ಮರಳು ಲೂಟಿ ನಿಲ್ಲಿಸಿ

7

ಮರಳು ಲೂಟಿ ನಿಲ್ಲಿಸಿ

Published:
Updated:

ಪ್ರಭಾವಿ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ಶಾಮೀಲಾಗಿ ಕಾನೂನಿನ ಭಯ ಇಲ್ಲದೆ ರಾಜಾರೋಷವಾಗಿ ನೈಸರ್ಗಿಕ ಸಂಪತ್ತಿನ ಲೂಟಿ ಮಾಡುತ್ತಿರುವುದಕ್ಕೆ ಕೋಲಾರ ಜಿಲ್ಲೆಯ ಮುಳಬಾಗಲುವಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯೇ ಸಾಕ್ಷಿ. ಬೆಂಗಳೂರು ಮಹಾನಗರದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಭರದಿಂದ ನಡೆಯುತ್ತಿರುವ ಕಾರಣ ಸಮೀಪದ ಕೋಲಾರ ಜಿಲ್ಲೆಯ ಮರಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಅಲ್ಲಿ ಬಹುಪಾಲು ಮರಳು ಗಣಿಗಾರಿಕೆ ಅಕ್ರಮವಾಗಿಯೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು  ತಡೆಯಲು ಜಿಲ್ಲಾಡಳಿತ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು.ಜಿಲ್ಲಾ ಉಸ್ತುವಾರಿ ಸಚಿವರಾದ ವರ್ತೂರು ಪ್ರಕಾಶ್, ಸ್ಥಳೀಯ ಶಾಸಕರು ಮತ್ತು 20 ಅಧಿಕಾರಿಗಳ ಪ್ರತಿಕ್ರಿಯೆಯನ್ನು ಕೇಳಿ ಹೈಕೋರ್ಟ್ ನೋಟಿಸ್ ನೀಡಿರುವ ಜತೆಯಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯುವಂತೆ ಸೂಚನೆಯನ್ನೂ ನೀಡಿದೆ. ಆದರೆ ಇದರ ಪರಿಣಾಮ ಜಿಲ್ಲಾಡಳಿತದ ಮೇಲೆ ಆದಂತಿಲ್ಲ.ಕಾಟಾಚಾರಕ್ಕಾಗಿ ಕೆಲವು ಸಿಬ್ಬಂದಿಯನ್ನು ನೇಮಕ ಮಾಡಿರುವುದನ್ನು ಬಿಟ್ಟರೆ ಅಕ್ರಮವನ್ನು ತಡೆಯಲು ಜಿಲ್ಲಾಡಳಿತ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ. ಈ ಬೆಳವಣಿಗೆಗಳನ್ನು ನೋಡಿದರೆ ಜಿಲ್ಲಾಡಳಿತ ಕೂಡಾ ಅಕ್ರಮದಲ್ಲಿ ಶಾಮೀಲಾಗಿದೆ ಎಂಬ ಆರೋಪವನ್ನು ನಂಬಬೇಕಾಗುತ್ತದೆ. ಹಲವಾರು ಪ್ರಭಾವಿ ರಾಜಕಾರಣಿಗಳು ಬೇನಾಮಿ ಹೆಸರಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿರುವುದು ಕೂಡಾ ಜಿಲ್ಲಾಡಳಿತದ ನಿಷ್ಕ್ರಿಯತೆಗೆ ಕಾರಣ ಇರಬಹುದು.  ಇಂತಹ ಭ್ರಷ್ಟಾಚಾರ ಪಕ್ಷಾತೀತವಾಗಿ ನಡೆಯುವುದರಿಂದ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯದೆ ಎಲ್ಲವೂ ಮುಚ್ಚಿಹೋಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ನಷ್ಟವಾಗುತ್ತಿದೆ, ಮಳೆಯ ಕೊರತೆಯಿಂದಾಗಿ ಈಗಾಗಲೇ ಕುಸಿದುಹೋಗಿರುವ ಅಂತರ್ಜಲ ಮಟ್ಟ ಪಾತಾಳ ತಲುಪುತ್ತಿದೆ.  ರಾಜ್ಯದ ಹಲವಾರು ಕಡೆಗಳಲ್ಲಿ ಈ ರೀತಿ ನಡೆಯುತ್ತಿರುವ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿಯೇ ರಾಜ್ಯ ಸರ್ಕಾರ ಮರಳು ನೀತಿಯನ್ನು ಜಾರಿಗೆ ತಂದಿದೆ.

ಈ ನೀತಿಯಿಂದಾಗಿ ಮರಳುಗಣಿಗಾರಿಕೆಯ ಆದಾಯ ಹತ್ತಾರು ಪಟ್ಟು ಹೆಚ್ಚಾಗಬಹುದೆಂದು ಸರ್ಕಾರ ನಿರೀಕ್ಷಿಸಿತ್ತು. ಹೊಸ ನೀತಿಯ ಪ್ರಕಾರ ಜಿಲ್ಲಾಡಳಿತ ಸ್ಥಳಪರಿಶೀಲನೆ ನಡೆಸಿ ಮರಳು ತೆಗೆಯಬಹುದಾದ ಪ್ರದೇಶವನ್ನು ಗುರುತಿಸಬೇಕು.

 

ಪರವಾನಗಿ ಪಡೆದವರು ಮಂಜೂರು ಮಾಡಿದ ಪ್ರದೇಶದಲ್ಲಿ ಮಾತ್ರ ಮರಳು ಗಣಿಗಾರಿಕೆ ನಡೆಸಬೇಕಾಗುತ್ತದೆ. ಇದರಿಂದ ಬರುವ ಆದಾಯದಲ್ಲಿ ಅರ್ಧದಷ್ಟು ಹಣವನ್ನು ಸ್ಥಳೀಯ ಗ್ರಾಮಪಂಚಾಯಿತಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ಬಳಸಬೇಕು.ಆದರೆ ಕೋಲಾರ ಜಿಲ್ಲೆಯಲ್ಲಿ ಈ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿರುವಂತೆ ಕಾಣುತ್ತಿದೆ. ಅಕ್ರಮವನ್ನು ತಡೆಯಲು ಜಿಲ್ಲಾಡಳಿತ ನೇಮಿಸಿರುವ ಸಿಬ್ಬಂದಿಯೇ ಅಕ್ರಮದ ಬೆಂಬಲಕ್ಕೆ ನಿಂತವರಂತೆ ವರ್ತಿಸುತ್ತಿರುವುದು ಲೂಟಿಕೋರರ ಕೈ ಬಲಪಡಿಸಿದೆ. ಇದನ್ನೆಲ್ಲ ಗಮನಿಸುತ್ತಿರುವ ಹೈಕೋರ್ಟ್ ಛೀಮಾರಿ ಹಾಕುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಅಕ್ರಮವನ್ನು ತಡೆಯುವುದು ಮಾತ್ರವಲ್ಲ ಅದಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಕ್ರಮಕೈಗೊಳ್ಳುವುದು ಕೂಡಾ ಅವಶ್ಯಕ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry