಲ್ಲಿ ಅದೃಷ್ಟವಶಾತ್ ಅವನು ಸೋತದಕ್ಕಿಂತ ಗೆದ್ದದ್ದೇ ತುಸು ಹೆಚ್ಚಾಗಿದ್ದ ಕಾರಣ ಮಾತ್ರದಿಂದಲೇ ಆತ ನನ್ನ ದೃಷ್ಟಿಯಲ್ಲಿ ನಾಯಕೋತ್ತಮನಾಗಲಿಲ್ಲ. ಅದಕ್ಕೆ ಕಾರಣಗಳೇ ಬೇರೆ.ದೋನಿ ನಾಯಕರಾದ ಹೊಸತು ಪ್ರಾಯಶಃ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ-20 ವಿಶ್ವಕಪ್ ಪಂದ್ಯಾವಳಿ ಇರಬೇಕೆಂದು ತೋರುತ್ತದೆ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಮಿಂಚಿದ್ದರು. ಆರು ಚೆಂಡುಗಳಲ್ಲಿ ಆರು ಸಿಕ್ಸರ್ ಹೊಡೆದ ಯುವರಾಜ್ ಒಂದೆಡೆ ಬೆಟ್ಟದಂತೆ ಬೆಳೆದು ನಿಂತಿದ್ದರೆ, ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಉತ್ತಪ್ಪ ಮತ್ತಿತರರು ಇನ್ನೊಂದೆಡೆ. ಸೆಹ್ವಾಗ್, ಹರಭಜನ್‌ನಂತಹ ಹಿರಿಯ ಚಿಂತಕರು ಒಂದೆಡೆ. ಚೆಂಡಿನೊಂದಿಗೆ ಚಮತ್ಕಾರವೆಸಗಿ ಹುಡುಗು ಬುದ್ಧಿಯ ಶ್ರೀಶಾಂತ್ ಮತ್ತೊಂದೆಡೆ, ಈ ಪರಿಯ ವ್ಯಕ್ತಿ - ವೈಚಿತ್ರ್ಯಗಳನ್ನು ಸಮತೋಲನದಿಂದ ಮುನ್ನಡೆಸುವುದು ಅನುಭವಿ ನಾಯಕರಿಗೆ  ಸವಾಲಾದರೂ ದೋನಿ ಅದರಲ್ಲಿ ಗೆದ್ದಿದ್ದ.ಅಲ್ಲಿಯವರೆಗೂ ಭರ್ಜರಿ ಹೊಡೆತಗಳಿಗಾಗಿಯೇ ಹೆಸರಾಗಿದ್ದ ದೋನಿ ತನ್ನ ತಂಡದವರಾರಿಗೂ ಕುಂದು ಬರದಂತೆ ರಾತ್ರೊ  ರಾತ್ರಿ ತನ್ನ ಬ್ಯಾಟಿಂಗ್ ಗತಿಯನ್ನೇ ಬದಲಿಸಿಕೊಂಡಿದ್ದ. ಆಟದ ಸನ್ನಿವೇಶಕ್ಕೆ ಅನುಗುಣವಾಗಿ ಹಾಗೂ ತನ್ನ ಸಹಪಾಠಿಯ ಆಟಕ್ಕೆ ಪ್ರತಿಕೂಲವಾಗುವಂತೆ ತನ್ನ ಬ್ಯಾಟಿಂಗ್‌ನಲ್ಲಿ ಪಕ್ವತೆ ತೋರಿದ್ದ. ಇದು ಅವನ ಅನೇಕ ಗೆಲುವುಗಳಲ್ಲಿ ಒಂದು.ಎಲ್ಲಕ್ಕಿಂತ ಮಿಗಿಲಾಗಿ ಅವನು ಶ್ರೇಷ್ಠ ನಾಯಕನೆಂದು ನನಗನ್ನಿಸಿದ್ದು ಪ್ರತಿ ಪಂದ್ಯದ ಅಂತ್ಯದಲ್ಲಿ. ಆ ದಿನದ ಪಂದ್ಯಶ್ರೇಷ್ಠನಿಗೆ ದೊರೆಯಬೇಕಾದ ಯಾವುದೇ ಮನ್ನಣೆಯಲ್ಲಿ ಮೂಗುತೂರಿಸಿ ತನ್ನತನವನ್ನೇ ಮೆರೆಯಲಿಲ್ಲ. ಕಡೆಯ ದಿನ ಪಂದ್ಯ ಗೆದ್ದಾಗ ತಂಡದವರೆಲ್ಲ ಸಂಭ್ರಮಿಸುವ ಅನುವು ಮಾಡಿಕೊಟ್ಟನೇ ಹೊರತು ತಾನೇ ಎಲ್ಲೆಲ್ಲೂ ಎದ್ದು ಕಾಣಲಿಲ್ಲ.

 

ನನಗೆ ನೆನಪಿರುವ ಹಾಗೆ ತಾನುಟ್ಟಿದ್ದ ಕ್ರಿಕೆಟ್ ಶರ್ಟನ್ನು ನೆನಪಿನ ಕಾಣಿಕೆಯಾಗಿ ಯಾವುದೋ ಪುಟ್ಟ ಹುಡುಗನಿಗೆ ನೀಡುವಾಗ ಕ್ಯಾಮೆರಾದಲ್ಲಿ ಸಿಲಿಕಿದ್ದ ದೋನಿ, ಆ ಸಂಜೆ ಕ್ಯಾಮೆರಾದ ಕಣ್ಣಿನಲ್ಲಿ ಮತ್ತೆ ಮತ್ತೆ ಬಂದಿಯಾಗುವ ಪ್ರಯತ್ನವನ್ನೇ ಮಾಡಲಿಲ್ಲ.ಯೋಚಿಸಿ ನೋಡಿ, ಅಲ್ಲಿಂದ ದೋನಿ ಮತ್ತೆಲ್ಲೂ ನಿಲ್ಲದೆ ಬೆಳೆದ. ಅವನಿಗಿಂತ ಹಿರಿಯರು ಸಾಧಿಸದ್ದನ್ನು ತಾನು ಸಾಧಿಸಿದ. ಅವನ ಬರುವಿಕೆಗೆ ಮುನ್ನವೇ ಪ್ರಸಿದ್ಧರಾಗಿದ್ದ ಯುವರಾಜನಂತಹ ಸ್ವಪ್ರತಿಷ್ಠೆಯ ಆಟಗಾರರನ್ನೂ ಮೀರಿಸಿ ನಿಂತ.ತನ್ನ ತಂಡದವರಿಗೆ ಸಲ್ಲಬೇಕಾದ ಮಾನ್ಯತೆ ಹಾಗೂ ಮನ್ನಣೆಗೆ ಎಂದೂ ಕುಂದಾಗದಂತೆ ಸಲ್ಲಿಸುತ್ತಲೇ ಅವರೆಲ್ಲರಿಗೂ ಪೂರಕವಾಗುವಂತೆ ತನ್ನ ಆಟವನ್ನು ಬದಲಿಸಿಕೊಂಡು ಎಲ್ಲರೊಳಗೊಂದಾಗಿದ್ದ. `ನಮ್ಮವರೆಲ್ಲ ಬೆಳೆಯುತ್ತಿದ್ದಂತೆಯೇ ನಾನೂ ಕೂಡ ಬೆಳೆಯುತ್ತೇನೆ~ ಎಂಬುದಕ್ಕೆ ದೋನಿ ಒಂದು ಒಳ್ಳೆಯ ನಿದರ್ಶನ.ಒಂದು ವಿಷಯ ಗೊತ್ತಾ. ಈ ಪರಿಯ ನಾಯಕತ್ವದಲ್ಲಿ ಮುನ್ನಡೆಯುವವನು ಅಧಿಕಾರ ನಿರ್ವಹಣೆ ಮಾಡುವ ಹಂತ ಬಂದಾಗ, ಅವನ ವಿಭಾಗದವರೆಲ್ಲ ಅವನ ಮಾತಿಗೆ ಮನ್ನಣೆ ನೀಡುತ್ತಾರೆ. ಅವನ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಕಡೆಯಲ್ಲಿ ಜಯ ಯಾರಿಗೆ ಹೇಳಿ.  

 

ಲೇಖಕರನ್ನು 

satyesh.bellur@gmail.com

 ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಬಹುದು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)