ಮರಣದ ನಂತರವೂ ಸ್ಮರಣೆಯಲ್ಲಿರಬೇಕು

7

ಮರಣದ ನಂತರವೂ ಸ್ಮರಣೆಯಲ್ಲಿರಬೇಕು

Published:
Updated:

ಸಿರಿಗೆರೆ: ಇಂದು ರಾಜಕಾರಣಿಗಳು, ಜನಸಾಮಾನ್ಯರು ಎಲ್ಲರೂ ಕೆಟ್ಟು, ರಕ್ಷಣೆ ಮತ್ತು ಆಶಿರ್ವಾದಕ್ಕಾಗಿ ಮಠ ಸೇರಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಮಾರ್ಮಿಕವಾಗಿ ನುಡಿದರು.ಇಲ್ಲಿನ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 21ನೇ ಶ್ರದ್ಧಾಂಜಲಿ ಅಂಗವಾಗಿ ಸೋಮವಾರ ನಡೆದ ನಾಲ್ಕನೇ ದಿನದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.ರಾಜಕಾರಣಿಗಳಾದ ನಾವು ನಮ್ಮ ಅವಶ್ಯಕತೆಗೆ ನಿಮ್ಮನ್ನು, ಜನಸಾಮಾನ್ಯರು ನೀವು ನಿಮ್ಮ ಅವಶ್ಯಕತೆಗೆ ನಮ್ಮನ್ನು ಕೆಡಿಸುತ್ತಾ ಬಂದಿದ್ದೇವೆ. ಈ ಸಂದರ್ಭದಲ್ಲಿ ನಾವೆಲ್ಲರೂ ಶ್ರೀಗಳ ಬಳಿ ತಲೆಬಾಗಿ ಕ್ಷಮೆಯಾಚಿಸುವ ಮಟ್ಟಕ್ಕೆ ತಲುಪಿದ್ದೇವೆ. ಯಾರೇ ಒಬ್ಬ ವ್ಯಕ್ತಿ ತನ್ನ ಮರಣಾ ನಂತರವೂ ಜನಮಾನಸದಲ್ಲಿ ಸ್ಮರಣೆಯಲ್ಲಿರಬೇಕು. ಅಂತಹ ವ್ಯಕ್ತಿಗಳನ್ನು ಮಹಾತ್ಮರೆಂದು ಕರೆಯುತ್ತೇವೆ. ಆ ಮಹಾತ್ಮರ ಸಾಲಿಗೆ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಸೇರುತ್ತಾರೆ.ಶ್ರೀಗಳು 50ರ ದಶಕದಲ್ಲಿ ಜನಸಾಮಾನ್ಯರಿಗೆ ಬೇಕಾಗಿದ್ದು ಅಕ್ಷರ, ಅನ್ನ, ಆರೋಗ್ಯ. ಇವುಗಳನ್ನು ಯಾವ ಸರ್ಕಾರಗಳೂ ನೀಡದಿದ್ದ ಸಂದರ್ಭದಲ್ಲಿ ಮಠಮಾನ್ಯಗಳು ಮಾಡಿದ್ದನ್ನು ಇಲ್ಲಿ ನಾವು ಮನನ ಮಾಡಬೇಕಾಗಿದೆ ಎಂದರು.ಯಾವ ಸರ್ಕಾರಗಳೂ ಮಾಡದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಕ್ರಾಂತಿಯನ್ನು ಅಂದೇ ಮಾಡಿದ್ದಾರೆ. ಈಗ ಸರ್ಕಾರ ಯಾವ ಸವಲತ್ತುಗಳನ್ನು ನಾಡಿಗೆ ನೀಡಲು ಮುಂದಾಗುತ್ತಿದೆಯೋ ಆ ಎಲ್ಲಾ ಪರಿಕಲ್ಪನೆಗಳು ಸಹ ಅಂದಿನ ಕಾಲದಲ್ಲಿಯೇ ಋಷಿಮುನಿಗಳು, ಗುರಿಹಿರಿಯರಲ್ಲಿ ಇದ್ದವು ಎಂದು ಸ್ಮರಿಸಿದರು.ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಬಂದು 65 ವರ್ಷಗಳ ನಂತರವೂ ನಮ್ಮ ಸರ್ಕಾರಗಳು ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಪೂರ್ಣ ಪ್ರಮಾಣದ ಶಿಕ್ಷಣ ನೀಡಲಾಗಿಲ್ಲ ಎಂದರು.ಇದೇ ಸಂದರ್ಭದಲ್ಲಿ ಸಿರಿಗೆರೆ, ಮುತ್ತುಗದೂರು, ಕಾಗಳಗೆರೆ, ಮೆದಿಕೇರಿಪುರ ಗ್ರಾಮಗಳ ಟಿಪ್ಪರ್ ಲಾರಿ ಮಾಲೀಕರ ಸಂಘದವರು ಸಮಾರಂಭದ ಯಶಸ್ಸಿಗಾಗಿ ` 1 ಲಕ್ಷಗಳನ್ನು ದೇಣಿಗೆಯಾಗಿ ನೀಡಿದರು.ಕಾರ್ಯಕ್ರಮದ ನಂತರ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಜೀವನಾಧಾರಿತ, ಡಾ. ರಾಜಶೇಖರ ಹನುಮಲಿ ರಚಿಸಿ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಟಿ.ನೀಲಾಂಬಿಕೆ ಹಾಗೂ ಕೆ. ಮೌನೇಶ್ವಾರಾಚಾರ್ ನಿರ್ದೇಶನದ ‘ಮಹಾಬೆಳಗು’ ನಾಟಕವನ್ನು ತರಳಬಾಳು ಕಲಾಸಂಘದ ಕಲಾವಿದರು ಅಭಿನಯಿಸಿದರು.ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ, ಜಿ.ಎಚ್‌. ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ದಾವಣಗೆರೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸಿ.ಎಸ್.ಶೀಲಾ ಗದ್ದಿಗೇಶ್, ರಾಜ್ಯ ನಾಟಕ ಅಕಾಡೆಮಿ ವಿಶ್ರಾಂತ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ತರಳಬಾಳು ವಿದ್ಯಾಸಂಸ್ಥೆ  ಡಾ.ಎಸ್.ಸಿದ್ದಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಕೆಂಚಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಕೆ.ಜಿ.ಶಿವಮೂರ್ತಿ, ಸಾಣೇಹಳ್ಳಿ ಶಿವಕುಮಾರ ಕಲಾಸಂಘದ ಉಪಾಧ್ಯಕ್ಷ ಪ್ರಭು ಉಪಸ್ಥಿತರಿದ್ದರು.

ಕಾವ್ಯಾ ಸ್ವಾಗತಿಸಿದರು. ಸುರೇಖಾ ಓಬಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಜೆ.ಜ್ಯೋತಿಲಕ್ಷ್ಮಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry