ಮರಳು ದಂದೆ ತಡೆಗೆ ಕ್ರಮ

7

ಮರಳು ದಂದೆ ತಡೆಗೆ ಕ್ರಮ

Published:
Updated:

ರಾಮನಗರ: ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧವಾಗಿದ್ದರೂ ಅವ್ಯಾಹತವಾಗಿ ನಡೆಯುತ್ತಿರುವ ಈ ದಂದೆಗೆ ಕಡಿವಾಣ ಹಾಕಲು ಅಗ್ನಿಶಾಮಕ ದಳದ ನುರಿತ ಸಿಬ್ಬಂದಿ ಮತ್ತು ರಬ್ಬರ್ ಬೋಟ್‌ಗಳನ್ನು ತರಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.ಜಿಲ್ಲೆಯ ಅರ್ಕಾವತಿ ನದಿ ತೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣೆಕೆ ತಯಲು ಈಗಾಗಲೇ ಜಿಲ್ಲಾ ಮೀಸಲು ಪಡೆಯ ನೆರವು ಪಡೆದಿರುವ ಟಾಸ್ಕ್‌ಫೋರ್ಸ್‌ಗೆ ಅಗ್ನಿಶಾಮಕ ದಳದ ನುರಿತ ಸಿಬ್ಬಂದಿ ಸೇರ್ಪಡೆಯಾದರೆ ಆನೆ ಬಲ ಬಂದಂತಾಗುತ್ತದೆ.ಅಕ್ರಮ ಮರಳು ಹಾಗೂ ಮರಳು ಫಿಲ್ಟರ್ ದಂದೆ ನಡೆಸುತ್ತಿರುವ ಸಾಕಷ್ಟು ಜನರು ಲಕ್ಷಾಂತರ ರೂಪಾಯಿ ಮೌಲ್ಯದ `ಬೋಟ್~ಗಳನ್ನು ಬಳಸುತ್ತಿದ್ದಾರೆ. ಟಾಸ್ಕ್‌ಫೋರ್ಸ್ ತಂಡ ಕಾರ್ಯಾಚರಣೆಗೆ ಇಳಿದ ಕೂಡಲೇ ಮರಳು ದಂದೆಕೋರರು ಬೋಟ್‌ಗಳನ್ನು ನೀರಿನೊಳಗೆ ಮುಳುಗಿಸಿ ತಂಡಕ್ಕೆ ಅಕ್ರಮ ಮರಳುಗಾರಿಕೆ ಗೊತ್ತಾಗದಂತೆ ಸಂಚು ರೂಪಿಸಿದ್ದಾರೆ.ಮರಳು ಕಳ್ಳರ ಈ ಸಂಚನ್ನು ಛೇದಿಸುವ ಉದ್ದೇಶದಿಂದ ಅಗ್ನಿಶಾಮಕದ ದಳದ ನುರಿತ ಸಿಬ್ಬಂದಿಯ ನೆರವು ಬೇಕು ಎಂದು ಈಗಾಗಲೇ ಅಗ್ನಿ ಶಾಮಕ ದಳದ ಜಿಲ್ಲಾ ಮುಖ್ಯಸ್ಥರು ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಎಂಟರಿಂದ 10 ದಿನಗಳಲ್ಲಿ ಸುಸಜ್ಜಿತ ಪಡೆಯನ್ನು ಕಳುಹಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಹಶೀಲ್ದಾರ್ ಡಾ. ರವಿ ತಿರ್ಲಾಪುರ ಅವರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಬೋಟ್‌ಗಳ ನಾಶಕ್ಕೆ ಬೋಟ್ ಬಳಕೆ: ಈ ಪಡೆಯಲ್ಲಿ ಈಜಾಡಲು ಬರುವ ನುರಿತ ಸಿಬ್ಬಂದಿ ಹಾಗೂ ರಬ್ಬರ್ ಬೋಟ್‌ಗಳು ಇರುತ್ತವೆ. ಅನುಮಾನ ಬಂದ ಕಡೆಗಳಲ್ಲಿ ಈ ಸಿಬ್ಬಂದಿಯನ್ನು ನೀರಿಗಿಳಿಸಿ ಬೋಟ್‌ಗಳು ನೀರಿನಾಳದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು.ನಂತರ ಅವರ ನೆರವಿನಿಂದ ಬೋಟ್ ಅನ್ನು ಮೇಲಕ್ಕೆತ್ತಿ ಅವುಗಳನ್ನು ನಾಶಪಡಿಸಲಾಗುವುದು ಎಂದು ಅವರು ವಿವರಿಸಿದರು. ಒಂದೊಂದು ಬೋಟ್‌ನ ಬೆಲೆ 3ರಿಂದ 4 ಲಕ್ಷ ರೂಪಾಯಿ ಎಂದು ತಿಳದು ಬಂದಿದ್ದು, ಈ ಬೋಟ್‌ಗಳು ನಾಶಪಡಿಸಿದರೆ ಅಕ್ರಮ ಮರಳು ಸಾಗಾಣೆ ಮತ್ತು ಮರಳು ಫಿಲ್ಟರ್ ದಂದೆಯಲ್ಲಿ ತೊಡಗಿರುವವರಿಗೆ ದೊಡ್ಡ ಆಘಾತ ಆಗುತ್ತದೆ. ಮುಂದಾದರೂ ಇಂತಹ ಕೆಲಸಕ್ಕೆ ಕೈ ಹಾಕಲು ಹಿಂಜರಿಯುತ್ತಾರೆ ಎಂಬುದು ಟಾಸ್ಕ್‌ಫೋರ್ಸ್‌ನ ಲೆಕ್ಕಾಚಾರವಾಗಿದೆ.ಪಡ ಘೋಷಣೆಗೆ ಸಿದ್ಧತೆ: ಕೃಷಿ ಭೂಮಿಯಲ್ಲಿ ಮರಳು ಗಾರಿಕೆಗೆ ಅವಕಾಶ ನೀಡಿದ ಜಮೀನಿನ ವಿವರ ಪಡೆಯಲಾಗುತ್ತಿದ್ದು, ಪಡ (ಸರ್ಕಾರಿ ಸ್ವತ್ತು) ಎಂದು ಘೋಷಿಸಲು ಟಾಸ್ಕ್‌ಫೋರ್ಸ್ ಈಗಾಗಲೇ ಸಿದ್ಧತೆ ನಡೆಸುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದರು.ಈಗಾಗಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ರೂಪಿಸುತ್ತಿದೆ. ಭೂಮಿಗಳನ್ನು ಗುರುತಿಸಿ, ಅಲ್ಲಿಂದ ಎಷ್ಟು ಪ್ರಮಾಣದ ಮರಳು ತೆಗೆಯಲಾಗಿದೆ. ಶ್ರಿಅದರಿಂದ ಪರಿಸರ ಮತ್ತು ಜೀವವೈವಿಧ್ಯಕ್ಕೆ ಯಾವ ರೀತಿ ಧಕ್ಕೆಯಾಗಿದೆ. ಇಲ್ಲಿಂದ ರವಾನಿಸಿರುವ ಮರಳು ಎಷ್ಟು ಮೊತ್ತದ್ದು ಎಂಬುದನ್ನು ಲೆಕ್ಕ ಹಾಕಲಾಗುತ್ತಿದೆ. ಈ ಕಾರ್ಯ ಮುಗಿದ ನಂತರ ರೈತರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಅವರು ಹೇಳಿದರು.`ನಿಮ್ಮ ಜಮೀನಿನಲ್ಲಿ ಇಷ್ಟು ಮರಳು ಸಾಗಾಣೆಯಾಗಿದ್ದು, ಇದರ ಮೌಲ್ಯ ಇಂತಿಷ್ಟು ಇದೆ. ಇಷ್ಟು ಹಣವನ್ನು ಭರಿಸಿಕೊಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗುತ್ತದೆ. ಒಂದು ವೇಳೆ ರೈತ ನಿರ್ದಿಷ್ಟ ಅವಧಿಯಲ್ಲಿ ಆ ಹಣವನ್ನು ಪಾವತಿಸದಿದ್ದರೆ ನಿಯಮದ ಪ್ರಕಾರ ಆ ಜಮೀನನ್ನು ಪಡ ಎಂದು ಘೋಷಿಸಿ ಸರ್ಕಾರ ಆ ಭೂಮಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ~ ಎಂದು ಅವರು ವಿವರಿಸಿದರು.ಮುಖ್ಯಾಂಶಗಳು

ಒಂದೂವರೆ ತಿಂಗಳಲ್ಲಿ ಟಾಸ್ಕ್‌ಫೋರ್ಸ್ ನಿರಂತರ ದಾಳಿ ನಡೆಸಿ 52 ಮರಳು ಸಾಗಾಣೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಇದರಲ್ಲಿ ಲಾರಿ, ಟ್ರಾಕ್ಟರ್, ಜೆಸಿಬಿ ಯಂತ್ರಗಳು ಸೇರಿವೆ. ಇವುಗಳಿಂದ ಒಟ್ಟಾರೆ 25 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ತಹಶೀಲ್ದಾರ್ ಡಾ. ರವಿ ತಿರ್ಲಾಪುರ ತಿಳಿಸಿದರು.ಉಪ ವಿಭಾಗಾಧಿಕಾರಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಸುಗ್ಗನಹಳ್ಳಿ ಸುತ್ತಮುತ್ತಲಿನ ಮರಳು ಸಾಗಾಣೆ ತಾಣಗಳ ಮೇಲೆ ದಾಳಿ ನಡೆಸಿ ನಾಲ್ಕು ಬೋಟ್‌ಗಳನ್ನು ನಾಶಪಡಿಸಲಾಗಿದೆ. ಅಲ್ಲದೆ ಐದು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry