ಗುರುವಾರ , ನವೆಂಬರ್ 21, 2019
20 °C

ಮರಾಠಿಗರ ಮನದಲ್ಲಿ ಅಭಿವೃದ್ಧಿಯ ಕನಸು

Published:
Updated:
ಮರಾಠಿಗರ ಮನದಲ್ಲಿ ಅಭಿವೃದ್ಧಿಯ ಕನಸು

ಬೆಳಗಾವಿ: ತಗ್ಗು, ದಿಣ್ಣೆಗಳ ಕಚ್ಚಾ ರಸ್ತೆ. ಮೈಗೆ, ಮುಖಕ್ಕೆ ಧೂಳಿನ ಸ್ನಾನ. 16 ಕಿ.ಮೀ. ಸಾಗಿದರೂ ನರಮನುಷ್ಯರ ಸುಳಿವೂ ಇಲ್ಲದ ದುರ್ಗಮ ಅರಣ್ಯ. ಬೆಳಗಾವಿಯಿಂದ 32 ಕಿ.ಮೀ ದೂರದ ಖಾನಾಪುರ ತಾಲ್ಲೂಕಿನ ಮರಾಠಿಗರ ಹಳ್ಳಿ ಗವಾಳಿ ತಲುಪಬೇಕಾದರೆ ಕಾಡು ರಸ್ತೆಯ ಓಟ ಅನಿವಾರ್ಯ. ಈ ಗ್ರಾಮ ಇರುವುದು ಭೀಮಗಡ ಸಂರಕ್ಷಿತ ಅರಣ್ಯದಲ್ಲಿ. ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಸಂಜೆ ಆರು ಗಂಟೆಯೊಳಗೆ ಊರು ಸೇರಿಕೊಳ್ಳಲೇಬೇಕು.ಇಲ್ಲಿಗೆ ಹೋಗಬೇಕಾದರೆ ಸೇತುವೆಯೇ ಇಲ್ಲದ ಮೂರು ಹಳ್ಳಗಳು ಎದುರಾಗುತ್ತವೆ. ಅದರಲ್ಲೊಂದು ಗೋವಾದ ಜೀವನದಿ ಮಾಂಡೋವಿ ಅಥವಾ ಮಹದಾಯಿ. ಮತ್ತೊಂದು ಕಳಸಾ- ಬಂಡೂರಿ ಹಳ್ಳ. ಮಳೆಗಾಲ ಆರಂಭವಾಯಿತೆಂದರೆ ಮೂರು ತಿಂಗಳ ಕಾಲ ಹೊರ ಜಗತ್ತಿನ ಸಂಪರ್ಕ ಕಡಿತ. ಮೇ ತಿಂಗಳ ಅಂತ್ಯದಲ್ಲಿಯೇ ಮೂರು ತಿಂಗಳಿಗಾಗುವಷ್ಟು ಕಾಳುಕಡಿ, ದಿನಸಿ ಸಂಗ್ರಹಿಸಿಟ್ಟುಕೊಳ್ಳಬೇಕು.ಹೆರಿಗೆ ನೋವು ತಿನ್ನುವ ಗರ್ಭಿಣಿಯರನ್ನು, ಗಂಭೀರ ರೋಗಕ್ಕೆ ತುತ್ತಾದವರನ್ನು, ಹಾವು ಕಡಿದವರನ್ನು ಆಸ್ಪತ್ರೆಗೆ ಸಾಗಿಸುವುದಾದರೆ ಕಂಬಳಿಯಲ್ಲಿ ಹಾಕಿಕೊಂಡು 16 ಕಿ.ಮೀ. ದೂರ ಹೊತ್ತು ತರಬೇಕು. ಮಾರ್ಗ ಮಧ್ಯದಲ್ಲಿ ಪ್ರಾಣ ಬಿಡುವವರ ಸಂಖ್ಯೆ ಲೆಕ್ಕ ಇಟ್ಟವರಿಲ್ಲ. ಭೀಮಗಡ ಸಂರಕ್ಷಿತ ಅರಣ್ಯದ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳ ಕಥೆ ಇದಕ್ಕಿಂತ ಭಿನ್ನವಲ್ಲ.ಚುನಾವಣಾ ಯಾತ್ರೆ ಅಂಗವಾಗಿ 'ಪ್ರಜಾವಾಣಿ' ಪ್ರತಿನಿಧಿ ದೇಗಾಂವ್, ಗವಾಳಿ, ಸಾಳಿಚಾವಾಡಾಗಳಿಗೆ ಭೇಟಿ ನೀಡಿದಾಗ ಚುನಾವಣೆಯ ಬಿಸಿ ಇಲ್ಲಿ ಮುಟ್ಟಿರಲಿಲ್ಲ. ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕಾರ್ಯಕರ್ತರ ಜೀಪೊಂದು ಆಗಷ್ಟೇ ಇತ್ತ ಕಡೆ ಹೊರಟಿತ್ತು. `ಯಾರಿಗೆ ಮತ ಹಾಕ್ತೀರಾ?' ಎಂದು ಕೇಳಿದಾಗ, `ರಸ್ತೆ, ವಿದ್ಯುತ್ ಕೊಟ್ಟವರಿಗೆ ನಮ್ಮ ಮತ' ಎಂದು ಸಿಡಿಮದ್ದಿನಂತಹ ಉತ್ತರ ಬಂತು ದೇಗಾಂವ್‌ನ ರಾಜು ಧೋಂಡ ಅವರಿಂದ.  `ಈಗಿನ ಶಾಸಕರು ನಿಮಗೆ ಕೆಲಸ ಮಾಡಿಕೊಟ್ಟಿದ್ದಾರಾ?' ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು `ಕಾಯ್ ಪಣ್ ಕಾಮ್ ಕೆಲೆ ನಹಿ... (ಏನೂ ಮಾಡಿಲ್ಲ). ಇಲ್ಲಿ ಅವ್ರ ಬಂದೇ ಇಲ್ಲ. 120 ಮತ ಇದೆ. ಇಲ್ಲಿಗ್ಯಾಕೆ ಬರಬೇಕು ಅಂತಾರೆ'.ಹಿಂದಿದ್ದ ಎಂಇಎಸ್ ಶಾಸಕರಿಗಿಂತ ಹಾಲಿ ಶಾಸಕ ಬಿಜೆಪಿಯ ಪ್ರಹ್ಲಾದ್ ರೇಮಾನಿ ಸ್ವಲ್ಪ ಕೆಲಸ ಮಾಡಿದ್ದಾರೆ ಎಂದು ಗವಾಳಿಯ ಗ್ರಾಮಸ್ಥರು ಒಪ್ಪಿಕೊಳ್ಳುತ್ತಾರೆ. ಆದರೆ 2009ರಲ್ಲಿ ಗ್ರಾಮಕ್ಕೆ ರಸ್ತೆ ಮಂಜೂರಾಗಿ ಗುದ್ದಲಿ ಪೂಜೆ ಮಾಡಲಾಗಿತ್ತು; ರಸ್ತೆ ಕೆಲಸ ಮಾತ್ರ ಆರಂಭವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇದೇ ಕಾರಣಕ್ಕೆ ಊರ ಜಾತ್ರೆಗೆ ಬಂದಿದ್ದ ಶಾಸಕರಿಗೆ ಕೆಲ ಯುವಕರು ಹೊಡೆಯಲು ಮುಂದಾಗಿದ್ದರು ಎನ್ನುತ್ತಾರೆ. ಆದರೆ, ಯಾರಿಗೆ ಮತ ಹಾಕಬೇಕು ಎಂದು ತೀರ್ಮಾನಿಸಿಲ್ಲ ಅಂತಾರೆ.ನಿರುದ್ಯೋಗ ಮತ್ತು ಶಿಕ್ಷಣದ ಅಲಭ್ಯತೆ ಈ ಜನರ ಮತ್ತೊಂದು ಸಮಸ್ಯೆ. ಕಾಡೊಳಗಿನ ಊರುಗಳಲ್ಲಿ ಮನೆ ಖರ್ಚಿಗೆ ಸಾಕಾಗುವಷ್ಟು ಭತ್ತ ಬೆಳೆದುಕೊಳ್ಳುತ್ತಾರೆ. ಯುವಕರೆಲ್ಲ ಗಾರೆ ಕೆಲಸ, ಕೂಲಿ ಕೆಲಸಕ್ಕಾಗಿ ಗೋವಾ, ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ. ಇಲ್ಲದಿದ್ದಲ್ಲಿ ಉಪವಾಸವೇ ಗತಿ. ಶಾಲಾ ಮಕ್ಕಳು 4-5ನೇ ತರಗತಿ ನಂತರ ಮುಂದಿನ ಓದಿಗೆ ಖಾನಾಪುರಕ್ಕೆ ಬರಬೇಕು.ಅಲ್ಲಿನ ಒಬಿಸಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರಷ್ಟೇ ಮರಾಠಿ ವಿದ್ಯಾರ್ಥಿಗಳಿಗೆ ಜಾಗ ಸಿಗುತ್ತದೆ. ಹಿಂದುಳಿದ ಜಾತಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಾದಲ್ಲಿ ನಿರ್ದಾಕ್ಷಿಣ್ಯವಾಗಿ ಮರಾಠಿ ವಿದ್ಯಾರ್ಥಿಗಳನ್ನು ಹೊರಹಾಕಲಾಗುತ್ತದೆ. ಹೀಗಾಗಿ ಹೆಚ್ಚಿನ ಮರಾಠಿ ವಿದ್ಯಾರ್ಥಿಗಳು 8,9ನೇ ತರಗತಿಯಲ್ಲೆೀ ಓದಿಗೆ ಶರಣು ಹೇಳುತ್ತಾರೆ.ಹೀಗಾಗಿ ಹೆಚ್ಚಿನ ಮರಾಠಿ ವಿದ್ಯಾರ್ಥಿಗಳು 8,9ನೇ ತರಗತಿಯಲ್ಲೆೀ ಓದಿಗೆ ಶರಣು ಹೇಳುತ್ತಾರೆ.

1957 ರಿಂದ 2004ರ ವರೆಗೆ 11 ಚುನಾವಣೆಗಳಲ್ಲಿ ಜಯ ಗಳಿಸಿರುವ ಎಂಇಎಸ್ ಶಾಸಕರು ಈ ಹಳ್ಳಿಗಾಡಿನ ಮರಾಠಿ ವಿದ್ಯಾರ್ಥಿಗಳಿಗಾಗಿ ಕನಿಷ್ಠ ಪಕ್ಷ ಹಾಸ್ಟೆಲ್ ಕಟ್ಟಿಸುವ ಕೆಲಸವನ್ನೂ ಮಾಡಿಲ್ಲ ಎಂಬುದು ಇಲ್ಲಿನ ಜನರ ಆಕ್ರೋಶ.ಮನುಷ್ಯ ಸಾಮರ್ಥ್ಯಕ್ಕೆ ಸವಾಲು ಎನಿಸುವಂತಹ ಅಭೇದ್ಯ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮುಗ್ಧ ಮರಾಠಿ ಜನ ಅಲ್ಪತಪ್ತರು. ತಮ್ಮ ಹಳ್ಳಿಗಳಿಗೆ ಸಂಚಾರ ಯೋಗ್ಯ ರಸ್ತೆ ಕೊಡಿ; ವಿದ್ಯುತ್ ಸೌಕರ್ಯ ಕಲ್ಪಿಸಿ ಎಂಬೆರಡು ಬೇಡಿಕೆ ಬಿಟ್ಟು ಅವರು ಮೂರನೇ ಬೇಡಿಕೆ ಮುಂದಿಡುವುದಿಲ್ಲ.ಖಾನಾಪುರದಿಂದ ಕೇವಲ ಮೂರು ಕಿ.ಮೀ. ದೂರ ಮಲಪ್ರಭಾ ನದಿಯ ದಂಡೆಯ ಮೇಲಿದೆ ಅಸೋಗಾ ಎಂಬ ಸುಂದರ ಗ್ರಾಮ. ಪ್ರತಿ ಮಳೆಗಾಲದಲ್ಲೂ ಮಲಪ್ರಭೆ ಉಕ್ಕಿ ಹರಿದಾಗಲೆಲ್ಲ ಕೆಳ ಮಟ್ಟದಲ್ಲಿದ್ದ ಸೇತುವೆ ಮುಳುಗಿ ಈ ಗ್ರಾಮ ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಿತ್ತು. ಆಗ ಖಾನಾಪುರಕ್ಕೆ ಬರುವ ಉದ್ಯೋಗಸ್ಥರು, ಶಾಲೆಯ ಮಕ್ಕಳು 10 ಕಿ.ಮೀ. ದೂರ ಸುತ್ತು ಬಳಸಿ ತಾಲ್ಲೂಕು ಕೇಂದ್ರಕ್ಕೆ ಬರಬೇಕಿತ್ತು. ಈಗ ಅಲ್ಲಿ ದೊಡ್ಡ ಸೇತುವೆ ನಿರ್ಮಾಣವಾಗುತ್ತಿದೆ. ಅದರ ಹಿಂದೆ ಹಾಲಿ ಬಿಜೆಪಿ ಶಾಸಕರ ಶ್ರಮವಿದೆ.

ವೃತ್ತಿಯಲ್ಲಿ ಬಡಗಿಯಾಗಿರುವ ಅಸೋಗಾದ ಲಕ್ಷ್ಮಣ ಸುತಾರ ತಮ್ಮ ಗ್ರಾಮದವರು ಈ ಬಾರಿ ಅವರಿಗೇ ಮತ ಹಾಕುವ ತೀರ್ಮಾನ ಕೈಗೊಂಡಿದ್ದಾರೆ ಎನ್ನುತ್ತಾರೆ.ಮಹಾಜನ್ ವರದಿಯ ಪ್ರಕಾರ ಖಾನಾಪುರ ತಾಲ್ಲೂಕು ಮಹಾರಾಷ್ಟ್ರಕ್ಕೆ ಸೇರಬೇಕು. ಈ ತಾಲ್ಲೂಕಿನ ಶೇ 80ರಷ್ಟು ಜನ ಮರಾಠಿ ಭಾಷಿಕರು. ಅಭೇದ್ಯ ಅರಣ್ಯದಿಂದ ಕೂಡಿರುವ ತಾಲ್ಲೂಕಿನ ಪಶ್ಚಿಮ ಭಾಗ ಗೋವಾ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಗೋವಾ ಭಾಗದ ಕೆಲ ಜನ ಕೊಂಕಣಿಯನ್ನೂ ಮಾತನಾಡುತ್ತಾರೆ. ಬಯಲು ಪ್ರದೇಶವಾದ ತಾಲ್ಲೂಕಿನ ಪೂರ್ವ ಭಾಗದಲ್ಲಿ ಕನ್ನಡಿಗರ ಹಳ್ಳಿಗಳಿವೆ.2008ರ ಚುನಾವಣೆಯಲ್ಲಿ ಎಂಇಎಸ್‌ನಲ್ಲಿ ಬಂಡಾಯ ಹೊಗೆಯಾಡುತ್ತಿತ್ತು. 16ಕ್ಕೂ ಹೆಚ್ಚು ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇದ್ದುದರಿಂದ ಮತ ಹೋಳಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದರು.ಈ ಬಾರಿ ಖಾನಾಪುರದಲ್ಲಿ ಎಂಇಎಸ್ ಅಭ್ಯರ್ಥಿ ಅರವಿಂದ್ ಪಾಟೀಲ್, ಹಾಲಿ ಶಾಸಕ ರೇಮಾನಿ ಮತ್ತು ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿರುವ ವೈದ್ಯೆ ಡಾ. ಅಂಜಲಿ ನಿಂಬಾಳ್ಕರ್ ಸ್ಪರ್ಧೆ ಸಾಕಷ್ಟು ಆಸಕ್ತಿ ಕೆರಳಿಸಿದೆ. ಶಾಸಕ ರೇಮಾನಿ ಸಾಕಷ್ಟು ಅಭಿವದ್ಧಿ ಕೆಲಸ ಮಾಡಿದ್ದರೂ ಕ್ಷೇತ್ರದ ಜನರ ಜತೆ ದರ್ಪದಿಂದ ಮಾತನಾಡುತ್ತಾರೆ ಎಂಬ ಆರೋಪವಿದೆ.ಎಂ.ಇ.ಎಸ್‌ಗೆ ಈ ಬಾರಿ ಬಂಡಾಯದ ಹಾವಳಿ ಮೊದಲಿನಷ್ಟಿಲ್ಲ. ಪಕ್ಷೇತರರಾಗಿ ಸ್ಪರ್ಧಿಸಿರುವ ಅಂಜಲಿ ನಿಂಬಾಳ್ಕರ್ (ಇವರು ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ) ತಮ್ಮ ಮಾತುಗಳಿಂದ ಜನರ ಮನ ಗೆಲ್ಲುವ ಯತ್ನದಲ್ಲಿದ್ದಾರೆ. ಆರು ತಿಂಗಳಿನಿಂದ ಖಾನಾಪೂರದಲ್ಲೇ ಉಳಿದುಕೊಂಡು ಚುನಾವಣೆಗೆ ತಯಾರಿ ಮಾಡಿದ್ದಾರೆ. ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆಯರನ್ನು ಒಲಿಸಿಕೊಳ್ಳುವ ತಂತ್ರ ಮಾಡಿದ್ದಾರೆ. ಅಭಿವೃದ್ಧಿಯ ಮಾತೂ ಆಡುತ್ತಿದ್ದಾರೆ.ಎಂಇಎಸ್‌ನದ್ದು ಯಾವಾಗಲೂ ವಿಭಜನೆಯ ರಾಜಕಾರಣ. ಮಹಾರಾಷ್ಟ್ರದಲ್ಲಿ ಸ್ವರ್ಗವೇ ಇದೆ. ತಾಲ್ಲೂಕನ್ನು ಅಲ್ಲಿಗೇ ಸೇರಿಸುತ್ತೇವೆ ಎಂದು ಮತದಾರರನ್ನು ನಂಬಿಸುತ್ತಲೇ ಬಂದು ಅದು ಚುನಾವಣೆಗಳಲ್ಲಿ ಆಯ್ಕೆಯಾಗುತ್ತದೆ. ಅಲ್ಪಸ್ವಲ್ಪ ಕಲಿತ ಮರಾಠಿ ಜನರೂ ಎಲ್ಲದಕ್ಕೂ ಕರ್ನಾಟಕ ಸರ್ಕಾರವನ್ನು ದೂರುವ ಚಾಳಿ ಹೊಂದಿದ್ದಾರೆ. ಬಸ್ ತಡವಾಗಿ ಬಂದರೆ, ರೇಷನ್ ಅಂಗಡಿಯ ಬಾಗಿಲು ಹಾಕಿದ್ದರೆ, ಅಕಸ್ಮಾತ್ತಾಗಿ ನಲ್ಲಿಯಲ್ಲಿ ನೀರು ಬರದೇ ಇದ್ದರೆ ಕರ್ನಾಟಕ ಸರ್ಕಾರ ತಮಗೆ ಮೋಸ ಮಾಡುತ್ತಿದೆ ಎಂಬಂತೆ ಮಾತನಾಡುತ್ತಾರೆ.ಆದರೆ, ಅನಕ್ಷರಸ್ಥ ಮುಗ್ಧ ಮರಾಠಿಗರಿಗೆ ಗಡಿ ಸಮಸ್ಯೆ ಹಾಗೂ ಭಾಷೆಯ ರಾಜಕಾರಣ ಸಂಪೂರ್ಣ ಅಪ್ರಸ್ತುತ. ಅವರಿಗೆ ಬೇಕಾಗಿರುವುದು ಅಭಿವೃದ್ಧಿ ಮಾತ್ರ.

ಪ್ರತಿಕ್ರಿಯಿಸಿ (+)