ಮರಳಿ ಮನೆಗೆ ಬರುತ್ತಿವೆ ಮಣ್ಣೆತ್ತುಗಳು

ಭಾನುವಾರ, ಜೂಲೈ 21, 2019
25 °C

ಮರಳಿ ಮನೆಗೆ ಬರುತ್ತಿವೆ ಮಣ್ಣೆತ್ತುಗಳು

Published:
Updated:

ರೈತರು ತಮ್ಮ ಕೃಷಿಗೆ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಅವುಗಳಲ್ಲಿ ಕಾರಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಯು ಒಂದು ಪ್ರಮುಖವಾದ ಆಚರಣೆ.ಎತ್ತು ಹಾಗೂ ಮಣ್ಣನ್ನು ಪೂಜಿಸಿದರೆ ಮಳೆ, ಬೆಳೆಗಳು ಚೆನ್ನಾಗಿ ಬರುತ್ತವೆ ಎಂಬ ನಂಬಿಕೆಯು ರೈತರಲ್ಲಿ ಹಿಂದಿನಿಂದಲೂ ಇದೆ. ಮಣ್ಣು ಹಾಗೂ ಎತ್ತುಗಳ ಪೂಜೆ ಮಾಡುವುದಕ್ಕಾಗಿ ಆಚರಿಸಲ್ಪಡುವ ಮಣ್ಣೆತ್ತಿನ ಅಮವಾಸ್ಯೆಯನ್ನು ಜುಲೈ 8 ರಂದು  ಬಸವನಬಾಗೇವಾಡಿ ತಾಲ್ಲೂಕಿನಾದ್ಯಂತ  ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ.ಮಣ್ಣೆತ್ತಿನ ಅಮಾವಾಸ್ಯೆಯು ಇನ್ನೂ ಹದಿನೈದು ದಿನ ಇರುವಾಗಲೇ ಮಣ್ಣೆತ್ತನ್ನು ತಯಾರಿಸುವುದರಲ್ಲಿ ಕುಂಬಾರರ ಕುಟುಂಬಗಳು ನಿರತರಾಗಿರುತ್ತಾರೆ. ಎತ್ತುಗಳನ್ನು ತಯಾರಿಸುವುದಕ್ಕಾಗಿ ಮಣ್ಣು ಹಾಗೂ ಇತರ ವಸ್ತುಗಳನ್ನು  ಸಂಗ್ರಹಿಸಿಕೊಂಡು ಮನೆಯವರೆಲ್ಲರೂ ಸೇರಿ ಎತ್ತುಗಳನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಮಣ್ಣೆತ್ತುಗಳನ್ನು ಕುಂಬಾರರ ಮನೆಯಲ್ಲಿ ತಯಾರಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಹೀಗಾಗಿ ಕುಂಬಾರ ಕುಟುಂಬದವರು ತಮ್ಮ ಇತರ ಕೆಲಸಗಳನ್ನು ಬಿಟ್ಟು ಮಣ್ಣೆತ್ತು ತಯಾರಕೆಯಲ್ಲಿ ತೊಡಗಿರುತ್ತಾರೆ.ಅಮಾವಾಸ್ಯೆ ದಿನದಂದು ರೈತರು ತಮ್ಮ ಮಕ್ಕಳೊಂದಿಗೆ  ಕುಂಬಾರರ ಮನೆಗೆ  ತೆರಳಿ  ಮಣ್ಣೆತ್ತುಗಳನ್ನು  ತೆಗೆದುಕೊಂಡು ಹೋಗುತ್ತಾರೆ.  ತಂದ ಮಣ್ಣೆತ್ತುಗಳನ್ನು ಮನೆಯ ದೇವರ ಜಗುಲಿಯ ಮೇಲಿಟ್ಟು ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ನಂತರ ಜಗುಲಿ ಇಲ್ಲವೇ ಪಡಸಾಲೆಯ ಮಂಟಪದಲ್ಲಿ ಮಣ್ಣೆತ್ತನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ದಿನಗಳವರೆಗೆ ಪೂಜೆ ನೆರವೇರುತ್ತದೆ. ಐದನೇ ದಿನ ಬಾವಿ ಎಲ್ಲವೇ ಊರ ಮುಂದಿನ ಕೆರೆ, ಹಳ್ಳಗಳಲ್ಲಿ ಮಣ್ಣೆತ್ತುಗಳನ್ನು ವಿಸರ್ಜಿಸುವ  ಕಾರ್ಯಕ್ರಮ ಸಂಭ್ರದಿಂದ ನಡೆಯುತ್ತದೆ.ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ದೊಡ್ಡದಾದ ಮಣ್ಣೆತ್ತನ್ನು  ವಿವಿಧೆಡೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮಣ್ಣೆತ್ತಿನ ಅಮವಾಸ್ಯೆಯ ಕೆಲ ದಿನಗಳ ಮುಂಚೆ ಮಂಟಪ ನಿರ್ಮಿಸಿ ಅದನ್ನು ಅಲಂಕರಿಸಲಾಗುತ್ತದೆ.`ಹಿಂದಿನಿಂದಲೂ ಬಂದ ಸಂಪ್ರದಾಯದಂತೆ ನಮ್ಮ ಮನೆಯಲ್ಲೂ ಮಣ್ಣೆತ್ತುಗಳನ್ನ್ನು ತಯಾರಿಸುತ್ತೇವೆ. ಅಮಾವಾಸ್ಯೆಯು ಹತ್ತು ಹದಿನೈದು ದಿನಗಳು ಇರುವಾಗ ಮಣ್ಣೆತ್ತು ತಯಾರಿಕೆಗೆ ಬೇಕಾಗುವ ಕೆರೆಯ ಮಣ್ಣು, ಕಟ್ಟಿಗೆ ಹೊಟ್ಟು ಹಾಗೂ ಬೂದಿಯನ್ನು ಸಂಗ್ರಹಿಸಿಕೊಂಡು ನಂತರ ಅವುಗಳನ್ನು ಮಿಶ್ರಣಮಾಡಿ ಹದಗೊಳಿಸುತ್ತೇವೆ.ಹದಗೊಂಡ ಮಣ್ಣಿನಿಂದ ಮಣ್ಣೆತ್ತುಗಳನ್ನು ತಯಾರಿಸುತ್ತೇವೆ. ಕುಟುಂಬ ಸದಸ್ಯರೆಲ್ಲರೂ ಸೇರಿ ದಿನಕ್ಕೆ 80 ರಿಂದ 100 ಮಣ್ಣೆತ್ತುಗಳನ್ನು ತಯಾರಿಸುತ್ತೇವೆ. ಹೀಗೆ ಸಾವಿರಾರು ಮಣ್ಣೆತ್ತುಗಳನ್ನು ತಯಾರಿಸಲಾಗುತ್ತದೆ.  ಒಂದು ಜೊಡಿ ಮಣ್ಣೆತ್ತಿಗೆ  10 ರಿಂದ 20 ರೂಪಾಯಿವರೆಗೆ ಮಾರಾಟ ಮಾಡುತ್ತೇವೆ.ಒಂದೆರಡು ವಾರಗಳ ವರೆಗೆ ನಮ್ಮ ಕೆಲಸಗಳನ್ನು ಬಿಟ್ಟು ಕುಟುಂಬ ಸದಸ್ಯೆರಲ್ಲರೂ ಮಣ್ಣೆತ್ತಿನ ತಯಾರಿಕೆಯಲ್ಲಿ ತೊಡಗುತ್ತೇವೆ. ಆದರೆ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ.  ಆದರು ಹಿಂದಿನಿಂದ ಬಂದ ಸಂಪ್ರದಾಯಗಳು ಆಚರಣೆಯಲ್ಲಿ ಇರಬೇಕು ಎಂಬ ಉದ್ದೇಶದಿಂದ ನಮ್ಮ ಹೊಲ ಮನೆಯ ಕೆಲಸಗಳನ್ನು ಬದಿಗೊತ್ತಿ ಮಣ್ಣೆತ್ತುಗಳನ್ನು ತಯಾರಿಸುತ್ತೇವೆ' ಎಂದು ಮಣ್ಣೆತ್ತು ತಯಾರಿಕೆಯಲ್ಲಿ ನಿರತರಾಗಿದ್ದ ಶಿವು ಕುಂಬಾರ ಹಾಗೂ ಶಿವಬಸಮ್ಮ ಕುಂಬಾರ ಹೇಳುತ್ತಾರೆ.ಈ ಮಣ್ಣೆತ್ತುಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸಿರುವವರೆಗೂ ರೈತರ ಮನೆಗಳನ್ನು ಹಬ್ಬದ ವಾತಾವರಣ ಮನೆ ಮಾಡಿರುತ್ತದೆ. ಪ್ರತಿನಿತ್ಯ ಪೂಜೆ ಮಾಡುತ್ತಾ ಭಕ್ತಿ ಭಾವ ಮೆರೆಯುವ ರೈತರು ಉತ್ತಮ ಮಳೆ, ಬೆಳೆ ಮತ್ತು ಸುಂದರ ಬದುಕಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry