ಮಂಗಳವಾರ, ಮೇ 24, 2022
30 °C

`ಮರುಜೀವ ಪಡೆದ ಎತ್ತಿಪೋತೆ ಜಲಪಾತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮರುಜೀವ ಪಡೆದ ಎತ್ತಿಪೋತೆ ಜಲಪಾತ'

ಚಿಂಚೋಳಿ: ಗಿರಿ ಕಂದರಗಳ ನಾಡು, ಹಸಿರು ವನಸಿರಿಯ ಬೀಡು, ಪ್ರವಾಸಿಗರ ನೆಚ್ಚಿನ ಪ್ರೇಕ್ಷಣೀಯ ಧಾಮ, ವನ್ಯಜೀವಿಗಳ ಆಶ್ರಯ ತಾಣ, ನೈಸರ್ಗಿಕ ಸೌಂದರ್ಯದ ಚಿಂಚೋಳಿಯ ಕೊಂಚಾವರಂ ಕಾಡು ಮಿನಿ ಮಲೆನಾಡು.ಏರಿಳಿತಗಳೊಂದಿಗೆ ಮುಗಿಲಿಗೆ ಮುತ್ತಿಕ್ಕಿದಂತೆ ಗೋಚರಿಸುವ ಬೆಟ್ಟ, ಗುಡ್ಡಗಳ ಸಾಲುಗಳು. ಹಸಿರನ್ನೇ ಹಾಸಿದಂತೆ ಸಹಸ್ರಾರು ಹೆಕ್ಟೇರ್ ಪ್ರದೇಶದಲ್ಲಿ ಹರಡಿದ ಹಚ್ಚ ಹಸಿರ ರಾಶಿಯ ನಡುವೆ ಅಲ್ಲಲ್ಲಿ ಕಣ್ಣು ಕುಕ್ಕುವ ಕೆರೆ ಕಟ್ಟೆಗಳು ಪ್ರಕೃತಿಯ ಸೌಂದರ್ಯ ಶ್ರೀಮಂತಗೊಳಿಸಿವೆ.ಇದೇ ಕಾಡಿನ ಸೆರಗಿನಲ್ಲಿ ಒಂಟಿಚಿಂತಾ ಸಂಗಾಪುರ ಮಾರ್ಗದ ರಸ್ತೆ ಬದಿಯ ನಾಲಾದಲ್ಲಿ ಇದೀಗ ಮರು ಹುಟ್ಟು ಪಡೆದ ಎತ್ತಿಪೋತೆ ಜಲಪಾತದ ದೃಶ್ಯ ಕಣ್ಮನ ಸೆಳೆಯುತ್ತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಸೊರಗಿದ್ದ ನದಿ, ನಾಲಾ, ತೊರೆ, ಹಳ್ಳ, ಕೊಳ್ಳಗಳು ಮರುಜೀವ ಪಡೆದು ರಮಣೀಯತೆ ಸಾರುತ್ತಿವೆ. ಇನ್ನೊಂದು ಮಳೆಯಾದರೆ ಸಾಕು ಇವುಗಳು ಉಕ್ಕಿ ಹರಿಯಲು ಶುರು ಮಾಡುತ್ತವೆ. ಇದರಿಂದ ಮೈದುಂಬಿ ಹರಿಯುವ ಎತ್ತಿಪೋತೆ ಜಲಪಾತ ಚಂದ್ರಂಪಳ್ಳಿ ಜಲಾಶಯ ಸೇರಿ ವಿರಮಿಸುತ್ತಾಳೆ.ಈ ಸುಂದರ ದೃಶ್ಯ ಕಣ್ತುಂಬಿ ಕೊಳ್ಳಲು ಜುಲೈ ಕೊನೆಯ ವಾರದಿಂದ ಪ್ರವಾಸಿಗರು ಜಲಪಾತದತ್ತ ಧಾವಿಸುತ್ತಾರೆ.ಪ್ರಕೃತಿಯ ಸೌಂದರ್ಯ ತಾಣವಾದ ಗೊಟ್ಟಂಗೊಟ್ಟಾ, ಹಾಥಿ ಪಕಡಿ, ಜೀವ ವೈವಿಧ್ಯ ತಾಣವಾದ ಸೇರಿಭಿಕನಳ್ಳಿ, ಮಂಡಿ ಬಸವಣ್ಣ ಕ್ಯಾಂಪ್, ನವಿಲುಗುಡ್ಡ, ಚಂದ್ರಂಪಳ್ಳಿ ಜಲಾಶಯ, ಚಿಕ್ಕಲಿಂಗದಳ್ಳಿ ಕೆರೆ, ಧರ್ಮಾಸಾಗರ ಕೆರೆ, ತುಮಕುಂಟಾ ಕೆರೆಗಳು ಮೈದುಂಬಿಕೊಂಡರೆ ಇಲ್ಲಿನ ಪ್ರಕೃತಿಯ ವೈಭವ ವರ್ಣಿಸಲು ಪದಗಳು ಸಾಲುವುದಿಲ್ಲ.ಆಂಧ್ರದ ಜಹೀರಾಬಾದಮಾರ್ಗದಿಂದ ಬರುವವರು ಸಂಗಾಪುರದಿಂದ ಮಾರ್ಗದಿಂದ 4 ಕಿ.ಮೀ(ಒಂಟಿಚಿಂತಾ ಕಡೆಗೆ) ಅಂತರದಲ್ಲಿ ಜಲಪಾತ ನೋಡಲು ಸಿಗುತ್ತದೆ. ಚಿಂಚೋಳಿ ಕೊಂಚಾವರಂ ಕಡೆಯಿಂದ ಬರುವವರು ಪೆದ್ದಾ ತಾಂಡಾ, ಒಂಟಿಚಿಂತಾ ಗೋಪುನಾಯಕ್ ತಾಂಡಾ ಮಾರ್ಗವಾಗಿ ಸಂಗಾಪುರ ರಸ್ತೆಗೆ 2 ಕೀ.ಮೀ ಸಾಗಿದರೆ ತಗ್ಗುಪ್ರದೇಶದಲ್ಲಿ ಸೇತುವೆ ಸಿಗುತ್ತದೆ. ಸೇತುವೆಯ ನೀರು ಹರಿಯುವ ಪಶ್ಚಿಮ ದಿಕ್ಕಿಗೆ ಐದು ನೂರು ಮೀಟರ್ ನಡೆದು ಹೋದರೆ ಜಲಪಾತ ಕಾಣಸಿಗುತ್ತದೆ.ಇಲ್ಲಿ ಯಾವುದೇ ಸೌಲಭ್ಯವಿಲ್ಲ. ಮಳೆ ಬಂದರೂ ಯಾವುದೇ ಆಶ್ರಯ ಇಲ್ಲಿಲ್ಲ. ಸ್ವಂತ ವಾಹನದಲ್ಲಿ ಬರುವುದು ಉತ್ತಮ. ಜತೆಗೆ ಕುಡಿಯಲು ನೀರು ತಿನ್ನಲು ತಿಂಡಿ ಜತೆಗಿರಲಿ. ಪ್ರವಾಸಿಗರಿಗಾಗಿ ಇಲ್ಲಿ ಮೂಲ ಸೌಕರ್ಯ ಒದಗಿಸಿ ಎತ್ತಿಪೋತೆ ಪ್ರವಾಸಿ ತಾಣ ಅಭಿವೃದ್ಧಿ ಪಡಿಸಬೇಕೆಂದು ಕಾಂಗ್ರೆಸ್ ಮುಖಂಡ ಡಾ. ತುಕಾರಾಮ ಪವಾರ್ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.