ಸೋಮವಾರ, ಮೇ 23, 2022
27 °C

ಮರಳಿದ ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಕೇಂದ್ರ ಸರ್ಕಾರದ ಬಜೆಟ್ ಮಂಡನೆ ನಂತರದ ದಿನವಾದ ಮಂಗಳವಾರ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 623 ಅಂಶಗಳಷ್ಟು ಏರಿಕೆ ಕಂಡಿದ್ದು, 21 ತಿಂಗಳಲ್ಲಿಯೇ ಇದು ಅತಿದೊಡ್ಡ ಗಳಿಕೆಯಾಗಿದೆ.ವಾಹನಗಳ ಮಾರಾಟ, ರಫ್ತು ಪ್ರಮಾಣ  ಹೆಚ್ಚಳ ಮತ್ತು ಮೂಲ ಸೌಕರ್ಯ ರಂಗದಲ್ಲಿನ ಉತ್ಪಾದನೆ ಏರಿಕೆ ಮುಂತಾದವು ಸೂಚ್ಯಂಕ ಏರಿಕೆಗೆ ಇಂಬು ನೀಡಿವೆ. ಸಂವೇದಿ ಸೂಚ್ಯಂಕವು 17,982 ಅಂಶಗಳಿಂದ ದಿನದ ವಹಿವಾಟು ಆರಂಭಿಸಿ ವಹಿವಾಟಿನ ಉದ್ದಕ್ಕೂ ಏರುಗತಿಯಲ್ಲಿಯೇ ಸಾಗಿ 18,446 ಅಂಶಗಳೊಂದಿಗೆ ದಿನದ ವಹಿವಾಟು ಕೊನೆಗೊಳಿಸಿತು.ಇದು 2009ರ ಮೇ ತಿಂಗಳ ನಂತರದ ದಿನದ ಅತಿ ದೊಡ್ಡ ಗಳಿಕೆ ಇದಾಗಿದೆ. ಖರೀದಿ ಭರಾಟೆ ಎಷ್ಟು ತೀವ್ರವಾಗಿತ್ತು ಎಂದರೆ, ಎಲ್ಲ 13 ವಲಯಗಳ ಸೂಚ್ಯಂಕಗಳಲ್ಲಿ ಏರಿಕೆ ದಾಖಲಾಗಿತ್ತು. ಆಟೊಮೊಬೈಲ್, ಬ್ಯಾಂಕಿಂಗ್, ರಿಯಾಲ್ಟಿ, ಭಾರಿ ಯಂತ್ರೋಪಕರಣ ಮತ್ತು ಲೋಹದ ಷೇರುಗಳು ಲಾಭ ಬಾಚಿಕೊಂಡವು.ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡದಿರುವುದು ಹೂಡಿಕೆದಾರರಿಗೆ ಹೆಚ್ಚು ಸಮಾಧಾನ ತಂದಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಲು ವಿದೇಶಿ ಹೂಡಿಕೆದಾರರಿಗೆ ಅನುಮತಿ ನೀಡಿರುವುದು, ಕಾರ್ಪೊರೇಟ್ ಬಾಂಡ್ಸ್‌ಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಬಂಡವಾಳ ಹೂಡಿಕೆ ಮೇಲಿನ ಮಿತಿ ಹೆಚ್ಚಳ, ಕಾರ್ಪೊರೇಟ್ ತೆರಿಗೆ ಮೇಲಿನ ಸರ್ಚಾರ್ಜ್ ಅನ್ನು ಶೇ  5ರಿಂದ ಶೇ 2.5ಕ್ಕೆ ಇಳಿಸಿರುವುದು  ಮತ್ತು ಷೇರು ವಿಕ್ರಯದ ಗುರಿಯನ್ನು ರೂ. 40 ಸಾವಿರ ಕೋಟಿಗಳಿಗೆ ನಿಗದಿ ಮಾಡಿರುವುದು ಷೇರುಪೇಟೆಯ ವಹಿವಾಟಿಗೆ ಉತ್ತೇಜನ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.