ಭಾನುವಾರ, ಮೇ 31, 2020
27 °C

ಮನ್ಸೂರ್‌ಗೆ ಮರಣೋತ್ತರ ಭಾರತ ರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಿಂದೂಸ್ತಾನಿ ಸಂಗೀತದ ದಿಗ್ಗಜ ಡಾ. ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರ ನೀಡಬೇಕು’ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಒತ್ತಾಯಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಆಶ್ರಯದಲ್ಲಿ ಶುಕ್ರವಾರ ನಡೆದ ಸಂಗೀತ ರತ್ನ ಡಾ. ಮಲ್ಲಿಕಾರ್ಜುನ ಮನ್ಸೂರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ವಿಶ್ವಮಟ್ಟದ ಸಂಗೀತಗಾರರನ್ನು ಕೊಡುಗೆಯಾಗಿ ನೀಡಿದ ಧಾರವಾಡದಲ್ಲಿ ಜನಿಸಿದ ಮನ್ಸೂರ ಅವರು ಶ್ರೇಷ್ಠ ಸಂಗೀತಗಾರರ ಸಾಲಿಗೆ ಸೇರುತ್ತಾರೆ. ಭಾರತ ರತ್ನ ಪಡೆದ ಅನೇಕ ಸಂಗೀತಗಾರರಂತೆಯೇ ಇವರ ಸಾಧನೆ ಕೂಡ ಗುರುತರವಾದದ್ದು. ಈ ಹಿನ್ನೆಲೆಯಲ್ಲಿ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದು ಸೂಕ್ತ’ ಎಂದರು.‘ಉತ್ತರ ಭಾರತದಲ್ಲಿ ಮನ್ಸೂರ ಅವರ ಸಂಗೀತ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮಧ್ಯಪ್ರದೇಶ ಸರ್ಕಾರದ ಕಬೀರ್ ಸಮ್ಮಾನ್ ಪುರಸ್ಕಾರ ಅವರಿಗೆ ದೊರೆತದ್ದು ಕನ್ನಡಿಗರು ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಅವರು ಎಂದೂ ಹಣಕ್ಕಾಗಿ ಹಾಡಿದವರಲ್ಲ’ ಎಂದು ಹೇಳಿದರು.‘ಮನ್ಸೂರ ಅವರನ್ನು ಶಾಶ್ವತವಾಗಿ ನೆನಪು ಮಾಡಿಕೊಳ್ಳುವಂತಹ ವ್ಯವಸ್ಥೆಯಾಗಬೇಕಿದೆ. ಅವರ ಹೆಸರಿನಲ್ಲಿ  ಕಾರ್ಯಕ್ರಮವನ್ನು ಸರ್ಕಾರ ಪ್ರತಿವರ್ಷ ಹಮ್ಮಿಕೊಳ್ಳಬೇಕಿದೆ’ ಎಂದರು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ ‘ಬೆಂಗಳೂರಿನ ಉದ್ಯಾನ ಅಥವಾ ವೃತ್ತಕ್ಕೆ ಮಲ್ಲಿಕಾರ್ಜುನ ಮನ್ಸೂರ ಅವರ ಹೆಸರಿಡಬೇಕು. ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬರಲಿರುವ ಸಂಗೀತ ವಿ.ವಿಯಲ್ಲಿ ಮನ್ಸೂರ್ ಸ್ಮಾರಕ ಅಂತರರಾಷ್ಟ್ರೀಯ ಅಧ್ಯಯನ ಪೀಠ ಸ್ಥಾಪನೆಯಾಗಬೇಕು’ ಎಂದರು.‘ಮನ್ಸೂರರ ಕಂಠದಲ್ಲಿ 12ನೇ ಶತಮಾನದ  ವಿಶೇಷವಾಗಿ ನಲಿದವು. ಅವರು ಕೇವಲ ಗಾಯಕರಾಗಿರದೇ ಕಲಾ ತಪಸ್ವಿಯಾಗಿದ್ದರು’ ಎಂದರು.ಲೇಖಕ ಮನು ಚಕ್ರವರ್ತಿ ಮಾತನಾಡಿ ‘ಮನ್ಸೂರ ಅವರ ಜೀವನ ಕೇವಲ ಒಂದು ವ್ಯಕ್ತಿಯ ಚಿತ್ರಣವಾಗಿರದೇ ಶತಮಾನವೊಂದರ ಸಂಗೀತ ಕಥನವಾಗಿದೆ. ಅವರ ಬಗ್ಗೆ ತಿಳಿದುಕೊಳ್ಳುವುದು ಎಂದರೆ ಒಂದು ಯುಗಧರ್ಮವನ್ನು ತಿಳಿದುಕೊಂಡಂತೆ’ ಎಂದರು.ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಮಾತನಾಡಿ ‘ಜಾಗತಿಕ ಒತ್ತಡದಿಂದಾಗಿ ಕನ್ನಡ ಸಂಸ್ಕೃತಿಯನ್ನು ಉಳಿಸಲು ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು ಉಳಿದು ಬೆಳದಾಗ ಮಾತ್ರ ಕನ್ನಡ ಸಂಸ್ಕೃತಿಯೂ ಬೆಳೆಯುತ್ತದೆ’ ಎಂದರು.‘ಧಾರವಾಡ ಮತ್ತು ಬೆಂಗಳೂರಿನಲ್ಲಿ ಮನ್ಸೂರ ಅವರ ನೆನಪಿನ ಕಾರ್ಯಕ್ರಮಗಳು ನಡೆಯುತ್ತಿದ್ದು ಅಭಿಮಾನಿಗಳು ಬಯಸಿದರೆ ಅನೇಕ ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲಾಖೆ ಚಿಂತಿಸಿದೆ’ ಎಂದರು.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಡಾ. ಪಂ.ನರಸಿಂಹಲು ವಡವಾಟಿ, ರಿಜಿಸ್ಟ್ರಾರ್ ಬಲವಂತರಾವ್ ಪಾಟೀಲ ಉಪಸ್ಥಿತರಿದ್ದರು.ನಂತರ ಡಾ. ಭಾರತಿ ವೈಶಂಪಾಯನ ಹಾಗೂ ಪಂಡಿತ್ ಮಣಿ ಪ್ರಸಾದ ಅವರಿಂದ ಹಿಂದೂಸ್ತಾನಿ ಸಂಗೀತ, ಪ್ರವೀಣ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.