ಶುಕ್ರವಾರ, ಜನವರಿ 17, 2020
23 °C

ಮರಳು ದಂಧೆಗೆ ಬೆಚ್ಚಿ ಬಿದ್ದ ಶಿರಾ

ಪ್ರಜಾವಾಣಿ ವಿಶೇಷ ವರದಿ/ –ಪಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

ಶಿರಾ: ‘ಅದು ನಮ್ಮ ನೆಂಟರ ಊರು. ಬಹಳ ದಿನಗಳ ನಂತರ ಹೋಗಿದ್ದೆ. ಅಬ್ಬಾ ಅದೇನು ದೊಡ್ಡ-ದೊಡ್ಡ ಮನೆಗಳು ಕಟ್ಟಿದ್ದಾರೆ... ಮನೆ­ಗಳಲ್ಲಿ ಗಂಡಸರದ್ದು ಲಕ್ಷಾಂತರ ರೂಪಾಯಿ ವ್ಯವಹಾರದ ಮಾತು. ಮಹಿಳೆಯರದ್ದು ಚಿನ್ನದ ಒಡವೆಗಳದ್ದೇ ಮಾತಿನ -ಬಿಂಕ... ಮಳೆ-–ಬೆಳೆ ಮಾತೇ ಇಲ್ಲ. ಮರಳು ದಂಧೆಯಿಂದ ಅವರ ವರ್ತನೆಗಳೇ ಬದಲಾಗಿವೆ...’–ಇದು ತಾಲ್ಲೂಕಿನ ಉಜ್ಜಿನಕುಂಟೆಯ ತಿಮ್ಮಮ್ಮ (ಹೆಸರು ಬದಲಿಸಲಾಗಿದೆ) ಬಹು ವರ್ಷಗಳ ಬಳಿಕ ತನ್ನ ನೆಂಟರೂರು ಹೇರೂರಿಗೆ ಹೋಗಿ ಬಂದ ನಂತರ ಪ್ರತಿಕ್ರಿಯಿಸಿದ ಪರಿ.ಇದು ಹೇರೂರು ಗ್ರಾಮ ಒಂದಕ್ಕೆ ಸೀಮಿತವಲ್ಲ. ಮರಳು ದಂಧೆ ವ್ಯಾಪಕವಾಗಿರುವ ಗ್ರಾಮಗಳ ಪ್ರಸ್ತುತ ಸ್ಥಿತಿ–ಗತಿ.

‘ಈ ಗ್ರಾಮಗಳಲ್ಲಿ ಹಿಂದೆ ಇದ್ದ ಆಶ್ರಯ ಮನೆಗಳು ಈಗ ಕಾಣಲ್ಲ. ಅಲ್ಲಿ ಮಹಡಿ -ಮಹಲುಗಳು ಎದ್ದಿವೆ. ಬಣ್ಣದ ಮನೆಗಳು ಕಣ್ಣುಕೋರೈಸುವಂತೆ ಇವೆ. ಹೇರೂರು ಎಂಬ ಗ್ರಾಮವೊಂದರಲ್ಲೇ 30 ಜೆಸಿಬಿ, 150 ಲಾರಿ, ನೂರಾರು ಟ್ರ್ಯಾಕ್ಟರ್, ಜತೆಗೆ ಆ ಮರಳು ದಂಧೆ ಮಾಡುವ ಪ್ರತಿಯೊಬ್ಬರಿಗೂ ಒಂದೊಂದು ಕಾರು ಇದೆ’ ಎಂದು ಅಲ್ಲಿಂದ ಬಂದು ತಾವರೇ­ಕೆರೆ ಚಹಾ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಹಂಡೇನಹಳ್ಳಿ ರಂಗನಾಥ್‌ ವಿವರಿಸುತ್ತಿದ್ದರು.ಇದೀಗ ತಾಲ್ಲೂಕಿನಲ್ಲಿ ಎಲ್ಲೆಲ್ಲೂ ಮರಳು ದಂಧೆಯದೇ ಮಾತು. ಚಹಾ ಅಂಗಡಿಯಿಂದ ಹಿಡಿದು ದೇಗುಲದ ಪ್ರಾಂಗಣ, ಮನೆಗಳ ಮುಂದಿನ ಜಗತಿ ಕಟ್ಟೆ ಸೇರಿದಂತೆ ಎಲ್ಲೆಡೆಯೂ ದಂಧೆಯ ಕರಾಳ ಸ್ವರೂಪ ಕುರಿತ ಮಾತುಗಳೇ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಡೆಸುತ್ತಿರುವ ದಂಧೆಯಿಂದ ತಾಲ್ಲೂಕಿನ ನಾಗರಿಕ ಸಮಾಜ ಬೆಚ್ಚಿ ಬಿದ್ದಿದೆ.ಇತ್ತೀಚೆಗೆ ಒಂದೇ ದಿನ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 79 ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕಳೆದ ತಿಂಗಳು ಒಂದೇ ದಿನ 50ಕ್ಕೂ ಹೆಚ್ಚು ಲಾರಿಗಳನ್ನು ವಶಕ್ಕೆ ಪಡೆದಿದ್ದರು.  ಈ ಅಂಕಿ–ಅಂಶ ಗಮನಿಸಿದರೆ ಪ್ರತಿ ದಿನ ತಾಲ್ಲೂಕಿನಿಂದಲೇ ನೂರಾರು ಲೋಡ್ ಮರಳು ಸಾಗಣೆ ನಡೆದಿದೆ. ಲೆಕ್ಕ ತೋರಿಸಲು ಆಗೊಮ್ಮೊ ಈಗೊಮ್ಮೆ ವಶಪಡಿಸಿಕೊಳ್ಳುವ ಕೆಲಸ ನಡೆಯುತ್ತದೆ. ಉಳಿದಂತೆ ಅಕ್ರಮ ಮರಳು ಸಾಗಣೆ ನಿರಾತಂಕ.ಮರಳು ದಂಧೆಯೂ ತಾಲ್ಲೂಕು ಆಡಳಿತದ ಕಾರ್ಯವೈಖರಿಯನ್ನೇ ಬದಲಿಸಿದೆ. ತಾಲ್ಲೂಕಿನ ಜನರಿಗೆ ತಹಶೀಲ್ದಾರ್ ಮುಖದರ್ಶನವೇ ಕಷ್ಟ­ಸಾಧ್ಯ­ವಾಗಿದೆ. ‘ಯಾವಾಗ ತಾಲ್ಲೂಕು ಕಚೇರಿಗೆ ಬಂದರೂ ತಹಶೀಲ್ದಾರ್ ಇಲ್ಲ, ಮರಳು ಲಾರಿ ಹಿಡಿಯಲು ಹೋಗಿದ್ದಾರೆ ಎಂಬ ಉತ್ತರ ಸಿಗುತ್ತದೆ.ಸಣ್ಣ ರೈತರಿಗೆ ಅಂತ ಕೊಟ್ಟ 2 ಸಾವಿರ ರೂಪಾಯಿ ಚೆಕ್‌ಗೆ ತಹಶೀಲ್ದಾರ್ ಸಹಿ ಬೇಕು ಅಂತ ಬ್ಯಾಂಕ್‌ನವರು ಹೇಳಿದ್ದಾರೆ. ಅವರು ಯಾವಾಗ ಸಿಗ್ತಾರೋ? ಸಹಿ ಹಾಕ್ತಾರೋ? ಎಂದು ದುಡ್ಡು ಸಿಗುತ್ತೋ? ಶಿವನೇ ಬಲ್ಲ’ ಎಂದು ಮೂರ್ನಾಲ್ಕು ದಿನದಿಂದ ತಾಲ್ಲೂಕು ಕಚೇರಿಗೆ ಎಡತಾಕುತ್ತಿರುವ ನಾಗರಾಜು ಆಗಸದತ್ತ ನೋಡುತ್ತಾರೆ.ಮಾಧ್ಯಮಗಳಲ್ಲಿ ಬರುವ ‘ಮರಳು ಲಾರಿ ಹಿಡಿದ ಪೊಲೀಸರು, ಅಧಿಕಾರಿಗಳು’ ಸುದ್ದಿಯನ್ನು ತಾಲ್ಲೂಕಿನ ಜನರು ‘ಜೋಕ್‌’ ಎನ್ನುವಂತೆ ಓದುತ್ತಾರೆ.‘ಇಂಥ ಊರಲ್ಲಿ ಇಷ್ಟು ಲಾರಿ ಹಿಡಿದೆವು; ಇಷ್ಟು ದಂಡ ವಸೂಲಿಯಾಯಿತು ಎಂದು ಕಂದಾಯ ಇಲಾಖೆ ಒಂದೆಡೆ ಹೇಳಿಕೆ ನೀಡಿದರೆ, ಮತ್ತೊಂದೆಡೆ ಪೊಲೀಸರು ಲಾರಿಗಳನ್ನು ಹೆದ್ದಾರಿ ಬದಿಗೆ ನಿಲ್ಲಿಸಿ ಫೋಟೊ ತೆಗೆಸುತ್ತಾರೆ. ಆದರೆ ಊರ ಮುಂದೆ ಮರಳು ಹೊತ್ತು ಸಾಗುವ ಲಾರಿಗಳ ಸಂಖ್ಯೆ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದು ಗ್ರಾಮಸ್ಥರು ಹಣಕಿಸುತ್ತಾರೆ.‘ಮರಳು ಲೂಟಿ ಮಾಡಿ ದಂಧೆಕೋರರು ಹಣ ಮಾಡುತ್ತಾರೆ. ಕಂದಾಯ ಇಲಾಖೆ– ಪೊಲೀಸರಿಗೆ ಪ್ರಭಾವಿ ರಾಜಕಾರಣಿಗಳು ಕೈ ಕೆಸರು ಮಾಡಿಕೊಳ್ಳದೆ ಬಾಯಿ ಮೊಸರು ಮಾಡುತ್ತಿದ್ದಾರೆ’ ಎಂಬ ಆರೋಪ ಸಾಮಾನ್ಯವಾಗಿದೆ.ಇಷ್ಟು ದಿನ ಮರಳು ದಂಧೆ ವಿರೋಧಿಸಿ ಹೇಳಿಕೆಗಳನ್ನು ನೀಡಿ, ಹೋರಾಟ ಮಾಡುತ್ತಿದ್ದ ಕೆಲ ಗ್ರಾಮಸ್ಥರು ಇದೀಗ ಪರೋಕ್ಷಾಗಿ ದಂಧೆಕೋರರ ಜೊತೆ ಕೈ ಜೋಡಿಸಿದ್ದಾರೆ. ತಮ್ಮೂರಿನ ರಸ್ತೆಗಳಲ್ಲಿ ಹಾದು ಹೋಗುವ ಮರಳು ಲಾರಿಗಳಿಂದಲೇ ದೇಗುಲ ನಿರ್ಮಾಣದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಉದಾಹರಣೆಗಳೂ ಅಲ್ಲಲ್ಲಿ ಕಂಡು ಬರುತ್ತಿವೆ.

ಪ್ರತಿಕ್ರಿಯಿಸಿ (+)