ಮರಾಠಿ ಪ್ರಭಾವ: ಕನ್ನಡ ಶಾಲೆಯಲ್ಲಿ ವೈಭವ...!

7

ಮರಾಠಿ ಪ್ರಭಾವ: ಕನ್ನಡ ಶಾಲೆಯಲ್ಲಿ ವೈಭವ...!

Published:
Updated:

ಆಳಂದ: ತಾಲ್ಲೂಕಿನ ಗಡಿಭಾಗದಲ್ಲಿ­ರುವ ಜಮಗಾ(ಆರ್) ಕೇವಲ 120 ಮನೆಗಳಿರುವ ಪುಟ್ಟಗ್ರಾಮ. ಅಧಿಕ ಮರಾಠಿಗರಿರುವ ಇಲ್ಲಿನ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯೂ  ಇತರ ಶಾಲೆಗಳಿಗೆ ಮಾದರಿ­ಯಾಗಿದೆ. ಗ್ರಾಮಸ್ಥರ ಮತ್ತು ಶಿಕ್ಷಕರ ಸಮರ್ಪಣಾ ಭಾವದ ಸಹಭಾಗಿತ್ವದಿಂದಾಗಿ ಮಕ್ಕಳೆಲ್ಲ ಒಂದಾಗಿ ಕಲಿಯುತ್ತಿರುವುದು ಗಮನಾರ್ಹ.ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿ ಸುಸಜ್ಜಿತ ಕಟ್ಟಡ ಇರುವ ಶಾಲಾ ಆವರಣ­ದಲ್ಲಿ ಬೆಳೆದು ನಿಂತಿರುವ ಹತ್ತಾರು ಗಿಡಗಳು, ಕೈದೋಟ ಹಾಗೂ ದೇವಾಲಯದ ದ್ವಾರ ಬಾಗಿಲು ಇರುವಂತೆ ಸುಂದರವಾಗಿದೆ. ಆವರಣದ ಒಳಗೆ ಸ್ವಚ್ಛತೆ, ಕುಡಿಯುವ ನೀರಿಗಾಗಿ ಸುಸಜ್ಜಿತ ಟ್ಯಾಂಕ್ ಹಾಗೂ ಬಾಲಕ –ಬಾಲಕಿಯರಿಗೆ ಪ್ರತ್ಯೇಕ ನಲ್ಲಿಗಳ ವ್ಯವಸ್ಥೆ, ಬಿಸಿಯೂಟದ ಕೋಣೆ, ಶೌಚಾಲಯ ಹೀಗೆ ಎಲ್ಲ ಮೂಲ ಸೌಲಭ್ಯಗಳ ಅಚ್ಚುಕಟ್ಟುತನ ಮನಸೆಳೆಯುತ್ತದೆ. ಶಾಲೆಯ ಮುಖ್ಯಶಿಕ್ಷಕ ದಾಮೋದರಾವ ಕುಲಕರ್ಣಿ ಹಾಗೂ ಸಹ ಶಿಕ್ಷಕರ ಶ್ರಮಕ್ಕೆ ಗ್ರಾಮಸ್ಥರ ಸಹಕಾರ ಇಲ್ಲಿ ಶಾಲೆಯ ಅಭಿವೃದ್ಧಿಗೆ ಕಾರಣವಾಗಿದೆ.ಆವರಣದಲ್ಲಿ ಹಾಸಿದ ಶಹಾಬಾದ್ ಕಲ್ಲು, ಸುತ್ತಲೂ ಗೋಡೆ, ಬಾಗಿಲು ಹಾಗೂ ಕಚೇರಿಯಲ್ಲಿ ಕುಳಿತುಕೊಳ್ಳಲು ಬಳಸುವ ಉತ್ತಮ ಆಸನ, ತರಗತಿಗಳಲ್ಲಿ ವಿದ್ಯುತ್, ಪ್ಯಾನ್ ಮತ್ತು ಧ್ವನಿವರ್ಧಕ ವ್ಯವಸ್ಥೆ ಸೇರಿದಂತೆ ಭೌತಿಕ ಹಾಗೂ ಕಲಿಕಾ ಅಗತ್ಯಗಳ ಈಡೇರಿಸಿಕೊಳ್ಳಲು ಕೇವಲ ಸರ್ಕಾರ ಮತ್ತು ಇಲಾಖೆಯ ಅನುದಾನ ನೆಚ್ಚಿಕೊಳ್ಳದೇ ಗ್ರಾಮಸ್ಥರೆ ದೇಣಿಗೆ ಸಂಗ್ರಹಿಸಿ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.ಗ್ರಾಮಸ್ಥರು ಪ್ರತಿವರ್ಷ ಸುಮಾರು ₨20ಸಾವಿರದಷ್ಷು ದೇಣಿಗೆಯನ್ನು ಶಾಲೆಗೆ ನೀಡುತ್ತಾ ಬಂದಿದ್ದಾರೆ. ಶಿಕ್ಷಕರ ಕೊರತೆಯಾದರೆ ಗ್ರಾಮಸ್ಥರೇ ಪ್ರೋತ್ಸಾಹ ಧನ ನೀಡಿ ಅರ್ಹ ಅತಿಥಿ ಶಿಕ್ಷಕರನ್ನು ನೇಮಕಮಾಡಿಕೊಳ್ಳುತ್ತಾರೆ. ಈ ವರ್ಷ ಎರಡು ಹುದ್ದೆ ಖಾಲಿ ಇದ್ದ ಕಾರಣ 3 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ಪ್ರಸಕ್ತ ಸಾಲಿನಲ್ಲಿ 1ರಿಂದ 8ನೇ ತರಗತಿಯಲ್ಲಿ ಒಟ್ಟು 212 ಮಕ್ಕಳು ಓದುತ್ತಿದ್ದಾರೆ. ಇಲ್ಲಿಯ ಶಿಕ್ಷಣದ ಗುಣಮಟ್ಟಕ್ಕೆ ಮಾರುಹೋದ ಸಮೀಪದ ರುದ್ರವಾಡಿ, ರುದ್ರವಾಡಿ ತಾಂಡಾ ಮತ್ತಿತರ ಗ್ರಾಮಗಳ ಮಕ್ಕಳು ಇಲ್ಲಿಗೆ ಬಂದು ಪ್ರವೇಶ ಪಡೆದು ಕಲಿಯುತ್ತಿದ್ದಾರೆ ಎನ್ನುವುದು ಎಸ್‌ಡಿಎಂಸಿ ಅಧ್ಯಕ್ಷ ಧನರಾಜ ಆಲೋಜಿ ಅಭಿಮಾನದ ನುಡಿ.ಶಾಲಾ ವೇಳೆ ಬೆಳಿಗ್ಗೆ 10 ಗಂಟೆಯಾದರೂ ಈ ಸರ್ಕಾರಿ ಶಾಲೆಯಲ್ಲಿ ಎಂಟು ವರ್ಷಗಳಿಂದ ಬೆಳಿಗ್ಗೆ 8:30ಕ್ಕೆ ಮುಖ್ಯಶಿಕ್ಷಕ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿರುತ್ತಾರೆ. ಮುಂಜಾನೆ ಸ್ವಚ್ಛತೆ, ಹೂದೋಟ ನಿರ್ವಹಣೆ, ಪರಿಹಾರ ಬೋಧನೆ, ಇಂಗ್ಲಿಷ ಕಲಿಕೆ ಹೀಗೆ ಏನಾದರೊಂದು ಚಟುವಟಿಕೆ ನಡೆಯುತ್ತದೆ. ಸಂಜೆ 5.30ರ ನಂತರವೇ ಎಲ್ಲರೂ ಹೊರಡುವರು. ಪ್ರತಿ ತರಗತಿ ಕೋಣೆಯಲ್ಲಿ ಧ್ವನಿ ವರ್ಧಕ ಅಳವಡಿಸಿದ್ದು ತಮ್ಮ ಅಗತ್ಯಕ್ಕೆ ತಕ್ಕ ರೀತಿಯಲ್ಲಿ ನೀತಿ ಕತೆ, ಜನಪದ, ನಾಡಗೀತೆ, ಭಾವಗೀತೆಯ ಹಾಡು, ವಿಜ್ಞಾನದ ವಿಷಯ, ರಸಪ್ರಶ್ನೆ, ಪ್ರವಚನ ಮತ್ತಿತರ ಪಠ್ಯ ಹಾಗೂ ಪಠ್ಯೇತರ ವಿಷಯಾಂಶಗಳನ್ನು ಮಕ್ಕಳು ಆಲಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮಕ್ಕಳಿಗೆ ಏಕ ಕಾಲದಲ್ಲಿ ಒಂದೇ ಪಾಠ ಹೇಳುವ ವ್ಯವಸ್ಥೆ ಮಾಡಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಹೆಚ್ಚು ಸ್ವಯಂ ಕಲಿಕೆಗೆ ಉತ್ತೇಜನ ನೀಡಲಾಗುತ್ತದೆ.ರಾಷ್ಟ್ರೀಯ ಹಬ್ಬಗಳ ಜೊತೆ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಮತ್ತು ಜಯಂತಿ ಹಾಗೂ ಪರಿಸರ, ಬಾಲಕಾರ್ಮಿಕ ನಿಷೇಧ, ವಿಜ್ಞಾನ, ಗಣಿತ ಹಾಗೂ ಜನಸಂಖ್ಯಾ ಮತ್ತು ಸಾಕ್ಷರತಾ ದಿನಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪಾಲಕರು ಹೆಚ್ಚು ಪಾಲ್ಗೊಂಡು ಬಹುಮಾನ ಮತ್ತು ಪ್ರೋತ್ಸಾಹ ನೀಡುವುದು ಮಕ್ಕಳಿಗೂ ಹಾಗೂ ನಮಗೂ ಸಂತೋಷ ಮೂಡಿಸುತ್ತದೆ ಎಂದು ವಿವರಿಸುತ್ತಾರೆ ಶಿಕ್ಷಕ ಹವಳಪ್ಪ ಮಂಟಗಿ.ಮರಾಠಿ ಪ್ರಭಾವ ಇರುವ ಜಮಗಾ(ಆರ್) ಶಾಲೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಸಮನ್ವಯತೆ ತುಂಬಾ ಚೆನ್ನಾಗಿದೆ. ಎಲ್ಲ ಶೈಕ್ಷಣಿಕ ಯೋಜನೆಗಳು ಸಮರ್ಪಕವಾಗಿ ಜಾರಿಗೊಂಡು ಸಂತೃಪ್ತಿದಾಯಕ ಶಿಕ್ಷಣ ನೀಡುವಲ್ಲಿ ಈ ಶಾಲೆ ಯಶಸ್ವಿಯಾಗಿದೆ ಎನ್ನುವುದು ಸಮೂಹ ಸಂಪನ್ಮೂಲ ವ್ಯಕ್ತಿ ಕ್ಷೀರಾನಂದ ಸನ್ಮುಖ ಅವರ ವಿವರ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry