ಮಂಗಳವಾರ, ಮೇ 11, 2021
24 °C
ಗೃಹ ಸಚಿವರ ಮುಂದೆ ಮರಿದೇವರ ಆರೋಪ; ಅಧಿಕಾರಿಗಳ ವಿರುದ್ಧ ಆಕ್ರೋಶ

`ಮರಳು ಗಣಿಗಾರಿಕೆಯಲ್ಲಿ ಪೊಲೀಸರು ಭಾಗಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: `ಜಿಲ್ಲೆಯಲ್ಲಿ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಅರ್ಕಾವತಿ ನದಿ ತೀರದಲ್ಲಿ ಅವ್ಯಾಹತ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು' ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಹಲವು ವಿಷಯಗಳನ್ನು ಗೃಹ ಸಚಿವರೂ ಆದ ಜಾರ್ಜ್ ಅವರ ಗಮನಕ್ಕೆ ತಂದರು.`ಮೂವರು ಸಿಪಿಐಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ' ಎಂದು ಅವರು ಆರೋಪ ಮಾಡಿದರು.`ಅಕ್ರಮ ಮರಳುಗಾರಿಕೆಯಿಂದ ಜಿಲ್ಲೆಯಲ್ಲಿ ಪರಿಸರ ಮತ್ತು ಅಂತರ್ಜಲ ನಾಶವಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಬೇಕು. ಈ ದಂಧೆಯಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಅವರು ಆಗ್ರಹಿಸಿದರು.ಪಹಣಿಯಲ್ಲಿ ದೋಷ: ರೈತರು ಪಡೆಯುತ್ತಿರುವ ಪಹಣಿಯಲ್ಲಿ ಸಾಕಷ್ಟು ಲೋಪ ದೋಷಗಳು ಕಂಡು ಬರುತ್ತಿವೆ. ಅಲ್ಲದೆ ಜಿಲ್ಲಾ ಕೇಂದ್ರದಲ್ಲಿರುವ ಪಹಣಿ ಕೇಂದ್ರದಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಲೋಪಗಳನ್ನು ಪರಿಹರಿಸಿ, ಹೆಚ್ಚುವರಿ ಪಹಣಿ ವಿತರಣಾ ಕೇಂದ್ರ ಸ್ಥಾಪನೆಗೆ ಆದೇಶಿಸುವಂತೆ ಅವರು ಕೋರಿದರು.ದೊಡ್ಡ ಮಣ್ಣುಗುಡ್ಡೆ ಜಮೀನಿಗೆ ಸಂಬಂಧಿಸಿದಂತೆ ಕಣ್ವ ನಿರಾಶ್ರಿತರಿಗೆ ಜಮೀನು ಹಂಚಿಕೆ ಮಾಡಿದ್ದು, ಆ ಸಂದರ್ಭದಲ್ಲಿ `ಪಿ' ನಂಬರ್ ಆಗಿರುವುದರಿಂದ ಅಣ್ಣ ತಮ್ಮಂದಿರು ಖಾತೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.  ರೈತರಿಗೆ ಪಹಣಿ ಮತ್ತು ಖಾತೆ ಮಾಡಿಸಲು ಪ್ರತ್ಯೇಕ ಪೋಡಿ ದುರಸ್ತಿ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎ. ಮಂಜುನಾಥ್ ಮಾತನಾಡಿ, `ಬಿಡದಿ ಬಳಿಯ ಬೈರಮಂಗಲ ಜಲಾಶಯ ವ್ಯಾಪ್ತಿಯ ಸುಮಾರು 18,000 ಹೆಕ್ಟೇರ್ ಭೂಮಿ ಸಂಪೂರ್ಣ ಕಲುಷಿತವಾಗಿದೆ. ಬೆಂಗಳೂರಿನ ವಿಷಕಾರಿ ನೀರಿನಿಂದಾಗಿ ಭೂಮಿ ಸಾರವನ್ನೇ ಕಳೆದುಕೊಂಡಿದೆ. ಅಲ್ಲದೆ ವಿಷಯುಕ್ತವಾಗಿದೆ. ಇದರಿಂದ ಬೆಳೆಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಜಲಾಶಯಕ್ಕೆ ಹಾಕಿದ್ದ ಕಬ್ಬಿಣದ ಗೇಟುಗಳು ಕರಗಿ ಹೋಗಿದ್ದು, ಸದಾ ಕಲುಷಿತ ನೀರು ಹರಿಯುವಂತಾಗಿದೆ. ಆದ್ದರಿಂದ ಈ ಭಾಗದಲ್ಲಿ ತುರ್ತಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಹಾಗೂ ಜಲಾಶಯಕ್ಕೆ ಹೊಸ ಗೇಟುಗಳನ್ನು ಅಳವಡಿಸಬೇಕು' ಎಂದು ಒತ್ತಾಯಿಸಿದರು.ಮಾಗಡಿ ಪಿಡಬ್ಲ್ಯುಡಿ ಉಪ ವಿಭಾಗದಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚಿನ ಕಾಮಗಾರಿಯಲ್ಲಿ ಹಗರಣ ನಡೆದಿದ್ದು, ಅದನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಅವರು ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್‌ಸಮಿತಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಮಾತನಾಡಿ, ಕಳೆದ ಚುನಾವಣೆಗಳಲ್ಲಿ ಬಡ ಮತ್ತು ನಿವೇಶನ ರಹಿತರಿಗೆ ನಿವೇಶನ ನೀಡುವ ಭರವಸೆಯನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಬಡವರಿಗೆ ನಿವೇಶನ ಒದಗಿಸುವ ಕಾರ್ಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನರ ಬಳಿ ಹೋಗಲು ಸಾಧ್ಯವಾಗುತ್ತದೆ ಎಂದರು.ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಂಚನಬೆಲೆ ಯೋಜನೆಯನ್ನು ಕಾರ್ಯ ರೂಪಕ್ಕೆ ತರಬೇಕು. ಟಿ.ಕೆ. ಹಳ್ಳಿಯಿಂದ ರಾಮನಗರಕ್ಕೆ ಪ್ರತ್ಯೇಕ ಕೊಳವೆ ಮಾರ್ಗ ರೂಪಿಸಬೇಕು ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.