ಗುರುವಾರ , ಮೇ 6, 2021
31 °C
ಜಿ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್

ಮರಳು ಡಿಪೊ ತೆರೆಯಲು 3 ತಿಂಗಳ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಅಕ್ರಮ ಮರಳು ದಂಧೆ ತಡೆಗಟ್ಟಲು ಜಿಲ್ಲೆಯಲ್ಲಿ ಮೂರು ತಿಂಗಳೊಳಗೆ ಮರಳು ಡಿಪೊ ತೆರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಬಗ್ಗೆ ಗಂಭೀರ ಚರ್ಚೆಯಾಯಿತು.ಜಿಲ್ಲೆಯ ಶಾಸಕರು ಪಕ್ಷ ಭೇದ ಮರೆತು, ಅಕ್ರಮ ಮರಳು ದಂಧೆ ಹತ್ತಿಕ್ಕಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದರು. ಮರ್ಲೆಯಲ್ಲಿನ ಅಕ್ರಮ ಮರಳು ದಾಸ್ತಾನು ಪ್ರಕರಣ ಸಭೆಯಲ್ಲಿ ಚರ್ಚೆಗೆ ಬಂದು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮತ್ತು ಶಾಸಕ ಸಿ.ಟಿ.ರವಿ ನಡುವೆ ವಾಗ್ವಾದ ನಡೆಯಿತು.ಮರ್ಲೆ ಕ್ರಸರ್‌ನಲ್ಲಿ ಸಾವಿರಕ್ಕೂ ಹೆಚ್ಚು ಲೋಡ್ ದಾಸ್ತಾನು ಇತ್ತು. ಇದನ್ನು ರೈತ ಸಂಘದವರು ಪತ್ತೆ ಹಚ್ಚಿ, ಮುಟ್ಟುಗೋಲು ಹಾಕುವಂತೆ ಮಾಡಿದ್ದರು. ಆದರೆ, ಅಧಿಕಾರಿಗಳು ಕೇವಲ 300 ಲೋಡ್ ಮರಳಿದೆ ಎಂದು ವರದಿ ನೀಡಿ, ಅಕ್ರಮ ಮರಳು ಪತ್ತೆ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಹರಿಹಾಯ್ದ ಗಾಯತ್ರಿ, ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಶಾಸಕ ಸಿ.ಟಿ.ರವಿ, ಮರ್ಲೆ ಕ್ರಷರ್‌ನಲ್ಲಿ ಅಕ್ರಮ ಮರಳಿದ್ದರೆ ಅಧಿಕಾರಿಗಳು ಈಗಲೂ ವಶಕ್ಕೆ ಪಡೆದು ಹರಾಜು ಹಾಕಬಹುದು. ಸರ್ಕಾರಿ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರ ಪರ್ಮಿಟ್ ಇರುವ ಮರಳು ದಾಸ್ತಾನು ಮಾಡಿಕೊಂಡಿದ್ದಾರೆ. ಆದರೆ, ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ಕಡೆಯಿಂದ ಪರ್ಮಿಟ್ ಮರಳು ಸಿಗುವ ವ್ಯವಸ್ಥೆ ಆಗಲಿಲ್ಲ. ಇನ್ನೊಂದು ಕಡೆ ಅಕ್ರಮ ಮರಳು ದಂಧೆ ತಡೆಗಟ್ಟುವ ಕೆಲಸ ಆಗಲಿಲ್ಲ. ಕೆಲವು ಸಂಘಟನೆಗಳು ಅಕ್ರಮ ಮರಳು ದಂಧೆಯಲ್ಲಿ ಕೈಜೋಡಿಸಿವೆ ಎಂದು ದೂರಿದರು.ಈ ಪ್ರಕರಣದ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವರು, ಅಕ್ರಮ ಮರಳು ದಂಧೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಸುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆದು, ಈ ಯೋಜನೆ ಅವ್ಯವಹಾರದ ಹುತ್ತವಾಗಿದೆ. ಸುಳ್ಳು ದಾಖಲೆ ತೋರಿಸಿ ಬಿಲ್ ಮಾಡಿಕೊಳ್ಳುವುದು ನಡೆಯುತ್ತಿದೆ. ಯಾವುದೇ ಆಸ್ತಿ ನಿರ್ಮಾಣ ಆಗುತ್ತಿಲ್ಲ. ಕಾಮಗಾರಿಯಲ್ಲಿ ಜೆಸಿಬಿ ಬಳಸಿದರೆ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಒತ್ತಾಯಿಸಿದಾಗ ಶಾಸಕರೆಲ್ಲರೂ ಪಕ್ಷಭೇದ ಮರೆತು ಬೆಂಬಲಿಸಿದರು.ಮೆಸ್ಕಾಂ ಕಾರ್ಯ ವೈಖರಿಗೆ ಬಹುತೇಕ ಎಲ್ಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಕುಡಿಯುವ ನೀರಿನ ಸೌಲಭ್ಯ ಮತ್ತು ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ವಿರುದ್ಧ ಹರಿಹಾಯ್ದರು.ಕುಡಿಯುವ ನೀರಿನ ಯೋಜನೆಗಳಿಗೆ ಇನ್ನು 15 ದಿನಗಳೊಳಗೆ ವಿದ್ಯುತ್ ಸಂಪರ್ಕ ನೀಡುವುದಾಗಿ ಎಂಜಿನಿಯರ್ ವಿಜಯ್‌ಕುಮಾರ್ ಸಭೆಗೆ ತಿಳಿಸಿದರು. ಹಾಗೆಯೇ ಶೃಂಗೇರಿ ತಾಲ್ಲೂಕಿನ ಕಾರ್ಲೆ ಹಾಗೂ ಮೆಣಸಿನ ಹಾಡ್ಯ, ಬೆಂಡೆಹಕ್ಲು ಗ್ರಾಮಗಳಿಗೆ ಇನ್ನು 3 ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಒಪ್ಪಿಕೊಂಡರು.ಎನ್.ಆರ್.ಪುರ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ಮೊರಾರ್ಜಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ ವಿಳಂಬವಾಗಿರುವ ಬಗ್ಗೆ ಶಾಸಕ ಡಿ.ಎನ್.ಜೀವರಾಜ್ ಪ್ರಸ್ತಾಪಿಸಿದಾಗ, ಜಿ.ಪಂ. ಸಿಇಒ ಇದಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹೊಣೆ ಎಂದು ಸಮಜಾಯಿಷಿ ನೀಡಲು ಮುಂದಾದರು. ಸಿಇಒ ವಿರುದ್ಧ ಹರಿಹಾಯ್ದ ಶಾಸಕರು, ನಮ್ಮ ಜವಾಬ್ದಾರಿ ಏನೂ ಇಲ್ಲವೆನ್ನುವಂತೆ ಉತ್ತರ ನೀಡಬಾರದು. ವಿಳಂಬವಾಗುತ್ತಿರುವುದಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ನೋಟೀಸ್ ಕೊಡಬೇಕು ಎಂದು ಪಟ್ಟು ಹಿಡಿದರು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸ್ಥೆಗೆ ಜಿಲ್ಲಾ ಪಂಚಾಯಿತಿಯಿಂದ ನೋಟಿಸ್ ಕಳುಹಿಸುವಂತೆ ಸಚಿವರು ಸೂಚನೆ ನೀಡಿದರು. ಕೆಮ್ಮಣ್ಣು ಗುಂಡಿ ವಿಹಾರಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅನುಮತಿ ನೀಡುತ್ತಿಲ್ಲ ಎಂದು ತರೀಕೆರೆ ಶಾಸಕ ಜಿ.ಎಚ್.ಶ್ರಿನಿವಾಸ್ ಪ್ರಸ್ತಾಪಿಸಿದರು. ಕಾಂಕ್ರಿಟ್ ರಸ್ತೆ ಮಾಡಲು ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ವನ್ಯಜೀವಿ ವಿಭಾಗದ ಡಿಎಫ್‌ಓ ಕೃಷ್ಣ ಉದುಪುಡಿ ವನ್ಯಜೀವಿ ಕಾಯ್ದೆ ಪ್ರಕಾರ ಕಾಂಕ್ರಿಟ್ ರಸ್ತೆ ನಿರ್ಮಿಸಲು ಮತ್ತು ರಸ್ತೆ ಮೇಲ್ದರ್ಜೆಗೇರಿಸಲು ಅವಕಾಶ ಇಲ್ಲ. ವನ್ಯಜೀವಿ ರಾಷ್ಟ್ರೀಯ ಮಂಡಳಿಯಿಂದ ಅನುಮತಿ ಪಡೆದು ಮುಂದುವರಿಯಬೇಕು ಎಂದರು. ಸಂಸದ ಜಯಪ್ರಕಾಶ್ ಹೆಗ್ಡೆ ಈ ಬಗ್ಗೆ ವನ್ಯಜೀವಿ ರಾಷ್ಟ್ರೀಯ ಮಂಡಳಿಯ ಗಮನಕ್ಕೆ ತಂದು, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು,

ಸಿಡಿಲು ಬಡಿದು ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡುವ ಪರಿಹಾರದ ಚೆಕ್ ವಿತರಣೆಯಲ್ಲಿ ಚಿಕ್ಕಮಗಳೂರು ತಹಸೀಲ್ದಾರ್ ಹಕ್ಕು ಚ್ಯುತಿ ಎಸಗಿದ್ದಾರೆ. ಕೇಳಿದರೆ ಉಡಾಫೆ ಉತ್ತರ ನೀಡಿದ್ದಾರೆ. ತಹಸೀಲ್ದಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸುವುದಾಗಿ ಶಾಸಕ ರವಿ ಸಚಿವರ ಗಮನಕ್ಕೆ ತಂದರು. ರವಿ ಪ್ರಸ್ತಾಪಿಸಿದ ವಿಷಯಕ್ಕೆ ಶಾಸಕರಾದ ಜೀವರಾಜ್, ವೈ.ಎಸ್.ವಿ.ದತ್ತ, ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯೆ ಮೋಟಮ್ಮ ದನಿಗೂಡಿಸಿದರು. ಸಂಬಂಧಿಸಿದ ತಹಶೀಲ್ದಾರ್ ವಿಚಾರಣೆ ನಡೆಸಿ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿ ವಿ.ಯಶವಂತ್, ಜಿ.ಪಂ. ಸಿಇಒ ಶಿವಶಂಕರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.