ಗುರುವಾರ , ಏಪ್ರಿಲ್ 22, 2021
28 °C

ಮರೀಚಿಕೆಯಾದ ಗ್ರಾಮೀಣ ಸಾರಿಗೆ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಖಾಸಗಿ ವಾಹನಗಳಲ್ಲಿ ಲಾಭದ ಆಸೆಗೆ ಪ್ರಯಾಣಿಕರನ್ನು ಕುರಿ ತುಂಬಿದಂತೆ ತುಂಬಿ ಪ್ರಯಾಣ ಮಾಡುವುದನ್ನು ನಿಲ್ಲಿಸುವ ಸಲುವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶ ಗಳಿಗೆ ಹೆಚ್ಚು ಹೆಚ್ಚು ವಾಹನಗಳನ್ನು ಸಂಚರಿಸುವಂತೆ ಮಾಡುತ್ತೇವೆ ಎಂಬ ಭರವಸೆಯ ಮಾತುಗಳು ಬರಿ ಸುಳ್ಳು ಎಂಬ ದೂರುಗಳು ಕೇಳಿ ಬರುತ್ತಿವೆ.ಬಹುದಿನಗಳ ಬೇಡಿಕೆಯಿಂದಾಗಿ ಮಸ್ಕಿ ಪಟ್ಟಣದಲ್ಲಿ ಬಸ್ ಡಿಪೋ ಪ್ರಾರಂಭಿಸಿದ್ದು, ಇದರಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲ ವಾಗುತ್ತದೆ ಎನ್ನುವುದು ಕನಸಿನ ಮಾತಾಗಿದೆ. ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡು ಸುಮಾರು 80 ಹಳ್ಳಿಗಳ ಸಾರ್ವಜನಿಕರು ಮಸ್ಕಿ ಪಟ್ಟಣವನ್ನು ಅವಲಂಬಿಸಿದ್ದಾರೆ. ಬಸ್ ಸೌಲಭ್ಯವಿಲ್ಲದೆ ಖಾಸಗಿ ಟೆಂಪೊ, ಕ್ರೂಜರ್, ಟಂ ಟಂ, ಆಟೋ, ಟಾಟಾ ಏಸ್ ಮತ್ತಿತರ ವಾಹನಗಳಲ್ಲಿ ಪ್ರಯಾಣಿಕರು ನಿಂತು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ಲಾಭದ ದುರಾಸೆಗೆ ಬಿದ್ದು ನಿತ್ಯ ನಗರ ಪ್ರದೇಶಗಳಿಗೆ ಹೆಚ್ಚು ವಾಹನ ಓಡಿಸುತ್ತಿದ್ದು, ಕಾಟಾಚಾರಕ್ಕೆ ಎಂಬಂತೆ ಗ್ರಾಮೀಣ ಪ್ರದೇಶಗಳಿಗೆ ಕೆಲ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ಓಡಿಸುವ ವಾಹನಗಳು ಬಹಳ ಹಳೆಯ ವಾಹನಗಳಿದ್ದು, ಕಿತ್ತುಹೋದ ಸೀಟುಗಳು, ಕಿಟಕಿ ಗಾಜುಗಳು ಹಾಳಾಗಿವೆ. ಗಾಳಿ, ಮಳೆ, ನೀರು ಬಸ್‌ನೊಳಗೆ ಬರುತ್ತಿರುತ್ತವೆ. ಸರಿಯಾದ ಸಮಯಕ್ಕೆ ಮುಟ್ಟುವುದಿಲ್ಲ.ಸರಕು ಸರಂಜಾಮುಗಳನ್ನು ಸಾಗಿಸಬೇಕಾದ ವಾಹನಗಳು ಜನರನ್ನು ಸಾಗಿಸಲು ಬಳಕೆಯಾಗತೊಡಗಿವೆ. ಖಾಸಗಿ ವಾಹನಗಳಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಂಚರಿಸುತ್ತಿದ್ದಾರೆ. ವಾಹನ ಚಾಲಕರಿಗೆ ಸರಿಯಾದ ತರಬೇತಿ ಇಲ್ಲದೆ, ನಿಯಂತ್ರಣ ತಪ್ಪಿ ಹಲವಾರು ಬಾರಿ ಪಲ್ಟಿ ಹೊಡೆದು ಅಪಘಾತಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ಸಾರಿಗೆ ಸಚಿವರು ಈ ವರ್ಷ ಹೆಚ್ಚು ಬಸ್‌ಗಳ ಖರೀದಿಗೆ ಮುಂದಾಗಿದ್ದು ಹೈದರಾಬಾದ್ ಕರ್ನಾಟಕದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಾಹನಗಳನ್ನು ಕಳಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.