ಮಮತಾ ಬ್ಯಾನರ್ಜಿ-ಹಿಲರಿ ಕ್ಲಿಂಟನ್ ಫಲಪ್ರದ ಭೇಟಿ

7

ಮಮತಾ ಬ್ಯಾನರ್ಜಿ-ಹಿಲರಿ ಕ್ಲಿಂಟನ್ ಫಲಪ್ರದ ಭೇಟಿ

Published:
Updated:
ಮಮತಾ ಬ್ಯಾನರ್ಜಿ-ಹಿಲರಿ ಕ್ಲಿಂಟನ್ ಫಲಪ್ರದ ಭೇಟಿ

ಕೋಲ್ಕತ್ತ (ಪಿಟಿಐ):  ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಶ್ಚಿಮ ಬಂಗಾಳವನ್ನು ಬಂಡವಾಳ ಹೂಡಿಕೆಯ ಪಾಲುದಾರ ರಾಜ್ಯವನ್ನಾಗಿ ಪರಿಗಣಿಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಮಾಹಿತಿ ಮತ್ತು ತಂತ್ರಜ್ಞಾನ (ಐ.ಟಿ), ಬಂದರು, ಪ್ರವಾಸೋದ್ಯಮ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಮೆರಿಕ ಬಂಡವಾಳ ಹೂಡಲಿದೆ ಎಂದು ಅವರು ತಿಳಿಸಿದರು.ಭಾರತದ ಮೂರು ದಿನಗಳ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ರಾಜ್ಯದ ಆರ್ಥಿಕ ಮತ್ತು ವ್ಯಾಪಾರ, ವಹಿವಾಟು ಅಭಿವೃದ್ಧಿಗೆ ಅಮೆರಿಕ ಸಂಪೂರ್ಣ ನೆರವು ನೀಡುವುದಾಗಿ ಹಿಲರಿ ತಮಗೆ ಭರವಸೆ ನೀಡಿದ್ದಾರೆ ಎಂದರು. ಈ ಭರವಸೆ ಜಾರಿಗೆ ತರುವುದನ್ನು ಮುಖ್ಯ ಕಾರ್ಯದರ್ಶಿ ಸಮರ್ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ನ್ಯಾನ್ಸಿ ಪಾವೆಲ್ ನೋಡಿಕೊಳ್ಳಲಿದ್ದಾರೆ ಎಂದರು.ಫಲಪ್ರದ ಚರ್ಚೆ: ಹಿಲರಿ ಅವರೊಂದಿಗಿನ ಮಾತುಕತೆ ಸಂಪೂರ್ಣ ರಚನಾತ್ಮಕ ಮತ್ತು ಫಲಪ್ರದವಾಗಿತ್ತು ಎಂದು ಬಣ್ಣಿಸಿರುವ ಮಮತಾ, ಬಹು ಬ್ರಾಂಡ್‌ನ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮತ್ತು ಬಾಂಗ್ಲಾದೇಶದ ಜತೆ ತೀಸ್ತಾ ನದಿ ನೀರು ಹಂಚಿಕೆ ವಿವಾದದ ವಿಷಯ ಮಾತುಕತೆ ವೇಳೆ ಪ್ರಸ್ತಾಪವಾಗಲಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ನಾಗರಿಕ ಪರಮಾಣು ಸಹಕಾರ ಅಥವಾ ರಾಜತಾಂತ್ರಿಕ ಕಾರ್ಯತಂತ್ರಗಳ ಬಗ್ಗೆಯೂ ಪ್ರಸ್ತಾಪವಾಗಲಿಲ್ಲ. `ಆ ವಿಷಯಗಳ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಅವು ನನ್ನ ಸೀಮಿತ ವ್ಯಾಪ್ತಿಗೆ ಮೀರಿದ ವಿಷಯಗಳು~ ಎಂದರು.34 ವರ್ಷಗಳ ನಂತರ ರಾಜ್ಯದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ ಹಿಲರಿ, ಅಭಿವೃದ್ಧಿ ಯೋಜನೆ ಮತ್ತು ಯೋಜನೆಗಳ ಅನುಷ್ಠಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಾರ್ಜಿಲಿಂಗ್ ಮತ್ತು ಜಂಗಲ್‌ಮಹಲ್‌ನಲ್ಲಿ ಪರಿಸ್ಥಿತಿ ಸುಧಾರಣೆಯಾಗಿರುವುದನ್ನು ಅವರ ಗಮನಕ್ಕೆ ತಂದಿರುವುದಾಗಿ ಹೇಳಿದರು.ತೈಲ ಆಮದು ಕಡಿತಕ್ಕೆ ಸಲಹೆ: ಆರ್ಥಿಕ ದಿಗ್ಬಂಧನ ಎದುರಿಸುತ್ತಿರುವ ಇರಾನ್‌ನಿಂದ ತೈಲ ಆಮದು ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿತಗೊಳಿಸುವಂತೆ ಭಾರತಕ್ಕೆ ಮನವಿ ಮಾಡಿದ ಅವರು, ಈ ನಿಟ್ಟಿನಲ್ಲಿ ಭಾರತ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸೌದಿ ಅರೇಬಿಯಾದಂತ ರಾಷ್ಟ್ರಗಳು ಅಗತ್ಯ ತೈಲ ಪೂರೈಸಲು ಸಿದ್ಧವಾಗಿದ್ದು, ಯಾವುದೇ ಕಾರಣಕ್ಕೂ ಭಾರತಕ್ಕೆ ತೈಲ ಸಮಸ್ಯೆ ಎದುರಾಗುವುದಿಲ್ಲ ಎಂದು ಭರವಸೆ ನೀಡಿದರು.  ತೀಸ್ತಾ ನದಿ ನೀರು ಹಂಚಿಕೆ ವಿವಾದವನ್ನು ಭಾರತ ಮತ್ತು ಬಾಂಗ್ಲಾದೇಶ ಪರಸ್ಪರ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಬೇಕು. ಉಭಯ ರಾಷ್ಟ್ರಗಳ ನಡುವಿನ ನೀರು ಹಂಚಿಕೆ ವಿಷಯದ ಒಪ್ಪಂದದ ರೂಪುರೇಷೆಗಳ ಕುರಿತು ಅಮೆರಿಕಕ್ಕೆ ಹೆಚ್ಚಿನ ಆಸಕ್ತಿ ಇಲ್ಲ ಎಂದರು.ಆಕಾಂಕ್ಷೆ ಇಲ್ಲ: `ಅಮೆರಿಕದ ಅಧ್ಯಕ್ಷೆಯಾಗುವ ಯಾವುದೇ ಆಕಾಂಕ್ಷೆ ನನಗಿಲ್ಲ. ಹೀಗಾಗಿ 2016ರಲ್ಲಿ ನಡೆಯಲಿರುವ  ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ~ ಎಂದು ಹಿಲರಿ ಸ್ಪಷ್ಟಪಡಿಸಿದರು.

ಪತ್ರಕರ್ತರು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯದ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯೊಬ್ಬಳು ಅಮೆರಿಕ ಅಧ್ಯಕ್ಷೆಯಾಗುವುದು ಸುಲಭದ ಮಾತಲ್ಲ ಎಂದರು.ಬೀದಿಯಲ್ಲಿ ತಿರುಗುವ ಆಸೆ: ಅತ್ಯಂತ ಬಿಗಿ ಬಂದೋಬಸ್ತ್‌ನಲ್ಲಿ ಸಂಚರಿಸುವ ಅನಿವಾರ್ಯತೆ ಕುರಿತು ಮಾತನಾಡಿದ ಹಿಲರಿ, `ಮತ್ತೊಮ್ಮೆ ಭಾರತಕ್ಕೆ ಬರುವ ಆಸೆ ಇದ್ದು. ಯಾವುದೇ ಭದ್ರತಾ ಗೊಡವೆ ಇಲ್ಲದೆ ಇಲ್ಲಿಯ ಬೀದಿಯಲ್ಲಿ ಸ್ವಚ್ಛಂದವಾಗಿ ತಿರುಗುವೆ~ ಎಂದು ಅವರು ತಮ್ಮ ಮನದಾಸೆಯನ್ನು ಹೊರಗೆಡವಿದರು.ಉಡುಗೊರೆ ವಿನಿಮಯ

