ಮರಳು ಗಣಿಗಾರಿಕೆ: ಅಂತರ್ಜಲ ಕುಸಿತ

ಶುಕ್ರವಾರ, ಜೂಲೈ 19, 2019
26 °C

ಮರಳು ಗಣಿಗಾರಿಕೆ: ಅಂತರ್ಜಲ ಕುಸಿತ

Published:
Updated:

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿದ್ದು, ಅಂತರ್ಜಲ ಬರಿದಾಗುತ್ತಿದೆ.

ದಿನಂಪ್ರತಿ ಲಾರಿಗಳಲ್ಲಿ ಮತ್ತು ಟ್ರಾಕ್ಟರ್‌ಗಳಲ್ಲಿ ಲೋಡ್‌ಗಟ್ಟಲೆ ಅಕ್ರಮವಾಗಿ ಮರಳು  ಸಾಗಣೆಯಾಗುತ್ತಿದ್ದು, ಪ್ರಕೃತಿ ಸಂಪತ್ತು ಕಣ್ಣೆದುರಿಗೇ ಬರಿದಾಗುತ್ತಿದ್ದರೂ ಸಂಬಂಧಿಸಿದವರು ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಸಂಜೆಯಾಗುತ್ತಿದ್ದಂತೆ ಲಾರಿ ಹಾಗೂ ಟ್ರಾಕ್ಟರ್ ಮೂಲಕ ಮರಳು ರವಾನೆಯಾಗುತ್ತಿದೆ. ಇದರಲ್ಲಿ ಸ್ಥಳೀಯ ಪ್ರಭಾವಿಗಳು ತೊಡಗಿದ್ದು, ಪ್ರಭಾವಿಗಳಿಗೆ ರಾಜಕಾರಣ ಭದ್ರತೆ ಒದಗಿಸುತ್ತಿದೆ ಎಂದು ರೈತರ ಆರೋಪಿಸುತ್ತಾರೆ.

ನದಿ ಪಾತ್ರದಲ್ಲಿರುವ ರೈತರ ಕೃಷಿ ಭೂಮಿಯನ್ನು ಕೊಳ್ಳುತ್ತಿರುವ ಉದ್ಯಮಿಗಳು, ಆ ಭೂಮಿಯಲ್ಲಿ ಮರಳು ತೆಗೆಯುತ್ತಾ, ನದಿಪಾತ್ರಕ್ಕೆ ಸಂಚಕಾರ ತಂದಿದ್ದಾರೆ. ಕೃಷಿ ಭೂಮಿಯನ್ನು ಅಕ್ರಮವಾಗಿ ಕಂದಾಯ ಭೂಮಿಯಂತೆ ಮಾಡಿಕೊಂಡು ಮರಳು ತೆಗೆಯುತ್ತಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ಯಾವುದಕ್ಕೂ ತಲೆಕಡಿಸಿಕೊಂಡಿಲ್ಲ.

ಅಂತರ್ಜಲ ಕುಸಿತ: ಮೇಲಿಂದ ಮೇಲೆ ನದಿ ಪಾತ್ರದಲ್ಲಿ ಮರಳು ತೆಗೆಯುತ್ತಿರುವುದರಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದ್ದು, ನದಿಪಾತ್ರದ ಹಳ್ಳಿಗಳಲ್ಲಿ ಅಂತರ್ಜಲ ಪಾತಾಳಕ್ಕಿಳಿದಿದೆ. 100-200 ಅಡಿಗಳಷ್ಟು ಬೋರ್ ಕೊರೆದರೆ ಉಕ್ಕುತ್ತಿದ್ದ ನೀರು 800-900 ಅಡಿಗಳಷ್ಟು ಕೊರೆದರೂ ಕಾಣುತ್ತಿಲ್ಲ.

ಪರಿಣಾಮ ನದಿಪಾತ್ರದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಬೇಸಿಗೆಯಲ್ಲಿ ಜನ-ಜಾನುವಾರುಗಳು ಪರಿತಾಪ ಎದುರಿಸುವಂತಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಕಾರ್ಮಿಕರ ಬಲಿ: ಪ್ರಕೃತಿ ಸಂಪತ್ತು ಕಣ್ಮರೆಯಾಗುತ್ತಿರುವ ಜೊತೆಗೆ ಕೆಲಸ ಮಾಡುವ ಕಾರ್ಮಿಕರನ್ನೂ ಸಹ ಈ ದಂಧೆ ಬಲಿ ಪಡೆಯುತ್ತಿದ್ದು, ಈವರೆಗೆ ಸುಮಾರು 10-15 ಮಂದಿ ಕಾರ್ಮಿಕರು ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದಾರೆ.

ಇವುಗಳಲ್ಲಿ ಕೆಲವು ಪ್ರಕರಣಗಳು ಹೊರಗೆ ಬಂದರೂ ಇನ್ನೂ ಕೆಲವು ಮರಳಿನಲ್ಲೇ ಹುದುಗಿಹೋಗಿವೆ. ಉದ್ಯಮಿಗಳು ಪೊಲೀಸ್ ಠಾಣೆಯವರೆಗೆ ಪ್ರಕರಣ ಬಿಟ್ಟುಕೊಡದೆ ರಾಜಿ ಸಂಧಾನದ ಮೂಲಕ ಕೇಸ್ ಖಲಾಸ್ ಮಾಡಿದ್ದಾರೆ.

ಪ್ರತಿಭಟನೆಗೆ ಡೋಂಟ್ ಕೇರ್!:  ತಾಲ್ಲೂಕಿನಲ್ಲಿ ಮರಳು ಗಣಿಗಾರಿಕೆಗೆ ನಿರ್ಬಂಧದ ಹೇರಲಾಗಿದೆಯಾದರೂ ಅದು ಕಡತಕ್ಕಷ್ಟೇ ಸೀಮಿತವಾಗಿದೆ. ಅಕ್ರಮವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ನಿಯಂತ್ರಿಸುವಂತೆ ಹಲವು ಬಾರಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಅವರ ಧರಣಿಗೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ.

ಪ್ರತಿ ಬಾರಿ ಮರಳು ದಂಧೆಗೆ ಕಾರ್ಮಿಕರು ಬಲಿಯಾದಾಗ ಪ್ರತಿಭಟನೆ ನಡೆಸಿದ್ದ ಸಂಘಟನೆಗಳು ಈಗ ತಮ್ಮ ಪ್ರತಿಭಟನೆಗೆ ಕಿಮ್ಮತ್ತು ಸಿಗದಿದ್ದರಿಂದ ಪ್ರತಿಭಟನೆ ನಡೆಸುವುದನ್ನೇ ನಿಲ್ಲಿಸಿವೆ. ತಾಲ್ಲೂಕು ಆಡಳಿತ ಇದನ್ನು ನಿಯಂತ್ರಿಸುವಲ್ಲಿ ನಿಷ್ಕ್ರಿಯವಾಗಿದ್ದು, ಜಿಲ್ಲಾಡಳಿತವಾದರೂ ಮರಳು ಗಣಿಗಾರಿಕೆ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘಟನೆಗಳು ಪ್ರತಿಭಟನೆಗಳ ಮೂಲಕ ಒತ್ತಾಯಿಸಿವೆ.

ದಾಖಲೆಗಾಗಿ ದಾಳಿ: ಮರಳು ಗಣಿಗಾರಿಕೆ ನಿಲ್ಲಿಸುವ ಕೂಗು ಆಗಾಗ ಕೇಳಿಬರುತ್ತಿರುವುದರಿಂದ ಅಧಿಕಾರಿಗಳು ಅಲ್ಲಲ್ಲಿ ಒಂದೆರಡು ದೂರುಗಳನ್ನು ದಾಖಲಿಸಿಕೊಂಡು ಲಾರಿಗಳನ್ನು ಹಿಡಿಯುವ ನಾಟಕವಾಡುತ್ತಾರೆ ಎಂದು ನದಿ ಪಾತ್ರದ ಗ್ರಾಮಸ್ಥರು ಆರೋಪಿಸುತ್ತಾರೆ.

ರಾತ್ರಿವೇಳೆಯಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಮರಳು ಗಣಿಗಾರಿಕೆ ನಡೆಸುತ್ತಿರುವ ಮಂದಿಯೊಂದಿಗೆ ಅಧಿಕಾರಿಗಳು ಒಡನಾಟವಿರಿಸಿಕೊಂಡಿರುವುದರಿಂದ ಸ್ಥಳಕ್ಕೆ ಧಾವಿಸುವಲ್ಲಿ ಹಿಂದೇಟು ಹಾಕುತ್ತಾರೆ. ಇನ್ನೂ ನಿಯಂತ್ರಣ ಎಲ್ಲಿಂದ ಸಾಧ್ಯ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.  ಒಟ್ಟಾರೆ ಪ್ರಕೃತಿ ಸಂಪತ್ತು ಕಣ್ಮುಂದೆಯೇ ಕಾಣೆಯಾಗುತ್ತಿದ್ದು, ಇದನ್ನು ಉಳಿಸಲು ಅಧಿಕಾರಿಗಳು ಕಿಂಚಿತ್ತಾದರೂ ಶ್ರಮಿಸಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಅಧಿಕಾರಿಗಳು ಮಾತ್ರವಲ್ಲದೆ ಇಡೀ ತಾಲ್ಲೂಕಿನ ಜನತೆಯೇ ಎದುರಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry