ಮನ ಸೆಳೆಯುವ ಮಳೆ ಜಲಪಾತ

ಶುಕ್ರವಾರ, ಜೂಲೈ 19, 2019
22 °C

ಮನ ಸೆಳೆಯುವ ಮಳೆ ಜಲಪಾತ

Published:
Updated:

ಸಿದ್ದಾಪುರ: ಮಳೆಗಾಲದಲ್ಲಿ ಮಲೆನಾಡಿನಲ್ಲಿ  ಅಲ್ಲಲ್ಲಿ ಮಳೆ ನೀರಿನ ಜಲಪಾತಗಳು ಕಾಣುವುದು ಮಾಮೂಲು. ಕಾಡಿನ ನಡುವೆ ಅಥವಾ ದಾರಿಯೇ ಇಲ್ಲದ ಕಡೆ ಇಂತಹ ಜಲಪಾತಗಳಿದ್ದರೇ ಅವುಗಳ ದರ್ಶನ ಸುಲಭವಲ್ಲ.  ಮಳೆಗಾಲದ ಜಲಪಾತಗಳು ರಸ್ತೆ ಪಕ್ಕವೇ ಇದ್ದರೇ ಅವುಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತವೆ.  ಸಿದ್ದಾಪುರದಿಂದ ಮಾವಿನಗುಂಡಿ ಮೂಲಕ ಜೋಗಕ್ಕೆ ಹೋಗುವ  ಹೆದ್ದಾರಿಯ ಪಕ್ಕದಲ್ಲಿ, ಮಾವಿನಗುಂಡಿ ತಲುಪುವುದಕ್ಕೂ ಸ್ವಲ್ಪ ಮೊದಲು ಕಾಣುವ ಸುಂದರ ಜಲಪಾತವೊಂದು ಹಲವು ವರ್ಷಗಳಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.ಶಿರಸಿ, ಸಿದ್ದಾಪುರ ಮೂಲಕ ಜೋಗಕ್ಕೆ ಧಾವಿಸುವ ಉತ್ತರ ಕರ್ನಾಟಕ ಭಾಗದ ಪ್ರವಾಸಿಗರಿಗೆ ಜೋಗದ ದರ್ಶನವಾಗುವುದಕ್ಕೂ ಮೊದಲು ಮಾವಿನಗುಂಡಿಯ ಸಮೀಪ ಕಲ್ಲುಬಂಡೆಗಳ ನಡುವೆ ಒಂದೇ ಧಾರೆಯಾಗಿ ಇಳಿಯುವ ಈ ಜಲಪಾತ, ಕೇವಲ ಹದಿನೈದು ಇಪ್ಪತ್ತು ಅಡಿ ಎತ್ತರದಿಂದ ಬೀಳುತ್ತದೆ. ಈ ಜಲಧಾರೆಯ ನೀರು ಶುಭ್ರ.  ಸುತ್ತಲಿನ ದಟ್ಟಕಾಡು, ಹಸಿರು ಸಸ್ಯಶ್ರೇಣಿ, ಎತ್ತರದ ಗುಡ್ಡಗಳ ಮೇಲೆ ಆವರಿಸುವ  ಮಳೆಯ ಕಾವಳದ ಹಿನ್ನೆಲೆಯಲ್ಲಿ ಈ ಜಲಸುಂದರಿಯ ಸೊಬಗು ಇಮ್ಮಡಿಗೊಳ್ಳುತ್ತದೆ. ಮಳೆಗಾಲ ಕಳೆದ ನಂತರ ಕೆಲವು ದಿನಗಳವರೆಗೆ ಮಾತ್ರ ಕಾಣಿಸುವ ಈ ಜಲಪಾತ ಮಳೆಗಾಲ ದೂರವಾದಂತೆ ಸೊರಗತ್ತ ಹೋಗುತ್ತದೆ. ಜೋಗಕ್ಕೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಈ ಜಲಪಾತದ ಬಳಿ ನಿಂತು, ಈ ಜಲಧಾರೆಗೆ ಕೈಯೊಡ್ಡಿ, ಮೈಯೊಡ್ಡಿ ಮೋಜು ಅನುಭವಿಸುತ್ತಾರೆ. ರಸ್ತೆಯ ಪಕ್ಕವೇ ಇರುವುದರಿಂದ  ನೀಳಕಾಯದ ಜಲಕನ್ಯೆ ಈ ದಾರಿಯಲ್ಲಿ ಸಾಗುವ ಪ್ರತಿಯೊಬ್ಬರನ್ನು ತನ್ನತ್ತ ಕೈ ಮಾಡಿ ಕರೆಯುತ್ತಾಳೆ. ಜೋಗಕ್ಕೆ ಬರುವವರಿಗೆ  ಮಾವಿನಗುಂಡಿ ಜಲಪಾತದಿಂದ ಹೆಚ್ಚುವರಿ ಖುಷಿ ಲಭ್ಯವಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry