ಮಂಗಳವಾರ, ಮೇ 24, 2022
26 °C

ಮರಿಯಾಪುರದಲ್ಲಿ ಇಂದು ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರ್ಚುಗಳು ಯೇಸುಕ್ರಿಸ್ತನ ಆವಾಸಸ್ಥಾನ ಎಂಬುದು ಕ್ರೈಸ್ತರ ನಂಬಿಕೆ. ವಾಸ್ತುಶಿಲ್ಪದ ಸೌಂದರ್ಯ ಮತ್ತು ವಿನ್ಯಾಸದಿಂದಲೇ ಪ್ರಸಿದ್ಧಿ ಪಡೆದಿರುವ ಎಷ್ಟೋ ಚರ್ಚುಗಳಿವೆ. ಕನಕಪುರ ಮುಖ್ಯರಸ್ತೆಯ ಕಗ್ಗಲಿಪುರದ ಬಳಿಯಿರುವ ಮರಿಯಾಪುರ ಗ್ರಾಮದ ಕಾರ್ಮೆಲ್ ಮಾತೆಯ ದೇವಾಲಯ ಇಂತಹುದೇ ಆಕರ್ಷಣೆಯನ್ನು ಹೊಂದಿರುವ ಚರ್ಚ್. ಪ್ರತಿವರ್ಷ ಇಲ್ಲಿ ನಡೆಯುವ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಜನರು ಕಟ್ಟಡದ ಸೌಂದರ್ಯದ ಬಗ್ಗೆ ಚರ್ಚೆ ನಡೆಸುವುದು ಸಾಮಾನ್ಯ.ಬೆಂಗಳೂರಿನಿಂದ ಸುಮಾರು 20 ಕಿ. ಮೀ. ದೂರದಲ್ಲಿರುವ ಮರಿಯಾಪುರದ ಈ ಚರ್ಚ್ 1899ರಲ್ಲಿ ನಿರ್ಮಾಣವಾದುದು. ಕ್ರಿ.ಶ. 1876-77 ರ ಅವಧಿಯಲ್ಲಿ ಕಂಡುಬಂದ ಭೀಕರ ಬರಗಾಲ ಮತ್ತು ಪ್ಲೇಗ್‌ನಿಂದ ಅನಾಥರಾಗಿದ್ದ ಒಂದಷ್ಟು ಜನರ ಪುನರ್ವಸತಿಯ ಜವಾಬ್ದಾರಿ ಹೊತ್ತಿದ್ದ ಫಾದರ್ ಫಿಲಿಪ್ ಸಿಜನ್ (ಎಂಇಪಿ) ಅವರು ಪಾಳುಬಿದ್ದಿದ್ದ ತಟ್ಟುಗುಪ್ಪೆ ಗ್ರಾಮವನ್ನು ಮೈಸೂರು ಮಹಾರಾಜರಿಂದ ಪಡೆದು ಮರಿಯಾಪುರ ಹೆಸರಿನಲ್ಲಿ ಮರು ನಿರ್ಮಾಣ ಮಾಡಿದರು.ಮರಿಯಾಪುರ ಚರ್ಚ್  ಜೀರ್ಣೋದ್ಧಾರವಾಗುತ್ತಾ ಬಂದಂತೆ ಮೊಘಲ್ ಶೈಲಿಯಲ್ಲಿದ್ದ ಕಟ್ಟಡದ ವಿನ್ಯಾಸ ಬದಲಾವಣೆಯನ್ನೂ ಕಂಡಿತು. ಈಗಲೂ ಈ ಚರ್ಚ್‌ನ ಮೇಲಿನರ್ಧ ಮೊಘಲ್ ಶೈಲಿಯಲ್ಲೂ, ಉಳಿದರ್ಧ ಗ್ರೀಕೋ-ರೋಮನ್ ಶೈಲಿಯಲ್ಲೂ ಇದೆ. ಗ್ರೀಕೋ-ರೋಮನ್ ಶೈಲಿಗೆ ರೋಮಿನಲ್ಲಿರುವ `ಕೊಲೊಸಿಯಂ'ನಂಥ ಮಹಾ ರಂಗಬಯಲು ಕಮಾನುಗಳಿಂದಲೇ ಕೂಡಿರುವ ಬಹುಮಹಡಿಯದ್ದು. ಪೀಠದ (ಬಲಿಪೂಜೆಯನ್ನು ಅರ್ಪಿಸುವ ಕೇಂದ್ರ ಸ್ಥಳ) ಮೇಲೆ ಮಾತೆ ಮೇರಿಯ ವಾತ್ಸಲ್ಯಭರಿತ ಸುಂದರ ಪ್ರತಿಮೆಯಿದೆ.ದೇವಾಲಯದ ವಿನ್ಯಾಸ ಮರಿಯಾಪುರದ ಪ್ರಮುಖ ಆಕರ್ಷಣೆಯಾದರೆ, ಅಲ್ಲಿ ನಡೆಯುವ ಬೈಬಲ್ ಆಧರಿತ ನಾಟಕ, ಧ್ವನಿಬೆಳಕಿನ ಕಾರ್ಯಕ್ರಮಗಳು ಇನ್ನೊಂದು ಹೆಗ್ಗಳಿಕೆ.ಇಂದು ಮಹೋತ್ಸವ

ಜುಲೈ 16 ಕಾರ್ಮೆಲ್ ಮಾತೆಯ ಮಹೋತ್ಸವ. ಇದು, ಊರಿಗೇ ದೊಡ್ಡ ಹಬ್ಬ. ಉದ್ಯೋಗ ನಿಮಿತ್ತ ಪರ ಊರಿನಲ್ಲಿ ನೆಲೆಸಿದವರೂ ಮನೆಗೆ ಮರಳುತ್ತಾರೆ. ಇಡೀ ಊರಿನ ಜನರು ಒಟ್ಟಾಗಿ ಸೇರಿ ಪ್ರಾರ್ಥನಾವಿಧಿಗಳಲ್ಲಿ ಭಾಗವಹಿಸಿ, ಹಬ್ಬ ಆಚರಿಸುತ್ತಾರೆ. ಈಗಾಗಲೇ ಧ್ವಜಾರೋಹಣದೊಂದಿಗೆ ಹಬ್ಬದ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ. ಅಂದಿನಿಂದ ವಿಶೇಷ ಪ್ರಾರ್ಥನೆಗಳು, ಪೂಜೆಗಳು, ಪ್ರಬೋಧನೆಗಳು, ಹಬ್ಬದ ಸಿದ್ಧತೆಗಳು ನಡೆದಿವೆ. ಹಬ್ಬದ ದಿನ ಮಹಾಧರ್ಮಾಧ್ಯಕ್ಷರ ಬಲಿಪೂಜೆ, ಆಶೀರ್ವಚನ, ಗ್ರಾಮಸ್ಥರು ತೋಪಿನಲ್ಲಿ ಒಟ್ಟಾಗಿ ಅಡುಗೆಮಾಡಿ ಊಟ ಮಾಡುವುದು ಇಲ್ಲಿನ ಸಂಪ್ರದಾಯ. ತಮ್ಮ ಪೂರ್ವಜರು ಬರಗಾಲ ಮತ್ತು ರೋಗಪೀಡಿತರಾಗಿ ಅನಾಥರಾಗಿದ್ದಾಗ ಸಿಜನ್ ಸ್ವಾಮಿಯವರ ಪಾಲನೆಯಲ್ಲಿ ಮಾಡುತ್ತಿದ್ದ ಸಹಭೋಜನದ  ಸಂಕೇತವಿದು. ಸಂಜೆ ಕಾರ್ಮೆಲ್ ಮಾತೆಯ ತೇರಿನ ಮೆರವಣಿಗೆ ಇರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.