ಸೋಮವಾರ, ಮೇ 17, 2021
31 °C

ಮರೀಚಿಕೆಯಾದ ತಾಂಬ್ರಗುಂಡಿ ಕೆರೆ ದುರಸ್ತಿ

ಪ್ರಜಾವಾಣಿ ವಾರ್ತೆ/ ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಮುಂಡರಗಿ: ತಾಲ್ಲೂಕಿನಲ್ಲಿ ಹರಿಯುವ ತುಂಗಭದ್ರಾ ನದಿ ಹಾಗೂ ವಿವಿಧ ಗ್ರಾಮಗಳಲ್ಲಿರುವ ಕೆರೆಯ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಮುಂಡರಗಿ ತಾಲ್ಲೂಕಿಗೆ ಅಂಟಿಕೊಂಡಿರುವ `ಬರಗಾಲದ ನಾಡು' ಎನ್ನುವ ಪಟ್ಟವನ್ನು ಸಂಪೂರ್ಣವಾಗಿ ಅಳಿಸಿ ಹಾಕಬಹುದು.ತಾಲ್ಲೂಕಿನ ತಾಂಬ್ರಗುಂಡಿ ಕೆರೆ ಅದಕ್ಕೊಂದು ತಾಜಾ ಉದಾಹರಣೆ. 1948ರಲ್ಲಿ ನಿರ್ಮಿಸಿದ್ದೆಂದು ಹೇಳಲಾಗುತ್ತಿರುವ ತಾಂಬ್ರಗುಂಡಿ ಕೆರೆಯ ನೀರಿನಿಂದ ಮುಂಡರಗಿ ಪಟ್ಟಣದ ಜಮೀನು ಸೇರಿದಂತೆ ತಾಲ್ಲೂಕಿನ ತಾಂಬ್ರಗುಂಡಿ, ಬರದೂರು ಮೊದಲಾದ ಗ್ರಾಮಗಳ ಸುಮಾರು 602 ಎಕರೆ ಫಲವತ್ತಾದ ಜಮೀನಿಗೆ ನೀರು ಹಾಯಿಸಲಾಗುತ್ತಿತ್ತು. ಪ್ರತಿ ಮಳೆಗಾಲದಲ್ಲಿ ಹತ್ತಿರದ ಕಪ್ಪತಗುಡ್ಡದಿಂದ ಅಪಾರ ಪ್ರಮಾಣದ ನೀರು ಕೆರೆಗೆ ಹರಿದು ಬರುತ್ತಿದ್ದು, ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದ್ದ ಕೆರೆಯ ಒಡ್ಡು ಒಡೆದು ಹೋಗಿದೆ.  ಪ್ರತಿ ಮಳೆಗಾಲದಲ್ಲಿ ಹತ್ತಿರದ ಕಪ್ಪತಗುಡ್ಡದಿಂದ ಅಪಾರ ಪ್ರಮಾಣದ ಖನಿಜಯುಕ್ತ ಮಳೆಯ ನೀರು ಹರಿದು ಬರುತ್ತದೆ. 1987ರಲ್ಲಿ ಮಳೆಯ ನೀರಿನ ರಭಸಕ್ಕೆ ಒಡೆದು ಹೋಗಿದ್ದ ಕೆರೆಯ ಒಡ್ಡನ್ನು ಅಂದು ದುರಸ್ತಿಗೊಳಿಸಲಾಗಿತ್ತು. ನಂತರ ಪುನಃ 2003 ಹಾಗೂ 2007ರಲ್ಲಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಕೆರೆಯ ಒಡ್ಡು ಒಡೆದು ಹೋಯಿತು. ಒಡೆದು ಹೋಗಿರುವ ಕೆರೆಯ ಒಡ್ಡನ್ನು ದುರಸ್ಥಿಗೊಳಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಗ್ರಾಮಸ್ಥರು ಪ್ರತಿಭಟನೆ ಮಾಡುವುದರ ಜೊತೆಗೆ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ.ಇದರಿಂದಾಗಿ 602 ಎಕರೆ ಫಲವತ್ತಾದ ಜಮೀನು ಕಳೆದ ಎಳೆಂಟು ವರ್ಷಗಳಿಂದ ಹಾಳು ಬೀಳುವಂತಾಯಿತು. ಕೆರೆಯ ದುರಸ್ತಿಗೆ 13ನೇ ಹಣಕಾಸು ಯೋಜನೆಯಲ್ಲಿ ಅಂದಾಜು 1.97ಕೋಟಿ ರೂಪಾಯಿ ಅನುದಾನ ಮಂಜುರಾಗಿದೆ ಎಂದು ಹೇಳಲಾಗುತ್ತಿದ್ದು, ಅದರ ಗತಿ ಏನಾಯಿತು ಎಂದು ಯಾರಿಗೂ ತಿಳಿಯದಾಗಿದೆ. ತಾಂಬ್ರಗುಂಡಿ ಗ್ರಾಮವು ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ಎಸ್.ಎಸ್. ಪಾಟೀಲ ಹಾಗೂ ಕಳಕಪ್ಪ ಬಂಡಿ ಇಬ್ಬರೂ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದು, ರೈತರ ಕಾಳಜಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಕೆರೆ ದುರಸ್ತಿಗೊಳಿಸದಿದ್ದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.ಪ್ರತಿಬಾರಿ ಗ್ರಾಮ ಸಭೆ ನಡೆದಾಗಲೂ ಗ್ರಾಮಸ್ಥರು ಕೆರೆ ದುರಸ್ತಿಯ ವಿಷಯವನ್ನು ತಪ್ಪದೆ ಪ್ರಸ್ತಾಪಿಸುತ್ತಾರೆ. ಜಾಣ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಪ್ರತಿಬಾರಿ ಹುಸಿ ಭರವಸೆ ನೀಡಿ ಗ್ರಾಮಸ್ಥರನ್ನು ಯಾಮಾರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕೆರೆ ದುರಸ್ತಿಗೊಳಿಸಿದರೆ ನೂರಾರು ಎಕರೆ ಜಮೀನಿಗೆ ನೀರಿನ ಅನುಕೂಲತೆ ಸಿಗಲಿದೆ.`ತಾಲ್ಲೂಕಿನಲ್ಲಿ ಹಲವಾರು ಕೆರೆಗಳು ದುಃಸ್ಥಿತಿಯಲ್ಲಿದ್ದು ತಕ್ಷಣ ಅವುಗಳ ಹೂಳನ್ನು ತಗೆದು ಅವುಗಳನ್ನು ದುರಸ್ತಿಗೊಳಿಸಬೇಕು. ಕಳೆದ ಏಳು ವರ್ಷಗಳಿಂದ ನೀರು ಸಂಗ್ರಹವಾಗದೆ ಇರುವ ತಾಂಬ್ರಗುಂಡಿ ಕೆರೆ ಸೇರಿದಂತೆ ತಾಲ್ಲೂಕಿನಲ್ಲಿರುವ ಏತ ನೀರಾವರಿ ಯೋಜನೆಗಳನ್ನು ದುರಸ್ತಿಗೊಳಿಸಿ ರೈತರ ಜಮೀನಿಗೆ ನೀರು ಪೂರೈಸಬೇಕು. ಜುಲೈ 12ರಂದು ಮುಖ್ಯಮಂತ್ರಿ ಮಂಡಿಸಲಿರುವ ಬಜೆಟ್‌ನಲ್ಲಿ ತಾಂಬ್ರಗುಂಡಿ ಕೆರೆ ದುರಸ್ತಿಗೆ ಹೆಚ್ಚು ಹಣ ನೀಡಬೇಕು' ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ, ಅಂದಪ್ಪ ಬೆಲ್ಲದ ಹಾಗೂ ಮತ್ತಿತರರು ಒತ್ತಾಯಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.