ಮರಳು ಗಣಿಗಾರಿಕೆ ನಿಷೇಧಕ್ಕೆ ಜಿಲ್ಲಾಡಳಿತ ಸಜ್ಜು

ಶನಿವಾರ, ಜೂಲೈ 20, 2019
22 °C
ಮಲಪ್ರಭಾ ನದಿ ಪಥ ಬದಲಿಸುವ ಶಂಕೆ

ಮರಳು ಗಣಿಗಾರಿಕೆ ನಿಷೇಧಕ್ಕೆ ಜಿಲ್ಲಾಡಳಿತ ಸಜ್ಜು

Published:
Updated:

ಬಾಗಲಕೋಟೆ: ಅಕ್ರಮ ಮರಳುಗಾರಿಕೆಯಿಂದ ತನ್ನ ಹರಿಯುವ ಪಥವನ್ನೇ ಬದಲಿಸುವ ಅಪಾಯದ ಹಂತ ತಲುಪಿರುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಸಂಪೂರ್ಣ ಕಡಿವಾಣ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ.ಅಕ್ರಮ ಮರಳುಗಾರಿಕೆಯಿಂದ ನದಿಗೆ ಅಪಾಯ ಎದುರಾಗಿರುವ ಕುರಿತು ಜೂನ್‌ನಲ್ಲಿ `ಪ್ರಜಾವಾಣಿ'ಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ  ಈಗ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧಿಸಲು ಮುಂದಾಗಿದೆ.ಬೆಳಗಾವಿ ಜಿಲ್ಲೆಯಿಂದ ಹರಿದುಬರುವ ಮಲಪ್ರಭಾ ನದಿ ಬಾದಾಮಿ ತಾಲ್ಲೂಕಿನ ಹಾಗನೂರು ಬಳಿ ಬಾಗಲಕೋಟೆ ಜಿಲ್ಲೆಯನ್ನು ಪ್ರವೇಶಿಸುತ್ತದೆ. ನದಿಯ ಬಲಭಾಗ ಗದಗ ಮತ್ತು ಎಡ ಭಾಗ ಬಾಗಲಕೋಟೆ ಜಿಲ್ಲೆ ಇದ್ದು, ಎರಡೂ ಜಿಲ್ಲೆಗಳಿಗೆ ಈ ನದಿಯೇ ಸರಹದ್ದು ಆಗಿದೆ.ಬಾದಾಮಿ ಮತ್ತು ಹುನಗುಂದ ತಾಲ್ಲೂಕಿನ ಮೂಲಕ ಹರಿದು ಮುಂದೆ ಕೂಡಲಸಂಗಮದಲ್ಲಿ ಕೃಷ್ಣಾ ನದಿ ಸೇರಿಕೊಳ್ಳುವ ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಎರಡೂ ಜಿಲ್ಲೆಯಿಂದ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದ ನದಿ ತನ್ನ ಮೂಲ ರೂಪವನ್ನು ಕಳೆದುಕೊಂಡಿದೆ.ಮಲಪ್ರಭಾ ಹರಿಯುವ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ಖ್ಯಾಡ, ಜಾಲಿಹಾಳ, ಚೊಳಚಗುಡ್ಡ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ ಮತ್ತು ಹಾಗೂ ಹುನಗುಂದ ತಾಲ್ಲೂಕಿನ ಕಮತಗಿ, ಹೂವನೂರು, ನಂದನೂರು, ಗಂಜಿಹಾಳ, ಚಿಕ್ಕಮಲಗಾವಿ, ಹಿರೆಮಳಗಾವಿ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ.ಮಲಪ್ರಭಾ ನದಿ ವ್ಯಾಪ್ತಿಯಲ್ಲಿ ಇರುವ ಖ್ಯಾಡ ಗ್ರಾಮದಲ್ಲಿ ಇತಿಹಾಸ ಸಂಶೋಧಕರು ಪತ್ತೆಹಚ್ಚಿರುವ ಪ್ರಾಚೀನ ಮಾನವ ನಾಗರಿಕತೆಗೆ ಸಂಬಂಧಪಟ್ಟ ಅವಶೇಷಗಳಿಗೂ ಅಕ್ರಮ ಮರಳುಗಾರಿಕೆಯಿಂದ  ಹಾನಿಯಾಗುತ್ತಿರುವುದರಿಂದ ಈ ಸ್ಥಳವನ್ನು ಸಂರಕ್ಷಿಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೂಡ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು.ಅಕ್ರಮ ಮರಳುಗಾರಿಕೆಗೆ ಸ್ಥಳೀಯ ರಾಜಕಾರಣಿಗಳು ಮತ್ತು ಪೊಲೀಸರು ಬೆಂಗಾವಲಾಗಿ ನಿಂತಿರುವುದರಿಂದ ಅಕ್ರಮ ತಡೆಯಲು ಟಾಸ್ಕ್ ಪೋರ್ಸ್‌ಗೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಅಕ್ರಮ ಮರಳುಗಾರಿಕೆ ತಡೆಯಲು ಮುಂದಾಗುವ ಅಧಿಕಾರಿಗಳಿಗೆ ಜೀವ ಬೆದರಿಕೆ ಒಡ್ಡಲಾಗುತ್ತಿತ್ತು.ಅಕ್ರಮ ಮರಳುಗಾರಿಕೆ ಮೇಲೆ ಇತ್ತೀಚೆಗೆ ಟಾರ್ಸ್ಕ್ ಪೋರ್ಸ್ ತಂಡ ದಾಳಿ ನಡೆಸಿದಾಗ ಬಾದಾಮಿ ಪೊಲೀಸ್ ಠಾಣೆಯ ಸಿಬ್ಬಂದಿಯ ಮಗನೇ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವುದು ಬಯಲಾಗಿದ್ದು, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ, `ಮಲಪ್ರಭಾ ನದಿಯನ್ನು ಜೀವಂತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮರಳುಗಾರಿಕೆ ಸಂಪೂರ್ಣ ನಿಷೇಧಿಸಿ ಶೀಘ್ರದಲ್ಲೆ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ' ಎಂದರು.`ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ನಡುವೆ ನದಿ ಹರಿಯುತ್ತಿರುವುದರಿಂದ ಎರಡೂ ಜಿಲ್ಲೆಗಳು ಜಂಟಿಯಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಹಾಗಾದಾಗ ಮಾತ್ರ ಮಲಪ್ರಭಾ ನದಿಯಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಗೆ ಅಂತ್ಯ ಹಾಡಬಹುದಾಗಿದೆ. ಈ ಸಂಬಂಧ ಗದಗ ಜಿಲ್ಲಾಧಿಕಾರಿ ಅವರೊಡನೆ ಚರ್ಚಿಸುವೆ' ಎಂದು ಕುಂಜಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry