ಬುಧವಾರ, ಮೇ 12, 2021
24 °C

ಮರಳು ದಂಧೆ: ಮರಗಳಿಗೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಮೂಲ ಸೌಕರ್ಯವಿಲ್ಲದೆ ಬಳಲುತ್ತಿರುವ ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಜನ ಕೆರೆಯಂಗಳ, ಕೃಷಿ ಜಮೀನುಗಳನ್ನೇ ಅದಕ್ಕೆ ಬಳಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇಟ್ಟಿಗೆ ಕಾರ್ಖಾನೆಗಳಿಗೆ ಗ್ರಾಮದ ಕೆರೆಯ ಮಣ್ಣನ್ನು ನಿರಂತರವಾಗಿ ಸಾಗಿಸುತ್ತಿರುವುದರಿಂದ, ಸಾಮಾಜಿಕ ಅರಣ್ಯ ಯೋಜನೆಯಡಿ ಬೆಳೆಸಲಾಗಿರುವ ಮರಗಳಿಗೂ ಕುತ್ತು ಬಂದಿದೆ.ತಾಲ್ಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ನಹಳ್ಳಿ ಸಮಸ್ಯೆಗಳ ನಡುವೆ ನಲುಗುತ್ತಿದೆ. ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಹಳ್ಳಿಯಲ್ಲಿ 170 ಕುಟುಂಬಗಳಿವೆ. ಪರಿಶಿಷ್ಟ ವರ್ಗಕ್ಕೆ ಸೇರಿದವರೇ ಹೆಚ್ಚು ವಾಸವಾಗಿದ್ದು, 670 ಮತದಾರರು ಇದ್ದಾರೆ.ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಸ್ವಚ್ಛತೆ ಕೊರತೆಯಿಂದ ಸೊಳ್ಳೆ ಕಾಟ ಹೆಚ್ಚಿದೆ. ಇಲ್ಲಿನ ಜನತೆ ರೋಗ-ರುಜಿನಗಳಿಗೆ ತುತ್ತಾಗಿ ಈಚೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ತಾಲ್ಲೂಕು ಆರೋಗ್ಯ ಆಡಳಿತ ಗ್ರಾಮಕ್ಕೆ ಹೆಚ್ಚಿನ ಆದ್ಯತೆ ನೀಡಿ ರೋಗ ಹರಡದಂತೆ ಕ್ರಮ ಕೈಗೊಂಡಿದ್ದರಿಂದ ಸನ್ನಿವೇಶ ಹತೋಟಿಗೆ ಬಂದಿತ್ತು.ಈ ಗ್ರಾಮದಲ್ಲಿ ಸ್ಮಶಾನ ಸೌಕರ್ಯವಿಲ್ಲದೆ ಜನ ತಮ್ಮ ಕೃಷಿ ಭೂಮಿಗಳಲ್ಲಿ ಶವಸಂಸ್ಕಾರ ಮಾಡುತ್ತಿದ್ದಾರೆ. ಈ ಹಿಂದೆ ಸ್ಮಶಾನ ಎಂದು ಗುರುತಿಸಲಾಗಿದ್ದ ಭೂಮಿ ಖಾಸಗಿಯವರಿಗೆ ಸೇರಿದ್ದರಿಂದ ಈಗ ಸ್ವಂತ ಜಮೀನು ಇಲ್ಲದವರು ಕೆರೆಗಳ ಆಸು-ಪಾಸಿನಲ್ಲಿ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ.ಗ್ರಾಮಕ್ಕೆ ಹೊಂದಿಕೊಂಡಿರುವ 30 ಎಕರೆ ವಿಸ್ತೀರ್ಣವುಳ್ಳ ಕೆರೆ ಅಂಗಳವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ದೂರು. ಉಳಿದ 10 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸುತ್ತಮುತ್ತಲಿನ ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣನ್ನು ಹೇರಳವಾಗಿ ತೆಗೆಯಲಾಗುತ್ತಿದೆ. ಇದರಿಂದ ಕೆರೆ ಅಂಗಳದಲ್ಲಿ ಸಾಮಾಜಿಕ ಅರಣ್ಯ ಯೋಜನೆಯಡಿ ಹುಲುಸಾಗಿ ಬೆಳೆಸಿದ್ದ ಅಕೇಷಿಯಾ, ಅರ್ಕ್ಲಿ ಜಾತಿ ಮರಗಳು ನಾಶವಾಗುತ್ತಿವೆ ಎಂಬುದು ಗ್ರಾಮಸ್ಥರ ಅಸಮಾಧಾನ.ಗ್ರಾಮಕ್ಕೆ ಸೂಕ್ತವಾದ ಸರ್ಕಾರಿ ಜಮೀನನ್ನು ಗುರುತಿಸಿ ಸ್ಮಶಾನಕ್ಕೆ ಮಂಜೂರು ಮಾಡಬೇಕು. ಒತ್ತುವರಿಯಾಗಿರುವ ಕೆರೆ ಜಮೀನನ್ನು ಬಿಡಿಸಿ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ಕೂಡಲೇ ನಿಲ್ಲಿಸಬೇಕು ಎನ್ನುತ್ತಾರೆ ಗ್ರಾಮದ ಬೈರೇಗೌಡ.ಕೆರೆಯಲ್ಲಿ ಹೆಚ್ಚು ಆಳಕ್ಕೆ ಮಣ್ಣು ತೆಗೆಯುವುದರಿಂದ ನೀರು ನಿಲ್ಲದೆ ಇಂಗುತ್ತಿದೆ. ಕೆರೆಯಲ್ಲಿ ನೀರು ನಿಲ್ಲದಂತಾಗಿದೆ. ಅರಣ್ಯ ಇಲಾಖೆ ಬೆಳೆಸಿರುವ ಮರಗಳು ನಾಶವಾಗುತ್ತಿವೆ. ಕೆರೆಯ ಮುಖ್ಯ ರಾಜಕಾಲುವೆಯನ್ನು ದುರಸ್ತಿಗೊಳಿಸಿ ಕೆರೆಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮದ ಸುಬ್ರಮಣಿ ಸೇರಿದಂತೆ ಹಲವರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.