ಶನಿವಾರ, ಫೆಬ್ರವರಿ 27, 2021
20 °C

`ಮರಗುದುರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮರಗುದುರೆ

(ಆಯ್ದ ಭಾಗಗಳು)

ಹೊತ್ತು ಮೂಡುವ ಮೊದಲೇ

ಹೆಗಲ ಮೇಲೆ ನೇಗಿಲ ಹೊತ್ತು

ಹಿಂಬಾಲಿಸುವ ಬಡಕಲು ಎತ್ತುಗಳೊಡನೆ

ಹೊಲದೆಡೆ ನಡೆವ ಪ್ರತಿ ರೈತನೂ

ನನಗೆ ಶಿಲುಬೆ ಹೊತ್ತ ಜೀಸಸ್‌ನಂತೆ ಕಾಣುತ್ತಾನೆ

ಹೌದು

ನಾನು ಕೊಲೆ ಕುರಿತು ಮಾತನಾಡುತ್ತಿದ್ದೇನೆ

              ***

ಕಡಲೇ, ನೆನಪಿದೆಯೆ ನಿನಗೆ?

ನಾನು ಸಣ್ಣವನಿದ್ದಾಗ

ಬೆಳ್ನೊರೆಯಿಂದ ನನ್ನ ಪಾದಗಳ ಸುತ್ತ

ಬಿಳಿಗೂದಲ ನಾಯಂತೆ ನೀ ಹರಡಿಕೊಳ್ಳುತಿದ್ದೆ.

ಅಲೆಗಳ ನಾಲಿಗೆಯಿಂದ

ನನ್ನ ಪಾದ ನೆಕ್ಕುವಾಗ

ನೀ ಅಮಾಯಕನೆಂದೇ ನಾನು ಭಾವಿಸಿದ್ದೆ

ನೋವಿನಿಂದ ಅಬ್ಬರಿಸುವಾಗ

ಮನೆಗೆ ಕರೆತಂದು ನಿನ್ನ ಸಂತೈಸಬಯಸಿದ್ದೆ

ಗೆಳೆಯನಾಗಬಯಸಿದ್ದೆ

ಹೌದು ಕಡಲೇ, ನಿನ್ನ ಸಂತೈಸಬಯಸಿದ್ದೆ.

ಆದರೆ ಅಲೆಗಳಿಗೂ ವಿಷದ  ಹಲ್ಲಿದೆಯೆಂದು ತಿಳಿದಿರಲಿಲ್ಲ.

ಗಾಳಿ ರೆಕ್ಕೆಗಳು ಕತ್ತಿಯಲುಗಿನಂತೆ     ಹರಿತವಾಗಿರಬಹುದೆಂದು ತಿಳಿದಿರಲಿಲ್ಲ

ರಾಜಕಾರಣವು ಕಣ್ಣೀರಾಗಿ  ಹರಿಯಬಲ್ಲದೆಂದೂ ತಿಳಿದಿರಲಿಲ್ಲ.

ಆ ಕ್ಷಣ,

ಕಡಲುಕ್ಕಿದ ಆ ಕ್ಷಣ

ಸೂರ್ಯಚಂದ್ರರು ಕರಿ ಇದ್ದಿಲಾದ ಕ್ಷಣ

ಎಲ್ಲವೂ ಕೊನೆಯಾಯಿತು.

ಭೂಮ್ಯೋಕಾಶಗಳ ನಂಬಿದ ಜೀವಗಳು

ಹೆಣಗಳಾದವು.

ಸತ್ತವನಿಗೆ ವಿಳಾಸವಿದೆಯೋ ಇಲ್ಲವೋ

ಏನೂ ಪರವಾಗಿಲ್ಲ!

ಹಿಡಿ ಕೂಳಿಗಾಗಿ

ಹೊಟ್ಟೆಹಿಡಿದು ಊರೂರು ಅಲೆದವರು

ಅದೆಷ್ಟು ಜನ ಸತ್ತರೂ

ಪರವಾಗಿಲ್ಲ!

ನೂರಾರು ವರ್ಷಗಳಿಂದ ನೆರಳು ಕೊಡುತ್ತಿದ್ದ

ಆಲದ ಮರ ಬುಡಮೇಲಾಗಿ ಬಿದ್ದರೂ,

ಬಿರುಗಾಳಿಯ ಹೊಡೆತಕ್ಕೆ ಪುಟ್ಟಗುಬ್ಬಿ  ಸತ್ತು ಉದುರಿಬಿದ್ದರೂ,

ಕರೆಂಟು ಕಂಬಗಳು ಹಸಿ ಗಿಡಗಳಂತೆ ಬಾಗಿದರೂ,

ಪರವಾಗಿಲ್ಲ!

ಅಸ್ಥಿಪಂಜರ ಯಾವ ಪುರಾವೆಯನ್ನೂ ಕೇಳುವುದಿಲ್ಲ!

ಜೀವನಪರ್ಯಂತ ಅಧಿಕಾರವನೆ ಹಾಸಿ ಹೊದ್ದವರು

ಸತ್ತರೆ

ದುಃಖ, ಗೌರವದಿಂದ ಬಾವುಟ ಅರ್ಧ ಕೆಳಗಿಳಿದು

ತಲೆ ತಗ್ಗಿಸಿ ಹಾರುತ್ತದೆ.

ತಮ್ಮ ಮೈ ಮುಚ್ಚಿಕೊಳ್ಳಲು ಬಟ್ಟೆಯೂ ಇರದ

ಧೂಳಲ್ಲಿ ಧೂಳಾಗಿ ಬದುಕಿದ

ಸಾವಿರಾರು ಜನ ಸತ್ತು ಧೂಳಾದರೆ

ಬಾವುಟ ಒಂದು ಹನಿ ಕಣ್ಣೀರು ಹಾಕುವುದಿಲ್ಲ.

ಗಾಳಿಗೇ ಸವಾಲು ಹಾಕುತ್ತ

ಮುಗಿಲ ನೋಡಿ ನಗುತ್ತ

ಹೆಮ್ಮೆಯಿಂದ ಹಾರುತ್ತದೆ.

ಯಾವ ಶೋಕಗೀತೆ ನುಡಿಸುವುದಿಲ್ಲ.

ಕಾಲದ ಗಂಟಲು ಗದ್ಗದವಾಗುವುದಿಲ್ಲ.

ಚರಿತ್ರೆಯ ಕಣ್ಣಲ್ಲಿ ನೀರು ತುಂಬುವುದಿಲ್ಲ.

                        ***

ನನಗೆ ರಾಕೆಟ್ ಬೇಡ,

ಚಂದ್ರನಂಗಳದ ಮೇಲಿಳಿಯುವುದೂ ಬೇಡ.

ಏರೋಪ್ಲೇನುಗಳು ಬೇಡ,

ಜನಬದುಕನ್ನು, ಕಾಲವನ್ನು ನಾಶ ಮಾಡುವ

ರಾಜಕಾರಣವೂ ಬೇಡ.

ರೈಲು ಬೇಡ, ಬಸ್ಸು ಬೇಡ,

ಈ ನಾಗರಿಕತೆಯ ಯಾವ ಗಡಿಬಿಡಿಯೂ ಬೇಡ.

ಶಿಲಾಯುಗದ ಹತಾರುಗಳ ಹಿಡಿದು

ಚರಿತ್ರೆಯ ಗುಹೆಯೊಳಗೆ ಹೋಗುತ್ತೇನೆ.

ಈ ಮನುಷ್ಯ ಪಶುಪಕ್ಷಿಗಳ ಮೃತದೇಹಗಳನ್ನು

ನನ್ನೊಳಗೆ ಹುಗಿಯುತ್ತೇನೆ.

ಮರಗುದುರೆಯನ್ನು ಸುಟ್ಟು ಬೂದಿ ಮಾಡುವ

ಇಂಧನವೊಂದನ್ನು ಹುಡುಕುತ್ತೇನೆ.

ಹೊಸ ಆಸೆ, ಹೊಸ ಬದುಕು, ಕನಸುಗಳೊಂದಿಗೆ

ಹೊಸಬಟ್ಟೆ ನೇಯುತ್ತೇನೆ.

ದಿಗಂಬರನಾಗಿ ದಿಕ್ಕುಗಳ ನಡುವೆ

ದಿಕ್ಕಿಲ್ಲದೇ ಬಿದ್ದಿರುವ ಮನುಷ್ಯನಿಗೆ

ಹೊಸಬಟ್ಟೆ ಹೊದಿಸುತ್ತೇನೆ.

=ನಗ್ನಮುನಿ . ಕನ್ನಡಕ್ಕೆ: ಎಚ್.ಎಸ್. ಅನುಪಮಾ

(`ಮರಗುದುರೆ'  ಕವಿತೆಯ ಕೆಲವು ಭಾಗಗಳು )

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.