ಶಾಂತಿನಿಕೇತನದಿಂದ ತರಲಾದ ಸ್ಕಾರ್ಫ್, ಟ್ಯಾಗೋರ್ ಅವರ `ಗೀತಾಂಜಲಿ~ ಮತ್ತು `ಗೀತಾಬಿತನ್~ ಇಂಗ್ಲಿಷ್ ಅನುವಾದಿತ ಕೃತಿ, ಸ್ವಾಮಿ ವಿವೇಕಾನಂದರ ಸಂಗ್ರಹಿತ ಕೃತಿಗಳು, ರಾಮಕೃಷ್ಣ ಪರಮಹಂಸರ ಪುಸ್ತಕ ಗಳನ್ನು ಮಮತಾ, ಹಿಲರಿ ಅವರಿಗೆ ಉಡುಗೊರೆಯಾಗಿ ನೀಡಿದರು.  ಅದಕ್ಕೆ ಪ್ರತಿಯಾಗಿ ಟ್ಯಾಗೋರ್ ಭಾವಚಿತ್ರ ಮತ್ತು ಅದರ ಅಡಿ ಅವರ ಕಾವ್ಯದ ಸಾಲುಗಳುಳ್ಳ ಕಸೂತಿ ಮಾಡಿದ ಚಿತ್ರಪಟವನ್ನು ಹಿಲರಿ ಮಮತಾಗೆ ಕಾಣಿಕೆಯಾಗಿ ನೀಡಿದರು.ಭಯೋತ್ಪಾದನೆ: ಪಾಕ್ ಕ್ರಮಕ್ಕೆ ಅತೃಪ್ತಿಕೋಲ್ಕತ್ತ (ಪಿಟಿಐ):  `ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಭಾರತ ನಿರೀಕ್ಷಿಸಿದಷ್ಟು ಪಾಕಿಸ್ತಾನ ಕೆಲಸ ಮಾಡಿಲ್ಲ~ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅತೃಪ್ತಿ ವ್ಯಕ್ತಪಡಿಸಿದರು.ಭಯೋತ್ಪಾದನೆಯಿಂದಾಗಿ ಪಾಕಿಸ್ತಾನವು, ಅಮೆರಿಕ ಮತ್ತು ಭಾರತಕ್ಕಿಂತ ಹೆಚ್ಚಿನ ಪ್ರಮಾಣದ ನಷ್ಟ ಅನುಭವಿಸಿದ್ದು, ಅನೇಕ ಯೋಧರು ಮತ್ತು ಜನರನ್ನು ಕಳೆದುಕೊಂಡಿದೆ. ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿರುವ ಸಮಸ್ಯೆ ನಿವಾರಣೆಗೆ ಪಾಕಿಸ್ತಾನ ಹೆಚ್ಚು ಒತ್ತು ನೀಡಬೇಕು ಎಂದರು.`ಅಲ್-ಖೈದಾವನ್ನು ಬಹುತೇಕ ಸದೆಬಡೆಯಲಾಗಿದ್ದು, ಅಳಿದುಳಿದ ಉಗ್ರರು ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾರೆ. ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಸೇರಿದಂತೆ ಉಳಿದ ಉಗ್ರರನ್ನು ಶೀಘ್ರದಲ್ಲಿಯೇ ಮಟ್ಟಹಾಕಲಾಗುವುದು~ ಎಂದು  ಅವರು  ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry