ಭಾನುವಾರ, ಜನವರಿ 19, 2020
29 °C

ಮರಿಯಾಲ ಬಳಿ ರೈಲು ನಿಲುಗಡೆಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಮರಿಯಾಲದ ಬಳಿ ರೈಲು ನಿಲುಗಡೆಗೆ ಕೊನೆಗೂ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.

ಈ ಹಿಂದೆ ಮೈಸೂರು- ಚಾಮರಾಜನಗರ ಮೀಟರ್ ಗೇಜ್ ರೈಲು ಮಾರ್ಗ ಇದ್ದ ವೇಳೆ ಮರಿಯಾಲದ ಬಳಿ ರೈಲು ನಿಲುಗಡೆ ವ್ಯವಸ್ಥೆ ಇತ್ತು. ಆದರೆ, ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡ ನಂತರ ರೈಲು ನಿಲುಗಡೆ ರದ್ದಾಯಿತು.ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ರೈಲು ನಿಲುಗಡೆ ವ್ಯವಸ್ಥೆ ಮಾಡಲು ಹಲವು ಬಾರಿ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಹುಬ್ಬಳ್ಳಿಯ ರೈಲ್ವೆ ಜನರಲ್ ಮ್ಯಾನೇಜರ್ ಅವರಿಗೆ ಸಂಸದ ಆರ್‌. ಧ್ರುವನಾರಾಯಣ ಪತ್ರ ಬರೆದಿದ್ದರು. ರೈಲ್ವೆ ಸಲಹಾ ಸಮಿತಿ ಸಭೆಗಳಲ್ಲಿ ಕೂಡ ಮನವಿ ಮಾಡಿದ್ದರು.ಆದರೆ, ಚಾಮರಾಜನಗರದಿಂದ ಮರಿಯಾಲವು 5 ಕಿ.ಮೀ. ಒಳಗೆ ಇದೆ. ಹೀಗಾಗಿ, ರೈಲು ನಿಲುಗಡೆ ವ್ಯವಸ್ಥೆ ಮಾಡಲು ತಾಂತ್ರಿಕವಾಗಿ ಸಮಸ್ಯೆಯಾಗಲಿದೆ ಎಂಬ ಉತ್ತರ ಬಂದಿತ್ತು.ಈಚೆಗೆ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಧ್ರುವನಾರಾಯಣ ಅವರು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಮರಿಯಾಲ ಗ್ರಾಮದಲ್ಲಿ ಈಗಾಗಲೇ ಜೆಎಸ್ಎಸ್  ಸಂಸ್ಥೆಯ ಐಟಿಐ, ರುಡ್‌ಸೆಟ್‌ ತರಬೇತಿ ಕೇಂದ್ರ, ಖಾಸಗಿ ಪದವಿಪೂರ್ವ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿವೆ. ಪ್ರತಿದಿನ ಸುಮಾರು 2,000 ವಿದ್ಯಾರ್ಥಿಗಳು ಮತ್ತು 200 ಸಿಬ್ಬಂದಿ ಮೈಸೂರು- ಚಾಮರಾಜನಗರ ಮಾರ್ಗದಲ್ಲಿ ಮರಿಯಾಲಕ್ಕೆ ಬರುತ್ತಿದ್ದಾರೆ. ಕೂಲಿಗಾಗಿ ಕಾರ್ಮಿಕರು ಮೈಸೂರಿಗೆ ಪ್ರಯಾಣ ಮಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಮರಿಯಾಲದ ಬಳಿ ರೈಲು ನಿಲುಗಡೆ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದರು.ಇದಕ್ಕೆ ರೈಲ್ವೆ ಸಚಿವರು ಸ್ಪಂದಿಸಿದ್ದು, ಮರಿಯಾಲದಲ್ಲಿ ರೈಲು ನಿಲುಗಡೆ ಮಾಡಲು ವ್ಯವಸ್ಥೆ ಮಾಡಿದ್ದಾರೆ ಎಂದು ಸಂಸದ ಧ್ರುವನಾರಾಯಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)