ಮಂಗಳವಾರ, ನವೆಂಬರ್ 19, 2019
25 °C

ಮರುಕಳಿಸಿದ ಭೀತಿ

Published:
Updated:

ಬಾಸ್ಟನ್ ಮ್ಯಾರಥಾನ್ ಮುಕ್ತಾಯ ಹಂತದಲ್ಲಿದ್ದಾಗ ಎರಡು ಸಶಕ್ತ ಬಾಂಬ್‌ಗಳು ಸ್ಫೋಟಿಸಿದ ಪರಿಣಾಮವಾಗಿ ಮೂವರು ಸತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 117 ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ಅಮೆರಿಕದ ಮೆಸಾಚ್ಯುಸೆಟ್ಸ್ ರಾಜ್ಯದ ರಾಜಧಾನಿ ಬಾಸ್ಟನ್ ನಗರದಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ ಮ್ಯಾರಥಾನ್‌ನಲ್ಲಿ ಈ ಸ್ಫೋಟಗಳು ಸಂಭವಿಸಿರುವುದು ವಿಷಾದನೀಯ. ಸುಮಾರು 26 ಮೈಲಿ ದೂರವನ್ನು ಕ್ರಮಿಸುವಂತಹ ಈ ಪ್ರತಿಷ್ಠಿತ ಮ್ಯಾರಥಾನ್‌ನಲ್ಲಿ ವಿಶ್ವದಾದ್ಯಂತ ಹಲವು ದೇಶಗಳ ಸುಮಾರು 27,000 ಮಂದಿ ಈ ಬಾರಿ ಪಾಲ್ಗೊಂಡಿದ್ದರು. ಈ ಓಟದಲ್ಲಿ ಪಾಲ್ಗೊಳ್ಳುವವರನ್ನು ಹುರಿದುಂಬಿಸುವ ಹುರುಪು, ಉತ್ಸಾಹ ರಸ್ತೆ ಬದಿಗಳಲ್ಲಿ ನಿಂತವರಲ್ಲಿರುತ್ತದೆ.

ನಿಜಕ್ಕೂ ಮ್ಯಾರಥಾನ್ ಎನ್ನುವುದು ಜನಸಮುದಾಯವನ್ನು ಒಗ್ಗೂಡಿಸುವಂತಹ ಕ್ರೀಡಾ ಸಂಭ್ರಮ. ಆದರೆ ಅದನ್ನು ಛಿದ್ರಗೊಳಿಸುವ ರೀತಿಯಲ್ಲಿ ಈ ಸ್ಫೋಟಗಳು ನಡೆದಿವೆ. ಈ ಸ್ಫೋಟಗಳ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮುಗ್ಧ ಜನರಲ್ಲಿ ಭೀತಿ ಹುಟ್ಟಿಸುವಂತಹ ಈ ಕೃತ್ಯ ಖಂಡನೀಯ. ಆದರೆ ಈ ದಾಳಿಗಳನ್ನು ಭಯೋತ್ಪಾದನಾ ಕೃತ್ಯಗಳೆಂದು ಅಮೆರಿಕ ಇನ್ನೂ ನೇರವಾಗಿ ಹೇಳಿಲ್ಲ. ಇವನ್ನು ಭಯೋತ್ಪಾದನಾ ಕೃತ್ಯಗಳೆಂದು ಉಲ್ಲೇಖಿಸದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು `ಅಪೂರ್ಣ ಮಾಹಿತಿಗಳಿಂದ ನಿರ್ಣಯಗಳಿಗೆ ತಲುಪಬಾರದೆಂದು' ಜನರಿಗೆ ಎಚ್ಚರಿಸಿದ್ದಾರೆ. ಈ  ಸ್ಫೋಟಗಳ ಪ್ರಕರಣದ ತನಿಖೆಯನ್ನು ಎಫ್‌ಬಿಐ ಹೊತ್ತುಕೊಂಡಿದೆ. `ಭಯೋತ್ಪಾದನೆಯ ಕುರಿತಾದ ತನಿಖೆಯಾಗಬಹುದಾದಂತಹ ಅಪರಾಧ ತನಿಖೆ ಇದು' ಎಂದು ಎಫ್‌ಬಿಐ ಸೂಚ್ಯವಾಗಿ ಹೇಳಿದೆ. ಆದರೆ ವಿವಿಧ ಸ್ಫೋಟಕ ಸಾಧನಗಳ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಎಸಗುವಂತಹ ದಾಳಿ ಭಯೋತ್ಪಾದನಾ ಕೃತ್ಯವೇ ಹೌದು ಎಂಬಂತಹ ಮಾತನ್ನ್ನೂ ಅಧಿಕಾರಿಗಳು ಹೇಳಿದ್ದಾರೆ. ತನಿಖೆಯಿಂದ ಈ ವಿಚಾರಗಳು ಸ್ಪಷ್ಟವಾಗಬೇಕು.ಈ ದಾಳಿಗಳಿಗೆ ಪ್ರೇರಣೆ ಏನು ಎಂಬುದಕ್ಕಿನ್ನೂ ಉತ್ತರ ಸಿಕ್ಕಿಲ್ಲ. ಇದೊಂದು ಪ್ರತ್ಯೇಕ ಘಟನೆಯೇ ಅಥವಾ ಅಮೆರಿಕದ ಮೇಲೆ ಯೋಜಿತ ದಾಳಿಗಳ ಭಾಗವೇ ಎಂಬುದೂ ತನಿಖೆಯಿಂದ ಗೊತ್ತಾಗಬೇಕಿದೆ. ಈ ದಾಳಿಗಳ ಹಿಂದಿರುವವರು ವಿದೇಶಿಯರೇ ಅಥವಾ ದೇಶದೊಳಗೇ ಇರುವ ಉಗ್ರವಾದಿಗಳೇ ಎಂಬುದೂ ಪತ್ತೆಯಾಗಬೇಕು. ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳು ಹಾಗೂ ಪೆಂಟಗನ್ ಮೇಲೆ  2001ರ ಸೆಪ್ಟೆಂಬರ್ 11ರಂದು ನಡೆದ  ಭೀಕರ ದಾಳಿಗಳ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಈ ಬಗೆಯ ಬಾಂಬ್ ದಾಳಿ ಅಮೆರಿಕದಲ್ಲಿ ಈವರೆಗೆ ವರದಿಯಾಗಿರಲಿಲ್ಲ.ನ್ಯೂಯಾರ್ಕ್‌ನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳನ್ನು ಧರೆಗುರುಳಿಸಿದ ವಿಮಾನಗಳು ಹೊರಟಿದ್ದು ಬಾಸ್ಟನ್ ನಗರದಿಂದಲೇ ಎಂಬುದನ್ನು  ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಈ ಬಾರಿಯೂ ಯಾವುದೇ ಸೂಚನೆ ಇಲ್ಲದೆ ನಡೆದಿರುವ ಈ ದಾಳಿಗಳ ಕುರಿತು ಯಾವ ಗೂಢಚರ್ಯೆ ಮಾಹಿತಿಗಳೂ ಇರಲಿಲ್ಲ. ವಿಶ್ವದ ದೊಡ್ಡಣ್ಣನನ್ನು ಮಣಿಸಲು ಯತ್ನಿಸುವ ಯೋಜಿತ ಕಾರ್ಯತಂತ್ರ ಹಿನ್ನೆಲೆಯಲ್ಲಿದೆಯೇ ಎಂಬ ಸಂಶಯಕ್ಕೆ ಇದು ಕಾರಣವಾಗುತ್ತದೆ. ಭಯೋತ್ಪಾದನಾ ದಾಳಿಗಳ ಭೀತಿಗಳಿಂದ ಅಮೆರಿಕವಿನ್ನೂ ಮುಕ್ತವಾಗಿಲ್ಲ ಎಂಬ ಸ್ಪಷ್ಟ ಸಂದೇಶವನ್ನಂತೂ ಈ ದಾಳಿ ನೀಡಿದೆ.

ಪ್ರತಿಕ್ರಿಯಿಸಿ (+)