ಗುರುವಾರ , ಮೇ 6, 2021
25 °C
ಬ್ಯಾಂಕ್‌ಗಳಲ್ಲಿ 3,000 ಕೋಟಿ ಬಿಬಿಎಂಪಿ ಸಾಲ-ಗುತ್ತಿಗೆದಾರರಿಗೆ 1,700 ಕೋಟಿ ಮೊತ್ತ ಬಾಕಿ

ಮರೀಚಿಕೆಯಾದ ಬಜೆಟ್; ಮಾಯವಾದ ಕಾಮಗಾರಿ!

ಪ್ರವೀಣ ಕುಲಕರ್ಣಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದೆಡೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಬಜೆಟ್ ಮಂಡನೆ ಆಗಿಲ್ಲ. ಇನ್ನೊಂದೆಡೆ ಗುತ್ತಿಗೆದಾರರಿಗೆ ಹಲವು ತಿಂಗಳಿಂದ ಬಾಕಿ ಮೊತ್ತವನ್ನೂ ನೀಡಿಲ್ಲ. ತೆರಿಗೆ ಸಂಗ್ರಹ ಕುಂಠಿತಗೊಂಡಿದ್ದು, ಬ್ಯಾಂಕ್ ಸಾಲದ ಕಂತು ಬೆಳೆಯುತ್ತಲೇ ಇದೆ. ಆರ್ಥಿಕ ಸಂಕಷ್ಟದಲ್ಲಿ ಸಿಕ್ಕು ನಲಗುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ತಡೆಬಿದ್ದಿದೆ.ಮೀಸಲಾತಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ ಕಾರಣ ಮೇಯರ್ ಸೇರಿದಂತೆ ಎಲ್ಲ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಆಯ-ವ್ಯಯವನ್ನು ಸಿದ್ಧಪಡಿಸಬೇಕಿದೆ. ಹಾಲಿ ಸಮಿತಿ ಅವಧಿ ಮುಗಿದಿದ್ದರಿಂದ ಅದಕ್ಕೆ ಬಜೆಟ್ ತಯಾರಿಸುವ ಅಧಿಕಾರ ಇಲ್ಲ. ಹೊಸ ಸಮಿತಿ ರಚನೆಯಾಗುವುದು ಯಾವಾಗ ಎಂಬುದು ಯಾರಿಗೂ ತಿಳಿದಿಲ್ಲ.ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಮಾರ್ಚ್ ತಿಂಗಳಾಂತ್ಯದ ಒಳಗೆ ಬಜೆಟ್ ಮಂಡಿಸಿ, ಸರ್ಕಾರದಿಂದ ಒಪ್ಪಿಗೆ ಪಡೆಯುವುದು ಅಗತ್ಯ. ಕಳೆದ ವರ್ಷ ಈ ನಿಯಮಾವಳಿ ಉಲ್ಲಂಘಿಸಿ ಸರ್ಕಾರದಿಂದ ಎಚ್ಚರಿಕೆ ಪಡೆದಿದ್ದ ಬಿಬಿಎಂಪಿ, ಈ ಸಲವೂ ಅದೇ ಪ್ರಮಾದವನ್ನು ಎಸಗಿದೆ.`ಕಳೆದ ಕೆಲವು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದುವರಿದ ಕಾಮಗಾರಿಗಳ ಸಂಖ್ಯೆಯೇ 13,360 ಇದ್ದು, ಅವುಗಳನ್ನು ಪೂರ್ಣಗೊಳಿಸಲು ರೂ 2,392 ಕೋಟಿ ಅಗತ್ಯವಿದೆ. ಇಷ್ಟೊಂದು ಸಂಖ್ಯೆಯ ಕಾಮಗಾರಿಗಳನ್ನು ನಗರದಲ್ಲಿ ಟಾರ್ಚ್ ಹಿಡಿದು ಹುಡುಕಬೇಕಿದೆ' ಎಂದು ಅಧಿಕಾರಿಯೊಬ್ಬರು ವಾಸ್ತವ ಸಂಗತಿಗೆ ಕನ್ನಡಿ ಹಿಡಿಯುತ್ತಾರೆ. `ಒಟ್ಟಾರೆರೂ3,000 ಕೋಟಿಯಷ್ಟು ಸಾಲ ಬಿಬಿಎಂಪಿ ಮೇಲಿದ್ದು, ರೂ 1700 ಕೋಟಿ ಗುತ್ತಿಗೆ ಮೊತ್ತ ಬಾಕಿ ಉಳಿದಿದೆ' ಎಂದು ಅವರು ವಿವರಿಸುತ್ತಾರೆ.`ಕಳೆದ ಮೂರು ತಿಂಗಳಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು, ಇದುವರೆಗೆ ಚಾಲನೆ ಸಿಕ್ಕಿಲ್ಲ' ಎಂದು ಬಿಬಿಎಂಪಿ ಸದಸ್ಯರು ದೂರುತ್ತಾರೆ. `ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮೇಯರ್ ಆಯ್ಕೆ ನೆಪವನ್ನು ಮುಂದಿಡಲಾಗುತ್ತಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.`ಚರಂಡಿ ಹೂಳು ಹಾಗೂ ರಸ್ತೆ ದೂಳು ತೆಗೆಯುವ `ಸಿಲ್ಟ್ ಅಂಡ್ ಟ್ರ್ಯಾಕ್ಟರ್' ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿ ಬಿಲ್ಲುಗಳನ್ನು ವರ್ಷಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಕೆಲಸ ಮಾಡಿಸಿಕೊಂಡ ನಾವು ಗುತ್ತಿಗೆದಾರರಿಗೆ ಮುಖ ತೋರಿಸಲು ಆಗುತ್ತಿಲ್ಲ. ಮಳೆಗಾಲದ ಈ ಸಂದರ್ಭದಲ್ಲಿ ಹೂಳು ತೆಗೆಸಲೂ ಸಾಧ್ಯವಾಗುತ್ತಿಲ್ಲ' ಎಂದು ಬಹುತೇಕ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.`ಸರ್ಕಾರಕ್ಕೆ ಸಲ್ಲಿಕೆಯಾದ ಮಹಾಲೆಕ್ಕಪಾಲರ ವರದಿಯಲ್ಲಿ ಬಿಬಿಎಂಪಿ ಹೂಳು ತೆಗೆಯುವ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎನ್ನುವ ಅಭಿಪ್ರಾಯ ಇದೆ. ಹೈಕೋರ್ಟ್‌ನಲ್ಲೂ ಈ ಸಂಬಂಧ ವಿಚಾರಣೆ ನಡೆಯುತ್ತಿದೆ. ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬರುವವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ಅಧಿಕಾರಿಗಳು ಹೇಳುತ್ತಾರೆ.`ವಲಯವೊಂದರಲ್ಲಿ ಹೂಳು ತೆಗೆಯಲುರೂ20 ಕೋಟಿ ಬಿಲ್ ಹಾಕಲಾಗಿದೆ. ಅವುಗಳೆಲ್ಲ ಸುಳ್ಳು ಬಿಲ್‌ಗಳಾಗಿದ್ದು, ಯಾವುದೇ ಕೆಲಸ ನಡೆದಿಲ್ಲ. ಅಂದಾಜು ಪತ್ರಿಕೆ ತಯಾರಿಸದೆ ಬೇಕಾಬಿಟ್ಟಿ ಹಣ ಪಾವತಿ ಮಾಡಲಾಗಿದೆ ಎಂಬ ಅಭಿಪ್ರಾಯ ವರದಿಯಲ್ಲಿದೆ. ಆದ್ದರಿಂದ ಎಚ್ಚರಿಕೆ ಹೆಜ್ಜೆ ಇಡಬೇಕಿದೆ' ಎಂದು ಅವರು ಪ್ರತಿಪಾದಿಸುತ್ತಾರೆ.ಆಸ್ತಿ ತೆರಿಗೆ ಸಂಗ್ರಹದಲ್ಲೂ ಬಿಬಿಎಂಪಿ ಸಂಪೂರ್ಣವಾಗಿ ಎಡವಿದೆ ಎಂಬ ಆರೋಪಗಳು ಕೇಳಿಬಂದಿವೆ. ಸ್ವತಃ ಬಿಬಿಎಂಪಿ ಸದಸ್ಯರೇ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. `ನಗರದ ಲಕ್ಷಾಂತರ ಆಸ್ತಿಗಳನ್ನು ಇನ್ನೂ ತೆರಿಗೆ ವ್ಯಾಪ್ತಿಗೆ ತರಲು ಸಾಧ್ಯವಾಗಿಲ್ಲ' ಎಂಬ ಸದಸ್ಯರ ದೂರಿಗೆ ಹಿಂದಿನ ಆಯುಕ್ತ ಸಿದ್ದಯ್ಯ ಕೂಡ ದನಿಗೂಡಿಸಿದ್ದರು.`ರಾಜರಾಜೇಶ್ವರಿನಗರದ ಒಂದೇ ವಸತಿ ಸಂಕೀರ್ಣದಲ್ಲಿ 400 ಮನೆಗಳಲ್ಲಿ ಈಗಾಗಲೇ ಜನ ವಾಸವಾಗಿದ್ದರೂ ಅವುಗಳನ್ನು ಇದುವರೆಗೆ ಖಾತೆ ಮಾಡಿಸಿಕೊಂಡಿಲ್ಲ. ಮಹದೇವಪುರದಲ್ಲಿ 5,000, ಯಲಹಂಕದಲ್ಲಿ 10,000 ಮತ್ತು ಬೊಮ್ಮನಹಳ್ಳಿಯಲ್ಲಿ 6,500 ಆಸ್ತಿಗಳು ಖಾತೆ ಆಗಬೇಕಿವೆ. ಸಮೀಕ್ಷಾ ತಂಡಗಳು ಈ ಸಂಗತಿಯನ್ನು ಬೆಳಕಿಗೆ ತಂದಿವೆ' ಎಂದು ಅವರು ವಿವರಿಸಿದ್ದರು. ಆ ಆಸ್ತಿಗಳನ್ನು ಇನ್ನೂ ತೆರಿಗೆ ವ್ಯಾಪ್ತಿಗೆ ತರಲಾಗಿಲ್ಲ.ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಆರು ಲಕ್ಷ ವಾಣಿಜ್ಯ ಘಟಕಗಳು ವಹಿವಾಟು ನಡೆಸುತ್ತಿದ್ದರೂ 56,000 ಘಟಕಗಳು ಮಾತ್ರ ಲೈಸೆನ್ಸ್ ಪಡೆದಿವೆ. ಉಳಿದ 5.44 ಲಕ್ಷ ಘಟಕಗಳನ್ನೂ ತೆರಿಗೆ ಜಾಲಕ್ಕೆ ತರಲು ಬಿಬಿಎಂಪಿ ಉದ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಕಾಂನಿಂದ ವಾಣಿಜ್ಯ ಸಂಪರ್ಕ ಪಡೆದ ಗ್ರಾಹಕರ ದಾಖಲೆಗಳನ್ನೂ ಸಂಗ್ರಹಿಸಿತ್ತು. ಅಲ್ಲಿಂದ ಮುಂದಕ್ಕೆ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ.`ಹಿಂದಿನ ಹಣಕಾಸು ವರ್ಷದಲ್ಲಿರೂ9,920 ಕೋಟಿ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ವಾಸ್ತವವಾಗಿ ಅದರ ಅರ್ಧದಷ್ಟು ಮೊತ್ತವನ್ನೂ ಮುಟ್ಟುವುದು ಸಾಧ್ಯವಾಗಲಿಲ್ಲ. ಆರಂಭಿಕ ಶುಲ್ಕರೂ239 ಕೋಟಿ ಇತ್ತು. ಸರ್ಕಾರದ ಅನುದಾನವೂ ಸೇರಿದಂತೆ ಎಲ್ಲ ಆದಾಯ ಮೂಲಗಳಿಂದ ರೂ 4,000 ಕೋಟಿ ವರಮಾನ ಬಂದಿತ್ತು.

ಇಷ್ಟು ವರಮಾನ ಇಟ್ಟುಕೊಂಡು ರೂ 9,920 ಕೋಟಿ ವೆಚ್ಚಕ್ಕೆ ಯೋಜನೆ ರೂಪಿಸಿದರೆ ಲೆಕ್ಕಾಚಾರಗಳೆಲ್ಲ ಏರು-ಪೇರಾಗದೆ ಇನ್ನೇನಾದೀತು' ಎಂದು ಸಿದ್ದಯ್ಯ ಪ್ರಶ್ನಿಸಿದ್ದರು.ರೂ 1700 ಕೋಟಿಯಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಿದರೆ ಹೊಸ ಕಾಮಗಾರಿ ವಹಿಸಿಕೊಳ್ಳಲು ನಮಗೆ ಶಕ್ತಿ ಬರುತ್ತದೆ' ಎಂದು ಗುತ್ತಿಗೆದಾರರು ಹೇಳುತ್ತಾರೆ.

ಕೆಲಸಗಳೇ ನಡೆದಿಲ್ಲ

ಕಳೆದ ಆರು ತಿಂಗಳಿಂದ ಯಾವ ಕೆಲಸವೂ ಆಗಿಲ್ಲ. ಹಿಂದಿನ ಆಯುಕ್ತರು ಕಾಮಗಾರಿಗಳಿಗೆ ತಡೆ ಹಾಕಿದರು. ಹೊಸ ಆಯುಕ್ತರು ಕೆಲಸಗಳಿಗೆ ಇನ್ನೂ ಚಾಲನೆಯನ್ನೇ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಅವರು ನೀಡಿದ್ದಾರೆ.

ವಿಶೇಷ ಕೌನ್ಸಿಲ್ ಸಭೆ ಕರೆಯಬೇಕೆಂಬ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಕೌನ್ಸಿಲ್‌ನಲ್ಲಿ ಕೈಗೊಳ್ಳುವ ಯಾವ ನಿರ್ಣಯಗಳೂ ಜಾರಿಗೆ ಬರುತ್ತಿಲ್ಲ. ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಕಾಲಾವಕಾಶ ಕೇಳಿದ್ದೇನೆ. ಇದುವರೆಗೆ ಸಿಕ್ಕಿಲ್ಲ.

-ಡಿ.ವೆಂಕಟೇಶಮೂರ್ತಿ, ಮೇಯರ್

ಹೆಚ್ಚಿದ ಸಾಲದ ಹೊರೆ

ನಗರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಿದೆ. ಗುತ್ತಿಗೆದಾರರಿಗೆ 2012ರ ಮೇ ಬಳಿಕ ಯಾವುದೇ ಬಿಲ್ ಪಾವತಿ ಆಗಿಲ್ಲ. ಸದಸ್ಯರ ಮಾತನ್ನು ಅಧಿಕಾರಿಗಳು ಕೇಳುತ್ತಲೇ ಇಲ್ಲ. ಹಿಂದಿನ ಆಯುಕ್ತರು ಟೆಂಡರ್ ಆಗಿದ್ದ ಕಾಮಗಾರಿಗಳನ್ನೇ ನಿಲ್ಲಿಸಿದರು.ಕಾಮಗಾರಿಗೆ ಅನುಮತಿ ನೀಡಿದವರೇ ಹೀಗೆ ಏಕಾಏಕಿ ಕೆಲಸಕ್ಕೆ ತಡೆ ಒಡ್ಡಿದರೆ ಜನರಿಗೆ ಯಾರು ಉತ್ತರ ಹೇಳಬೇಕು? ಒಂದು ರೂಪಾಯಿಗೆ ಗುತ್ತಿಗೆ ನೀಡಿದ ಬಿಬಿಎಂಪಿ ನಿವೇಶನಗಳು ನಗರದಲ್ಲಿ ಲೆಕ್ಕವಿಲ್ಲದಷ್ಟಿವೆ. ಅವುಗಳನ್ನೆಲ್ಲ ಮಾರಾಟ ಮಾಡಿದರೆ ಸಾಲದ ಹೊರೆಯಿಂದ ಮುಕ್ತವಾಗಬಹುದು. ತಿಂಗಳಿಗೆ ಹತ್ತು ಕೋಟಿಯಷ್ಟು ಬಡ್ಡಿ ತುಂಬುವ ಭಾರವನ್ನೂ ಇಳಿಸಬಹುದು.

-ಎನ್.ನಾಗರಾಜ್, ಆಡಳಿತ ಪಕ್ಷದ ನಾಯಕ, ಬಿಬಿಎಂಪಿ .ಅಧಿಕಾರಿಗಳ ವೈಫಲ್ಯ


ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಸಂಪನ್ಮೂಲ ಕ್ರೋಢೀಕರಣ, ತೆರಿಗೆ ಸಂಗ್ರಹದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಎರವಲು ಸೇವೆ ಮೇಲೆ ಬಂದಿರುವ ಸಹಾಯಕ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಳಹಂತದ ನೌಕರರ ಮೇಲೆ ಅಧಿಕಾರಿಗಳಿಗೆ ಯಾವ ಹಿಡಿತವೂ ಇಲ್ಲ.ಜೂನ್ ಮುಗಿಯುತ್ತಾ ಬಂದರೂ ಬಜೆಟ್ ಮಂಡನೆಯಾಗಿಲ್ಲ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ನಮ್ಮ ಬೇಡಿಕೆಗೆ ಆಡಳಿತ ಪಕ್ಷ ಸ್ಪಂದಿಸುತ್ತಿಲ್ಲ.

-ಎಂ.ಕೆ. ಗುಣಶೇಖರ್, ವಿರೋಧ ಪಕ್ಷದ ನಾಯಕ, ಬಿಬಿಎಂಪಿ .ಆಯುಕ್ತರು ಸಿಗುತ್ತಿಲ್ಲ

ನಗರದಲ್ಲಿ ವಾರ್ಷಿಕ ನಿರ್ವಹಣೆ ಕೆಲಸಗಳೂ ನಡೆಯುತ್ತಿಲ್ಲ. ಕೇಳಲು ಹೋದರೆ ಆಯುಕ್ತರೂ ಕೈಗೆ ಸಿಗುತ್ತಿಲ್ಲ. ನಮ್ಮ ವಾರ್ಡಿಗೆ ಮಂಜೂರಾಗಿದ್ದ ರಸ್ತೆಗೆ ಟಾರು ಹಾಕುವ ಕಾಮಗಾರಿಯನ್ನು ರದ್ದುಗೊಳಿಸಲಾಯಿತು.

ಮಳೆ ಸುರಿದ ಮೇಲೆ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಜನ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನಾವು ಯಾರನ್ನು ಕೇಳಬೇಕು?

ಟಿ.ತಿಮ್ಮೇಗೌಡ, ಜೆಡಿಎಸ್ ಮುಖಂಡ, ಬಿಬಿಎಂಪಿ .

ಮುಖ ತೋರಿಸಲು ಆಗುತ್ತಿಲ್ಲ

ನಮ್ಮ ವಾರ್ಡ್‌ನಲ್ಲಿ ಏನೊಂದೂ ಕೆಲಸ ನಡೆಯದೆ ಜನರಿಗೆ ಮುಖ ತೋರಿಸುವುದೇ ಕಷ್ಟವಾಗಿದೆ. ಕೊನೇಪಕ್ಷ ಹೂಳನ್ನೂ ತೆಗೆಸಲು ಆಗುತ್ತಿಲ್ಲ.

ಜಿ.ಎನ್.ಆರ್. ಬಾಬು, ಬಿ.ಟಿ.ಎಂ. ಲೇಔಟ್ ಬಿಬಿಎಂಪಿ ಸದಸ್ಯ .

ಪ್ರತಿ ಪೈಸೆಗೂ ಲೆಕ್ಕ ಬೇಕು

ನಮ್ಮ ಸಂಘಗಳಲ್ಲಿ ಖರ್ಚಾಗುವ ಪ್ರತಿ ಪೈಸೆಗೂ ಲೆಕ್ಕ ಇಟ್ಟಿರುತ್ತೇವೆ. ಆಂತರಿಕ ಲೆಕ್ಕ ಪರಿಶೋಧನೆಯೂ ಆಗುತ್ತದೆ. 1964ರಿಂದ ಬಿಬಿಎಂಪಿಯಲ್ಲಿ ಇಲ್ಲಿಯವರೆಗೆ ಒಂದು ಬಾರಿಯೂ ಸಮಗ್ರವಾದ ಆಂತರಿಕ ಲೆಕ್ಕ ಪರಿಶೋಧನೆ ನಡೆದಿಲ್ಲ.

-ಪದಾಧಿಕಾರಿಗಳು, ಬಡಾವಣೆ ಹಿತರಕ್ಷಣಾ ಸಂಘಗಳ ಒಕ್ಕೂಟ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.