ಶುಕ್ರವಾರ, ನವೆಂಬರ್ 15, 2019
21 °C

ಮರಳು ಸಾಗಣೆಗೆ ಹಗಲು ಕಡಿವಾಣ; ಅಳಿವೆಯಲ್ಲಿ ಅಪಾಯ ಸೃಷ್ಟಿ

Published:
Updated:

ಕಾಸರಗೋಡು: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಯಿಂದ ಅಳಿವೆ ಪ್ರದೇಶ ಅಪಾಯದಂಚಿನಲ್ಲಿದೆ. ತ್ವರಿತವಾಗಿ ಹಣ ಗಳಿಸುವುದಕ್ಕಾಗಿ ಮಾಡುತ್ತಿರುವ ಇಂತಹ ಅಕ್ರಮ ಕೆಲಸಗಳಿಂದ ಈ ಭಾಗದ ಜನ ಕೂಡ ಪ್ರಕೃತಿಯ ಮುನಿಸನ್ನು ಎದುರಿಸುವ ಅಪಾಯ ಉಂಟಾಗಿದೆ.ಕುಂಬಳೆ ಶಿರಿಯ ಹೊಳೆ ಸಮುದ್ರ ಸೇರುವ ವ್ಯಾಪ್ತಿಯಲ್ಲಿ ಸಾವಿರಾರು ಟನ್ ಮರಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಇದರಿಂದ ಹೊಳೆ ಮತ್ತು ಸಮುದ್ರದ ನಡುವಿನ ಪ್ರಾಕೃತಿಕ ತಡೆ ನಿರ್ನಾಮವಾಗಿದೆ ಎನ್ನುತ್ತಾರೆ ಸ್ಥಳೀಯರು.ಮರಳು ಸಾಗಣೆಗೆ ಅಗತ್ಯವಿರುವ ಅಧಿಕೃತ ಗುರುತು ಚೀಟಿಗಳನ್ನು ರಾಜಕೀಯ ಪ್ರಭಾವ ಬೀರಿ ಮರಳು ಮಾಫಿಯಾ  ಪಡೆದುಕೊಂಡಿದ್ದರೂ, ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮರಳು ಸಾಗಿಸುವುದು ಬೆಳಿಕಿಗೆ ಬಂದಿದೆ. ಅನುಮತಿ ಪಡೆಯದೆ ಹೊಳೆ, ಕಡವುಗಳಿಂದ ಮರಳು ಸಾಗಿಸುವ ಪ್ರದೇಶದಲ್ಲಿ ಈ ವಾರ ಕಂದಾಯ ಇಲಾಖೆ ಮಿಂಚಿನ ದಾಳಿ ನಡೆಸಿ ಹಲವು ವಾಹನ ಮತ್ತು ಟನ್ನುಗಟ್ಟಲೆ ಮರಳನ್ನು ಸ್ವಾಧೀನಪಡಿಸಿದೆ. ಆದರೆ ಈ ರೀತಿ ಮುಟ್ಟುಗೋಲು ಮಾಡಿದ ಮರಳನ್ನು ಅಧಿಕಾರಿಗಳು ಮರಳು ಮಾಫಿಯಾದವರಿಗೆ ಟೆಂಡರ್ ಕರೆದು ನೀಡುತ್ತಿದ್ದಾರೆ ಎನ್ನುವುದು ಜನಸಾಮಾನ್ಯರ ಆರೋಪ.ಕಾವಲು ಎಂಬ ನಾಟಕ: ಶಿರಿಯ ಕಡವುಗಳಲ್ಲಿ (ಹೊಳೆಯ ಎರಡೂ ಬದಿಗಳಲ್ಲಿ) ಈಗ ಮರಳು ಸಂಗ್ರಹ ಸ್ಥಗಿತಗೊಂಡಿದೆ ಎನ್ನುತ್ತಾರೆ ಇಲ್ಲಿ ಕಾವಲು ಕುಳಿತಿರುವ ಪೊಲೀಸರು. ಆದರೆ ಇಲ್ಲಿ ಮರಳು ಸಂಗ್ರಹ ಹಗಲು ನಿಂತಿರುವುದು ವಾಸ್ತವ. ಆದರೆ ನಸುಕಿನ ವೇಳೆ 2ಗಂಟೆಯಿಂದ 4 ಗಂಟೆಯೊಳಗೆ ಎಗ್ಗಿಲ್ಲದೆ ಮರಳು ಸಂಗ್ರಹ ಮತ್ತು ಸಾಗಣೆ ನಡೆಯುತ್ತಿದೆ ಎಂದು ಸ್ಥಳಿಯರು ಆರೋಪಿಸುತ್ತಾರೆ. ಶಿರಿಯದಲ್ಲಿ ಈಗ ಇರುವ ಎರಡು ಕಡವುಗಳಲ್ಲದೆ ಶಿರಿಯ ಬಸ್ಸು ನಿಲ್ದಾಣದಿಂದ ಕಡಪ್ಪುರಕ್ಕೆ ಸಾಗುವ ದಾರಿಯಲ್ಲಿ 4 ಕಡವುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ!ಮರಳು ಮಾಫಿಯಾಕ್ಕೆ ರಾಜಕೀಯ ಪಕ್ಷಗಳ ಪ್ರಬಲ ಕೃಪಾಕಟಾಕ್ಷವಿದೆ ಎಂದು ಪೊಲೀಸರು ಆರೋಪಿಸುತ್ತಾರೆ. ಆದರೆ ಪೊಲೀಸ್ ಅಧಿಕಾರಿಗಳಿಗೆ ನಿರ್ದಿಷ್ಟ ಮಾಮೂಲಿ ನೀಡಿ, ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಾಗಿಸುವ ದಂದೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಕಣ್ಣೂರು ಜಿಲ್ಲೆಯ ಆಚೆಗೆ ಇಲ್ಲದ ಕಡಿವಾಣ ಕಾಸರಗೋಡಿನಲ್ಲಿ ಮಾತ್ರ ಏಕೆ ಎಂದು ಕೆಲವು ಪೊಲೀಸರೇ ಪ್ರಶ್ನಿಸುತ್ತಾರೆ.ಅಕ್ರಮ ಮರಳು ಸಾಗಣೆಯಿಂದ ಶಿರಿಯ ಕಡಪ್ಪುರದಲ್ಲಿ ಕಡಲ್ಕೊರೆತ ನಡೆಯುತ್ತಿದ್ದು, ಇದನ್ನು ತಡೆಯಲು ಹಾಕಿದ್ದ ತಡೆಗೋಡೆ ಸಮುದ್ರಪಾಲಾಗುತ್ತಿದೆ.

ಪ್ರತಿಕ್ರಿಯಿಸಿ (+)