ಮರಾಠಿ-ಕನ್ನಡ ಸಹಮಿಲನಕ್ಕೆ ಕರೆ

7

ಮರಾಠಿ-ಕನ್ನಡ ಸಹಮಿಲನಕ್ಕೆ ಕರೆ

Published:
Updated:

ಮುಂಬೈ:ಭಾಷೆ ಬೆಸೆಯುವ ಕೆಲಸವನ್ನು ಪತ್ರಕರ್ತರು ಮಾಡಬೇಕು. ಭಾಷೆಗಾಗಿ ಜಗಳ ಅನಗತ್ಯ. `ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ~ ಅಂತಹ ಬೆಸೆಯುವ ಕೆಲಸವನ್ನು ಮುಂಬೈಯಲ್ಲಿ ಮಾಡುತ್ತಿದೆ ಎಂದು `ದೂರದರ್ಶನ ಪತ್ರಕಾರ್ ಸಂಘ~ದ ಅಧ್ಯಕ್ಷರೂ, ಮುಂಬೈ ಮರಾಠಿ ಪತ್ರಕಾರ್ ಸಂಘದ ಉಪಾಧ್ಯಕ್ಷರೂ ಆಗಿರುವ ಶಶಿಕಾಂತ್ ಸಾಂಡ್‌ಬೋರ್ ಹೇಳಿದರು. ಮುಂಬೈಯ ದಾದರ್ ಪೂರ್ವದಲ್ಲಿನ ದೇವಾಡಿಗ ಸೆಂಟರ್‌ನಲ್ಲಿ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ (ಕಪಸಮ) ಇದೇ ಮೊತ್ತಮೊದಲು ಆಯೋಜಿಸಿದ್ದ ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ `ಸಹಮಿಲನ-ಸಂವಾದ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡಿಗ ಪತ್ರಕರ್ತರ ಸಂಘ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡಿಗ ಪತ್ರಕರ್ತರ ಸಂಘದ  ಪ್ರಾಯೋಜಕತ್ವದಲ್ಲಿ ನಡೆದ ಸಮ್ಮೇಳನಕ್ಕೆ, ಮಹಾರಾಷ್ಟದ ಮೀಡಿಯಾ    ಸ್ಪೋರ್ಟ್ಸ್ ಅಕಾಡೆಮಿಯ ಗೌ.ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ  ದೀಪ ಬೆಳಗಿ ವಿಧ್ಯುಕ್ತ ಚಾಲನೆ ನೀಡಿದರು.ಮುಖ್ಯಅತಿಥಿಯಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಮರಾಠಿ -ಕನ್ನಡ ಬಾಂಧವ್ಯವನ್ನು ಬೆಸೆಯುವ ಕೆಲಸವನ್ನು ಮುಂಬೈನಲ್ಲಿರುವ ಕನ್ನಡ ಪತ್ರಕರ್ತರು ಮಾಡಿದರೆ, ಆಗಾಗ ತಲೆದೋರುವ ಸಣ್ಣಪುಟ್ಟ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದರಲ್ಲದೆ, ಮುಂಬೈ ಕನ್ನಡಿಗರು ಸದಾ  ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿರುವುದು ಹೆಮ್ಮೆಯ ವಿಷಯ ಎಂದರು. ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪಾಲೆತ್ತಾಡಿ  ಅಧ್ಯಕ್ಷತೆ ವಹಿಸಿದ್ದರು.ಮುಂಬೈಯಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಇತಿಹಾಸವಿದೆ. ಹವ್ಯಕ ಸುಬೋಧದಿಂದ ಹಿಡಿದು ನುಡಿ, ಮೊಗವೀರ, ಅಕ್ಷಯ, ಗುರುತು, ಕರ್ನಾಟಕ ಮಲ್ಲ ಈ ಮುಂತಾದವು ಇಲ್ಲಿನ ಕನ್ನಡಿಗರಲ್ಲಿ ಜಾಗೃತಿ ಹುಟ್ಟಿಸುತ್ತಾ ಬಂದಿವೆ ಎಂದು  ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಎನ್.ಉಪಾಧ್ಯ ಹೇಳಿದರು.ಕೆಲ್ವಿನ್ ಜೋಶ್ವಾ  ಮಾತನಾಡಿ  ಮುಂಬೈಯ ಈ ಯಾಂತ್ರಿಕ  ಬದುಕಿನಲ್ಲಿ ನಾವು ನಮ್ಮ ಮಾತೃ ಭಾಷೆ, ಕಲಿತ ಭಾಷೆಯನ್ನು ಮರೆಯುವ ಸಾಧ್ಯತೆಯೇ ಹೆಚ್ಚಾಗಿದೆ. ಪತ್ರಕರ್ತರು ತಮ್ಮ ಪತ್ರಿಕೆಗಳಲ್ಲಿ ಜನ ಜಾಗೃತಿ ಮೂಡಿಸಿ ಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು. ಹಾಗೂ ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಗೋಪಾಲ್ ಸಿ.ಮೊಲಿ ಹಾಗೂ ಹಿರಿಯ ಉದ್ಯಮಿ ವಿಠಲ್ ಎಸ್.ಪೂಜಾರಿ  ಮುಖ್ಯ ಅತಿಥಿಗಳಾಗಿದ್ದರು.ನಂತರ ಗಂಗಾಧರ ಮೊದಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ  ಕನ್ನಡಿಗ ಪತ್ರಕರ್ತರ ಸಂಘದ ಕಾರ್ಯದರ್ಶಿ ದಯಾ ಸಾಗರ್ ಚೌಟ, ದ.ಕ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ ಹರೀಶ್ ರೈ, ದ.ಕ ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ, ಹರೀಶ್ ಬಂಟ್ವಾಳ್ ಭಾಗವಹಿಸಿದ್ದರು. ಕನ್ನಡಿಗ ಪತ್ರಕರ್ತರ ಸಂಘದ ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry