ಶನಿವಾರ, ಅಕ್ಟೋಬರ್ 19, 2019
28 °C

ಮರುಕಳಿಸುತ್ತಿದೆ ಗೋಶಾಲೆಯ ನೆನಪು

Published:
Updated:

ಗಜೇಂದ್ರಗಡ: 1986 ರಲ್ಲಿ ಎದುರಾದ ಭೀಕರ ಬರದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ನಾಗೇಂದ್ರಗಡ ಗೋಶಾಲೆ ಸದ್ಯ್ಯ ನೆನಪು ಮಾತ್ರ.ಹೌದು. ಬಹುತೇಕ ಕೃಷಿ ಪ್ರಧಾನ ಕುಟುಂಬಗಳೇ ನೆಲೆಸಿರುವ ರೋಣ ತಾಲ್ಲೂಕಿನಲ್ಲಿ 80 ರ ದಶಕದಲ್ಲಿ ಹೊಲ ರಹಿತ ಕುಟುಂಬಗಳು ಕನಿಷ್ಠ ಮೂರನ್ನಾಲ್ಕು ಜಾನುವಾರುಗಳನ್ನು ಹೊಂದಿ ಹೈನುಗಾರಿಕೆಯಿಂದ ಬದುಕು ನಿರ್ವಹಿಸುತ್ತಿದ್ದರು. ಮಳೆ ಆಶ್ರಿತ ಬೇಸಾಯದಲ್ಲಿ ಸಮೃದ್ದ ಬದುಕು ಸಾಗಿಸುತ್ತಿದ್ದ ತಾಲ್ಲೂಕಿನ ಜನತೆಗೆ 1986 ರಲ್ಲಿ ಭೀಕರ ಬರ ನುಂಗಲಾರದ ತುತ್ತಾಗಿ ಪರಿಣಮಿಸಿತು.ಮನುಷ್ಯ ಹೇಗಾದರೂ ಬದುಕ ಬಹುದು, ಆದರೆ, ತಮಗಾದ ನೋವುಗಳನ್ನು ಹೇಳಿಕೊಳ್ಳಲಾಗದೆ, ಅನ್ನದಾತನ ಏಳಿಗೆಗಾಗಿ ಹಗಳಿರುಳು ಶ್ರಮಿಸುವ ದನ ಕರುಗಳಿಗೆ ಸೂಕ್ತ ಹೊಟ್ಟು, ಮೇವುಗಳಿಲ್ಲದೆ ಸಾವಿನ ಮನೆಯ ಬಾಗಿಲು ತಟ್ಟಲಾರಂಭಿಸಿದವು. ಹಸಿವಿನಿಂದ ನರಕಯಾತನೆ ಅನುಭವಿಸುತ್ತಿದ್ದ ಅದೆಷ್ಟೋ ಜಾನುವಾರುಗಳು ರೈತರ ವಲ್ಲದ ಮನಸ್ಸಿನ ಮಧ್ಯೆ–ಯೂ ಕಟುಕರಿಗೆ ಆಹಾರವಾದವು. ದಿನಗಳು ಉರುಳಿದಂತೆ ಜಾನುವಾರುಗಳ ಸಂರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿತು.ರೈತ ಪರ ಕಳಕಳಿವುಳ್ಳ ಅಂದಿನ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರು ಜಾನುವಾರುಗಳ ಸಂರಕ್ಷಣೆಗಾಗಿ ಸಮೀಪದ ನಾಗೇಂದ್ರಗಡ ಗ್ರಾಮದ ಹೊರವಲಯದಲ್ಲಿರುವ ವಿಶಾಲ 85 ಎಕರೆ ಕೆರೆಯ ಪಕ್ಕದಲ್ಲಿನ ಜಾಗ ಜಾನುವಾರುಗಳ ಸಂರಕ್ಷಣೆಗೆ ಯೋಗ್ಯವಾಗಿದೆ ಎಂದು ಕೆರೆ ಪಕ್ಕದಲ್ಲಿನ ಸ್ಧಳವನ್ನು  ಗೋಶಾಲೆ ಸ್ದಾಪನೆಗೆ ಆಯ್ಕೆ ಮಾಡಿಕೊಂಡರು. 6 ಎಕರೆ ಪ್ರದೇಶದಲ್ಲಿ ಜಾನುವಾರುಗಳ ವಾಸಕ್ಕೆ ಯೋಗ್ಯವಾದ ಶೇಡ್ಡು, ಪಶು ಚಿಕಿತ್ಸಾಲಯ,  ಗೋಪಾಲಕರ, ಅಧಿಕಾರಿಗಳು ತಂಗಲು ಶೇಡ್ಡು ಹಾಗೂ ರೋಗಗ್ರಸ್ಧ ಜಾನುವಾರುಗಳಿಗೆ ಪ್ರತ್ಯೇಕ ವ್ಯವಸ್ಧೆ ಕಲ್ಪಿಸಲಾಗಿತ್ತು.ಅಂದಿನ ಆ ವಿಶಾಲ ಗೋಶಾಲೆಯಲ್ಲಿ ಪ್ರವೇಶ ಪಡೆದಿದ್ದ 3,000 ಜಾನುವಾರುಗಳಿಗೆ ಹತ್ತಿಕಾಳು, ಹಿಂಡಿ, ಲವನಾಂಶ ಕಲ್ಲು, ಬೆಲ್ಲ, ಹೊಟ್ಟಿನ ಜೊತೆಗೆ ಗುಜರಾತಿನಿಂದ ಮೇವು ತರಿಸಲಾಗಿತ್ತು. ಸಮೃದ್ದ ಕಾಲದಲ್ಲಿ –ರೈತ ಜೋಪಾನ ಮಾಡುವ ಮಾದರಿಯಲ್ಲಿ ಜೋಪಾನ ಮಾಡಲಾಗಿತ್ತು. ಅನಾರೋಗ್ಯದಿಂದ ಮೃತ ಪಟ್ಟ ಜಾನುವಾರುಗಳಿಗೆ ವಿಮಾ ಸೌಲಭ್ಯ ಒದಗಿಸಲಾಗಿತ್ತು. ಶಾಸಕ ಜ್ಞಾನದೇವ ದೊಡ್ಡಮೇಟಿ ನೇತೃತ್ವದಲ್ಲಿ ನಿರ್ಮಿಸಿದ್ದ ಸಕಲ ಸೌಕರ್ಯವುಳ್ಳ ಮಾದರಿ ಗೋಶಾಲೆಯನ್ನು ಅಂದಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಉದ್ಘಾಟಿಸಿ, “ಇದೊಂದು ಆದರ್ಶ ಗೋಶಾಲೆ, ಅದ್ಬುತ ಪ್ರಕೃತಿ ತಾನದಲ್ಲಿ ಗೋಶಾಲೆ ತೆರೆದಿರುವುದು ಶ್ಣಾಘನೀಯ. ರೈತಪರ ಕಾಳಜಿ ಉಳ್ಳ ಜನ ನಾಯಕನ ಸೂಕ್ತ ಮಾರ್ಗದರ್ಶನವೊಂದಿದ್ದರೆ ಅಧಿಕಾರಿಗಳು ಏನೆಲ್ಲವನ್ನು ಸಾಧಿಸುತ್ತಾರೆ ಎನ್ನುವುದಕ್ಕೆ ನಾಗೇಂದ್ರಗಡ ಗೋಶಾಲೆಯೇ ನಿದರ್ಶನ. ರೈತರು ಬರದ ಕುರಿತು ಭಯ ಪಡದೆ, ಆತ್ಮಸ್ಧೈರ್ಯ ಹೊಂದಿ. ಸರ್ಕಾರ ನಿಮ್ಮಂದಿಗಿದೆ” ಎಂಬ ರಾಮಕೃಷ್ಣ ಹೆಗಡೆ ಅವರ ಅಂದಿನ ಭಾಷಣದ ತುನುಕುಗಳನ್ನು ಪ್ರಸ್ತುತ ಬರದಲ್ಲಿ ತಾಲ್ಲೂಕಿನ ರೈತರು ಮೆಲುಕು ಹಾಕುತ್ತಿದ್ದಾರೆ.1986 ರ ಬಳಿಕ 2003 ರಲ್ಲಿ ಬರ ಪರಿಸ್ಧಿತಿ ಎದುರಾದಾಗಲೂ ಶಾಸಕ ದೊಡ್ಡಮೇಟಿ ಅವರ ಕಾಲದಲ್ಲಿ ಸ್ಧಾಪಿಸಲಾಗಿದ್ದ ಸ್ಧಳದಲ್ಲಿಯೇ ಗೋಶಾಲೆ ಆರಂಭಿಸಲಾಯಿತು. ಗೋಶಾಲೆಯಲ್ಲಿ 1986 ರ ಮಾದರಿಯಲ್ಲಿ ಒದಗಿಸಲಾಗಿದ್ದ ಸಕಲ ಸೌಲಭ್ಯಗಳ ದೊರೆಯುತ್ತವೆ ಎಂಬ ರೈತರ ನಿರೀಕ್ಷೆಗಳಿಗೆ ಗೋಶಾಲೆಯಲ್ಲಿನ ಅವ್ಯವಸ್ಧೆಗಳು ನಿರಾಶೆ ಮೂಡಿಸಿದವು.ಪ್ರಸಕ್ತ ವರ್ಷವೂ ಬರ ಪರಿಸ್ಧಿತಿ ಎದುರಾಗಿದೆ. ಶಾಸಕ ಕಳಕಪ್ಪ ಬಂಡಿ ಅವರ ವಿಶೇಷ ಕಾಳಜಿಯಿಂದಾಗಿ ತಾಲ್ಲೂಕಿನ ಜಾನುವಾರುಗಳ ಸಂರಕ್ಷಣಾ ದೃಷ್ಟಿಯಿಂದ ಈ ಹಿಂದಿನ ವರ್ಷಗಳಲ್ಲಿ ತೆರೆಯಲಾಗಿದ್ದ ನಾಗೇಂದ್ರಗಡದಲ್ಲಿಯೇ ಗೋಶಾಲೆ ಆರಂಭಿಸಲಾಗಿದ್ದು, 100 ಕ್ಕೂ ಅಧಿಕ ಜಾನುವಾರುಗಳು ಆಶ್ರಯ ಪಡೆದಿವೆ.

ಸೂಕ್ತ ಹೊಟ್ಟು, ಮೇವು ವ್ಯವಸ್ಧೆ ಕಲ್ಪಿಸಲಾಗಿದೆ. ಜಾನುವಾರುಗಳಿಗೆ ವಿಮಾ ವ್ಯವಸ್ಧೆ, ರೋಗಗ್ರಸ್ಧ ಜಾನುವಾರುಗಳಿಗೆ ಪ್ರತ್ಯೇಕ ವ್ಯವಸ್ಧೆ, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಗೋಪಾಲಕರನ್ನು ಹಾಗೂ ಪಶು ಚಿಕಿತ್ಸಾಲಯವನ್ನು ತೆರೆಯಲಾಗಿದೆ.  ಒಟ್ಟಾರೆ 1986 ರ ನಾಗೇಂದ್ರಗಡದ ಮಾದರಿ ಗೋಶಾಲೆಯ ನೆನಪು ಮಾತ್ರ ಜನಮಾನಸದಲ್ಲಿ ಅಳಿಯದೆ ಸದಾ ಹಸಿರಾಗಿದೆ.  

 

Post Comments (+)