ಮರಳಿನಲ್ಲಿ ಅರಳಿದ ಕಲೆ

7

ಮರಳಿನಲ್ಲಿ ಅರಳಿದ ಕಲೆ

Published:
Updated:
ಮರಳಿನಲ್ಲಿ ಅರಳಿದ ಕಲೆ

`ಬಾಲ್ಯದಿಂದಲೇ ಚಿತ್ರಕಲೆ ಇಷ್ಟದ ಹವ್ಯಾಸವಾಗಿತ್ತು. ನನ್ನಪ್ಪ ಅಮ್ಮ ಆಸಕ್ತಿಯನ್ನು ಗುರುತಿಸಿ ಮುಂಬೈನಲ್ಲಿ ಚಿತ್ರಕಲೆ ಕಲಿಸಲು ಆರಂಭಿಸಿದರು. ಕಲಿಯುತ್ತ ಹೋದಂತೆ ಮುಂಬೈ ಬೀಚ್‌ನ ಮರಳುರಾಶಿ ಕೈಬೀಸಿ ಕರೆಯುತ್ತಿತ್ತು. ನಂತರ ಅದೇ ನನ್ನ ಚಿತ್ರಕಲೆಯ ಮಾಧ್ಯಮವಾಯಿತು...~ಸೂರತ್‌ನ ಯುವತಿ ನಿಖಿತಾ ಮರಳಿಗಪ್ಪುವ ತೆರೆಗಳಂತೆಯೇ ಮಾತುಗಳನ್ನು ಉಕ್ಕಿಸುತ್ತಿದ್ದರು. ಅದರಲ್ಲಿ ಉಸುಕಿನ ಬಗೆಗೆ ಅವರಿಗಿದ್ದ ಮಮಕಾರವೂ ತೊರೆತೊರೆಯಾಗಿ ಹರಿಯುತ್ತಿತ್ತು.ನಿಖಿತಾ ಸಾವ್ಲಾನಿ ಸೂರತ್ ಮೂಲದ ಕಲಾವಿದೆ. ತಂಜಾವೂರು ಪೇಂಟಿಂಗ್, ಗ್ಲಾಸ್ ಪೇಂಟಿಂಗ್‌ಗಳಲ್ಲಿಯೂ ಸಿದ್ಧಹಸ್ತರು. ಆದರೆ ಮರಳು ಇವರ ಮುಖ್ಯ ಮಾಧ್ಯಮವಂತೆ. ಇದಕ್ಕೊಂದು ಭಿನ್ನವಾದ ಗುಣವಿದೆ. ಒಮ್ಮೆ ಮರಳಿನಲ್ಲಿ ಬಣ್ಣಗಳನ್ನು ಕಲಿಸುವುದು ಕಲಿತರೆ ಸಾಕು, ಅಗಾಧವಾದ ಸಾಧ್ಯತೆಗಳನ್ನೆಲ್ಲ ಸೃಷ್ಟಿಸಬಹುದು ಎನ್ನುತ್ತಾರೆ ನಿಖಿತಾ.ತಿಳಿ ಹಳದಿ ಬಣ್ಣದ ಮರಳನ್ನು ಹಾಗೆಯೇ ಬಳಸುವುದು ಇವರಿಗಿಷ್ಟವಂತೆ. ಇದರೊಂದಿಗೆ ಕಂದು ಬಣ್ಣ, ಕಡುಕಂದು, ಹಳದಿ ವರ್ಣಗಳ ಮಿಶ್ರಣವನ್ನು ತಮ್ಮ ಕಲಾಕೃತಿಗಳಲ್ಲಿ ಬಳಸಿಕೊಳ್ಳುತ್ತಾರಂತೆ. ಮರಳಿನಲ್ಲಿ ಕಲೆ ಅರಳುವಾಗ ಆಗುವ ಸಂತೋಷವೇ ಬೇರೆ ಎನ್ನುವುದು ನಿಖಿತಾ ಮಾತು.ಸಾಂಪ್ರದಾಯಿಕ ಬಗೆಯಲ್ಲಿ ದೇವರನ್ನು ಮರಳಿನಲ್ಲಿ ಸೃಷ್ಟಿಸುವುದು ಇವರಿಗಿಷ್ಟದ ಕೆಲಸವಂತೆ. ಇದು ಸವಾಲಿನದ್ದೂ ಹೌದು. `ಹಿಂದೂ ದೇವತೆಗಳ ಅಲಂಕಾರವನ್ನು ಮರಳಿನಲ್ಲಿ ಮಾಡುವುದು ಮೊದಲೆಲ್ಲ ಸವಾಲೆನಿಸುತ್ತಿತ್ತು.

ಆದರೆ ಇದೀಗ ಹೊಂಬಣ್ಣದ ಮರಳಿಗಿಂತ ಮತ್ಯಾವುದೂ ಮಾಧ್ಯಮವಿಲ್ಲ ಎನಿಸತೊಡಗಿದೆ. ಗಣಪತಿಯನ್ನು ಸೃಷ್ಟಿಸುವುದೇ ನನಗಿಷ್ಟದ ಕೆಲಸ~ ಎನ್ನುತ್ತಾರೆ ಅವರು.ಮರದ ಕೊಂಬೆಯ ಮೇಲೆ ಜೋಡಿಹಕ್ಕಿಗಳ ಪ್ರೀತಿ, ಸಮಕಾಲೀನ ಕಲೆ, ಮುಖವಾಡ ಮುಂತಾದ ಹಲವಾರು ಕೃತಿಗಳನ್ನು ಬೆಂಗಳೂರಿಗೆ ಹೊತ್ತುತಂದಿದ್ದಾರೆ ನಿಖಿತಾ.

ಕಲಾ ಆಸಕ್ತರು ಇವನ್ನು ಗಮನಿಸಿ ಮೆಚ್ಚಿದರೆ ಖುಷಿಯಾಗುತ್ತದೆ ಎನ್ನುತ್ತಾರೆ.ಈ ಪ್ರದರ್ಶನವು ಅ.23ರಿಂದ 27ರವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ತೆರೆದಿರುತ್ತದೆ. ರಿನೈಸೆನ್ಸ್ ಗ್ಯಾಲರಿ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿದೆ. ಹೆಚ್ಚಿನ ಮಾಹಿತಿಗೆ: 22202232

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry