ಮರವಂತೆ: ಮೀನು ಮಾರುಕಟ್ಟೆ ರವಾನೆ ಸರಳ

7

ಮರವಂತೆ: ಮೀನು ಮಾರುಕಟ್ಟೆ ರವಾನೆ ಸರಳ

Published:
Updated:

ಮರವಂತೆ (ಬೈಂದೂರು): ಕುಂದಾಪುರ ತಾಲ್ಲೂಕಿನ ಮರವಂತೆಯಲ್ಲಿ ರಾಜ್ಯದಲ್ಲಿ ಮೊದಲಿನದ್ದು ಎಂದು ಹೇಳಲಾಗಿರುವ ಕೇರಳ ಮಾದರಿಯ ಮೀನುಗಾರಿಕಾ ಹೊರ ಬಂದರಿನ ಕಾಮಗಾರಿ ಭರದಿಂದ ಸಾಗುತ್ತಿದೆ.ಸಣ್ಣ ದೊಡ್ಡ ಗಾತ್ರದ ಶಿಲೆ ಕಲ್ಲುಗಳನ್ನು ತಂದು ಬೃಹತ್ ಯಂತ್ರಗಳ ನೆರವಿನಿಂದ ನಿಗದಿತ ಕ್ರಮದಲ್ಲಿ ಸಮುದ್ರದಲ್ಲಿ ಜೋಡಿಸಿ ಮೂರು ದಿಕ್ಕುಗಳಲ್ಲಿ ರಚಿಸಲಾಗುವ ತಡೆಗೋಡೆಗಳಿಂದ ಈ ಬಂದರು ನಿರ್ಮಾಣವಾಗುತ್ತಿದೆ.ಈ ವರ್ಷದ ಮಾರ್ಚ್ 20ರಂದು ಆರಂಭಿಸಲಾದ 54 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ.

ವಿಶಿಷ್ಟ ವಿನ್ಯಾಸ: ಔಟ್‌ಬೋರ್ಡ್ ಅಳವಡಿಸಿದ ಸಾಮಾನ್ಯ ಗಾತ್ರದ ದೋಣಿಗಳಿಗೆ ಸುರಕ್ಷಿತ ತಂಗುದಾಣ ಮತ್ತು ಮೀನು ರವಾನೆಗೆ ಅನುಕೂಲವಾಗುವಂತೆ ಈ ಬಂದರನ್ನು ವಿನ್ಯಾಸಗೊಳಿಸಲಾಗಿದೆ. ಸಮುದ್ರದ ದಂಡೆ ಮತ್ತು ಉಳಿದ ಮೂರು ದಿಕ್ಕಿನ ತಡೆಗೋಡೆಗಳ ಕಾರಣದಿಂದ ತೆರೆರಹಿತ ಶಾಂತ ಆವರಣವೊಂದು ಇಲ್ಲಿ ನಿರ್ಮಾಣವಾಗುತ್ತದೆ.ಇದರಿಂದ ಮೀನು ಹಿಡಿದು ಬರುವ ದೋಣಿಗಳು ಒಳ ಪ್ರವೇಶಿಸಿ, ದಡಸೇರಿ ಅಲ್ಲಿಂದ ಮೀನನ್ನು ಮಾರುಕಟ್ಟೆಗೆ ರವಾನಿಸಲು ಅನುಕೂಲವಾಗುತ್ತದೆ. ಪ್ರಸ್ತುತ ಇಲ್ಲಿ 780 ಮೀಟರ್ ಅಂತರದಲ್ಲಿ ದಕ್ಷಿಣ ಮತ್ತು ಉತ್ತರದ ತಡೆಗೋಡೆ ನಿರ್ಮಾಣ  ಪ್ರಗತಿಯಲ್ಲಿದೆ. ಉತ್ತರದ ತಡೆಗೋಡೆ 215 ಮೀಟರ್ ಮತ್ತು ದಕ್ಷಿಣದ ತಡೆಗೋಡೆ 190 ಮೀಟರ್ ಉದ್ದಕ್ಕೆ ಸಮುದ್ರದಲ್ಲಿ ಚಾಚಿಕೊಳ್ಳಲಿವೆ. ಅವು ಮುಗಿದ ಬಳಿಕ ದಕ್ಷಿಣದ ಗೋಡೆಯ ತುದಿಯಿಂದ ಸಮುದ್ರ ದಂಡೆಗೆ ಸಮಾನಾಂತರವಾಗಿ 455 ಮೀಟರ್ ಉದ್ದದ ಪಶ್ಚಿಮದ ಗೋಡೆ ನಿರ್ಮಾಣಗೊಳ್ಳುತ್ತದೆ. ಇದು ಮತ್ತು ಉತ್ತರದ ಗೋಡೆ ಸಮೀಪಿಸುವ, ಆವರಣದ ವಾಯುವ್ಯ ಮೂಲೆಯಲ್ಲಿ 150 ಮೀಟರ್ ಅಗಲದ ಪ್ರವೇಶ ದ್ವಾರ ಇರುತ್ತದೆ.ದೃಢ ನಿರ್ಮಾಣ: ಪುಣೆಯ ಕೇಂದ್ರೀಯ ಜಲಶಕ್ತಿ ಸಂಶೋಧನಾ ಕೇಂದ್ರ ನಡೆಸಿದ ಅಧ್ಯಯನದ ಆಧಾರದಲ್ಲಿ ಎಲ್ಲ ಋತುಗಳ ಅಲೆ ಮತ್ತು ಉಬ್ಬರದ ಹೊಡೆತವನ್ನು ತಡೆದು ನಿಲ್ಲಲಾಗುವಂತೆ ಈ ತಡೆಗೋಡೆಗಳನ್ನು ಅತ್ಯಂತ ದೃಢವಾಗಿ ವಿನ್ಯಾಸಗೊಳಿಸಲಾಗಿದೆ. ಸಮುದ್ರದ ಆಳ, ಪ್ರವಾಹದ ದಿಕ್ಕುಗಳನ್ನು ಅವಲಂಬಿಸಿ ಇವುಗಳ ತಳದ ಅಗಲ, ಮೇಲ್ಮೈ ಅಗಲ ಮತ್ತು ಎತ್ತರವನ್ನು ನಿಗದಿಗೊಳಿಸಲಾಗಿದೆ. ತಡೆಗೋಡೆಯ ಮೈಗಳಿಗೆ ಬೃಹತ್ ಗಾತ್ರದ ಕಾಂಕ್ರೀಟಿನ ಟೆಟ್ರಾಪಾಡ್ ರಕ್ಷಕಗಳಿರುತ್ತವೆ. ತಡೆಗೋಡೆಯ ಮೇಲ್ಮೈ ಕನಿಷ್ಠ ಐದು ಮೀಟರ್ ಅಗಲವಿದ್ದು ಎರಡು ವಾಹನಗಳು ಸರಾಗವಾಗಿ ಚಲಿಸುವಷ್ಟಿರುತ್ತದೆ.ಈ ಮಾದರಿಯ ಬಂದರು ನಿರ್ಮಾಣದ ಅನುಭವ ಇರುವ ತಮಿಳುನಾಡಿನ ತಿರುಚಿರಪಳ್ಳಿಯ ಎನ್‌ಎಸ್‌ಕೆ ಬಿಲ್ಡರ್ಸ್‌ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆದಿದೆ. ಕಾಮಗಾರಿ ಮುಕ್ತಾಯಕ್ಕೆ 2016ರ ಮಾರ್ಚ್ ಗಡುವು ನೀಡಲಾಗಿದೆ.ಆಕರ್ಷಣೆಯ ಕೇಂದ್ರ: ನದಿ-ಕಡಲುಗಳ ಸಾಮೀಪ್ಯದ, ಸುಂದರ ಸಮುದ್ರ ತೀರವೆನಿಸಿ ಪ್ರವಾಸಿಗಳನ್ನು ಸೆಳೆಯುತ್ತಿರುವ ಮರವಂತೆ, ನೂತನ ತೆರೆದ ಮಾದರಿಯ ಕಿರು ಮೀನುಗಾರಿಕಾ ಬಂದರಿನ ಕಾರಣದಿಂದ ಜನರ ಗಮನ ಸೆಳೆಯುತ್ತಿದೆ; ಪೂರ್ಣಗೊಂಡಾಗ ಬೈಂದೂರು ಕ್ಷೇತ್ರದ ಪ್ರಮುಖ ಮೀನುಗಾರಿಕಾ ಕೇಂದ್ರಗಳಲ್ಲಿ ಒಂದೆನಿಸಿ, ಆರ್ಥಿಕ ಚಟುವಟಿಕೆಯ ತಾಣವಾಗಲಿದೆ. ಇಲ್ಲಿ ನಡೆಯುತ್ತಿರುವ ವಿಶಿಷ್ಟ ನಿರ್ಮಾಣ ಕಾಮಗಾರಿಯ ಸುದ್ದಿ ತಿಳಿದವರು ಭೇಟಿ ನೀಡುತ್ತಿದ್ದಾರೆ. ಬಂದರು ಪೂರ್ಣಗೊಂಡ ಬಳಿಕ ಇದು ಮರವಂತೆಯ ಇನ್ನೊಂದು ಪ್ರಮುಖ ಆಕರ್ಷಣೆಯಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry