ಗುರುವಾರ , ಮೇ 13, 2021
17 °C
ಪಾಕಿಸ್ತಾನ ಪ್ರಧಾನಿಯಾಗಿ ನವಾಜ್ ಷರೀಫ್ ಅಧಿಕಾರ ಸ್ವೀಕಾರ

ಮರಳಿ ಪಟ್ಟಕ್ಕೆ `ಪಂಜಾಬ್ ಸಿಂಹ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಹದಿನಾಲ್ಕು ವರ್ಷಗಳ ಅಜ್ಞಾತವಾಸದ ಬಳಿಕ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್ ಅವರು ಮತ್ತೆ ಪಾಕಿಸ್ತಾನದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.ಭಾರತದೊಂದಿಗೆ ಶಾಂತಿ ಮಾತುಕತೆ ಪುನರಾರಂಭಿಸುವ ಭರವಸೆ ನೀಡಿದ್ದ ಅವರು ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿ ಆಯ್ಕೆ ಸಂಬಂಧ ರಾಷ್ಟ್ರೀಯ ಸಂಸತ್‌ನಲ್ಲಿ ನಡೆದ ಮತದಾನದಲ್ಲಿ ಷರೀಫ್ 244 ಮತಗಳನ್ನು ಪಡೆದರು.ಎಂಕ್ಯುಎಂ, ಜೆಯುಐ-ಎಫ್, ಜಮಾತ್-ಎ-ಇಸ್ಲಾಮಿ ಸೇರಿದಂತೆ ಹಲವಾರು ಪಕ್ಷಗಳು ಅವರನ್ನು ಬೆಂಬಲಿಸಿದವು. ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ಮೊದಲ ವ್ಯಕ್ತಿ ಷರೀಫ್ ಎನ್ನುವುದು ವಿಶೇಷ.1999ರಲ್ಲಿ ಸೇನಾ ಕ್ಷಿಪ್ರ ಕ್ರಾಂತಿಯಲ್ಲಿ ಅಧಿಕಾರ ಕಳೆದುಕೊಂಡು ಸೆರೆವಾಸ ಅನುಭವಿಸಿದ್ದ ಷರೀಫ್ ಏಳು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ದೇಶಾಂತರದಲ್ಲಿದ್ದರು. 2007ರಲ್ಲಿ ಪಾಕ್‌ಗೆ ಮರಳಿದರು.1949ರಲ್ಲಿ ಲಾಹೋರ್‌ನ ಶ್ರೀಮಂತ ಉದ್ದಿಮೆದಾರರ ಕುಟುಂಬದಲ್ಲಿ ಜನನ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ. ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ. ನಂತರ ತಂದೆಯ ಉಕ್ಕು ಕಂಪೆನಿಯಲ್ಲಿ ಕೆಲಸ. ಜಿಯಾ ಉಲ್ ಹಕ್ ಅವಧಿಯಲ್ಲಿ ಹಣಕಾಸು ಸಚಿವರಾಗಿ, 1985-1990ರ ವರೆಗೆ ಪಂಜಾಬ್ ಮುಖ್ಯಮಂತ್ರಿಯಾಗಿ ಹಾಗೂ 1990-93, 1997-99ವರೆಗೆ ಪ್ರಧಾನಿಯಾಗಿ ಕಾರ್ಯನಿರ್ವಹಣೆ.`ಒಗ್ಗಟ್ಟಿನಿಂದ ಸವಾಲು ಎದುರಿಸೋಣ'

`ದೇಶದಲ್ಲಿನ ರಾಜಕೀಯ ಮತ್ತು ಆರ್ಥಿಕ ಸವಾಲುಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮತ್ತು ಹೂಡಿಕೆದಾರರು ಸಾಮೂಹಿಕವಾಗಿ ಎದುರಿಸುವ ಅಗತ್ಯವಿದೆ' ಎಂದು ಪಾಕಿಸ್ತಾನದ ನೂತನ ಪ್ರಧಾನಿ ನವಾಜ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.ಅಧಿಕಾರ ಸ್ವೀಕರಿಸಿದ ಬಳಿಕ ಸಂಸತ್ ಉದ್ದೇಶಿಸಿ ಮಾತನಾಡಿ, `ಪಾಕಿಸ್ತಾನ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳನ್ನು ಕೇವಲ ಒಂದು ರಾಜಕೀಯ ಪಕ್ಷ ಬಗೆಹರಿಸಲು ಸಾಧ್ಯವಿಲ್ಲ' ಎಂದರು.`ದೇಶವನ್ನು ಸಮಸ್ಯೆಯ ಸುಳಿಯಿಂದ ಹೊರತರಲು ಶೀಘ್ರವೇ  ಎಲ್ಲ ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖಂಡರ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳಲಾಗುವುದು. ಅವರೊಂದಿಗೆ ಚರ್ಚಿಸಿದ ಬಳಿಕ ಕಾರ್ಯಕ್ರಮ ರೂಪಿಸಲಾಗುವುದು' ಎಂದೂ ಹೇಳಿದರು.`ಯಾವುದೇ ಕಾರಣಕ್ಕೂ ಭ್ರಷ್ಟಚಾರವನ್ನು ಸಹಿಸಿಕೊಳ್ಳುವುದಿಲ್ಲ. ಎಲ್ಲದಕ್ಕೂ ಉತ್ತರದಾಯಿತ್ವ ಇರುತ್ತದೆ. ಆಡಳಿತದಲ್ಲಿ ಸುಧಾರಣೆ, ಭಯೋತ್ಪಾದನೆ ನಿಯಂತ್ರಣಕ್ಕೆ ಕ್ರಮ, ಯುವಜನರನ್ನು ಮುಖ್ಯವಾಹಿನಿಗೆ ತರುವುದು, ಕಟ್ಟುನಿಟ್ಟಿನಿಂದ ಕಾನೂನು ಜಾರಿಗೊಳಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಬದಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುತ್ತೇನೆ' ಎಂದರು.ನಿಷೇಧಿತ ಉಗ್ರವಾದಿ ಸಂಘಟನೆಗಳಾದ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ ಸೇರಿದಂತೆ ಇತರ ಸಂಘಟನೆಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎನ್ನುವುದರ ಬಗ್ಗೆ ತಮ್ಮ ಭಾಷಣದಲ್ಲಿ ಅವರು ಪ್ರಸ್ತಾಪಿಸಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.