ಮರಣ ದಂಡನೆ ಬೇಡ

7
ಅತ್ಯಾಚಾರ

ಮರಣ ದಂಡನೆ ಬೇಡ

Published:
Updated:
ಮರಣ ದಂಡನೆ ಬೇಡ

ಅತ್ಯಾಚಾರಿಗಳಿಗೆ ಒಂದೇ ಬಾರಿಗೆ ಪ್ರಾಣ ಹೋಗುವ ಮರಣದಂಡನೆಗಿಂತ, ಜೀವನಪೂರ್ತಿ ಅವರು ಮಾನಸಿಕವಾಗಿ ಕೊರಗುವಂತೆ ಮಾಡುವ ಶಿಕ್ಷೆಯನ್ನು ಜಾರಿಗೆ ತರಬೇಕು.       ಅತ್ಯಾಚಾರ ಎಸಗು  ವವರಿಗೆ ಮರಣ ದಂಡನೆ ಬೇಡ ಎಂದು ನಾನು ಹೇಳಿದರೆ, ಇದೇನಿದು ಇಂತಹ ಅಪರಾಧಿಗಳನ್ನು ಗಲ್ಲಿಗೇರಿಸಿ ಎಂಬ ಕೂಗು ದೇಶದೆಲ್ಲೆಡೆ ಕೇಳಿಬರುತ್ತಿರುವಾಗ, ಇವರು ಅಂಥಾ ದುರುಳರಿಗೆ ಮರಣ ದಂಡನೆಯೇ ಬೇಡ ಎಂಬ ಮೃದು ಧೋರಣೆ ಹೊಂದಿದ್ದಾರಲ್ಲಾ ಎಂದು ಯಾರಿಗಾದರೂ ಅಚ್ಚರಿಯಾಗುವುದು ಸಹಜವೇ. ಆದರೆ ನನ್ನ ವಿಚಾರ ಅತ್ಯಾಚಾರಿಗಳ ಬಗ್ಗೆ ಅನುಕಂಪ ತೋರಬೇಕು ಎಂದಲ್ಲ. ಅವರಿಗೆ ಮರಣ ದಂಡನೆಯನ್ನು ವಿಧಿಸಿ ಗಲ್ಲಿಗೆ ಏರಿಸುವುದರಿಂದ ಭಾವಿ ಅತ್ಯಾಚಾರಿಗಳ ಮನಸ್ಸಿನಲ್ಲಿ ಮರಣದ ಭಯವನ್ನು ಬಿತ್ತಲು ಸಾಧ್ಯವಾಗಬಹುದು ಮತ್ತು ಆ ಮೂಲಕ ಅತ್ಯಾಚಾರಗಳನ್ನು ಗಣನೀಯವಾಗಿ ತಡೆಗಟ್ಟಬಹುದು ಎಂಬುದು ನಿಜ.

ಆದರೂ ಸಾವಿಗೆ ಸಿದ್ಧವಾಗಿರುವ ದುರುಳರು ಅತ್ಯಾಚಾರಕ್ಕೆ ಏಕೆ ಹಿಂಜರಿಯುತ್ತಾರೆ? ಹಾಗಾಗಿ ಅತ್ಯಾಚಾರ ಮುಗಿಸಿಯೇ ಸಾಯೋಣ ಎಂದು,  ಅವರು ಅತ್ಯಾಚಾರದತ್ತ ಹೊರಳಿದರೆ ಆಶ್ಚರ್ಯಪಡಬೇಕಾಗಿಲ್ಲ. ಅದಕ್ಕಾಗಿ, ಅಪರಾಧಿಯು ತಾನೆಸಗಿದ ಪಾಪದ ತಾಪವನ್ನು ಆಜೀವ ಪರ್ಯಂತ ಅನುಭವಿಸುತ್ತಾ ಇರುವಂತೆ, ಬೇರೆ ಬಗೆಯ ಕಠಿಣ ಶಿಕ್ಷೆಯನ್ನು ಜಾರಿಗೊಳಿಸುವುದು ಅಗತ್ಯ.ಹಾಗಾದರೆ ಅಂತಹ ಶಿಕ್ಷೆ ಏನಾಗಿರಬೇಕು?

ಮಹಿಳೆಯರ ಮೇಲೆ ಅತ್ಯಾಚಾರ ಎಸಗುವ ಪುರುಷರು ಬಾಲ್ಯವನ್ನು ದಾಟಿದ ಯಾವ ವಯಸ್ಸಿನವರೇ ಆಗಿದ್ದರೂ, ಅವರ ಶರೀರದಲ್ಲಿ ಕಾಮುಕತೆಯನ್ನು ಪ್ರಚೋದಿಸುವ, ಹೆಣ್ಣು ಮಕ್ಕಳತ್ತ ಆಕರ್ಷಿತರಾಗುವಂಥಾ ಭಾವನೆಗಳ ಹುಟ್ಟಿಗೆ ಕಾರಣವಾಗುವ, ಮೆದುಳು ಸಹಿತ ಶರೀರದ ಯಾವುದೇ ಭಾಗದಲ್ಲಿರುವ ಗ್ರಂಥಿ, ನರ ಅಥವಾ ಜೀವಕೋಶಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿ ತೆಗೆದು ಹಾಕಬೇಕು.

ಈ ಮೂಲಕ ಅವರು ಶಾಶ್ವತವಾಗಿ ದೈಹಿಕ ಹಾಗೂ ಮಾನಸಿಕವಾಗಿ ಲೈಂಗಿಕ ಜಡಚೇತನರಾಗುವಂತೆ ಮಾಡಬೇಕು. ತಮ್ಮ ಬದುಕಿನ ಮುಂದಿನ ದಿನಗಳನ್ನು ಅವರು ಶಿಖಂಡಿಗಳಾಗಿಯೇ ಕಳೆಯಬೇಕು. ಜೊತೆಗೆ, ತೊಂದರೆಗೊಳಗಾದ ಮಹಿಳೆಗೆ ಸೂಕ್ತ ಪರಿಹಾರ ನೀಡಲೇಬೇಕು.ಇಂತಹದ್ದೊಂದು ಶಸ್ತ್ರಚಿಕಿತ್ಸಾ ವಿಧಾನದ ಬಗ್ಗೆ ಈ ಶಿಕ್ಷೆಯನ್ನು ವಿಧಿಸುವ ನ್ಯಾಯಾಧೀಶರಿಗೆ ಅರಿವಿರಬೇಕು. ಚಿಕಿತ್ಸೆಯು ಆಸ್ಪತ್ರೆಯಲ್ಲೇ ನಡೆದರೂ ಅದು ನ್ಯಾಯಾಧೀಶರು ಮತ್ತು ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿ ಇಷ್ಟಪಟ್ಟರೆ ಅವರ ಸಮ್ಮುಖದಲ್ಲೇ ನಡೆಯಬೇಕು.ಅತ್ಯಾಚಾರಿಗಳು 14 ವರ್ಷಕ್ಕಿಂತ ಕಡಿಮೆಯವರಾಗಿ ಬಾಲಾಪರಾಧಿ ಎಂದು ಪರಿಗಣಿಸಿದ್ದರೆ ಅವರಿಗೆ ಕನಿಷ್ಠ ಹತ್ತು ವರ್ಷ ಶಿಕ್ಷೆಯ ಜೊತೆಗೆ ಒಳ್ಳೆಯ ನಾಗರಿಕರಾಗಿ ಬದುಕಲು ಅಗತ್ಯ ಇರುವಂಥ ಶಿಕ್ಷಣವನ್ನೂ ನೀಡಬೇಕು. ನೊಂದ ಹೆಣ್ಣು ಮಕ್ಕಳಿಗೆ ಅಪರಾಧಿ ಬಾಲಕನ ಪೋಷಕರಿಂದ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕು.

ಇಂತಹದ್ದೊಂದು ಕಾಯ್ದೆ ಜಾರಿಗೆ ಸರ್ಕಾರ ಗಮನ ಹರಿಸುವುದೇ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry