ಶುಕ್ರವಾರ, ಮಾರ್ಚ್ 5, 2021
23 °C
ರಂಗಭೂಮಿ

ಮನ ಗೆದ್ದ ಬದುಕಿನ ಹೋರಾಟದ ಸರ್ಕಸ್

ವೈ.ಕೆ.ಸಂಧ್ಯಾಶರ್ಮ Updated:

ಅಕ್ಷರ ಗಾತ್ರ : | |

ಮನ ಗೆದ್ದ ಬದುಕಿನ ಹೋರಾಟದ ಸರ್ಕಸ್

ಅದೊಂದು ವರ್ಣರಂಜಿತ ಪ್ರಯೋಗ. ಸಹಜ ವಾತಾವರಣ ಮೂಡಿಸಿದ ರಂಗಸಜ್ಜಿಕೆಯಲ್ಲಿ ಮೈತಾಳಿದ ‘ಕರಡಿಪುರ ಸರ್ಕಸ್ ಕಂಪನಿ’ ನಾಟಕ ಇತ್ತೀಚೆಗೆ ರಂಗಶಂಕರದಲ್ಲಿ ಪ್ರದರ್ಶನಗೊಂಡಿತು. ಅಭಿನಯಿಸಿದ ತಂಡ ವೈಖರಿ ಥಿಯೇಟರ್. ಬಹು ಸೂಕ್ಷ್ಮವಾಗಿ ಅಷ್ಟೇ ಪರಿಣಾಮಕಾರಿಯಾಗಿ ನಿರ್ದೇಶಿಸಿದವರು ಮಹೇಶ್ ಪಲ್ಲಕ್ಕಿ.ರಂಗದ ಮೇಲೆ ಸರ್ಕಸ್ ಕಂಪೆನಿಯೊಂದರ  ಬಣ್ಣ ಬಣ್ಣದ ಡೇರೆ. ಪಕ್ಕಕ್ಕೊಂದು ಒಳಪ್ರವೇಶದ ಮುಖ್ಯದ್ವಾರ. ಸರ್ಕಸ್ ಕಂಪೆನಿಯ ಆರ್ಥಿಕ ಸ್ಥಿತಿ ಗತಿಯನ್ನು ಬಿಂಬಿಸುವಂತೆ ಗುಡಾರದ ಬಟ್ಟೆಯ ಮೇಲೆ ಹಲವಾರು ತೇಪೆಗಳು. ನಾಟಕ ಆರಂಭವಾಗುತ್ತಿದ್ದಂತೆ ನಡೆದದ್ದೆಲ್ಲ ಪಾದರಸದ ಚಲನೆಗಳೇ.

ವೈವಿಧ್ಯಮಯ ಪಾತ್ರಗಳು.ಪ್ರತಿಯೊಬ್ಬರದು ವಿಭಿನ್ನ ಶೈಲಿ. ಎಲ್ಲ ಪಾತ್ರಗಳೂ ಮಾತಿನಷ್ಟೇ ಚುರುಕಾಗಿ ಹಲವಾರು ದೈಹಿಕ ಕಸರತ್ತುಗಳನ್ನು ಪ್ರದರ್ಶಿಸುತ್ತ ನೋಡುಗರಿಗೆ ಆರಂಭದಲ್ಲೇ ಗಾಳ ಹಾಕಿದವು. ಸರಸರನೆ ಸಾಗುವ ಆಸಕ್ತಿಕರ ಸನ್ನಿವೇಶಗಳು, ಘಟನೆಗಳ ಮೂಲಕ ಸರ್ಕಸ್ ಕಂಪನಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುತ್ತದೆ.ತಿಳಿಹಾಸ್ಯದ ಸ್ವಾರಸ್ಯ ಮಾತುಗಳಿಂದ, ಪಾತ್ರಗಳೇ ತಾವಾಗಿ ಅಭಿನಯಿಸುವ ನಟರ ವಿಶಿಷ್ಟ ವೈಖರಿಯಿಂದ, ನಿರ್ಮಾಣಗೊಳ್ಳುವ ಅವ್ಯಾಹತ ಹಾಸ್ಯದ ರಸಬುಗ್ಗೆಗಳಿಂದ ನಾಟಕ ಪ್ರೇಕ್ಷಕರ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತದೆ.ಕಾಲಕಾಲಕ್ಕೆ ಬದಲಾಗುವ ಮನರಂಜನೆಯ ಉದ್ದಿಮೆಗಳ ಅಗತ್ಯತೆಗಳು, ಜನರ ಅಭಿರುಚಿ, ಬದಲಾದ ಸ್ಥಿತ್ಯಂತರ ಕಾಲದ ಹೊರಳುದಾರಿಯಲ್ಲಿ ಕಂಡುಬರುವ ಸಮಸ್ಯೆ-ಬವಣೆಗಳ ಸುತ್ತ ಹೆಣೆಯಲಾದ ನಾಟಕವಿದು. ಎಲ್ಲರನ್ನೂ ಆನಂದಪಡಿಸುವ ಗುರಿಯುಳ್ಳ ವೃತ್ತಿಯ ಜನರ ನೋವು- ಬವಣೆಗಳನ್ನು ಕಟ್ಟಿಕೊಡುವುದು ನಾಟಕದ ಆಶಯ.ನಾಟಕದಲ್ಲಿ ಮೇಲ್ನೋಟಕ್ಕೆ ಕಾಣುವ ಹಾಸ್ಯಪದರದೊಳಗೆ ವಿಷಾದದ ಒಳ ಹರಿವೊಂದನ್ನು ಗುರುತಿಸುವುದು ಸೂಕ್ಷ್ಮಗ್ರಾಹಿಗಳಿಗೆ ಕಷ್ಟವೇನಲ್ಲ. ನಶಿಸಿ ಹೋಗುತ್ತಿರುವ ಉದ್ಯಮವೊಂದರ ಬವಣೆಯನ್ನು ಚಿತ್ರಿಸುವ ಈ ನಾಟಕ ಅರಿವಿಲ್ಲದೆ ನಮ್ಮನ್ನು ಅದರ ಸೆಳವಿಗೆ ಎಳೆದುಕೊಳ್ಳುತ್ತದೆ.ಸರ್ಕಸ್ಸಿನಲ್ಲಿ ದುಡಿಯುವ ಹಲವಾರು ಜನ ಕಾರ್ಮಿಕರ ಹೊಟ್ಟೆ ತುಂಬಿಸುವ ಜವಾಬ್ದಾರಿ ಹೊತ್ತ ಕಂಪನಿಯ ಮಾಲೀಕ, ಕಂಪೆನಿಯ ಅಸ್ತಿತ್ವ ಉಳಿಸಿಕೊಳ್ಳಲು ಶತಾಯ ಗತಾಯ ಮಾಡುವ ಸರ್ಕಸ್ಸು ಇಲ್ಲಿನ ವ್ಯಂಗ್ಯ.ಜನ ಮನರಂಜನೆಯ  ಇತರ ಮಾಧ್ಯಮಗಳ ಸ್ಪರ್ಧೆಯ ನಡುವೆ, ತಮ್ಮ ಪ್ರದರ್ಶನಗಳ ಆಕರ್ಷಣೆಯನ್ನು ಉಳಿಸಿಕೊಳ್ಳಲು ಸರ್ಕಸ್ ಮಂದಿ ಮಾಡುವ ಅನೇಕ ಉಪಾಯಗಳು ನಗು ತರಿಸಿದರೂ, ಅದರೊಳಗೆ ಹುದುಗಿರುವ ವಿಷಾದ-ನೋವುಗಳು ಅವರ ಕಷ್ಟದ ನಿಜ ಪರಿಸ್ಥಿತಿಯನ್ನು ಬಿಚ್ಚಿಡುತ್ತವೆ.ಸರ್ಕಸ್ ಕಲಾವಿದರು, ಸರಿಯಾಗಿ ಸಂಬಳ ಸಿಗದೆ ಹತಾಶರಾಗಿ, ನೌಕರಿ ಹುಡುಕಿಕೊಂಡು ಬೇರೆಡೆ ನೆಗೆಯದಂತೆ ಅವರನ್ನು ತನ್ನ  ಕಂಪೆನಿಯಲ್ಲೇ ಉಳಿಸಿಕೊಳ್ಳಲು ಮಾಲೀಕ ಹರಸಾಹಸ ಮಾಡುತ್ತಾನೆ. ಸಾಲಗಾರನಾಗುವುದನ್ನೂ ಲೆಕ್ಕಿಸದೆ, ಕಡೆಗೆ ಅವರನ್ನು ಹಿಡಿದಿಟ್ಟುಕೊಳ್ಳಲು ತನ್ನ ಮಗಳನ್ನೇ ಆಮಿಷವಾಗಿ ಬಳಸಿಕೊಳ್ಳುವ ಅನಿವಾರ್ಯ ಒದಗಿದರೂ ಅಶ್ಲೀಲತೆಯ ಮಟ್ಟಕ್ಕದು ಹೋಗದೆ, ಅವನ ಅಸಹಾಯಕತೆಯನ್ನು ಧ್ವನಿಸುತ್ತದೆ.ಇಡೀ ನಾಟಕ, ಕ್ಷಯಿಸುತ್ತಿರುವ ಉದ್ಯಮವೊಂದರ ಸಮಗ್ರ ಚಿತ್ರಣವೊಂದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ  ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ನಾಟಕದ ಆಶಯ ಗಂಭೀರವಾದರೂ ಅದನ್ನು ನೋಡುಗರಿಗೆ ದಾಟಿಸುವ ಬಗೆ ವಿನೋದವೂ, ರಂಜನೀಯವೂ ಆಗಿದೆ.ಸಾಲ ವಸೂಲಿಗೆ ಕಿಂಕರರೊಂದಿಗೆ ಬರುವ ಸಾಹುಕಾರ ಏಳುಕೊಂಡಲವಾಡ (ಹೇಮಂತ್) ದರ್ಪ ಮತ್ತು ಅಧಿಕಾರಗಳನ್ನು ತೋರುವ ಬದಲು ಆತನ ವಿಚಿತ್ರ-ವಿನೋದದ ನಡವಳಿಕೆಗಳನ್ನು ಅವಲಂಬಿಸುತ್ತಾನೆ. ಸರ್ಕಸ್ ಮ್ಯಾನೇಜರ್ (ಭಾರವಿ ಭಾರದ್ವಾಜ್) ಮತ್ತು ಸಾಲದ ಸೋಮಿ (ಸಂದೇಶ್ ಜೈನ್) ಪಾತ್ರಗಳ ವಿಲಕ್ಷಣ ಚರ್ಯೆಗಳು ಹಾಸ್ಯದ ಪ್ರಸಂಗಗಳನ್ನು ನಿರ್ಮಾಣ ಮಾಡುತ್ತವೆ.ನಾಟಕದ ಪ್ರಮುಖ ಆಕರ್ಷಣೆಯೆಂದರೆ, ಸರ್ಕಸ್ ಕಲಾವಿದರು ಮಾಡುವ ಅನೇಕ ಕಸರತ್ತು, ಚಮತ್ಕಾರಗಳು. ತಿಂಗಳುಗಟ್ಟಲೆ ತಾಲೀಮು ನಡೆಸಿ ಕಲಿತ ಕಸರತ್ತುಗಳು, ಪಾದರಸದ ಚಲನೆ, ಚಟಪಟನೆ ಆಡುವ ಮಾತುಗಾರಿಕೆ, ಆಂಗಿಕಾಭಿನಯ ಪರಿಣಾಮಕಾರಿಯಾಗಿದ್ದು, ನಿಜಕ್ಕೂ ಸರ್ಕಸ್ ಪ್ರದರ್ಶನವನ್ನು ನೋಡಿದ ಖುಷಿಯ ಅನುಭವವೇ ಆಗುತ್ತದೆ.ನಾಟಕದ ಆರಂಭದ ದೃಶ್ಯದಲ್ಲಿ ಕಾಣಿಸಿಕೊಳ್ಳುವ ‘ಜೋಕರ್’ (ಮಹೇಶ್ ಪಲ್ಲಕ್ಕಿ) ಮಾಡುವ ಚೇಷ್ಟೆಗಳು, ಒಂದೇ ಉಸಿರಿನಲ್ಲಿ ಮಾತನಾಡುವ ಪರಿ ಅದ್ಭುತವಾಗಿತ್ತು. ಕಳ್ಳನೊಬ್ಬ (ಗೋಪಿ) ಆಕಸ್ಮಿಕವಾಗಿ ಸರ್ಕಸ್ ಕಂಪೆನಿಯಲ್ಲಿ ತೂರಿಕೊಳ್ಳುವ ಹಾಗೂ ಅವನ ಬೆನ್ನು ಹತ್ತಿ ಬರುವ ಪತ್ತೇದಾರ, ಅದರಿಂದ ಬಿಚ್ಚಿಕೊಳ್ಳುವ ಮೋಜಿನ ಪ್ರಸಂಗಗಳು ತಮಾಷೆಯಾಗಿದ್ದವು.ಯುವ ಪ್ರೇಮಿಗಳ (ರಾಕೇಶ್-ಅನುಶ್ರೀ) ಚೆಲ್ಲಾಟ, ಹುಡುಗಾಟಗಳನ್ನು ಮೈಮ್ ಮೂಲಕ ಅಭಿವ್ಯಕ್ತಿಸಿದ್ದು  ಆನಂದದಾಯಕವಾಗಿತ್ತು. ಇದಲ್ಲದೆ, ಗೊಂದಲಗಳನ್ನುಂಟು ಮಾಡಿ ಯಥೇಚ್ಛ ನಗಿಸುವ ‘ಸುಮ್ನೆ’ ಪಾತ್ರಧಾರಿ- ಪ್ರತಾಪ್ ಭಾಸ್ಕರ್, ಸಂದೀಪ್ ಮಹಾಬಲ, ಭರತ್ ರಾವುಡಿ, ವಿಶ್ವ ಕಾರ್ತಿಕ್, ಶಂಕರ್,  ವ್ರಿಶಿನ್ ಮತ್ತು ಕಮಲಳಾಗಿ-ಸುಶ್ಮಿತಾ ರುದ್ರೇಶ್  ಹಾಗೂ ಕಂಪನಿ ಮಾಲೀಕನಾಗಿ ಲೋಕೇಶ್ ಶಾಮಾಚಾರ್ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ.ಅರ್ಥಪೂರ್ಣವಾಗಿ ನಾಟಕ ರಚಿಸಿರುವ ಪ್ರತಾಪ್ ಭಾಸ್ಕರ್ ಮತ್ತು ಮಹೇಶ್ ಪಲ್ಲಕ್ಕಿ ಅಭಿನಂದನಾರ್ಹರು. ಬೆಳಕು (ಮಹಾದೇವ ಸ್ವಾಮಿ), ಪ್ರಸಾಧನ (ವಿಜಯ್ ಬೆಣಚ), ಯುಕ್ತ ಹಿನ್ನಲೆ ಸಂಗೀತಗಳೊಂದಿಗೆ ನಾಟಕ ನೋಡುಗರನ್ನು ರಂಜಿಸಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.