ಶನಿವಾರ, ಮೇ 21, 2022
20 °C

ಮರಳು ಅಕ್ರಮ ಸಾಗಣೆ: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮರಳು ಅಕ್ರಮ ಸಾಗಣೆ ತಡೆಯಬೇಕು. ರೈತ ಸೇನೆ ಪ್ರಮುಖರಿಗೆ ಬೆದರಿಕೆ ಒಡ್ಡುತ್ತಿರುವ ಕಾನ್‌ಸ್ಟೆಬಲ್ ಕನ್ನಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರಮುಖರು ಕೋಲಾರದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಅವರಿಗೆ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ವ್ಯಾಪಕ ಮರಳು ದಂಧೆಯ ಬಗ್ಗೆ ಸುಮಾರು 8 ತಿಂಗಳಿನಿಂದ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಗಮನಕ್ಕೆ ತರುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿದಿನ 700 ರಿಂದ 800 ಲಾರಿ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬೆಂಗಳೂರು ಸೇರುತ್ತಿದೆ. ಆದರೂ ಅದನ್ನು ಹತೋಟಿಗೆ ತರಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.ಮರಳು ಲಾರಿಗಳನ್ನು ನಿಲ್ಲಿಸುವಂತೆ, ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಜೂನ್ 1ರಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಅಂದು ರಾತ್ರಿ 10 ಗಂಟೆಗೆ  ಕೋಲಾರ ತಹಸೀಲ್ದಾರ್, ಆರ್.ಟಿ.ಓ, ಗ್ರಾಮಾಂತರ ಪೊಲೀಸರು ಮತ್ತು ಗಣಿ ಇಲಾಖೆ ಸಿಬ್ಬಂದಿ ಟೇಕಲ್ ಮೇಲುಸೇತುವೆ ಬಳಿ 18 ಲಾರಿ ವಶಪಡಿಸಿಕೊಂಡರು.

 

ಇನ್ನಷ್ಟು ಲಾರಿಗಳನ್ನು ಹಿಡಿಯಬಹುದು ಎಂದರೂ ಕಿವಿಗೊಡದೆ ನಿರ್ಗಮಿಸಿದರು. ನಂತರ ಸೇನೆಯೇ ರಾತ್ರಿಯಿಡೀ ಕಾರ್ಯಾಚರಣೆ ಮಾಡಿ 80 ಲಾರಿ ತಡೆದು ನಿಲ್ಲಿಸಿ ಮಾಹಿತಿ ನೀಡಿದರೂ ಪೊಲೀಸರು ಬರಲೇ ಇಲ್ಲ ಎಂದು ದೂರಿದರು.ರಾಜಕೀಯ ಒತ್ತಡ ಮತ್ತು ಮರಳು ಮಾಫಿಯಾದ ಆಮಿಷಗಳಿಗೆ ಒಳಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪ್ರತಿ ಲಾರಿಗೆ ರೂ.15 ಸಾವಿರ ದಂಡ ವಿಧಿಸಿ ಲಾರಿಗಳನ್ನು ಬಿಡುಗಡೆಗೊಳಿಸಿದರು. ಆದರೆ ಭೂ ವಿಜ್ಞಾನ ಕಾಯ್ದೆಯ ಪ್ರಕಾರ, ವಶಪಡಿಸಿಕೊಂಡ ಲಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ವಾಹನ ಮುಟ್ಟುಗೋಲು ಹಾಕಿಕೊಂಡು ಮರಳನ್ನು ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕಿತ್ತು ಎಂದು ಆಕ್ಷೇಪಿಸಿದರು.ಮರಳು ಅಕ್ರಮ ಸಾಗಣೆಯನ್ನು ಒಂದು ವಾರದೊಳಗೆ ತಡೆಯದಿದ್ದರೆ ಸೇನೆಯೇ ಜಿಲ್ಲಾದ್ಯಂತ ಕಾರ್ಯಾಚರಣೆ ನಡೆಸಲಿದೆ. ಅದರಿಂದಾಗುವ ನಷ್ಟ ಮತ್ತು ಹಾನಿಗಳಿಗೆ ಜಿಲ್ಲಾಡಳಿತವೇ ಕಾರಣ ಎಂದು ಎಚ್ಚರಿಸಿದರು.ಬೆದರಿಕೆ: ರೈತ ಸೇನೆಯ ಕಾರ್ಯಕರ್ತರಿಗೆ ಕಾನ್‌ಸ್ಟೆಬಲ್ ಕನ್ನಯ್ಯ ಸತತ ಬೆದರಿಕೆ ಒಡ್ಡುತ್ತಿದ್ದಾರೆ. ಹಣದ ಆಮಿಷವನ್ನೂ ತೋರಿದ್ದಾರೆ. ಸುಮ್ಮನಿರದಿದ್ದರೆ ಬಲವಾದ ಮೊಕದ್ದಮೆ ದಾಖಲಿಸಿ ಶಾಶ್ವತವಾಗಿ ಜೈಲು ಪಾಲು ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂಘಟನೆ ಕಾರ್ಯಕರ್ತರಿಗೆ ತೊಂದರೆಯಾದರೂ ಕನ್ನಯ್ಯ ಅವರೇ ಹೊಣೆಗಾರರು ಎಂದು ಹೇಳಿದರು.ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾರಾಯಣಗೌಡ, ಎಚ್.ವಿ.ಹರಿಕುಮಾರ್, ಕೃಷ್ಣಪ್ಪ, ಅಮರ ನಾರಾಯಣಸ್ವಾಮಿ, ಮುನಿಸ್ವಾಮಿ ಗೌಡ, ಸೋಮಶೇಖರ್, ಶಾಮಣ್ಣ, ಕೂಟೇರಿ ನಾಗರಾಜ್, ಕೆಂಬೋಡಿ ಕೃಷ್ಣೇಗೌಡ, ಬಿಸನಹಳ್ಳಿ ಹರಿನಾಥ್,  ಸಂಚಾಲಕರಾದ ಕೆ.ಶ್ರೀನಿವಾಸಗೌಡ, ನೀಲಕಂಠಪುರ ಮುನೇಗೌಡ, ಜಗದೀಶ್, ಮುರಳಿ ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.